ಬೆಲೆ ಏರಿಕೆಗೂ ಬಗ್ಗೆ ಮದ್ಯಪ್ರಿಯರು -ಬಿಯರ್‌ ಹಾಗೂ ದೇಶೀಯ ಮದ್ಯದ ಬೆಲೆ ಹೆಚ್ಚಳ

ಲೋಕಸಭೆ ಚುನಾವಣೆ ಎಫೆಕ್ಟೋ, ಜನರ ಮದ್ಯದ ದಾಸ್ಯವೋ ಅಥವಾ ಬಿರು ಬೇಸಿಗೆಯ ಹೊಡೆತವೋ ಗೊತ್ತಿಲ್ಲ. ರಾಜ್ಯದೆಲ್ಲೆಡೆ ಬಿಯರ್‌ ಹಾಗೂ ದೇಶೀಯ ಮದ್ಯದ (ಐಎಂಎಲ್‌) ಮಾರಾಟ ಮಾತ್ರ ಸಖತ್ ಹಿಟ್ ಆಗ್ತಿದೆ. ಚುನಾವಣಾ ಕಣದಲ್ಲಿ ಪಕ್ಷಗಳು ಗೆಲುವಿಗೆ ಹಾತೊರೆಯುತ್ತಿದ್ದರೆ, ಇತ್ತ ಗುಂಡು ಪ್ರಿಯರು, ಬಾಟಲಿ ಚಿಂತೆಯಲ್ಲಿ ಮತ್ತಷ್ಟು ಕಿಕ್‌ ಏರಿಸುತ್ತಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮದ್ಯದ ಬೇಡಿಕೆ ಎಷ್ಟಾಗಿದೆ? ಎಂಬುದರ ಕುರಿತಾದ ಮಾಹಿತಿ ಇಲ್ಲಿದೆ.

ಹೌದು! ರಾಜ್ಯದಲ್ಲಿ ಬಿರು ಬಿಸಿಲಿನ ಹವಾಮಾನಕ್ಕೆ ಜನರು ತಂಪು ಪಾನೀಯಗಳ ಮೊರೆ ಹೋಗಿದ್ದರೆ, ಇತ್ತ ಮದ್ಯಪ್ರಿಯರು ಕೋಲ್ಡ್‌ ಬಿಯರ್‌ನತ್ತ ವಾಲಿದ್ದಾರೆ. ಹಿಂದಿನ ಮೂರು ವರ್ಷಗಳಿಗೆ ಹೋಲಿಸಿದರೆ ಏಪ್ರಿಲ್‌ನಲ್ಲಿ ಅದಾಗ್ಯೂ ಕಳೆದ 18 ದಿನಗಳಲ್ಲಿ ಬಿಯರ್‌ ಮಾರಾಟವು ಶೇ.45 ರಷ್ಟು ಏರಿಕೆ ಕಂಡಿದ್ದು, ಈ ಮೂಲಕ ಹಳೆಯ ದಾಖಲೆ ಮುರಿದಿದೆ.

ಹಿಂದಿನ ವರ್ಷ ಏ.1ರಿಂದ 18ರವರೆಗೆ 142.97 ಲಕ್ಷ ಲೀಟರ್‌ (18.33 ಲಕ್ಷ ಪೆಟ್ಟಿಗೆಗಳು) ಬಿಯರ್‌ ಮಾರಾಟವಾಗಿತ್ತು. ಈ ವರ್ಷ ಇದೇ ಅವಧಿಯಲ್ಲಿ 207.63 ಲಕ್ಷ ಲೀಟರ್‌ (26.62 ಲಕ್ಷ ಪೆಟ್ಟಿಗೆಗಳು) ಬಿಯರ್‌ ಬಿಕರಿಯಾಗಿದೆ. ಇದರೊಂದಿಗೆ 64.66 ಲಕ್ಷ ಲೀ (8.29 ಲಕ್ಷ ಪೆಟ್ಟಿಗೆಗಳು) ಮಾರಾಟ ಹೆಚ್ಚಳವಾಗಿದೆ.

”ಮುಖ್ಯವಾಗಿ ತಾಪಮಾನ ಹೆಚ್ಚಳದ ಕಾರಣಕ್ಕೆ ಬಿಯರ್‌ಗೆ ಬೇಡಿಕೆ ಹೆಚ್ಚಳವಾಗಿದೆ. ಜತೆಗೆ, ಲೋಕಸಭಾ ಚುನಾವಣಾ ಸಮಯವಾಗಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಬಿಯರ್‌ ಮಾರಾಟವಾಗುತ್ತಿದೆ. ಹಲವು ಬಹುರಾಷ್ಟ್ರೀಯ ಕಂಪನಿಗಳ ಬಿಯರ್‌ಗಳು ರಾಜ್ಯದ ಮಾರುಕಟ್ಟೆಯಲ್ಲಿ ಲಭ್ಯವಿವೆ. ಗ್ರಾಹಕರ ಎದುರು ಹಲವು ಆಯ್ಕೆಗಳಿದ್ದು, ಬಿಯರ್‌ ಬೇಡಿಕೆ ಹೆಚ್ಚಾಗಲು ಕಾರಣವಾಗಿದೆ” ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

Price hike of beer and domestic liquor

ದೇಶೀ ಮದ್ಯದ ಪ್ರಾಬಲ್ಯ

ಬಿಯರ್‌ ಅಷ್ಟೇ ಅಲ್ಲ, ಬ್ರಾಂದಿ, ವಿಸ್ಕಿ, ರಮ್, ಜಿನ್‌ ಸೇರಿದಂತೆ ದೇಶೀಯ ಮದ್ಯಗಳ ಮಾರಾಟವೂ ಗಣನೀಯ ಜಿಗಿತ ಕಂಡಿದೆ. ಕಳೆದ ವರ್ಷ ಏ‌.1ರಿಂದ 18ರವರೆಗೆ 217.81 ಲಕ್ಷ ಲೀಟರ್‌ (25.21 ಲಕ್ಷ ಪೆಟ್ಟಿಗೆಗಳು) ಐಎಂಎಲ್‌ ಮಾರಾಟವಾಗಿತ್ತು. ಈ ವರ್ಷ ಇದೇ ಅವಧಿಯಲ್ಲಿ 244.25 ಲಕ್ಷ ಲೀಟರ್‌ (28.27 ಲಕ್ಷ ಪೆಟ್ಟಿಗೆಗಳು) ಐಎಂಎಲ್‌ ಮಾರಾಟವಾಗಿದೆ. ಇದರೊಂದಿಗೆ 26.44 ಲಕ್ಷ ಲೀಟರ್‌ (3.06 ಲಕ್ಷ ಪೆಟ್ಟಿಗೆಗಳು) ಮಾರಾಟ ಹೆಚ್ಚಳವಾಗಿದೆ. ಈ ಮೂಲಕ ಐಎಂಎಲ್‌ ಮಾರಾಟವು ಶೇ 12ರಷ್ಟು ವೃದ್ಧಿಯಾಗಿದೆ.

ದರ ಏರಿದರೂ ತಗ್ಗದ ಖರೀದಿ

ಸರಕಾರ ಫೆ 1 ರಿಂದ ಜಾರಿಗೆ ಬರುವಂತೆ ಬಿಯರ್‌ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು (ಎಇಡಿ) ಶೇ 185ರಿಂದ 195ಕ್ಕೆ ಹೆಚ್ಚಳ ಮಾಡಿತ್ತು. ಇದರೊಂದಿಗೆ ಎಇಡಿ ಶೇ 10ರಷ್ಟು ಹೆಚ್ಚಳವಾಗಿತ್ತು.

ಎಇಡಿ ಏರಿಕೆಯಿಂದಾಗಿ ಪ್ರತಿ ಬಾಟಲಿ ಬಿಯರ್‌ ದರವು ಬ್ರ್ಯಾಂಡ್‌ಗಳ ಆಧಾರದಲ್ಲಿ ಕನಿಷ್ಠ 8 ರೂ.ಗಳಿಂದ ಗರಿಷ್ಠ 15 ರೂ.ವರೆಗೆ ಹೆಚ್ಚಳವಾಗಿತ್ತು. ಇದರೊಂದಿಗೆ ಕಳೆದ ಆರೇಳು ತಿಂಗಳ ಅವಧಿಯಲ್ಲಿ ಬಿಯರ್‌ ಬೆಲೆ ಪ್ರತಿ ಬಾಟಲ್‌ಗೆ ಸುಮಾರು 40 ರೂ.ವರೆಗೆ ಹೆಚ್ಚಳವಾಗಿದೆ. ಆದರೂ ಬಿಯರ್‌ ಖರೀದಿ ಮಾತ್ರ ತಗ್ಗಿಲ್ಲ.

You might also like
Leave A Reply

Your email address will not be published.