ನೋಡಲೆರಡು ಕಣ್ಣು ಸಾಲದು – ಬೆಲೆಕಟ್ಟಲಾಗದ ಉಡುಗೆಯಲ್ಲಿ ಕಂಗೊಳಿಸಿದ ರಾಮಲಲ್ಲಾ!

ಎಷ್ಟು ಬಣ್ಣಿಸಿದರೂ ಅಯೋಧ್ಯೆಯ ಸೊಬಗು, ಪದಗಳಿಗೆ ನಿಲುಕದಂತಾಗಿದೆ. ಪ್ರಾಣ ಪ್ರತಿಷ್ಠೆ ಕಾರ್ಯ ನೆರವೇರಿದ ದಿನದಿಂದಲೂ ರಾಮ ಭಕ್ತರು ಸಾಗರೋಪಾದಿಯಲ್ಲಿ ಬಂದು ಪ್ರಭುವಿನ ದರ್ಶನ ಪಡೆಯುತ್ತಲೇ ಇದ್ದಾರೆ. ಮೂಲಗಳ ಪ್ರಕಾರ ಇಂದಿನಿಂದ ಅಂದರೆ ಜನವರಿ 24 ರಿಂದ ಭಕ್ತರಿಗೆ ರಾಮಲಲ್ಲಾ ದರ್ಶನ ನೀಡುವವನಿದ್ದ. ಆದರೆ, ಅಯೋಧ್ಯೆಯಲ್ಲಿದ್ದ ಜನಸಾಗರ ರಾಮನ ನೋಡದೆ ಹೊರಡೆವೆಂದು ಕುಳಿತ ಕಾರಣ ಜನಸಾಗರ ಕರಗಿಸಲು ಜನವರಿ 23 ರಂದೇ ದರ್ಶನಕ್ಕೆ ಅವಕಾಶ ಕಲ್ಪಿಸಿದರು. ಜನವರಿ 23 ಒಂದೇ ದಿನದಂದು ಮೂಲಗಳ ಪ್ರಕಾರ ಸುಮಾರು 10 ಲಕ್ಷ ಜನರು ದರ್ಶನ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

 

ಪ್ರಾಣ ಪ್ರತಿಷ್ಠೆಯ ದಿನ ಅಲಂಕಾರ ಭೂಷಿತನಾಗಿ ಕಂಗೊಳಿಸಿದ ಮುದ್ದು ರಾಮ ಧರಿಸಿದ್ದು 15 ಕೆ.ಜಿ. ಚಿನ್ನ ಹಾಗೂ 18,000 ವಜ್ರ- ರತ್ನಗಳು. ರಾಮಾಯಣದಲ್ಲಿ ಬರುವ ಶ್ರೀ ರಾಮನ ವರ್ಣನೆಗೆ ಅನುಗುಣವಾಗಿ ಆಭರಣಗಳನ್ನು ತಯಾರಿಸಲಾಗಿತ್ತೆಂಬುದು ತಿಳಿದುಬಂದಿದೆ. ಅತ್ಯಂತ ಸೂಕ್ಷ್ಮ ಕುಸುರಿ ಕಲೆಗಳಿಂದ ಕಿರೀಟ ತಯಾರಿಸಲಾಗಿದ್ದು 22 ಕ್ಯಾರೆಟ್ ಚಿನ್ನದಿಂದ ತಯಾರಿಸಲಾದ ಮುಕುಟ 1.7ಕೆ.ಜಿ ತೂಗುತ್ತದೆ.

ಇನ್ನು ಪ್ರಭು ರಾಮನು ಪ್ರಾಣ ಪ್ರತಿಷ್ಠೆಯ ದಿನ ಧರಿಸಿದ್ದ ಉಡುಗೆಯ ಬಗ್ಗೆ ಹೇಳುವುದಾದರೆ, ಪೀತಾಂಬರಧಾರಿಯಾಗಿದ್ದ ಶ್ರೀ ರಾಮಲಾಲನ ಧಿರಿಸನ್ನು ತಯಾರಿದವರು ಡಿಸೈನರ್ ಮನೀಷ್ ತ್ರಿಪಾಠಿ.‌ ರಾಮಲಲ್ಲಾನ‌ ಧಿರಿಸನ್ನು ತಯಾರಿಸಲು ದೊರೆತದ್ದು ಪೂರ್ವಜನ್ಮದ ಪುಣ್ಯದ ಫಲವೇ ಸರಿ, ಇದೊಂದು ಪವಾಢ ಹಾಗೂ ದಿವ್ಯಾನುಭೂತಿ ಎಂದು ಬಣ್ಣಿಸಿದ್ದಾರೆ. ಸೆಲೆಬ್ರಿಟಿಗಳಿಗೆ ಉಡುಗೆಯನ್ನು ತಯಾರಿಸಬೇಕೆಂಬುದು ಪ್ರತಿಯೊಬ್ಬ ಡಿಸೈನರ್‌ಗಳ ಕನಸಾಗಿರುತ್ತದೆ. ಆದರೆ, ಅಯೋಧ್ಯೆಯ ಬಾಲರಾಮನಿಗೆ ಉಡುಗೆಯನ್ನು ತಯಾರಿಸಲು ದೊರೆತ ಅವಕಾಶ ದೈವಿಕೃಪೆಯೇ ಸರಿ ಎನ್ನುತ್ತಾರೆ ಮನೀಷ್.

Sri ramlalla photo

ಪ್ರಾಣ ಪ್ರತಿಷ್ಠೆಯ ದಿನ ಹಳದಿ ಬಣ್ಣ ಅಂದರೆ ಭಗವಂತನು ಉತ್ಸವದ ದಿನ ಪೀತಾಂಬರಧಾರಿಯಾಗಿರುತ್ತಾನೆ, ಅದನ್ನು ತಯಾರಿಸುವುದು ಸುಲಭದ ಮಾತಾಗಿರಲಿಲ್ಲ. ಇಡೀ ವಿಗ್ರಹವನ್ನು ಒಂದೇ ಕಲ್ಲಿನಿಂದ ಕೆತ್ತಿದ್ದರಿಂದ ಉಡುಗೆಯನ್ನೂ ಸಹ ಎಲ್ಲೂ ಕತ್ತರಿಸದೆ ತಯಾರಿಸಲಾಯಿತು. ಸಂಪೂರ್ಣ ಉಡುಗೆಯು ಚಿನ್ನ ಮತ್ತು ಬೆಳ್ಳಿಯಿಂದ ತಯಾರಿಸಲಾಗಿದ್ದು, ಅದರ ಕುಸುರಿ ಕಲೆಗಳನ್ನು ಚಿನ್ನ ಮತ್ತು ಬೆಳ್ಳಿಯ ನೂಲುಗಳಿಂದ ಮಾಡಿದ್ದು ಇದು ಅಸಲಿ ಪೀತಾಂಬರ ಎನ್ನುತ್ತಾರೆ. ಇನ್ನು, ಈ ಉಡುಗೆಯ ಬೆಲೆ ಕೇಳಿದಾಗ, ಈ ಉಡುಗೆಗೆ ಯಾರೂ ಯಾವತ್ತೂ ಬೆಲೆ ಕಟ್ಟಲು ಆಗುವುದಿಲ್ಲ ಹಾಗಾಗಿ ಉಡುಗೆಯ ಬೆಲೆಯನ್ನು ಯಾವತ್ತಿಗೂ ಯಾರಿಗೂ ಹೇಳುವುದಿಲ್ಲ ಎನ್ನುತ್ತಾರೆ ಮನೀಷ್.

ಮೂಲಗಳ ಪ್ರಕಾರ ಇನ್ನುಮುಂದೆ ಪ್ರಭು ಶ್ರೀ ರಾಮಲಲ್ಲಾನು ದಿನಕ್ಕೊಂದು ಬಣ್ಣದ ಉಡುಗೆಯಲ್ಲಿ ಕಂಗೊಳಿಸಲಿದ್ದು ಸೋಮವಾರದಂದು ಬಿಳಿ (ಮೊನ್ನೆ ಉತ್ಸವದ ದಿನವಾದ್ದರಿಂದ ಪೀತಾಂಬರಧಾರಿಯಾಗಿದ್ದ), ಮಂಗಳವಾರ ಕೆಂಪು, ಬುಧವಾರ ಹಸಿರು, ಗುರುವಾರ ಹಳದಿ, ಶುಕ್ರವಾರ ಹಸಿರು ಶನಿವಾರ ನೀಲಿ, ಭಾನುವಾರ ಗುಲಾಲಿ ಬಣ್ಣದಿಂದ ಕಂಗೊಳಿಸಲಿದ್ದಾನೆ ಎನ್ನುತ್ತಾರೆ.

You might also like
Leave A Reply

Your email address will not be published.