ಎಚ್ಚರ! ನಿಮ್ಮ ಕಾಲ್ ‌ಡಿಟೈಲ್ಸ್ ಇನ್ನೊಬ್ಬರ ಪಾಲಾಗುತ್ತಿದೆ – ಬೆಂಗಳೂರಿನಲ್ಲೇ ಏಳು ಡಿಟೆಕ್ಟಿವ್ ಏಜೆಂಟ್’ಗಳ ಬಂಧನ

ಇತ್ತೀಚೆಗೆ ವೈಯುಕ್ತಿಕ ದಾಖಲೆಗಳನ್ನು ಆನ್‌ಲೈನ್, ಆಫ್’ಲೈನ್ ರೆಕಾರ್ಡ್ ಗಳಿಗಾಗಿ ಹಿಂದೆ ಮುಂದೆ ನೋಡದೆ ಲಿಂಕ್ ಮಾಡುತ್ತಿದ್ದೇವೆ. ಮೊಬೈಲ್ ನಂಬರ್, ಆಧಾರ್ ನಂಬರ್, ಓಟಿಪಿ ಮುಂತಾದ ಅತ್ಯಂತ ಗೌಪ್ಯ ಮಾಹಿತಿಗಳನ್ನು ಕೂಡ ಪ್ರತಿ ವಹಿವಾಟುಗಳಿಗೆ ಬಳಸುತ್ತಿರುವುದು ಆತಂಕಕಾರಿಯೇ. ಈ ನಡುವೆ ಬೆಂಗಳೂರು ಜನತೆಯನ್ನು ಬೆಚ್ಚಿಬೀಳಿಸುವ ಸುದ್ದಿಯೊಂದು ಹೊರಬಿದ್ದಿದೆ. ಅದೇನು?‌ ಇಲ್ಲಿದೆ ನೋಡಿ ಫುಲ್ ಸ್ಟೋರಿ.

ಬೆಂಗಳೂರಿನ ಗೋವಿಂದರಾಜನಗರ ಮತ್ತು ಬಸವೇಶ್ವರನಗರದಲ್ಲಿ ಬೆಂಗಳೂರು ಪೊಲೀಸರು ಡಿಟೆಕ್ಟಿವ್ ತಂಡಗಳ ರಹಸ್ಯವೊಂದನ್ನು ಭೇದಿಸಿದ್ದಾರೆ. ಗೌಪ್ಯವಾದ ಕಾಲ್ ರೆಕಾರ್ಡ್ ಗಳನ್ನು ಹಾಗೂ ಕಾಲರ್ ಮಾಹಿತಿಗಳನ್ನು ರೌಡಿಶೀಟರ್’ಗಳಿಗೆ ಹಾಗೂ ಪಾಲುದಾರರಿಗೆ ಹಂಚುತ್ತಿರುವ ಕೆಲವು ಪ್ರೈವೇಟ್ ಡಿಕೆಕ್ಟಿವ್ ಏಜೆನ್ಸಿಗಳ ಜಾಲವೊಂದನ್ನು ಭೇದಿಸಿರುವ ಪೊಲೀಸರು, ಈ ಸಂಬಂಧ ಏಳು ಏಜೆಂಟ್ ಗಳನ್ನು ಬಂಧಿಸಿದ್ದಾರೆ.

ಯಾವುದೇ ಕಾನೂನುಬದ್ಧವಾದ ಕಾರಣವಿಲ್ಲದೇ ಕಾಲ್ ರೆಕಾರ್ಡ್ ಡಿಟೈಲ್ಸ್ (CDR) ಅನ್ನು ಇನ್ನೊಬ್ಬರಿಗೆ ಹಂಚುವುದು ಕಾನೂನುಬದ್ಧ ಅಪರಾಧವಾಗಿದ್ದು, ಈ ಪ್ರೈವೇಟ್ ಡಿಟೆಕ್ಟಿವ್ ಏಜೆನ್ಸಿಗಳು ಜನರ ಕಾಲರ್ ಡಿಟೈಲ್ಸ್ ಗಳನ್ನು ಯಾವುದೇ ಕಾನೂನು ವಿಧಾನಗಳಿಲ್ಲದೇ ಅಕ್ರಮವಾಗಿ ರೌಡಿಗಳಿಗೆ ಹಾಗೂ ತಮ್ಮ ಸೀಕ್ರೇಟ್ ಕ್ಲೈಂಟ್’ಗಳಿಗೆ ಹಂಚುತ್ತಿದ್ದರು.

ಈ ಸಂಬಂಧ ಮೂರು ಕೇಸ್ ಗಳನ್ನು ದಾಖಲಿಸಿರುವ ಬೆಂಗಳೂರು ಪೊಲೀಸರು, ಈ ಅಕ್ರಮದಲ್ಲಿ ಶಾಮೀಲಾಗಿರುವ ಇತರ ಆರೋಪಿಗಳ‌ ಜಾಲವನ್ನು ಸೆರೆಹಿಡಿಯಲು ಬಲೆ ಬೀಸಿದ್ದಾರೆ.

Beware! Your call details are being shared - Seven detective agents arrested in Bengaluru

ಈ ಕುರಿತು ಪ್ರತಿಕ್ರಿಯಿಸಿರುವ ಬೆಂಗಳೂರು ಪೊಲೀಸ್ ಕಮಿಷನರ್ ಬಿ ದಯಾನಂದ, ಈ ಕೃತ್ಯಗಳಲ್ಲಿ ಭಾಗಿಯಾದವರ ಬಗ್ಗೆ ಹಾಗೂ ಈ ಕಾಲರ್ ಡಿಟೈಲ್ಸ್ ಗಳನ್ನು ಅಕ್ರಮವಾಗಿ ಯಾರಿಗೆ ವರ್ಗಾಯಿಸಲಾಗುತ್ತಿದೆ ಹಾಗೂ‌ ಮೊಬೈಲ್ ಕದ್ದಾಲಿಕೆ‌ ಏಕೆ ನಡೆಸಲಾಗಿದೆ ಎನ್ನುವುದರ ಬಗ್ಗೆ ಸೈಬರ್ ಕ್ರೈಂ ಶಾಖೆ ತನಿಖೆ ನಡೆಸುತ್ತಿದೆ ಎಂದಿದ್ದಾರೆ.

ಈ ಕುಕೃತ್ಯಗಳಲ್ಲಿ ಭಾಗಿಯಾದ ಏಜೆನ್ಸಿಗಳ ಮೇಲೆ ಮೇ 22 ರಂದು, ಬಸವೇಶ್ವರನಗರ ಮತ್ತು ಗೋವಿಂದರಾಜನಗರದಲ್ಲಿ ದಾಳಿ‌ ನಡೆಸಲಾಗಿದ್ದು, ಏಜೆನ್ಸಿಗಳಿಗೆ ಯಾವುದೇ ಲೈಸೆನ್ಸ್ ಇರುವುದಿಲ್ಲ ಎನ್ನುವುದು ತಿಳಿದುಬಂದಿದೆ.

ಈ ಏಜೆನ್ಸಿಗಳಿಂದ ಕೆಲವು ರೌಡಿಗಳು ತಮ್ಮ ವೈರಿಗಳ ಪರ್ಸನಲ್ ವಿವರಗಳನ್ನು ಪಡೆಯಲು ಹಾಗೂ ಕೆಲವು ಡಿವೋರ್ಸ್ ಪಡೆದ ದಂಪತಿಗಳು ತಮ್ಮ ಹಿಂದಿನ ಪಾರ್ಟ್ನರ್ ನ ಕಾಲ್ ಡಿಟೈಲ್ಸ್ ಗಾಗಿ, ಕೆಲವರು ತಮ್ಮ ಕಂಪೆನಿಯ ಹಳೆಯ ಪಾರ್ಟ್ನರ್ ಗಳ ಕಾಲ್ ಡಿಟೈಲ್ಸ್’ಗಳನ್ನು ಪಡೆಯುತ್ತಿದ್ದದ್ದೂ ಬೆಳಕಿಗೆ ಬಂದಿದೆ.

ಯಾವುದೇ ವ್ಯಕ್ತಿಯ ಫೋನ್ ಕದ್ದಾಲಿಕೆ ಹಾಗೂ ಮೊಬೈಲ್ ನಂಬರ್ ಹಾಗೂ ಪರ್ಸನಲ್ ವಿವರಗಳನ್ನು ಪಡೆಯಲು ಕೇವಲ ಜಾರಿ ನಿರ್ದೇಶನಾಲಯದ ಏಜೆನ್ಸಿಗಳಿಗೆ ಮಾತ್ರ ಅಧಿಕಾರವಿದ್ದು, ತಪ್ಪಿತಸ್ಥರ ವಿರುದ್ಧ ಕೇಸ್ ದಾಖಲಾಗಿದ್ದಲ್ಲಿ ಮಾತ್ರ ಕೆಲವು ಗೌಪ್ಯ ವಿಧಾನಗಳ ಮೂಲಕವಷ್ಟೇ ಪಡೆಯಲು ಸಾಧ್ಯ‌. ಅಂತಹುದರಲ್ಲಿ ಈ ಅಕ್ರಮವಾಗಿ ವ್ಯವಹರಿಸುತ್ತಿರುವ ಏಜೆನ್ಸಿಗಳು ಗೌಪ್ಯವಾಗಿಯೇ ತಮ್ಮ ಕಳ್ಳ ವ್ಯವಹಾರವನ್ನು ಈವರೆಗೆ ನಡೆಸುತ್ತಿದ್ದು, ಈ ಜಾಲ ಇಡೀ ಬೆಂಗಳೂರು ವ್ಯಾಪ್ತಿಯಲ್ಲಿ ಹೇರಳವಾಗಿದೆ ಎನ್ನುವ ಆತಂಕಕಾರಿ ಸುದ್ದಿಯೂ ಹೊರಬಿದ್ದಿದೆ.

ಏನೇ ಇರಲಿ. ಇನ್ನು‌ ಮುಂದೆ ನಿಮ್ಮ ಮೊಬೈಲ್ ನಲ್ಲಿ ಮಾತನಾಡುವಾಗ, ಚಾಟ್ ಮಾಡುವಾಗ ಹಾಗೂ ಪರ್ಸನಲ್ ವಿವರಗಳನ್ನು ಸಲ್ಲಿಸುವಾಗ ಬಹಳಷ್ಟು ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಇಲ್ಲವಾದಲ್ಲಿ, ಗೌಪ್ಯ ಹಾಗೂ ವೈಯುಕ್ತಿಕ ವಿವರಗಳು ಇಂತಹ ಅಕ್ರಮ ಏಜೆನ್ಸಿಗಳ ಮೂಲಕ ವಂಚಕರ ಪಾಲಾಗುವುದಂತೂ ಖಂಡಿತ.

You might also like
Leave A Reply

Your email address will not be published.