ಮನ್ ಕೀ ಬಾತ್ – ಪರೀಕ್ಷಾ ಪೇ ಚರ್ಚಾ

ಪ್ರಧಾನಿ ನರೇಂದ್ರ ಮೋದಿ ಅವರಿಂದು 2024ನೇ ಸಾಲಿನ ಪರೀಕ್ಷಾ ಪೇ ಚರ್ಚಾ (Pariksha Pe Charcha 2024) ಕಾರ್ಯಕ್ರಮ ನಡೆಸಿಕೊಡುವುದರೊಂದಿಗೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರ ಗೊಂದಲಗಳನ್ನು ನಿವಾರಿಸುವುದ್ದಲ್ಲದೇ, ವಿದ್ಯಾರ್ಥಿಗಳ ಶೈಕ್ಷಣಿಕ ಜೀವನಕ್ಕೆ ಅನುಕೂಲಕರ ಸಲಹೆಗಳನ್ನು ನೀಡಿದ್ದಾರೆ. ಹಾಗಾದರೆ ವಿದ್ಯಾರ್ಥಿಗಳಿಗೆ ಕೊಟ್ಟ ಆ ಟಾಪ್ ಟಿಪ್ಸ್ ಯಾವುದು?

ವಿದ್ಯಾರ್ಥಿಗಳು – ಶಿಕ್ಷಕರಿಗೆ ಮೋದಿ ಟಾಪ್-10 ಟಿಪ್ಸ್:

1. ಓದುವುದರೊಂದಿಗೆ ಬರೆಯುವ ಹವ್ಯಾಸ ರೂಢಿಸಿಕೊಳ್ಳಿ:
ಹೆಚ್ಚಿನ ವಿದ್ಯಾರ್ಥಿಗಳು ಪರೀಕ್ಷೆಗೆ ಓದಿಕೊಂಡು ಹೋಗ್ತಾರೆ ವಿನಃ ಬರೆಯುವ ಅಭ್ಯಾಸ ಮಾಡುವುದಿಲ್ಲ. ಇದೇ ಕಾರಣದಿಂದಲೇ ನೀವು ಎಷ್ಟೇ ಓದಿದರೂ ಪರೀಕ್ಷೆಯಲ್ಲಿ ಉತ್ತಮವಾಗಿ ಬರೆಯಲು ಆಗುವುದಿಲ್ಲ. ಆದ್ದರಿಂದ ಪರೀಕ್ಷೆಗೂ ಮುನ್ನ ನೀವು ಓದುವ ಪಠ್ಯವನ್ನು ಬರೆಯುವ ಮೂಲಕ ಅಭ್ಯಾಸ ಮಾಡಿಕೊಳ್ಳಿ. ಆಗ ಮನನವೂ ಆಗುತ್ತದೆ, ಪರೀಕ್ಷೆಯಲ್ಲಿ ಸುಲಭವಾಗಿ ಬರೆಯಲು ಸಾಧ್ಯವಾಗುತ್ತದೆ.

2. ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ನಡುವಿನ ಸಂಬಂಧ ಉತ್ತಮವಾಗಿರಬೇಕು:
ತರಗತಿಗಳಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವಿನ ಸಂಬಂಧ ಉತ್ತಮವಾಗಿರಬೇಕು. ಯಾವುದೇ ಸಮಸ್ಯೆಗಳಿದ್ದರೂ ಶಿಕ್ಷಕರೊಂದಿಗೆ ಮುಕ್ತವಾಗಿ ಚರ್ಚಿಸುವಂತಿರಬೇಕು. ಶಿಕ್ಷಕರೂ ಅಷ್ಟೇ ಚೆನ್ನಾಗಿ ವಿದ್ಯಾರ್ಥಿಗಳ ಸಮಸ್ಯೆಯನ್ನು ಆಲಿಸಬೇಕು. ಆಗ ಮಾತ್ರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ವಿದ್ಯಾರ್ಥಿಗಳು ಮುನ್ನಡೆಯುತ್ತಾರೆ.

3. ಶಿಕ್ಷಕರು ವಿದ್ಯಾರ್ಥಿಗಳಿಗೆ ಒತ್ತಡ ಹೇರಬೇಡಿ:
ವಿದ್ಯಾರ್ಥಿಗಳ ಮೇಲಿನ ಒತ್ತಡ ಹೇಗೆ ಹೋಗಲಾಡಿಸಬೇಕು ಅನ್ನೋದು ಶಿಕ್ಷಕರ ಮನಸ್ಸಿಗೆ ಮೊದಲೇ ಬರಬೇಕು. ವಿದ್ಯಾರ್ಥಿ ಜೊತೆಗಿನ ಸಂಬಂಧವು ಆರಂಭದ ದಿನದಿಂದ ಪರೀಕ್ಷೆ ದಿನದವರೆಗೂ ಬೆಳೆಯುತ್ತಲೇ ಇರಬೇಕು. ಆಗ ವಿದ್ಯಾರ್ಥಿ ಪುಸ್ತಕ ಮೀರಿ ಬೆಳೆಯುತ್ತಾನೆ.

4. ಟೆನ್ಶನ್ ಬಿಟ್ಟು ಖುಷಿಯಾಗಿರಿ:
ಪರೀಕ್ಷೆಯ ಕೊಠಡಿಗೆ ಮೊದಲೇ ತೆರಳಬೇಕು. ಕೊಠಡಿಯ ಬಾಗಿಲಿನವರೆಗೆ ಪುಸ್ತಕ ಹಿಡಿದುಕೊಂಡು ಹೋಗಬಾರದು. 10 ನಿಮಿಷ ಮೊದಲೇ ಪರೀಕ್ಷಾ ಕೇಂದ್ರಕ್ಕೆ ತೆರಳಿ ಗೆಳೆಯರೊಂದಿಗೆ ಮಾತನಾಡಿ. ಟೆನ್ಶನ್ ಬಿಟ್ಟು ಒಂದು ಜೋಕ್ ಹೇಳಿ, ಮೊದಲು ನಿರಾತಂಕವಾಗಿ ಉಸಿರಾಡಿ.

5. ಪ್ರಶ್ನೆಪತ್ರಿಕೆ ನೋಡಿ ಗಾಬರಿಯಾಗಬೇಡಿ:
ಕೊಠಡಿಯಲ್ಲಿ ಪ್ರಶ್ನೆಪತ್ರಿಕೆ ಸಿಕ್ಕ ತಕ್ಷಣ ಗಾಬರಿಯಾಗದೇ ಎಲ್ಲ ಪ್ರಶ್ನೆಗಳನ್ನು ಓದಿಕೊಳ್ಳಿ. ಯಾವ ಪ್ರಶ್ನೆಗೆ ಹೆಚ್ಚು ಸಮಯ ಬೇಕಾಗುತ್ತದೆ ಎಂಬುದನ್ನು ಯೋಚಿಸಿ. ಪರೀಕ್ಷೆ ಬರೆಯುವಾಗ ಅನಗತ್ಯವಾಗಿ ಗಡಿಯಾರ ನೋಡಿಕೊಳ್ಳಬೇಡಿ.

6. ಹಳೆಯ ಪ್ರಶ್ನೆಪತ್ರಿಕೆಗಳನ್ನು ರಿವಿಷನ್ ಮಾಡಿ:
ಹಳೆಯ ಪ್ರಶ್ನೆಪತ್ರಿಕೆಗಳನ್ನು ರಿವಿಶನ್ ಮಾಡಿ. ಅದರಲ್ಲಿರುವ ಪ್ರಶ್ನೆಗಳಿಗೆ ಉತ್ತರ ಬರೆದು, ನೋಟ್ಸ್ಗಳನ್ನು ಮಾಡಿಕೊಂಡು ಪರೀಕ್ಷೆಗೆ ತಯಾರಾಗಿ. ಬರೆದು ಅಭ್ಯಾಸ ಮಾಡಿಕೊಂಡರೆ, ಮನನ ಮಾಡಿಕೊಂಡರೆ ಪರೀಕ್ಷೆಯಲ್ಲಿ ಯಶಸ್ವಿಯಾಗಿ ತೇರ್ಗಡೆ ಹೊಂದಬಹುದು.

7. ಮೆದುಳು, ಮನಸ್ಸಿನೊಂದಿಗೆ ದೇಹಕ್ಕೂ ವಿರಾಮ ಕೊಡಿ:
ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಮೆದುಳು, ಮನಸ್ಸಿನ ಜತೆಗೆ ದೇಹಕ್ಕೂ ಸ್ವಲ್ಪ ವಿಶ್ರಾಂತಿ ಕೊಡಬೇಕು. ಉಲ್ಲಾಸದ ಸಮಯಗಳನ್ನು ಕಳೆಯುವ ಮೂಲಕ ಒತ್ತಡ ಕಡಿಮೆ ಮಾಡಿಕೊಳ್ಳಬೇಕು.

8. ಓದುತ್ತೇವೆ ಎಂದು ನಿದ್ರೆ ಮಾಡಬೇಡಿ:
ಒಂದೇ ಕಡೆ ಕೂರುವುದಕ್ಕಿಂತ ಶಾಂತ ವಾತಾವರಣ, ಎಳೆ ಬಿಸಿಲಿನ ವಾತಾವರಣಗಳಲ್ಲಿಯೂ ಕುಳಿತು ಓದಬೇಕು. ಓದುತ್ತೇವೆ ಅಂತ ನಿದ್ರೆಗೆ ಜಾರಬಾರದು.

9. ನಿಯಮಿತ ಆಹಾರದೊಂದಿಗೆ ಆರೋಗ್ಯವನ್ನು ಕಾಪಾಡಿಕೊಳ್ಳಿ:
ಪರೀಕ್ಷೆಯ ದಿನಗಳಲ್ಲಿ ನಿಯಮಿತ ಆಹಾರ ಸೇವಿಸಬೇಕು. ಬಡತನ ಇರಲಿ, ಸಿರಿತನ ಇರಲಿ ನಿಮ್ಮ ಬಳಿ ಏನಿದೆಯೋ ಅದನ್ನು ಖುಷಿಯಿಂದ ಸೇವಿಸಿ. ಸರಿಯಾದ ಸಮಯಕ್ಕೆ ಊಟ ಮಾಡಿ, ಆರೋಗ್ಯ ಕಾಪಾಡಿಕೊಳ್ಳಬೇಕು.

10. ವ್ಯಾಯಾಮ, ಧ್ಯಾನ ಮಾಡಿ:
ಬೆಳಗ್ಗೆ ನಿತ್ಯ ಕರ್ಮಗಳನ್ನು ಮುಗಿಸಿ 10 ನಿಮಿಷವಾದ್ರೂ ವ್ಯಾಯಾಮ ಮಾಡಬೇಕು. ಸಾಧ್ಯವಾದ್ರೆ ಒಂದಷ್ಟು ನಿಮಿಷಗಳ ಕಾಲ ಧ್ಯಾನ ಮಾಡಬೇಕು. ಇದರಿಂದ ಮೆದುಳಿನ ಬುದ್ಧಿ ಶಕ್ತಿ ಹೆಚ್ಚಾಗುತ್ತದೆ ಎಂದು ಸಲಹೆ ನೀಡಿದರು

You might also like
Leave A Reply

Your email address will not be published.