ಸೆಸ್ಕ್ MD ಸಸ್ಪೆಂಡ್ – ಭ್ರಷ್ಟ ಅಧಿಕಾರಿಯನ್ನು ಕಿತ್ತೆಸೆದ ಸಿದ್ದರಾಮಯ್ಯ – ಯಾಕೆ?

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರ್ಯಕ್ರಮದಲ್ಲಿ ಸರ್ಕಾರಕ್ಕೆ ಮುಜುಗರವನ್ನುಂಟು ಮಾಡಿದ ಹಾಗೂ ಕಾರ್ಯಕ್ರಮದಲ್ಲಿ ಖುದ್ದಾಗಿ ಹಾಜರಿರದೇ ಅಸಡ್ಡೆ ಹಾಗೂ ನಿರ್ಲಕ್ಷ್ಯತನ ತೋರಿದ ಕಾರಣಗಳ ಮೇಲೆ ಚೆಸ್ಕಾಂ ಎಂ.ಡಿ ಶ್ರೀಧರ್ ಅವರನ್ನು ಸೇವೆಯಿಂದ ಅಮಾನತು ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಏನದು ಘಟನೆ?

ಪಿರಿಯಾಪಟ್ಟಣ ತಾಲೂಕಿನ ಮುತ್ತಿನಮುಳುಸೋಗೆ ಗ್ರಾಮದ ಹತ್ತಿರ ಕಾವೇರಿ ನದಿಯಿಂದ ನೀರೆತ್ತಿ 79 ಗ್ರಾಮಗಳ 150 ಕೆರೆಗಳು ಹಾಗೂ ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಯ ಉದ್ಘಾಟನೆ ಕಾರ್ಯ ನೆರವೇರಿಸಲು ಬಂದ ಸಿಎಂ ಸಿದ್ದರಾಮಯ್ಯ ಅವರಿಗೆ ತೀರ ಮುಜುಗೊರ ಆಗಿದ್ದರ ಪರಿಣಾಮವಾಗಿ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಉದ್ಘಾಟನೆ ಕಾರ್ಯಕ್ರಮಕ್ಕೆ ‘ಬಟನ್’ ಒತ್ತುವ ಮೂಲಕ ಸಿಎಂ ಚಾಲನೆ ನೀಡಲು ಮುಂದಾದರು. ಆದರೆ, ಯಂತ್ರ ಚಾಲನೆಯಾಗಲಿಲ್ಲ. ಇದರಿಂದ ಸಿಎಂ ತೀವ್ರ ಮುಜುಗರಕ್ಕೆ ಒಳಪಟ್ಟರು. ಬಳಿಕ ಡಿಸಿಎಂ ಸ್ವಿಚ್ ಒತ್ತಿದರೂ ಕಾರ್ಯನಿರ್ವಹಿಸಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ ಮಹದೇವನಪ್ಪನವರೂ ಪ್ರಯತ್ನಿಸಿದಾಗಲೂ ಆಗಲಿಲ್ಲ. ಇದರಿಂದ ಕೆಲಕಾಲ ಮುಖ್ಯಮಂತ್ರಿ ಸೇರಿದಂತೆ ಸ್ಥಳಕ್ಕೆ ಆಗಮಿಸಿದ ಗಣ್ಯ ಅಧಿಕಾರಿಗಳಿಗೆ ಮುಜುಗರ ತಂದಿದೆ.

ಕಡೆಗೆ ಸ್ಥಳದಲ್ಲೆ ಇದ್ದ ಇಂಜಿನಿಯರ್’ಗಳು ತಾಂತ್ರಿಕ ಸಮಸ್ಯೆ ನಿವಾರಿಸಿದ ಬಳಿಕ ಸಿಎಂ ಯೋಜನೆಗೆ ಚಾಲನೆ ನೀಡಿದರು. ಬಳಿಕ ಸ್ಥಳದಲ್ಲೆ ಇದ್ದ ಜಿಲ್ಲಾಧಿಕಾರಿಗಳಿಗೆ ಸಿಎಂ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.

siddaramaiah

ಭ್ರಷ್ಟ ಅಧಿಕಾರಿ ಎಂಬ ಬಿರುದು?

ಚೆಸ್ಕಾಂನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಸಿ.ಎನ್ ಶ್ರೀಧರ್ ಅವರ ಮೇಲೆ ಈ ಹಿಂದೆಯೇ ಹಲವು ಆರೋಪಗಳು ಕೇಳಿ ಬಂದಿದ್ದವು. ವಿವಿಧ ಸೇವೆಗಳಿಗೆ ಜನರು ಹಾಗೂ ರೈತರಿಂದ ಹಣ ವಸೂಲಿಗೆ ಇಳಿದಿದ್ದರು. ಅಲ್ಲದೇ, ಹಲವು ಟೆಂಡರ್ʼಗಳಲ್ಲಿ ಗೋಲ್ʼಮಾಲ್ ಮಾಡಿದ್ದಾರೆ ಎನ್ನುವ ಬಗ್ಗೆಯೂ ಆರೋಪಗಳು ಕೇಳಿಬಂದಿದ್ದವು.

ಸರ್ಕಾರಿ ಸೇವೆಯಲ್ಲಿರುವ ಇವರು ಖುದ್ದಾಗಿ ಮುಖ್ಯಮಂತ್ರಿಗೆ ಯೋಜನೆಗೆ ಚಾಲನೆ ನೀಡಲು ಬಂದಾಗ ಅಧಿಕೃತ ಆಹ್ವಾನ ಮತ್ತು ಕೆಲಸದ ಜವಾಬ್ದಾರಿ ಇದ್ದರೂ ಯಾವುದೇ ಕಾರಣವಿಲ್ಲದೇ ಅನುಪಸ್ಥಿತರಾಗುವ ಮೂಲಕ ಸರ್ಕಾರಿ ಸೇವೆಯ ಮೊದಲ ನಿಯಮವನ್ನೇ ಉಲ್ಲಂಘಿಸಿದ್ದಾರೆ.

ಶ್ರೀಧರ್ ಅವರನ್ನು ಇಲಾಖಾ ವಿಚಾರಣೆಯಲ್ಲಿರಿಸಿ ಸರ್ಕಾರ ಅಮಾನತು ಮಾಡಿ ಆದೇಶ ಹೊರಡಿಸಿದೆ. ಇಲಾಖಾ ವಿಚಾರಣೆಯಲ್ಲಿಯೂ ಇವರ ತಪ್ಪು ಸಾಬೀತಾದರೆ ಇವರನ್ನು ಶಾಶ್ವತವಾಗಿ ಸೇವೆಯಿಂದ ವಜಾ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

ಆದೇಶದಲ್ಲಿ ಏನಿದೆ?

ಈ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಅಧೀನ ಕಾರ್ಯದರ್ಶಿ ಉಮಾದೇವಿ ಅವರು ಆದೇಶ ಹೊರಡಿಸಿದ್ದಾರೆ. ಸಿಎಂ ಭಾಗವಹಿಸುವ ಕಾರ್ಯಕ್ರಮದ ಸ್ಥಳಗಳಲ್ಲಿ ಸಮರ್ಪಕ ವಿದ್ಯುತ್ ವ್ಯವಸ್ಥೆಯ ಮುನ್ನೆಚ್ಚರಿಕಾ ಕ್ರಮಗಳನ್ನು ನಿರ್ವಹಿಸಲು ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್ ಶ್ರೀಧ‌ರ್ (ಕೆ.ಎ.ಎಸ್ (ಸೂಪರ್ ಟೈಂ ಸ್ಕೆಲ್) ಅಧಿಕಾರಿ) ಅವರಿಗೆ ಸೂಚನೆ ನೀಡಲಾಗಿತ್ತು. ಹೀಗಿದ್ದರೂ, ಅವರು ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಖುದ್ದು ಹಾಜರಿದ್ದು ಯಾವುದೇ ಲೋಪ ಉಂಟಾಗದಂತೆ ವ್ಯವಸ್ಥಿತವಾಗಿ ಕರ್ತವ್ಯ ನಿರ್ವಹಿಸಬೇಕಿರುತ್ತದೆ. ಆದಾಗ್ಯೂ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿರುವುದಿಲ್ಲ.

Cesc MD Suspended

ಮುಖ್ಯಮಂತ್ರಿಗಳು ಚಾಲನೆ ನೀಡಿದಾಕ್ಷಣ ಯಂತ್ರ ಚಾಲನೆಗೊಳ್ಳದೇ ಸ್ಥಳದಲ್ಲಿ ಹಾಜರಿದ್ದ ಮಾಧ್ಯಮ, ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಮುಖ್ಯಮಂತ್ರಿರವರು ಭಾಗವಹಿಸುವ ಕಾರ್ಯಕ್ರಮದ ಸ್ಥಳದಲ್ಲಿ ಹಾಜರಿದ್ದು ವ್ಯವಸ್ಥಿತವಾಗಿ ಕಾರ್ಯಕ್ರಮಗಳು ಯಶಸ್ವಿಗೊಳಿಸಲು ಸಹಕಾರಿಯಾಗದೇ, ಅವರ ಕರ್ತವ್ಯದಲ್ಲಿ ಅಸಡ್ಡೆ ಮತ್ತು ನಿರ್ಲಕ್ಷ್ಯತೆಯಿಂದಾಗಿ ಸರ್ಕಾರವನ್ನು ಮುಜುಗರಕ್ಕೆ ಒಳಪಡುವ ಸನ್ನಿವೇಶವನ್ನು ಸೃಷ್ಟಿಸಲು ಸಿ.ಎನ್ ಶ್ರೀಧರ್ ನೇರ ಕಾರಣಕರ್ತರಾಗಿದ್ದಾರೆ. ಕರ್ತವ್ಯಲೋಪ ಮತ್ತು ಶಿಷ್ಟಾಚಾರ ಉಲ್ಲಂಘಿಸಿರುವ ಹಿನ್ನಲೆಯಲ್ಲಿ ಅಧಿಕಾರಿ ವಿರುದ್ಧ ಇಲಾಖಾ ತನಿಖೆ ಬಾಕಿ ಇರಿಸಿ ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

You might also like
Leave A Reply

Your email address will not be published.