ಜಾತ್ಯತೀತ ಮತ್ತು ಸಮ ಸಮಾಜದ ನಿರ್ಮಾಣ ಗಣರಾಜ್ಯ ಹಾಗೂ ಸಂವಿಧಾನದ ಮುಖ್ಯ ಆಶಯ – ಮಹಾಂತೇಶ್ ಬೀಳಗಿ

ಜಾತ್ಯತೀತ ಮತ್ತು ಸಮ ಸಮಾಜದ ನಿರ್ಮಾಣ ಗಣರಾಜ್ಯ ಹಾಗೂ ಸಂವಿಧಾನದ ಮುಖ್ಯ ಆಶಯ. ಈ ಆಶಯಕ್ಕೆ ತಕ್ಕಂತೆ ದೇಶ ಪ್ರಗತಿ ಸಾಧಿಸುತ್ತಿದೆಯೇ ಎಂಬ ಬಗ್ಗೆ ಈ ಸಂದರ್ಭದಲ್ಲಿ ಅವಲೋಕಿಸಬೇಕಾದ ಅಗತ್ಯವಿದೆ ಹಾಗೂ ಈ ಆಶಯಗಳಿಗೆ ತಕ್ಕಂತೆ ಕೆಲಸ ಮಾಡಲು ನಾವು ಪಣ ತೊಡಬೇಕು ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಮಹಾಂತೇಶ್ ಬೀಳಗಿ ತಿಳಿಸಿದರು.

ಬೆಸ್ಕಾಂ ನಿಗಮ ಕಚೇರಿಯಲ್ಲಿ ಶುಕ್ರವಾರ 75ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಅವರು, ಸಂವಿಧಾನ ಮತ್ತು ಅದರಲ್ಲಿನ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಕೆಲಸ ಕಾರ್ಯಗಳು, ನಾಗರಿಕರ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ಮೂಲಕ ಭವ್ಯ ಭಾರತದ ಕನಸು ನನಸಾಗಿಸಬೇಕು ಎಂದು ತಿಳಿಸಿದರು.

ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುತ ಅದ್ವಿತೀಯ ಹಾಗೂ ವಿಶಿಷ್ಟವಾದ ಸಂವಿಧಾನ ನೀಡಿದ ಮಹಾನ್ ಚೇತರನ್ನು ನಾವು ನೆನಪಿಸಿಕೊಳ್ಳಬೇಕಿದೆ. ಅದಾಗ್ಯೂ ವಿಶೇಷವಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ನೆನಪಿಸಿಕೊಳ್ಳುವುದರೊಂದಿಗೆ ಅವರ ಆಶಯಗಳನ್ನು ಪಾಲಿಸಬೇಕಿದೆ ಎಂದರು.

Republic day

ಜಗತ್ತಿನಲ್ಲಿ ಶ್ರೇಷ್ಠವಾಗಿರುವ ಭಾರತದ ಸಂವಿಧಾನ ರಚನೆಯಾಗಿ 75 ವರ್ಷಗಳು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಒಂದು ತಿಂಗಳ ಕಾಲ ಸಂವಿಧಾನ ಜಾಗೃತಿ ಜಾಥಾ ನಡೆಸಲಾಗುವುದು. ಫೆಬ್ರವರಿ 24 ಮತ್ತು 25 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಮಾವೇಶ ನಡೆಯಲಿದ್ದು, ಸಂವಿಧಾನದ ಮಹತ್ವ ಹಾಗೂ ದೇಶದ ಜನತೆಗೆ ಸಂವಿಧಾನ ನೀಡಿರುವ ಹಕ್ಕುಗಳ ಕುರಿತಂತೆ ರಾಜ್ಯದ ನಾಗರಿಕರು, ಮಹಿಳೆಯರು, ಯುವಜನರಿಗೆ ಬಹು ಮಾಧ್ಯಮಗಳ ಮೂಲಕ ಅರಿವು ಮೂಡಿಸುವ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮಕ್ಕೆ ಆಗಮಿಸಿದ್ದ ಸ್ಕೌಟ್ಸ್ ವಿದ್ಯಾರ್ಥಿಗಳು ಹಾಗೂ ಮಕ್ಕಳಿಗೆ ಉಡುಗೊರೆ ಹಾಗೂ ಸಿಹಿ ಹಂಚಿದರು.

ಈ ಸಂದರ್ಭದಲ್ಲಿ ಹಣಕಾಸು ನಿರ್ದೇಶಕರಾದ ದರ್ಶನ್ ಜೆ., ತಾಂತ್ರಿಕ ನಿರ್ದೇಶಕರಾದ ಹೆಚ್.ಜೆ.ರಮೇಶ್., ಪ್ರಧಾನ ವ್ಯವಸ್ಥಾಪಕರು ಪಾಲನೇತ್ರಾ, ಕಾಮಗಾರಿ ಇಲಾಖೆ ಎಸ್.ಸಿ ರಾಮಕೃಷ್ಣಪ್ಪ ಸೇರಿದಂತೆ ರವೀಂದ್ರ, ಅವೀನ್, ಶಿವಪ್ರಸಾದ್ ಹಾಗೂ ಪೊಲೀಸ್ ಅಧಿಕಾರಿಗಳು, ವಿಜಿಲೆನ್ಸ್ ಜಾಗೃತ ದಳದ ಸಿಬ್ಬಂದಿಗಳು ಉಪಸ್ಥಿತರಿದ್ದರು.

You might also like
Leave A Reply

Your email address will not be published.