ಕಾಂಗ್ರೆಸ್ ದೂರು – ಪ್ರತಾಪ್ ಸಿಂಹ ವಿರುದ್ಧ ಎಫ್.ಐ.ಆರ್

ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರಿಗೆ ಒಂದರ ಮೇಲೊಂದು ಸಂಕಷ್ಟಗಳು ನಿರಂತರವಾಗಿ ಬರುತ್ತಲೇ ಇದೆ. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಎಫ್.ಐ.ಆರ್ ದಾಖಲಾಗಿದೆ.

ಸಂಸತ್ತಿನ ಭದ್ರತೆ ಉಲ್ಲಂಘಿಸಿದವರಿಗೆ ಪಾಸ್ ನೀಡಿದ್ದರು ಎನ್ನಲಾದ ಆರೋಪದಿಂದ ಪಾರಾದ ಅವರು, ನಿನ್ನೆ (ಮಂಗಳವಾರ) ಸರ್ಕಾರಿ ಜಾಗದಲ್ಲಿದ್ದ ಮರಗಳನ್ನು ಅಕ್ರಮವಾಗಿ ಕಡಿದು ಸಾಗಾಟ ಮಾಡಿದ ಆರೋಪದಡಿ ಅವರ ಸಹೋದರ ವಿಕ್ರಮ್ ಸಿಂಹ ಹೆಸರು ಕೇಳಿಬರುತ್ತಿತ್ತು (ಪೊಲೀಸರ FIR ನಲ್ಲಿ ವಿಕ್ರಮ್ ಸಿಂಹ ಹೆಸರು ಉಲ್ಲೇಖವಾಗಿರಲಿಲ್ಲ). ಇದೀಗ ಪ್ರತಾಪ್ ಸಿಂಹ ವಿರುದ್ಧವೇ ಎಫ್.ಐ.ಆರ್ ದಾಖಲಾಗಿದೆ. ಅಷ್ಟಕ್ಕೂ ಏನಿದು ಪ್ರಕರಣ? ಪ್ರತಾಪ್ ಸಿಂಹ ಹೇಳಿದ್ದಾದರೂ ಏನು? ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ಸಂಸದ ಪ್ರತಾಪ್ ಸಿಂಹ ನೀಡಿದ ಹೇಳಿಕೆ ಏನು?

ಮಂಗಳವಾರ ಹುಣಸೂರಿನಲ್ಲಿ ನಡೆದ ಹನುಮ ಜಯಂತಿ ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್ ಸಿಂಹ ಅವರು ಆಡಳಿತದಲ್ಲಿರುವ ರಾಜ್ಯ ಸರ್ಕಾರ ಹಾಗೂ ಸಿದ್ದರಾಮಯ್ಯ ಅವರನ್ನು ಟೀಕಿಸುತ್ತ ಸೋಮಾರಿ ಸಿದ್ದ ಎಂದು ಟೀಕಿಸಿದ್ದಲ್ಲದೇ, ಮುಖ್ಯಮಂತ್ರಿಗಳು ಜಾತಿ ಜಾತಿಗಳ ನಡುವೆ ದ್ವೇಷ ಹರಡುತ್ತಿದ್ದಾರೆಂದು ಆರೋಪಿಸಿದ್ದರು. ಇದರೊಂದಿಗೆ ಸಿದ್ದರಾಮಯ್ಯ ಅವರೇ ನಿಮಗೆ ನಿಜವಾಗಲೂ ತಾಕತ್ತು, ಧಮ್ ಇದ್ದರೆ ಅಭಿವೃದ್ಧಿ ಇಟ್ಟುಕೊಂಡು ರಾಜಕಾರಣ ಮಾಡಿ, ದ್ವೇಷದ ರಾಜಕಾರಣ ಮಾಡಬೇಡಿ ಎಂದು ಕಿಡಿಕಾರಿದರು.

ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ:

 ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಕಾಂಗ್ರೆಸ್ ಕಾರ್ಯಕರ್ತರು, ಸಿದ್ದರಾಮಯ್ಯ ಅವರ ವಿರುದ್ಧ ಬಳಸಿದ ಪದವು ಅವಹೇಳನಕಾರಿಯಾಗಿದೆ ಎಂದು ಅವರ ವಿರುದ್ಧ ದೂರು ನೀಡುವುದರೊಂದಿಗೆ, ನಿನ್ನೆ ರಾತ್ರಿ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ್ದರು.

ಸಂಸದರ ವಿರುದ್ಧ ಲಿಖಿತ ದೂರು ನೀಡಿದ ಬಿ.ಜೆ.ವಿಜಯಕುಮಾರ್:

 

ಪ್ರತಾಪ್ ಸಿಂಹ ಅವರಿಂದ ಹಿಂದು ಮತ್ತು ಮುಸ್ಲಿಂ ನಡುವೆ ಕೋಮು ಗಲಭೆ ಸೃಷ್ಟಿಸಲು ನಿರಂತರವಾಗಿ ಪ್ರಯತ್ನ ನಡೆಯುತ್ತಿದೆ ಎಂದು ಮೈಸೂರು ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ವಿಜಯಕುಮಾರ್ ಲಿಖಿತ ದೂರು ನೀಡಿದ್ದರು.

ಎಫ್.ಐ.ಆರ್ ದಾಖಲಿಸಿಕೊಂಡ ಪೊಲೀಸರು:

ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆಯನ್ನು ನಿಲ್ಲಿಸುವುದ್ದಕ್ಕೆ ಪೊಲೀಸರು ಸಾಕಷ್ಟು ಪ್ರಯತ್ನ ಪಟ್ಟರಾದರೂ, ಪ್ರತಿಭಟನೆಯಿಂದ ಹಿಂದೆ ಸರಿಯದ ಕಾರ್ಯಕರ್ತರಿಗೆ ಎಫ್.ಐ.ಆರ್ ದಾಖಲಿಸಿಕೊಳ್ಳುವುದಾಗಿ ಭರವಸೆ ನೀಡಿದ್ದರು. ತದನಂತರ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.

ಈ ನಿಟ್ಟಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನೀಡಿದ ದೂರಿನ ಆಧಾರದನ್ವಯ ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 504, 153ರ ಅಡಿಯಲ್ಲಿ ಪೊಲೀಸರು ಎಫ್.ಐ.ಆರ್ ದಾಖಲಿಸಿಕೊಂಡಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ:

ಕಾಂಗ್ರೆಸ್ ಪಕ್ಷದಲ್ಲಿರುವ ಕಾರ್ಯಕರ್ತರಿಂದ ಹಿಡಿದು ಸಿಎಂ ಪುತ್ರನವರೆಗೆ ಇರುವ ಪ್ರತಿಯೊಬ್ಬರೂ ನನ್ನನ್ನು ಟಾರ್ಗೆಟ್ ಮಾಡಿದ್ದು, ಭಯೋತ್ಪಾದಕ ಎಂಬಂತೆ ಸಾರ್ವಜನಿಕರ ಮುಂದೆ ನನ್ನನ್ನು ಬಿಂಬಿಸುತ್ತಿದ್ದಾರೆ. ಅಲ್ಲದೇ ಮುಸ್ಲಿಂ ಧರ್ಮದವರೆಲ್ಲ ಭಯೋತ್ಪಾದಕರು ಎಂಬಂತೆ ನನಗೆ ಮುಸ್ಲಿಂ ವೇಷ ತೋಡಿಸಿ ಕೈಯಲ್ಲಿ ಬಾಂಬ್ ಕೊಟ್ಟಿದ್ದರು. ಮಂಗಳವಾರ ನಡೆದ ಸಂಸತ್ ಅಲ್ಲಿ ಈ ಕುರಿತು ಸ್ಪಷ್ಟತೆ ನೀಡಿದ್ದು, ಪ್ರತಾಪ್ ಸಿಂಹನ ಸಹೋದರ ಮರಗಳ್ಳ ಎಂದು ಕಾಂಗ್ರೆಸ್ ಅವರು ಪೋಸ್ಟ್ ಮಾಡಿದ್ದಾರೆ. ಈ ಎಲ್ಲಾ ವಿಚಾರಗಳನ್ನು ಗಮನಿಸಿದರೆ, ರಾಜ್ಯದಲ್ಲಿ 28 ಜನ ಸಂಸದರು ಇದ್ದು, ಪದೇ ಪದೇ ನನ್ನನ್ನೆ ಯಾಕೆ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

You might also like
Leave A Reply

Your email address will not be published.