ಲೋಕಸಭಾ ಚುನಾವಣೆ 2024 – ಯಾವಾಗ ವೇಳಾಪಟ್ಟಿ ಬಿಡುಗಡೆ, ಏನಿರಲಿದೆ ನೀತಿಸಂಹಿತೆ

ಪ್ರಸಕ್ತ ಸಾಲಿನ ಲೋಕಸಭೆ ಚುನಾವಣೆಯ ವೇಳಾಪಟ್ಟಿಯನ್ನು ಚುನಾವಣಾ ಆಯೋಗವು ಮಾರ್ಚ್ 13ರ ಬಳಿಕ ಪ್ರಕಟಿಸುವ ಸಾಧ್ಯತೆ ಇದೆ ಎಂದು ಆಯೋಗ ಸುಳಿವು ನೀಡಿದೆ.

ಸಾರ್ವತ್ರಿಕ ಚುನಾವಣೆಗೆ ಅಗತ್ಯವಾದ ಸಿದ್ಧತೆಗಳ ಮೌಲ್ಯ ಮಾಪನ ನಡೆಸಲು ಚುನಾವಣಾ ಆಯೋಗದ ಅಧಿಕಾರಿಗಳು ವಿವಿಧ ರಾಜ್ಯಗಳಿಗೆ ಭೇಟಿ ನೀಡುತ್ತಿದ್ದಾರೆ. ಒಮ್ಮೆ ಇದು ಪೂರ್ಣಗೊಂಡ ಬಳಿಕ, ದಿನಾಂಕಗಳನ್ನು ಘೋಷಣೆ ಮಾಡಲಾಗುತ್ತದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳು ಸದ್ಯ ತಮಿಳುನಾಡು ಪ್ರವಾಸದಲ್ಲಿದ್ದಾರೆ. ಅಲ್ಲಿನ ಚುನಾವಣಾ ಸಿದ್ಧತೆಗಳನ್ನು ಪರಿಶೀಲನೆ ನಡೆಸಿದ ಬಳಿಕ ಅವರ ತಂಡವು ಉತ್ತರ ಪ್ರದೇಶ ಹಾಗೂ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿವೆ. ಮಾರ್ಚ್ 13ಕ್ಕೂ ಮುನ್ನ ಎಲ್ಲಾ ರಾಜ್ಯಗಳ ಭೇಟಿ ಹಾಗೂ ಪರಿಶೀಲನೆ ಪೂರ್ಣಗೊಳ್ಳುವಂತೆ ಸಮಯ ನಿಗದಿಪಡಿಸಲಾಗಿದೆ.

ಚುನಾವಣಾ ತಯಾರಿಗಳನ್ನು ಚುರುಕುಗೊಳಿಸುವ ಹಾಗೂ ಸ್ಥಿತಿಗತಿಗಳ ಬಗ್ಗೆ ಮಾಹಿತಿ ತಿಳಿಯಲು ಆಯೋಗವು ಕಳೆದ ಕೆಲವು ತಿಂಗಳಿನಿಂದ ಎಲ್ಲಾ ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳ (ಸಿಇಒ) ಜತೆ ಸತತವಾಗಿ ಸಭೆಗಳನ್ನು ನಡೆಸುತ್ತಿದೆ.

ಸಮಸ್ಯೆ ಇರುವ ಪ್ರದೇಶಗಳು, ವಿದ್ಯುನ್ಮಾನ ಮತ ಯಂತ್ರಗಳ (ಇವಿಎಂ) ಸಾಗಣೆ, ತಮಗೆ ಅಗತ್ಯವಿರುವ ಭದ್ರತಾ ಪಡೆಗಳು, ಗಡಿಗಳಲ್ಲಿನ ತಪಾಸಣೆಯನ್ನು ಬಿಗಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳು ಹಾಗೂ ಸಮಸ್ಯೆಗಳ ಪಟ್ಟಿಗಳನ್ನು ಸಿಇಒಗಳು ಆಯೋಗಕ್ಕೆ ನೀಡಿದ್ದಾರೆ.

ಚುನಾವಣೆಗೆ ಎಐ ನ ಸಹಾಯ : 

ಈ ವರ್ಷ ಚುನಾವಣೆ ಸುಗಮವಾಗಿ ನಡೆಯುವಂತೆ ಚುನಾವಣಾ ಆಯೋಗವು ಕೃತಕ ಬುದ್ಧಿಮತ್ತೆ (ಎಐ) ಬಳಸಿಕೊಳ್ಳಲು ಚಿಂತನೆ ನಡೆಸಿದೆ. 2019ರಲ್ಲಿ ಮಾರ್ಚ್ 10ರಂದು ಚುನಾವಣಾ ಆಯೋಗವು ಲೋಕಸಭೆ ಚುನಾವಣೆಗೆ ಸಂಬಂಧಿಸಿದ ದಿನಾಂಕಗಳನ್ನು ಪ್ರಕಟಿಸಿತ್ತು.

ಎಐ ಇಂದ ಆಗುವ ಪ್ರಯೋಜನಗಳೇನು?

ಲೋಕಸಭೆ ಚುನಾವಣೆಯು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಯಲು ಅನುಕೂಲವಾಗುತ್ತದೆ.

# ಚುನಾವಣಾ ಆಯೋಗದಲ್ಲಿ ಕೃತಕ ಬುದ್ಧಿಮತ್ತೆಗೆ ಮೀಸಲಾದ ಘಟಕವೊಂದನ್ನು ತೆರೆಯಲಾಗಿದೆ.

#ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹರಿದಾಡುವ ಸುಳ್ಳು ಸುದ್ದಿಗಳನ್ನು ಗುರುತಿಸಿ, ತೆರವುಗೊಳಿಸುತ್ತದೆ.

#ಯಾವುದೇ ಪಕ್ಷ ಅಥವಾ ಅಭ್ಯರ್ಥಿ ನಿಯಮಗಳ ಉಲ್ಲಂಘನೆಯನ್ನು ಮುಂದುವರಿಸಿದರೆ ಆಯೋಗವು ಖಾತೆಗಳನ್ನು ಅಮಾನತು ಅಥವಾ ಬ್ಲಾಕ್ ಮಾಡುವಂತೆ ಸಾಮಾಜಿಕ ಜಾಲತಾಣ ಕಂಪೆನಿಗಳಿಗೆ ಸೂಚಿಸುವಂತಹ ಕಠಿಣ ಕ್ರಮ ಕೈಗೊಳ್ಳುತ್ತದೆ.

# ಫ್ಯಾಕ್ಟ್ ಚೆಕ್ಕಿಂಗ್, ಸುಳ್ಳು ಸುದ್ದಿಗಳನ್ನು ತಡೆಯುವುದು, ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸುವುದರತ್ತ ಆಯೋಗ ಗಮನ ಹರಿಸಿದೆ.

ಲೋಕಸಭೆ ಚುನಾವಣೆಯಲ್ಲಿ ಮತಹಾಕಲು 96.88 ಕೋಟಿ ಮತದಾರರಿದ್ದಾರೆ

ಚುನಾವಣಾ ಆಯೋಗದ ಡೇಟಾ ಪ್ರಕಾರ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸಲು ದೇಶದಲ್ಲಿ 96.88 ಕೋಟಿ ಅರ್ಹ ಮತದಾರರಿದ್ದಾರೆ. ಇದು ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಸಂಖ್ಯೆಯಾಗಿದೆ. ಜತೆಗೆ 18- 19 ವರ್ಷ ವಯೋಮಾನದ 1.85 ಕೋಟಿ ಯುವ ಜನರು ಮತ ಚಲಾಯಿಸುವ ಹಕ್ಕಿಗಾಗಿ ತಮ್ಮ ಹೆಸರು ನೋಂದಣಿ ಮಾಡಿಕೊಳ್ಳುತ್ತಿದ್ದಾರೆ.

You might also like
Leave A Reply

Your email address will not be published.