ಸಿಎಂ ಸಿದ್ದುಗೆ ಯತ್ನಾಳ್ ಠಕ್ಕರ್ : ಕೇಸರಿ ಶಾಲು ಧರಿಸಿ ತರಗತಿಗೆ ತೆರಳಲು ಕರೆ

ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿಜಾಬ್ ಆದೇಶವನ್ನು ವಾಪಾಸ್ ಪಡೆಯುತ್ತೇನೆ, ಯಾರು ಯಾವ ಬಟ್ಟೆಯನ್ನಾದರೂ ಧರಿಸಬಹುದು ಎಂದು ಹೇಳಿಕೆ ನೀಡಿದ್ದರು.ಬೆನ್ನಲ್ಲೇ, ಸಿಎಂ ಸಿದ್ದರಾಮಯ್ಯನವರಿಗೆ ಬಿಜೆಪಿಯ ಹಿರಿಯ ನಾಯಕ ಯತ್ನಾಳ್ (Basanagouda Patil Yatnal) ಠಕ್ಕರ್ ಕೊಟ್ಟಿದ್ದು, ವಿದ್ಯಾರ್ಥಿಗಳು ಶಾಲೆಗಳಿಗೆ ಕೇಸರಿ ಶಾಲು ಧರಿಸಿ ತೆರಳಿ ಎಂದು ಕರೆ ಕೊಟ್ಟಿದ್ದಾರೆ.

ಈ ಹಿಂದಿನ ಬಿಜೆಪಿ ಸರ್ಕಾರ ಶಾಲಾ ತರಗತಿ ಕೊಠಡಿಗಳಲ್ಲಿ ವಿದ್ಯಾರ್ಥಿಗಳ ಸಮವಸ್ತ್ರದ ಹೊರತಾಗಿ, ಇನ್ನಿತರೆ ವಸ್ತ್ರಗಳನ್ನು ಧರಿಸುವಂತಿಲ್ಲ ಎಂದು ಆದೇಶ ಹೊರಡಿಸಿತ್ತು. ಮುಸ್ಲಿಂ ವಿದ್ಯಾರ್ಥಿನಿಯರು ಧರಿಸುವ ಹಿಜಾಬ್ ಈ ಆದೇಶ ಪ್ರಕಾರ ರದ್ದಾಗಿತ್ತು. ಈ ವೇಳೆ, ಉಡುಪಿ, ಮಂಡ್ಯ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಹಲವು ಮುಸ್ಲಿಂ ವಿದ್ಯಾರ್ಥಿನಿಯರು ಸರ್ಕಾರದ ಈ ಆದೇಶವನ್ನು ಸ್ವಾಗತಿಸಿದ್ದರು.

ಇದೀಗ ಆಡಳಿತಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ, ಈ ಹಿಂದಿನ ಬಿಜೆಪಿ ಸರ್ಕಾರದ ಆದೇಶವನ್ನು ವಾಪಾಸು ಪಡೆಯುವ ನಿರ್ಧಾರ ಮಾಡಿದೆ. ನಂಜನಗೂಡಿನ ಸಮಾರಂಭದಲ್ಲಿ ಮಾತನಾಡಿದ್ದ ಸಿದ್ದರಾಮಯ್ಯನವರು (Siddaramaiah), ಇನ್ನು ಮುಂದೆ ಹಿಜಾಬ್ ಮೇಲೆ ಯಾವುದೇ ನಿರ್ಬಂಧವಿಲ್ಲ. ಯಾವ ಊಟ ಮಾಡಬೇಕು, ಯಾವ ಬಟ್ಟೆ ಹಾಕಬೇಕು ಎನ್ನುವುದು ವೈಯಕ್ತಿಕ ವಿಚಾರ ಎಂದಿದ್ದರು.

ಸಿದ್ದರಾಮಯ್ಯನವರ ಈ ಹೇಳಿಕೆಯ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ, ವಿಪಕ್ಷ ನಾಯಕ ಆರ್.ಅಶೋಕ್ ಆದಿಯಾಗಿ ಬಿಜೆಪಿಯ ನಾಯಕರೆಲ್ಲರೂ ಆಕ್ರೋಶವ್ಯಕ್ತಪಡಿಸಿದ್ದರು.

ಈ ಬಗ್ಗೆ ಒಂದು ಹೆಜ್ಜೆ ಮುಂದೆಯಿಟ್ಟು ಆಕ್ರೋಶ ವ್ಯಕ್ತ ಪಡಿಸಿರುವ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal), ರಾಜ್ಯಾದ್ಯಂತ ಶಾಲಾ ಕಾಲೇಜುಗಳಲ್ಲಿ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ತರಗತಿಗಳಲ್ಲಿ ಭಾಗವಹಿಸಲು ಕರೆ ಕೊಟ್ಟಿದ್ದಾರೆ.

ಎಕ್ಸ್‌ ವೇದಿಕೆ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಅವರು, ಸಿದ್ದರಾಮಯ್ಯನವರು ಹಿಜಾಬ್ ಧರಿಸಬಹುದು ಎಂದು ಹೇಳುತ್ತಾ ಯಾರು ಯಾವ ಬಟ್ಟೆಯಾದರೂ ಧರಿಸಲು ಅವಕಾಶವಿದೆ ಎಂದು ಹೇಳಿದ್ದಾರೆ. ರಾಜ್ಯಾದ್ಯಂತ ಶಾಲಾ ಕಾಲೇಜುಗಳಲ್ಲಿ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ತರಗತಿಗಳಲ್ಲಿ ಭಾಗವಹಿಸಲು ನಾನು ಕರೆ ಕೊಡುತ್ತಿದ್ದೇನೆ. ಅವರಿಗಿಲ್ಲದ ಸಮವಸ್ತ್ರ ನೀತಿ ಹಿಂದೂಗಳಿಗೂ ಇಲ್ಲ.

ಸಿದ್ದರಾಮಯ್ಯನವರಿಗೆ ಮಾಹಿತಿಯ ಕೊರತೆ ಇದೆ, ರಾಜ್ಯದಲ್ಲಿ ಹಿಜಾಬ್ ನಿಷೇಧಿಸಿ ಯಾವ ಆದೇಶವೂ ಇಲ್ಲ. ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ನೀತಿಯನ್ನು ಜಾರಿ ಮಾಡಿದ್ದು ಸ್ಥಳೀಯ ಕಾಲೇಜುಗಳು ನಿರ್ಧಾರ ಮಾಡಬಹುದು ಎಂದು ಕರ್ನಾಟಕ ಉಚ್ಛ ನ್ಯಾಯಾಲಯ ಹೇಳಿದ್ದರೂ, ರಾಜಕಾರಣಕ್ಕಾಗಿ ಶಾಲಾ ಕಾಲೇಜುಗಳ ಸಮವಸ್ತ್ರ ನೀತಿಯನ್ನೂ ಅಮಾನತು ಮಾಡುವ ಕೆಲಸವನ್ನು ಸಿದ್ದರಾಮಯ್ಯನವರು ಮಾಡುತ್ತಿದ್ದಾರೆ.

ಓಲೈಕೆ ರಾಜಕಾರಣಕ್ಕೇನಾದರೂ ಮತ್ತೊಂದು ಹೆಸರು ಇದ್ದರೇ ಅದು ಕಾಂಗ್ರೆಸ್ ಪಕ್ಷ! ರಾಜ್ಯಾದ್ಯಂತ ಹಿಂದೂ ವಿದ್ಯಾರ್ಥಿಗಳೂ ಯಾವ ಬಟ್ಟೆಯಾದರೂ ಧರಿಸಿ ಕೇಸರಿ ಶಾಲು ಸಮೇತ ತರಗತಿಗಳಲ್ಲಿ ಭಾಗವಹಿಸುತ್ತಾರೆ, ಅವರಿಗೆ ಯಾವ ಕಿರುಕುಳ ನೀಡಬಾರದು ಎಂದು ಆಗ್ರಹಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

You might also like
Leave A Reply

Your email address will not be published.