ಕೇದಾರೇಶ್ವರನ ಕಣ್ತುಂಬಿಕೊಳ್ಳಲು ಹರಿದು ಬರುತ್ತಿರುವ ಜನಸಾಗರ!

ಛೋಟಾ ಚಾರ್‌ಧಾಮಗಳಲ್ಲಿ ಒಂದಾದ ಉತ್ತರಾಖಂಡದ ಕೇದಾರನಾಥ ದೇವಾಲಯಕ್ಕೆ ಭಕ್ತಾದಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.‌ ಅದರ ಪರಿಣಾಮವಾಗಿ ಭಕ್ತಾದಿಗಳ ನಡುವೆ ನೂಕುನುಗ್ಗಲಿನ ಸ್ಥಿತಿ ಉಂಟಾಗಿದೆ. ಇನ್ನು ಕಳೆದ ಬಾರಿ ದೇವಾಲಯದ ಆವರಣದಲ್ಲಿ ಸಾಮಾಜಿಕ ಜಾಲತಾಣದ ಬಳಕೆದಾರರು, ರೀಲ್ಸ್ ಮಾಡುವವರು, ಬ್ಲಾಗರ್ಸ್‌ಗಳ ಹಾವಳಿಯಿಂದ ಬೇಸತ್ತ ದೇವಾಲಯದ ಕಮಿಟಿಯು ದೇವಾಲಯದ ಆವರಣದೊಳಗೆ ಮೊಬೈಲ್ ಬಳಕೆಯನ್ನೇ ನಿಷೇಧಿಸಿತ್ತು ಈ ಬಾರಿ ಇದು ಜಾಸ್ತಿಯಾದ ಕಾರಣ ಉಳಿದ ಭಕ್ತಾದಿಗಳನ್ನು ಗಮನದಲ್ಲಿಟ್ಟುಕೊಂಡು, ದೇವಾಲಯದಿಂದ 50 ಮೀಟರ್ ದೂರದಲ್ಲಿ ಯಾವುದೇ ತೆರನಾದ ರೀಲ್ಸ್, ವಿಡಿಯೋಗಳನ್ನು ಮಾಡುವುದನ್ನು ಕೇದಾರನಾಥ ಮಾತ್ರವಲ್ಲದೇ ಛೋಟಾ ಚಾರ್‌ಧಾಮ್ ಎಂದು ಕರೆಯಲ್ಪಡುವ ಇತರ ಮೂರು ಕ್ಷೇತ್ರಗಳಾದ ಯಮುನೋತ್ರಿ, ಗಂಗೋತ್ರಿ ಹಾಗೂ ಬದರಿನಾಥದಲ್ಲೂ ಮೊಬೈಲ್ ಬಳಕೆಯನ್ನು‌ ನಿಷೇಧಿಸಿ ಆದೇಶ ಹೊರಡಿಸಿದೆ.

ಇನ್ನು ಕೇದಾರನಾಥ ಧಾಮಕ್ಕೆ ಭಕ್ತರ ಸಂಖ್ಯೆ ಯತೇಚ್ಛವಾಗಿ ಹರಿದುಬರುತ್ತಿರುವ ಹಿನ್ನೆಲೆಯಲ್ಲಿ ಉತ್ತರಾಖಂಡ ಸರ್ಕಾರವು ಕೇದಾರನಾಥದ ಆನ್‌ಲೈನ್ ಹಾಗೂ ಆಫ್ ಲೈನ್ ಎರಡೂ ರಿಜಿಸ್ಟ್ರೇಷನ್ ಅನ್ನು ಮೇ 31 ರ ತನಕ ತಾತ್ಕಾಲಿಕವಾಗಿ ರದ್ದುಗೊಳಿಸಿದೆ. ಅಲ್ಲದೇ ಈಗ ಕೇದಾರನಾಥ ಧಾಮಕ್ಕೆ ಹೊರಟ ಭಕ್ತಾದಿಗಳು ದಾರಿ ಮಧ್ಯೆ ಸಿಲುಕಿ ಪರದಾಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್‌ ಆಗಿದೆ. ಅಷ್ಟಕ್ಕೂ ಈ ವಿಡಿಯೋದಲ್ಲಿ ಏನಿದೆ?

ಕೇದಾರನಾಥ ದೇಗುಲದಿಂದ 22 ಕಿ.ಮೀ. ದೂರದ ಸೀತಾಪುರದಲ್ಲಿ ಕಾಲ್ನಡಿಗೆಯಲ್ಲಿ ಬಂದ ಸಾವಿರಾರು ಭಕ್ತರು ಮಾರ್ಗ ಮಧ್ಯೆ ಸಿಲುಕಿದ್ದಾರೆ. ಈ ಜನದಟ್ಟಣೆಯಲ್ಲಿ ವಾಹನಗಳೂ ಸಿಲುಕಿಕೊಂಡಿವೆ. ಜನ ದಟ್ಟಣೆಯನ್ನು ನಿಯಂತ್ರಿಸಲು ಉತ್ತರಾಖಂಡ ಸರ್ಕಾರ ಯಾವುದೇ ಪರ್ಯಾಯ ವ್ಯವಸ್ಥೆ ಕಂಡುಕೊಂಡಿಲ್ಲ ಎಂದು ಭಕ್ತರೊಬ್ಬರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಕೇದಾರನಾಥ ಧಾಮಕ್ಕೆ ಇಷ್ಟೊಂದು ಜನ ಬರಲು ಕಾರಣವೇನು ಎಂದು ನೋಡುವುದಾದರೆ, ಸಾಮಾಜಿಕ ಜಾಲತಾಣದಲ್ಲಿ ನಾನಾ ತರಹದ ಕೇದಾರನಾಥದ ವೀಡಿಯೋಗಳು ವೈರಲ್ ಆಗುತ್ತಿದ್ದು ಕೆಲವರು ಭಕ್ತಿ, ಶ್ರದ್ಧೆಯಿಂದ ಬಂದರೆ ಇನ್ನೂ ಕೆಲವರು ಮೋಜು ಮಸ್ತಿಯ ತಾಣವಾಗಿ ಆಯ್ಕೆ ಮಾಡಿಕೊಂಡದ್ದು ಮಾತ್ರ ದುರದೃಷ್ಟಕರವಾಗಿದೆ.

ಇನ್ನು, ಕೇದಾರನಾಥ ಧಾಮವು ಮುಂಬರುವ ದೀಪಾವಳಿಯ ತನಕವೂ ಭಕ್ತರಿಗೆ ತೆರದಿರಲಿದ್ದು ಅತಿಯಾದ ನೂಕುನುಗ್ಗಲಿನ ನಡುವೆ ಈಗ ಕೇದಾರನಾಥಕ್ಕೆ ಹೋಗಲು ಪ್ರಶಸ್ತ ಸಮಯವಲ್ಲ ಹೋಗಲೇ ಬೇಕಿದ್ದರೆ ಜೂನ್ ನಂತರದ ತಿಂಗಳುಗಳು ಪ್ರಶಸ್ತವಾಗಿವೆ ನಂತರ ಭೇಟಿಕೊಡಿ ಎಂದು ಸಾಮಾಜಿಕ ಜಾಲತಾಣದ ಬಳಕೆದಾರರು ಮನವಿಮಾಡಿಕೊಂಡಿದ್ದಾರೆ.

You might also like
Leave A Reply

Your email address will not be published.