ದೇವಸ್ಥಾನದ ಪ್ರಸಾದ ತಿಂದು 217 ಜನ ಅಸ್ವಸ್ಥ

ಬೆಂಗಳೂರು ಗ್ರಾಮಾಂತರ ಹೊಸಕೋಟೆಯಲ್ಲಿ ಕಲುಷಿತ ಆಹಾರ ಸೇವಿಸಿ ಆಸ್ಪತ್ರೆಗೆ ದಾಖಲಾದವರ ಸಂಖ್ಯೆ 135 ರಿಂದ 217ಕ್ಕೆ ಏರಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 35 ರಿಂದ 39ಕ್ಕೆ ಏರಿದೆ ಎಂದು ರಾಜ್ಯ ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕಿ (ಸಿಎಂಡಿ) ಡಾ.ತ್ರಿವೇಣಿ ಅವರು ಮಹಿತಿ ನೀಡಿದ್ದಾರೆ.

ಮಂಗಳವಾರ ಹೊಸಕೋಟೆಯ ಎರಡು ದೇವಸ್ಥಾನಗಳಲ್ಲಿ ನೀಡಲಾದ ಪ್ರಸಾದ ಸೇವಿಸಿದ ಭಕ್ತರಲ್ಲಿ ವಾಂತಿ ಮತ್ತು ಭೇದಿ ಕಾಣಿಸಿಕೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ದಾಖಲಾದವರ ಸಂಖ್ಯೆಯಲ್ಲಿ ಇಂದು ಹೆಚ್ಚಳ ಕಂಡು ಬಂದಿದೆ. ಅದರಲ್ಲೂ ಐಸಿಯುನಲ್ಲಿರುವ 39 ರೋಗಿಗಳ ಪೈಕಿ ಇಬ್ಬರು 80 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ದೀರ್ಘಕಾಲಿಕ ರೋಗದಿಂದ ಬಳಲುತ್ತಿದ್ದಾರೆ. ಅವರ ಆರೋಗ್ಯದ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ತಿಳಿಸಿದರು.

ಆಸ್ಪತ್ರೆಗೆ ದಾಖಲಾದವರ ಆರೋಗ್ಯ ಸುಧಾರಿಸುತ್ತಿದ್ದು, “ನಾವು ಆಹಾರ ಮಾದರಿಗಳು ಮತ್ತು ರಕ್ತದ ಮಾದರಿಗಳನ್ನು ಈಗಾಗಲೇ ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ. ವರದಿ ಬಂದ ನಂತರವಷ್ಟೇ ಇದಕ್ಕೆ ನಿಖರ ಕಾರಣಗಳು ಏನೆಂಬುದು ತಿಳಿಯುತ್ತದೆ. ಗುರುವಾರ ವರದಿ ಬರುವ ನಿರೀಕ್ಷೆಗಳಿವೆ” ಎಂದು ಹೇಳಿದರು.

ಒಟ್ಟಾರೆಯಾಗಿ 217 ಅಸ್ವಸ್ಥರು ಹೊಸಕೋಟೆ ಮತ್ತು ಬೆಂಗಳೂರಿನ ಐದು ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾದರೆ ಬೆಂಗಳೂರಿನ ಸಿವಿ ರಾಮನ್ ನಗರದ ಜನರಲ್ ಆಸ್ಪತ್ರೆ ಮತ್ತು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಿಸಲು ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದರು.

You might also like
Leave A Reply

Your email address will not be published.