ಹಾಥಿ‌ ಕಿ ಪಾರಿ – ಪದ್ಮಶ್ರೀ ಪರ್ಬತಿ ಬರುವಾ

ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರಿಂದ ದೇಶದ ನಾಲ್ಕನೇ ಅತ್ಯುನ್ನತ ನಾಗರೀಕ ಗೌರವ ಪ್ರಶಸ್ತಿಯಾದ ಪದ್ಮಶ್ರೀ ಅನ್ನು ಸ್ವೀಕರಿಸಿದ ಭಾರತದ ಮೊದಲ ಮಹಿಳಾ ಆನೆಪಾಲಕಿ ಅಥವಾ ‘ಮಾವುತ’ ಆದ ಅಸ್ಸಾಂನ ಶ್ರೀಮತಿ ಪರ್ಬತಿ ಬರುವಾ ಇವರು ಪದ್ಮಶ್ರೀಯನ್ನು ಸ್ವೀಕರಿಸಿದ 110 ಜನರಲ್ಲಿ ಅತ್ಯಂತ ವಿಶೇಷವಾಗಿ ಕಾಣುತ್ತಾರೆ. ಈ ಪ್ರಶಸ್ತಿಯು ಬರುವಾ ಅವರಿಗೆ ಇನ್ನೂ ವಿಶೇಷವಾದದ್ದಾಗಿದೆ. ಕಾರಣ ತಮ್ಮ ಕುಟುಂಬದಲ್ಲಿ ಈ ಪ್ರಶಸ್ತಿಯನ್ನು ಪಡೆದ ಎರಡನೆಯವರು ಎಂದೆನಿಕೊಳ್ಳುತ್ತಾರೆ.‌ ಈ ಮೊದಲು ಇವರ ಹಿರಿಯ ಸಹೋದರಿ ಪ್ರತಿಮಾ ಪಾಂಡೆ ಬರುವಾ ಅವರು ಅಸ್ಸಾಮಿನ ಜನಪ್ರಿಯ‌ ಜಾನಪದ ಸಂಗೀತವಾದ ಗೋಲ್ ಪರಿಯಾಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಗಿತ್ತು.

ಮಾಧ್ಯಮ ಸಂಸ್ಥೆ ಎ ಎನ್ ಐ ಜೊತೆ ಮಾತನಾಡಿದ ಪರ್ಬತಿ ಬರುವಾ ಅವರು ತಾವು ಪೂರ್ವ ಅಸ್ಸಾಂನ ಧುಬ್ರಿಯಲ್ಲಿರುವ ಗೌರಿಪುರದ ರಾಜಮನೆತನದ ಕುಡಿ ಹಾಗೂ ತಾನು ಚಿಕ್ಕಂದಿನಿಂದಲೂ ಆನೆಗಳ ಸುತ್ತಲೇ ಬೆಳೆದದ್ದು ಎಂಬುದಾಗಿ ಹೇಳಿದ್ದಲ್ಲದೇ ತನ್ನ ಬಾಲ್ಯವನ್ನು ನೆನಸಿಕೊಂಡ ಅವರು ಅವರ ಕುಟುಂಬವು ಆನೆ ಮಹಲ್ ಅನ್ನು ಹೊಂದಿತ್ತು. ಅಲ್ಲಿ ಆನೆಗಳನ್ನು ಪಳಗಿಸಿ ಹೆಚ್ಚಿನ ಸಂಖ್ಯೆಯಲ್ಲಿ ಇರಿಸಿಕೊಳ್ಳಲಾಗಿತ್ತು ಎಂದಿದ್ದಾರೆ.

ಹಲವು ವರ್ಷಗಳ ನಂತರ ಈ ಮನ್ನಣೆಗೆ ತಾವು ಆಯ್ಕೆಯಾಗಿರುವುದು ತುಂಬಾ ಖುಷಿ ತಂದಿದೆ. ಈ ಗೌರವಕ್ಕಾಗಿ ನಾನು ಎಲ್ಲರಿಗೂ ಅಂದರೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಹೇಳಿದರು. ನಾನು ನನ್ನ ಜೀವನದ ಉತ್ತಮ ಭಾಗವನ್ನು ಆನೆಗಳೊಂದಿಗೆ ಮತ್ತು ಆನೆಗಳ ಪಾಲನೆ ಪೋಷಣೆಯಲ್ಲಿಯೇ ಅದರ ಸುತ್ತಲೂ ಕಳೆದಿದ್ದೇನೆ ಹಾಗೂ ಆನೆಗಳ ಕಲ್ಯಾಣಕ್ಕಾಗಿ ನನ್ನ ಜೀವನವನ್ನು ಮುಡಿಪಾಗಿಟ್ಟಿದ್ದೇನೆ. ನಾನು ನನ್ನ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಿದ್ದೆ ಹಾಗಾಗಿ ದೇವರು ಈಗ ನನ್ನನ್ನು ಈ ಮೂಲಕ ಗುರುತಿಸುವುದರೊಂದಿಗೆ ಆಶೀರ್ವದಿಸಿದ್ದಾನೆ. ನಾನು ಇನ್ನು ಮುಂದೆಯೂ ಕೂಡ ಈ ಕ್ಷೇತ್ರದಲ್ಲಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ ನನ್ನ ಜೀವನವು ಆನೆಗಳು ಅಷ್ಟೇ ಅಲ್ಲದೆ ವನ್ಯಜೀವಿಗಳ ಸಂರಕ್ಷಣೆ ಮತ್ತು ಕಲ್ಯಾಣಕ್ಕಾಗಿ ಸಮರ್ಪಿಸಿದ್ದೇನೆ ಎಂದು ಅವರು ಹೇಳಿದರು.

ಪರ್ಬತಿ ಬರುವಾ ಅವರು ಈವರೆಗೂ ಅವರ ಮೇಲ್ವಿಚಾರಣೆಯಲ್ಲಿ 600ಕ್ಕೂ ಹೆಚ್ಚು ಕಾಡು ಆನೆಗಳಿಗೆ ತರಬೇತಿ ನೀಡಿದ್ದಲ್ಲದೆ ಆನೆ ಪಾಲಕರಿಗೂ ತರಬೇತಿಯನ್ನು ನೀಡುತ್ತಿದ್ದಾರೆ. ಇವರು ದೇಶದ ವಿವಿಧ ಭಾಗಗಳಲ್ಲಿ ಪ್ರವಾಸ ಕೈಗೊಂಡು ಹಲವು ಸೆಷನ್ ಹಾಗೂ ಸೆಮಿನಾರ್‌ಗಳಲ್ಲಿ ಭಾಗವಹಿಸಿ ಮಾರ್ಗದರ್ಶನ ನೀಡಿದ್ದಾರೆ. ‘ಹಾಥಿ ಕೀ ಪಾರಿ’ ಎಂದು ಪ್ರೀತಿಯಿಂದ ಕರೆಯಲ್ಪಡುವ ಪರ್ಬತಿಯವರು ಆನೆ ಪಳಗಿಸುವುದರಲ್ಲಿ ಪುರುಷರೇ ಆಗಬೇಕು ಎಂಬ ಸ್ಟಿರಿಯೊ ಟೈಪ್ ಗಳನ್ನು ಮುರಿದು ದೇಶದ ಮೊದಲ ಮಹಿಳಾ ಆನೆ ಮಾವುತರಾದರು.

 Padma Shri Parbati Barua

ಎ.ಎನ್‌.ಐ ಸುದ್ದಿ ಸಂಸ್ಥೆಯೊಂದಿಗೆ ತನ್ನ ಪ್ರಯಾಣ ಆರಂಭವಾದ ದಿನಗಳನ್ನು ನೆನಪಿಸಿಕೊಂಡ ಪರ್ಬತಿಯವರು 14ನೇ ವಯಸ್ಸಿನಲ್ಲಿ ಅವರು ಅವರ ತಂದೆ ಮತ್ತು ಗುರು ಪ್ರಕೃತಿ ಚಂದ್ರ ಬರುವಾ ಅವರಿಂದ ಆನೆ ತರಬೇತಿಯ ಕೌಶಲ್ಯಗಳನ್ನು ಪಡೆದದ್ದಾಗಿ ಹೇಳಿದರು. ನಾನು ಒಂದು ವರ್ಷದ ಮಗುವಾಗಿದ್ದಾಗಲೇ ನನಗೆ ಆನೆಗಳ ಪರಿಚಯವಾಯಿತು. ನಾನು ಈ ಮೊದಲು ಹೇಳಿದಂತೆ ನಮ್ಮ ಮನೆಯಲ್ಲಿ ಆನೆ ಮಹಲ್ ಇತ್ತು ನನ್ನ ತಂದೆ ಆನೆಗಳನ್ನು ನಿಭಾಯಿಸುವ ಕೌಶಲ್ಯಗಳನ್ನು ನೋಡುತ್ತಾ ನೋಡುತ್ತಾ ನಾನು ಸಹ ಪಳಗಿಸಬಹುದೇ ಎಂಬ ಆಲೋಚನೆಯೂ ಆಗಾಗ್ಗೆ ನನ್ನ ಮನಸ್ಸಿನಲ್ಲಿ ಮೂಡುತಿತ್ತು. ಹಾಗಾಗಿ ತಂದೆಯವರಲ್ಲಿ ನಾನು ಆನೆಪಳಗಿಸುವ ಕೌಶಲ್ಯಗಳನ್ನು ಕಲಿಯಬಹುದೇ ಎಂದು ಕೇಳಿದೆ. ಇದು ಪುರುಷ ಪ್ರಧಾನ ಕೆಲಸವಾದ್ದರಿಂದ ನನ್ನ ತಂದೆಯವರು ಸಹಜವಾಗಿಯೇ ಬೇಡ ಎಂದರು. ಹಾಗಿದ್ದಾಗಲೂ ನನ್ನ ಛಲ ಅಚಲವಾಗಿತ್ತು ಮತ್ತು ನಾನು ತಂದೆಯವರಿಂದಲೇ ಆನೆಗಳನ್ನು ಪಳಗಿಸುವ ಕೌಶಲ್ಯಗಳನ್ನು ಕಲಿತಿದ್ದೇನೆ ಆನೆಗಳೊಂದಿಗೆ ನಾವು ಹೇಗೆ ವ್ಯವಹರಿಸಬೇಕು ಅವುಗಳನ್ನು ಹೇಗೆ ಗುಣಪಡಿಸಬೇಕು ಮತ್ತು ಅವುಗಳು ಕಾಯಿಲೆಗೆ ಬಿದ್ದರೆ ಗಿಡಮೂಲಿಕೆ ಔಷಧಿಯನ್ನು ಹೇಗೆ ನೀಡಬೇಕು ಎಂಬೆಲ್ಲವನ್ನು ನಾನು ಕಲಿತಿದ್ದೇನೆ. ಇವೆಲ್ಲವೂ ಈ ಕೆಲಸ ಮಾಡುವವರನ್ನು ನೋಡಿಯೇ ಕಲಿಯಬೇಕಾದ ಕೆಲಸಗಳೇ ಹೊರತು ಇವುಗಳನ್ನು ಯಾವುದೇ ಪುಸ್ತಕಗಳಿಂದ ಕಲಿಯಲು ಸಾಧ್ಯವಿಲ್ಲ ಎನ್ನುತ್ತಾರೆ ಪರ್ಬತಿಯವರು.

ಇನ್ನು ಯುವಜನತೆಗೆ ಕರೆ ಕೊಟ್ಟ ಪರ್ಬತಿಯವರು ಆನೆಗಳ ಬಗೆಗೆ ಪ್ರೀತಿ ಮತ್ತು ಕಾಳಜಿಯನ್ನು ವಹಿಸಬೇಕು ಮತ್ತು ಅವುಗಳೊಂದಿಗೆ ಸಹಬಾಳ್ವೆ ಮಾಡುವುದನ್ನು ಕಲಿಯಬೇಕು ಆನೆಗಳು ಇಲ್ಲದೆ ಇದ್ದರೆ ನಮ್ಮ ಅಸ್ತಿತ್ವವೇ ಅಪಾಯಕ್ಕೆ ಸಿಗಬೇಕು ಆನೆಗಳನ್ನು ನಾವು ಸಂರಕ್ಷಿಸಬೇಕು ನಮ್ಮ ಕಾಡುಗಳನ್ನು ಸಂರಕ್ಷಿಸಲು ಮತ್ತು ಆನೆಗಳು ಮುಕ್ತ ಸಂಚಾರ ಅಂದರೆ ಅಡೆತಡೆ ಇಲ್ಲದೆ ಸಾಗುವುದನ್ನು ಖಚಿತಪಡಿಸಿಕೊಳ್ಳಲು ನಾನು ಸರ್ಕಾರಗಳನ್ನು ವಿನಂತಿಸುತ್ತೇನೆ ಎಂದಿದ್ದಾರೆ. ಆನೆಗಳಿಗೆ ಸುರಕ್ಷಿತ ಮಾರ್ಗವನ್ನು ಖಚಿತಪಡಿಸಿಕೊಳ್ಳುವುದು ಮಾನವ ಮತ್ತು ಆನೆ ಸಂಘರ್ಷದ ಘಟನೆಗಳನ್ನು ಕಡಿಮೆ ಮಾಡಲು ಎಂಬುದನ್ನು ಅವರು ಪ್ರಮುಖವಾಗಿ ಹೇಳಿದ್ದಾರೆ.

ಪರ್ಬತಿಯವರು ಹೇಳುವಂತೆ ಪ್ರಕೃತಿ ಮಾತೆಗೆ ಯಾವುದೇ ರೀತಿಯಲ್ಲೂ ಭಂಗ ಬರಬಾರದು. ಒಂದು ಸಮಾಜವಾಗಿ ಎಲ್ಲರೂ ಮುಂದೆ ಬಂದು ಅದನ್ನು ಸಾಕಾರಗೊಳಿಸುವಲ್ಲಿ ಪ್ರಯತ್ನ ಮಾಡಬೇಕು ಸರ್ಕಾರ ಮಾತ್ರ ಇದನ್ನು ಮಾಡಲು ಸಾಧ್ಯವಿಲ್ಲ ಪ್ರತಿಯೊಬ್ಬ ನಾಗರಿಕನು ಪ್ರಕೃತಿಯನ್ನು ಉಳಿಸಲು ಮತ್ತು ಕಾಡುಗಳನ್ನು ಸಂರಕ್ಷಿಸಲು ಹೃದಯಪೂರ್ವಕ ಹಾಗೂ ಪ್ರಜ್ಞಾಪೂರ್ವಕ ಪ್ರಯತ್ನವನ್ನು ಮಾಡುವುದಾಗಿ ಪ್ರತಿಜ್ಞೆ ತೆಗೆದುಕೊಂಡಾಗ ಮಾತ್ರವೇ, ಕಾಡನ್ನು ಸಂರಕ್ಷಿಸಲು ವನ್ಯಜೀವಿಗಳನ್ನು ಸಂರಕ್ಷಿಸಲು ಸಾಧ್ಯ ಎಂಬುದಾಗಿ ಹೇಳಿದ್ದಾರೆ.

You might also like
Leave A Reply

Your email address will not be published.