ಪರಶುರಾಮ ಥೀಮ್‌ ಪಾರ್ಕ್‌ ವಿವಾದ : 4 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಸರ್ಕಾರಕ್ಕೆ ತಾಕೀತು ಮಾಡಿದ ಹೈಕೋರ್ಟ್!

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ನಂತರ ವಿವಾದದ ಕೇಂದ್ರಬಿಂದುವಾಗಿದ್ದ ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಕಾರ್ಕಳದ ಉಮಿಕಲ್ ಬೆಟ್ಟದ ಮೇಲೆ ನಿರ್ಮಿಸಲಾದ ಪರಶುರಾಮ ಥೀಮ್ ಪಾರ್ಕ್ ಹಾಗೂ ಪರಶುರಾಮರ ಕಂಚಿನ ಪ್ರತಿಮೆ ಕಾಮಗಾರಿಯನ್ನು ಮುಂದಿನ 4 ತಿಂಗಳುಗಳ ಕಾಲಾವಧಿಯಲ್ಲಿ ನಿರ್ಮಾಣ ಮಾಡಬೇಕೆಂದು ರಾಜ್ಯ ಹೈಕೋರ್ಟ್ ಇಂದು ಆದೇಶ ಹೊರಡಿಸುವ ಮೂಲಕ, ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದೆ.

ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದ ಶ್ರೀ ಸುನಿಲ್ ಕುಮಾರ್ ಅವರು ಮುತುವರ್ಜಿ ವಹಿಸಿ ಉಮಿಕಲ್ ಬೆಟ್ಟದಲ್ಲಿ ಪರಶುರಾಮ ಥೀಮ್ ಪಾರ್ಕ್ ನಿರ್ಮಾಣ ಮಾಡಿದ್ದರು. ಆ ಮೂಲಕ ಉಡುಪಿ ಜಿಲ್ಲೆಯ ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಸಚಿವರು ಈ ಕಾರ್ಯ ಕೈಗೆತ್ತಿಕೊಂಡಿದ್ದರು. ಅಂದುಕೊಂಡಂತೆ ಜನವರಿ 27, 2023ರ ರ ವೇಳೆಗೆ ಪರಶುರಾಮ ಥೀಮ್ ಪಾರ್ಕ್ ಉದ್ಘಾಟನೆಯನ್ನೂ ಮಾಡಲಾಗಿತ್ತು.

ಈ ಉದ್ಘಾಟನಾ ಸಮಾರಂಭದಲ್ಲಿಯೇ ಸಚಿವ ಸುನೀಲ್ ಕುಮಾರ್ ಪರಶುರಾಮ ಕಂಚಿನ ಮೂರ್ತಿಯ ಕಾಮಗಾರಿ ಇನ್ನಷ್ಟೇ ಪೂರ್ಣವಾಗಬೇಕಿದೆ ಎಂಬ ಮಾಹಿತಿ ನೀಡಿ, ಶೀಘ್ರವೇ ಕಾಮಗಾರಿ ಮುಕ್ತಾಯಗೊಳಿಸಲಾಗುತ್ತದೆ ಎಂಬ ಭರವಸೆಯನ್ನೂ ನೀಡಿದ್ದರು.

ಥೀಮ್ ಪಾರ್ಕ್ ನಿರ್ಮಾಣಕ್ಕೆ ಅಂದಿನ ಮುಖ್ಯಮಂತ್ರಿಗಳಾಗಿದ್ದ ಬಸವರಾಜ ಬೊಮ್ಮಾಯಿಯವರು ಅಂದಾಜು 14 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಥೀಮ್ ಪಾರ್ಕ್ ಅಭಿವೃದ್ಧಿಗೆ ಬಳಕೆಯಾಗಬೇಕಿದ್ದ 10 ಕೋಟಿ ರೂ. ಹಣವನ್ನು ಮುಟ್ಟುಗೋಲು ಹಾಕಿಕೊಂಡಿದ್ದು, ಕಳೆದ 1 ವರ್ಷದಲ್ಲಿ 1 ರೂ. ಹಣವನ್ನು ಥೀಮ್ ಪಾರ್ಕ್ ಅಭಿವೃದ್ಧಿಗೆ ಬಿಡುಗಡೆ ಮಾಡಿಲ್ಲ ಎನ್ನುವುದು ತಿಳಿದುಬಂದಿದೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೆಲ ತಿಂಗಳುಗಳ ನಂತರ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವರದಿಯ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪರಶುರಾಮ ಥೀಮ್ ಪಾರ್ಕ್ ಹಾಗೂ ಮೂರ್ತಿಯ ಕಾಮಗಾರಿಯನ್ನು ಸಿಐಡಿ ವಿಚಾರಣೆಗೆ ನೀಡಿ ಆದೇಶವನ್ನೂ ಹೊರಡಿಸಿದ್ದರು.

ಪರಶುರಾಮರ ಕಂಚಿನ ಮೂರ್ತಿ ನಿರ್ಮಾಣದ ಸತ್ಯಾಸತ್ಯತೆಯೇನು?

ಉಮಿಕಲ್ ಬೆಟ್ಟದ ಮೇಲಿನ 33 ಅಡಿ ಕಂಚಿನ ಪರಶುರಾಮ ಮೂರ್ತಿ (10 ಅಡಿ ಕಾಂಕ್ರಿಟ್ ಬೆಡ್ ಸೇರಿಸಿ) ನಿರ್ಮಾಣಕ್ಕೆ 2,04,96,000/- ರೂ. ಮೊತ್ತವನ್ನು ಮೀಸಲಿಡಲಾಗಿದ್ದು, ಈ ಹಿಂದಿನ ಸರ್ಕಾರದ ಅವಧಿಯಲ್ಲಿಯೇ 1.83 ಕೋಟಿ ರೂ. ವೆಚ್ಚದ ಕಾಮಗಾರಿ ಮುಕ್ತಾಯವಾಗಿದೆ. 79,46,000 ರೂ.ಗಳ ವೆಚ್ಚದ ಮೂರ್ತಿಯ ಕಾಮಗಾರಿ ಬಾಕಿಯಿದ್ದು, ಈ ಮೊತ್ತದ ಕಾಮಗಾರಿ ಮುಕ್ತಾಯಗೊಳಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಇದುವರೆಗೂ ಅನುದಾನ ನೀಡಿರುವುದಿಲ್ಲ.

ಪರಶುರಾಮ ಥೀಮ್ ಪಾರ್ಕ್ ನಿರ್ಮಾಣದಲ್ಲಿ ಅವ್ಯವಹಾರ ಆಗಿದ್ದೇ ಆದಲ್ಲಿ, ರಾಜ್ಯ ಸರ್ಕಾರ ಆರಂಭಿಸಿದ್ದ ಸಿಐಡಿ ತನಿಖೆ ಏನಾಯಿತು? ಸಿಐಡಿ ತನಿಖೆಯ ವರದಿ ಯಾಕೆ ಇನ್ನೂ ಸಲ್ಲಿಕೆಯಾಗಿಲ್ಲ? ಸಿಐಡಿ ತನಿಖೆ ಎಂಬುದು ಸರ್ಕಾರದ ನಾಟಕವೇ ಎನ್ನುವ ಪ್ರಶ್ನೆಗಳು ಇದೀಗ ಮೂಡಿವೆ.

ರಾಜ್ಯ ಸರ್ಕಾರ ಪರಶುರಾಮ ಮೂರ್ತಿ ನಿರ್ಮಾಣದ ಹಣವನ್ನು ತನ್ನ ಬಳಿಯೇ ಉಳಿಸಿಕೊಂಡು ಉಡುಪಿ ಹಾಗೂ ರಾಜ್ಯ ಜನರನ್ನು ತಪ್ಪು ದಾರಿಗೆ ಎಳೆಯಲು ಪ್ರಯತ್ನಿಸಿತಾ? ಶಾಸಕ ಸುನಿಲ್ ಕುಮಾರ್ ಅವರನ್ನು ಹಣಿಯಲು ಈ ಕಾಮಗಾರಿಯನ್ನು ಗುರಾಣಿಯನ್ನಾಗಿ ಬಳಸಿಕೊಂಡಿತಾ? ಎನ್ನುವ ಪ್ರಶ್ನೆಗಳು ಜನತೆಯಲ್ಲಿ ಮೂಡಿವೆ.

ಇದೀಗ, ಹೈ ಕೋರ್ಟ್ʼನ ಮಧ್ಯಂತರ ಪ್ರವೇಶದಿಂದಾಗಿ ಕಾರ್ಕಳದ ಜನತೆ ಮುಂದಿನ 4 ತಿಂಗಳಲ್ಲಿಯೇ ಪರಶುರಾಮ ಮೂರ್ತಿಯನ್ನು ಉಮಿಕಲ್ ಬೆಟ್ಟದಲ್ಲಿ ನೋಡಬಹುದು ಎನ್ನುವ ಆಶಾಭಾವ ಮೂಡಿದೆ. ಇದೆಲ್ಲದರ ನಡುವೆ ಕಾಮಗಾರಿಯ ತನಿಖೆಯ ಕುರಿತು ರಚಿಸಲಾಗಿದ್ದ ಸಿಐಡಿ ವರದಿ ಹಾಗೂ ರಾಜ್ಯ ಸರ್ಕಾರ 1 ವರ್ಷ ಕಳೆದರೂ ಮೂರ್ತಿ ನಿರ್ಮಾಣಕ್ಕೆ ಯಾಕೆ ಹಣ ನೀಡಲಿಲ್ಲ ಎನ್ನುವುದು ಆದಷ್ಟು ಬೇಗ ತಿಳಿದುಬರಬೇಕಿದೆ.

You might also like
Leave A Reply

Your email address will not be published.