ಚಿತ್ರದುರ್ಗದ ಕೋಟೆಗೂ ಭೀಮನ ಮಡದಿಗೂ ಏನು ಸಂಬಂಧ – ಈ ಕಥೆ ಓದಿ

ಚಿತ್ರದುರ್ಗದ ಕೋಟೆಯನ್ನು ಕಲ್ಲಿನ ಕೋಟೆ ಎಂದು ಯಾಕೆ ಕರೆಯಲಾಗುತ್ತದೆ ಎಂದರೆ ಅದರ ಗೋಡೆಗಳು ಬಲು ಭಾರವಾದ ಗ್ರಾನೈಟ್ ಗಳಿಂದ ಮಾಡಲ್ಪಟ್ಟಿದೆ. ಹಾಗೂ ಈ ಕೋಟೆ ಹಲವಾರು ಕೇಂದ್ರೀಕೃತ ಗೋಡೆಗಳು, ಪ್ರವೇಶದ್ವಾರಗಳು, ಮೂವತ್ತೈದು ರಹಸ್ಯ ಮಾರ್ಗಗಳನ್ನು ಹೊಂದಿದೆ. ಇದಷ್ಟೇ ಅಲ್ಲದೇ ಈ ಎಲ್ಲಾ ವೈಶಿಷ್ಟ್ಯಗಳ ಜೊತೆಗೆ, ಕೋಟೆಯು 2000 ವಾಚ್ ಟವರ್‌ಗಳನ್ನು ಸಹ ಹೊಂದಿದೆ. ಚಿತ್ರದುರ್ಗ ಕೋಟೆಯು ಹಲವಾರು ಶತ್ರು ಶಕ್ತಿಗಳ ದಾಳಿಗೆ ಸಾಕ್ಷಿಯಾಗಿದೆ ಎಂಬುದಕ್ಕೆ ಐತಿಹಾಸಿಕ ಪುಟಗಳಲ್ಲಿ ದಾಖಲಾದ ಪುರಾವೆಗಳೇ ಸಾಕ್ಷಿ. ಟಿಪ್ಪು ಸುಲ್ತಾನನ ತಂದೆ ಹೈದರ್ ಅಲಿಯ ಸೈನಿಕರು ಕೋಟೆಯನ್ನು ಪ್ರವೇಶಿಸಲು ಯತ್ನಿಸಿದಾಗ ವೀರ ವನಿತೆ ಓಬವ್ವ ಹೇಗೆ ತಡೆದಳು ಎಂಬುದನ್ನು ಕೇಳಿ, ಓದಿ ತಿಳಿದಿದ್ದೇವೆ.‌

ಚಿತ್ರದುರ್ಗದ ಕಲ್ಲಿನ ಕೋಟೆಗೂ ಭೀಮನ ಹೆಂಡತಿ ಹಿಡಿಂಬೆಗೂ ಎಲ್ಲಿನ ಸಂಬಂಧ? ಬನ್ನಿ ನೋಡೋಣ.

ಚಿತ್ರದುರ್ಗದ ಕೋಟೆಯಲ್ಲಿ ಒಟ್ಟು 18 ದೇವಾಲಯಗಳಿವೆ, ಆದರೆ ಎಲ್ಲದಕ್ಕಿಂತಲೂ ಹಿಡಿಂಬೇಶ್ವರನ ದೇವಾಲಯವು ಬಹಳ ವಿಶಿಷ್ಟವಾಗಿದೆ. ಮಹಾಭಾರತದ ಸಂಧರ್ಭದಲ್ಲಿ ಪಾಂಡವ ಸಹೋದರರಲ್ಲಿ ಬಲಶಾಲಿಯಾದ ಭೀಮನು ತನ್ನ ಸಹೋದರರು ಮತ್ತು ತಾಯಿ ಕುಂತಿಯೊಂದಿಗೆ ವನವಾಸದಲ್ಲಿದ್ದಾಗ, ಹಿಡಿಂಬ ಎಂಬ ನರ ಭಕ್ಷಕ ರಾಕ್ಷಸನು ಮಾನವರ ವಾಸನೆಯನ್ನು ಕಂಡು ಕೊಂದು ತರುವಂತೆ ತನ್ನ ತಂಗಿಗೆ ಆಜ್ಙಾಪಿಸುತ್ತಾನೆ. ಹಿಡಿಂಬೆಯೂ ಭೀಮನಿದ್ದ ಜಾಗಕ್ಕೆ ಬಂದು ಅವನನ್ನು ಮೋಹಿಸಲು ನಾನಾ ರೀತಿಯ ಪ್ರಯತ್ನ ಮಾಡಿದರೂ ಭೀಮನು ತನ್ನ ತಾಯಿ ಮತ್ತು ಸಹೋದರರನ್ನು ರಕ್ಷಿಸುವಲ್ಲೇ ಮಗ್ನನಾಗಿದ್ದನ್ನು ನೋಡಿ ಹಿಡಿಂಬೆಯು ಆತನಿಗೆ ಮನಸೋತು ಸುಂದರ ರೂಪ ಧರಿಸುತ್ತಾಳೆ. ತಂಗಿ ಬಾರದ್ದನ್ನು ನೋಡಿ ಹಿಡಿಂಬನು ಅಲ್ಲಿಗೆ ಬರಲಾಗಿ ಆಕೆ ಸುಂದರ ಹೆಣ್ಣಾಗಿ ನಿಂತದ್ದನ್ನು ನೋಡಿ ಭೀಮನಿಗೆ ಮನಸೋತ ಬಗೆಯನ್ನು ಅರಿತು ಆಕೆಯನ್ನು ಕೊಲ್ಲಲು ಮುಂದಾಗುತ್ತಾನೆ. ಆಗ ಭೀಮನು‌ ತಡೆಯುತ್ತಾನೆ. ಹಿಡಿಂಬನು ಭೀಮನಿಗೆ ಯುದ್ಧಕ್ಕೆ ಸವಾಲು ಹಾಕುತ್ತಾನೆ ಭೀಮನು ರಾಕ್ಷಸನನ್ನು ಕೊಲ್ಲುವಲ್ಲಿ ಯಶಸ್ವಿಯಾಗುವವರೆಗೂ ಇಬ್ಬರೂ ಮಾರಣಾಂತಿಕ ಯುದ್ಧವನ್ನು ನಡೆಸುತ್ತಾರೆ. ರಾಕ್ಷಸ ಹಿಡಿಂಬನ ಮರಣದ ನಂತರ, ಭೀಮನು ತಾಯಿ ಮತ್ತು ಮುನಿಗಳೋರ್ವರ ಅಣತಿಯಂತೆ ಹಿಡಿಂಬೆಯನ್ನು ವಿವಾಹವಾದನು.

ಆ ಯುದ್ಧ ನಡೆಯುವ ಸಂಧರ್ಭದಲ್ಲಿ ಈ ಕೋಟೆಯ ಸುತ್ತ ಇರುವ ಬಂಡೆಗಳನ್ನು ಹಿಡಿಂಬ ಮತ್ತು ಭೀಮ ಪರಸ್ಪರ ಎಸೆಯಲು ಬಳಸಿದ್ದರೆಂದು ನಂಬಲಾಗಿದೆ. ಅಷ್ಟೇ ಅಲ್ಲದೆ ದೇವಾಲಯದಲ್ಲಿ ಹಿಡಿಂಬೆಯ ಮುರಿದ ಹಲ್ಲನ್ನು ಕೂಡ ಪ್ರದರ್ಶನಕ್ಕೆ ಇಡಲಾಗಿದೆ.

You might also like
Leave A Reply

Your email address will not be published.