ಜೈ ಶ್ರೀರಾಮ್ ಎಂದು ಉತ್ತರ ಬರೆದ ವಿದ್ಯಾರ್ಥಿ ಪಾಸ್, ಪ್ರೊಪೆಸರ್ ಅಮಾನತು : ಇಲ್ಲಿದೆ ರೋಚಕ ಕಥೆ

ಪರೀಕ್ಷೆಗಳ ಉತ್ತರ ಪತ್ರಿಕೆಗಳಲ್ಲಿ ವಿದ್ಯಾರ್ಥಿಗಳು ಉತ್ತರ ಗೊತ್ತಿಲ್ಲದೆ ಬಾಯಿಗೆ ಬಂದಿದ್ದನ್ನು ಬರೆದ ಉದಾಹರಣೆಗಳು ನೂರಾರಿವೆ. ಅದರಲ್ಲಿ ಕೆಲವರು ಸಿನಿಮಾ ಹಾಡು, ಕಥೆ ಬರೆದರೆ, ಮತ್ತೆ ಕೆಲವರು ತಮ್ಮ ಕಷ್ಟಗಳನ್ನು ಹೇಳಿ ಗೋಗರೆದಿರುತ್ತಾರೆ. ಆದರೆ ಇಲ್ಲಿ ಈ ಭೂಪರು ಬರೆದದ್ದನ್ನು ನೋಡಿದ ಮೌಲ್ಯಮಾಪಕರು ಜೈ ಕಾರ ಹಾಕೋದ್ದು ನೋಡುಗರಿಗೆ ಅಚ್ಚರಿ ಮೂಡಿಸಿದೆ. ಅಷ್ಟಕ್ಕೂ ಈ ಘಟನೆ ಏನು?

ಬಹುತೇಕವಾಗಿ ಕೆಲವರು ಪರೀಕ್ಷೆ ಉತ್ತರ ಪತ್ರಿಕೆಯಲ್ಲಿ ಸಿನಿಮಾ ಕಥೆ, ಹಾಡು ಬರೆಯುವುದು ಸರ್ವೇ ಸಾಮಾನ್ಯ. ಇನ್ನು ಕೆಲವರು ‘ಮನೆಯಲ್ಲಿ ಕಷ್ಟ ಇದೆ, ದಯವಿಟ್ಟು ಪಾಸು ಮಾಡಿ’ ಎಂದು ಗೋಗೆರೆದಿರುತ್ತಾರೆ. ಆದರೆ ಉತ್ತರ ಪ್ರದೇಶದಲ್ಲಿ ಕೆಲವು ಭೂಪರು ಉತ್ತರ ಪತ್ರಿಕೆಯಲ್ಲಿ ‘ಜೈ ಶ್ರೀರಾಮ್’ ಎಂಬುದರೊಂದಿಗೆ ಕೆಲ ಕ್ರಿಕೆಟಿಗರ ಹೆಸರನ್ನು ಗೀಚಿದ್ದು, ಅದಕ್ಕೆ ಸಮನಾಗಿ ರಾಜ್ಯ ಸರ್ಕಾರಿ ಸ್ವಾಮ್ಯದ ವಿಶ್ವವಿದ್ಯಾಲಯದ ಮೌಲ್ಯಮಾಪಕರು ಈ ವಿದ್ಯಾರ್ಥಿಗಳಿಗೆ ಪಾಸ್ ಮಾರ್ಕ್ ಮಾಡಿ, ತಾವೂ ‘ಜೈ’ ಎಂದಿರುವುದು ನೋಡುಗರ‌ ಕಣ್ಣನ್ನು ನೆಟ್ಟಿದೆ.

Student pass who wrote answer as Jai Shriram, professor suspended : Here is an exciting story

ಹೌದು! ಉತ್ತರ ಪ್ರದೇಶದ ಜೌನ್ಪುರದ ವಿವಿಯಲ್ಲಿ ನಡೆದ ಈ ಘಟನೆ ಭಾರಿ ವಿವಾದ ಸೃಷ್ಟಿಸಿದ್ದು, ಇಬ್ಬರು ಪ್ರೊಫೆಸರ್‌ಗಳನ್ನು ಅಮಾನತು ಮಾಡಲಾಗಿದೆ.

ವೀರ್ ಬಹದ್ದೂರ್ ಸಿಂಗ್ ಪೂರ್ವಾಂಚಲ ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿ ದಿವ್ಯಾಂಶು ಸಿಂಗ್ ಎಂಬುವವರು, ಮೊದಲ ವರ್ಷದ ಫಾರ್ಮಸಿ ಕೋರ್ಸ್‌ನ 18 ವಿದ್ಯಾರ್ಥಿಗಳ ರೋಲ್ ಸಂಖ್ಯೆ ನೀಡಿ, ಅವರ ಉತ್ತರ ಪತ್ರಿಕೆಗಳ ಮರು ಮೌಲ್ಯ ಮಾಪನ ಮಾಡುವಂತೆ ಕಳೆದ ವರ್ಷದ ಆಗಸ್ಟ್ 3 ರಂದು ಆರ್‌ಟಿಐ ಮೂಲಕ ಅರ್ಜಿ ಸಲ್ಲಿಸಿದ್ದರು.

ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಲು ಪ್ರೊಫೆಸರ್‌ಗಳಾದ ವಿನಯ್ ವರ್ಮಾ ಮತ್ತು ಆಶೀಶ್ ಗುಪ್ತಾ ಅವರು ಲಂಚ ಸ್ವೀಕರಿಸಿದ್ದರು ಎಂದು ದಿವ್ಯಾಂಶು ಸಿಂಗ್ ಆರೋಪಿಸಿದ್ದರು. ಅಫಿಡವಿಟ್ ನೆರವಿನೊಂದಿಗೆ ಅವರು ರಾಜ್ಯಪಾಲರಿಗೆ ಪುರಾವೆ ಸಹಿತ ಔಪಚಾರಿಕ ದೂರು ಸಲ್ಲಿಸಿದ್ದರು. ಜತೆಗೆ ಪ್ರಧಾನಿ, ಸಿಎಂ ಮತ್ತು ಉಪ ಕುಲಸಚಿವರಿಗೆ ಸಹ ಪತ್ರಗಳನ್ನು ಬರೆದಿದ್ದರು.

ಪರೀಕ್ಷಾ ಪ್ರಕ್ರಿಯೆಯಲ್ಲಿ ಅವ್ಯವಹಾರಗಳು ನಡೆದಿರುವುದನ್ನು ಅವರು ಒದಗಿಸಿದ ಪುರಾವೆಗಳು ಸಾಬೀತುಪಡಿಸಿದ್ದವು. ವಿದ್ಯಾರ್ಥಿಗಳು ಉತ್ತರ ಪತ್ರಿಕೆಯಲ್ಲಿ ‘ಜೈ ಶ್ರೀರಾಮ್’ ಎಂಬ ಘೋಷಣೆಗಳನ್ನು ಬರೆದಿರುವುದು, ಕ್ರಿಕೆಟಿಗರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಮುಂತಾದವರ ಹೆಸರುಗಳನ್ನು ಗೀಚಿರುವುದು ಕಂಡುಬಂದಿದೆ. ಅವರ ಈ ‘ಉತ್ತರ’ಗಳಿಗೆ ಪ್ರೊಫೆಸರ್‌ಗಳು ಉತ್ತೀರ್ಣವಾಗಲು ಬೇಕಾದಷ್ಟು ಅಥವಾ ಶೇ 50ಕ್ಕಿಂತ ಹೆಚ್ಚು ಅಂಕಗಳನ್ನು ನೀಡಿದ್ದಾರೆ. ಸೊನ್ನೆ ಅಂಕ ಬಂದವರಿಗೂ ಶೇ.60 ಕ್ಕಿಂತ ಹೆಚ್ಚು ಅಂಕ ಕೊಡಲಾಗಿದೆ.

ತನಿಖೆಗೆ ಆದೇಶಿಸಿದ ರಾಜ್ಯಪಾಲ : 

ವಿದ್ಯಾರ್ಥಿ ಸಲ್ಲಿಸಿದ ದೂರು ಪತ್ರ ಹಾಗೂ ಅಫಿಡವಿಟ್ ಪರಿಶೀಲಿಸಿದ ರಾಜಭವನ, ಕ್ರಮ ಕೈಗೊಂಡಿದ್ದು, 2023ರ ಡಿಸೆಂಬರ್‌ 21ರಂದು ತನಿಖೆಗೆ ಆದೇಶ ನೀಡಿತ್ತು. ವಿಶ್ವವಿದ್ಯಾಲಯ ಆಡಳಿತ ಮಂಡಳಿಯು ತನಿಖಾ ಸಮಿತಿಯೊಂದನ್ನು ರಚಿಸಿತ್ತು. ಪರಿಶೀಲನಾ ಸಮಿತಿಯು ಉತ್ತರ ಪತ್ರಿಕೆಗಳ ಬಾಹ್ಯ ಮೌಲ್ಯಮಾಪನ ನಡೆಸಿದಾಗ, 0 ಮತ್ತು 4 ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಉತ್ತೀರ್ಣವಾಗುವಷ್ಟು ಅಂಕ ನೀಡಿದ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ.

ಉತ್ತರ ಪತ್ರಿಕೆಗಳ ಪ್ರತಿಗಳ ಮರು ಮೌಲ್ಯಮಾಪನ ಮಾಡುವಾಗ, ಅಂಕಗಳ ನಡುವಿನ ಭಾರಿ ವ್ಯತ್ಯಾಸ ಕಂಡುಬಂದಿದೆ. ಈ ವೇಳೆ ಗಮನಕ್ಕೆ ಬಂದ ಅಂಶಗಳನ್ನು ಪಟ್ಟಿ ಮಾಡಿ ಮುಂದಿನ ಕ್ರಮಕ್ಕಾಗಿ ರಾಜಭವನಕ್ಕೆ ಕಳುಹಿಸಲು ಸಿದ್ಧತೆ ನಡೆಸಲಾಗಿದೆ. ಸದ್ಯಕ್ಕೆ ಇಬ್ಬರು ಪ್ರೊಫೆಸರ್‌ಗಳನ್ನು ಅಮಾನತು ಮಾಡಲಾಗಿದೆ.

ಈ ಹಿಂದೆಯೂ ವಿನಯ್ ವರ್ಮಾ ವಿರುದ್ಧ ಆರೋಪಗಳು ಕೇಳಿಬಂದಿದ್ದವು. ಪರೀಕ್ಷೆ ವೇಳೆ ಮೊಬೈಲ್ ಫೋನ್ ಜತೆ ನಗದು ಹಣ ಕಿತ್ತುಕೊಂಡ ಘಟನೆಯಲ್ಲಿ ಅವರನ್ನು ಆಡಳಿತಾತ್ಮಕ ಕರ್ತವ್ಯಗಳಿಂದ ತೆಗೆದು ಹಾಕಲಾಗಿತ್ತು.

You might also like
Leave A Reply

Your email address will not be published.