ಮಾಸ್ಕೋದಲ್ಲಿ 26/11 ಮಾದರಿಯ ಅತ್ಯಂತ ಭೀಕರ ದಾಳಿ – ಸಂಭವಿಸಿದ ಸಾವು ನೋವೆಷ್ಟು ಗೊತ್ತೇ?

ರಷ್ಯಾ: ಮಾಸ್ಕೋದ ಕ್ರೋಕಸ್ ಹಾಲ್‌ನಲ್ಲಿ ಮುಂಬೈ ತಾಜ್ ಹೋಟೆಲ್‌ ಮೇಲೆ ನಡೆದ ರೀತಿಯಲ್ಲಿಯೇ ದಾಳಿ ನಡೆದಿದ್ದು, ಈವರೆಗೆ ಅಪಾರ ಪ್ರಮಾಣದಲ್ಲಿ ಹಾನಿಯುಂಟಾಗಿದೆ ಎಂದು ರಷ್ಯಾದ ಮಾಧ್ಯಮಗಳು ವರದಿ‌ ಮಾಡಿವೆ.

ಕ್ರೋಕಸ್ ಕನ್ಸರ್ಟ್ ಹಾಲ್‌ಗೆ ಶಸ್ತ್ರಸಜ್ಜಿತ ವ್ಯಕ್ತಿಗಳ ಗುಂಪೊಂದು ನುಗ್ಗಿ ಗುಂಡಿನ ಮಳೆಗರೆದು ಸ್ಫೋಟಕಗಳನ್ನು ಸಿಡಿಸಿದ್ದು, ಅನೇಕ ಸಾವು ನೋವುಗಳು ವರದಿಯಾಗಿವೆ.

ನಿನ್ನೆ ನಡೆದ ದಾಳಿಯಲ್ಲಿ ಕನಿಷ್ಠ 130 ಜನರು ಸಾವನ್ನಪ್ಪಿದ್ದು, 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇದು ಇತ್ತೀಚೆಗೆ ರಷ್ಯಾದ ಮೇಲೆ ನಡೆದ ಭೀಕರ ದಾಳಿಗಳಲ್ಲಿ ಒಂದಾಗಿದೆ ಎನ್ನಲಾಗುತ್ತಿದೆ ಹಾಗೂ ದಾಳಿ ಇನ್ನೂ ನಿಲ್ಲದ ಕಾರಣ ಒಳಗೆ ಇನ್ನಷ್ಟು ಮಂದಿ ನಾಗರಿಕರು ಸಿಲುಕಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಹಠಾತ್ ದಾಳಿಯಿಂದಾಗಿ ಒಳಗೆ ಸಿಲುಕಿದ ಜನರು ಹಂಚಿಕೊಂಡ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಂದೂಕುಧಾರಿಗಳು ಸ್ವಯಂಚಾಲಿತ ಗನ್ ಹೊಂದಿದ್ದು ಹಾಲ್ ಒಳಗೆ ಮನಸೋ ಇಚ್ಛೆ ಗುಂಡಿನ ಮಳೆ ಸುರಿಸುತ್ತಿದ್ದ ಭಯಾನಕವಾದ ದೃಶ್ಯ ಎಂತಹವರನ್ನೂ ಭಯಭೀತರನ್ನಾಗಿಸುತ್ತದೆ.

ಘಟನಾ ಸ್ಥಳಕ್ಕೆ ರಷ್ಯಾದ ವಿಶೇಷ ಪಡೆಗಳ ಹಲವಾರು ತಂಡಗಳು ಆಗಮಿಸಿದ್ದು ನಾಗರಿಕರನ್ನು ಅಲ್ಲಿಂದ ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ. ಅಗತ್ಯವಿರುವ ವೈದ್ಯಕೀಯ ವ್ಯವಸ್ಥೆ ಒದಗಿಸಲು ಘಟನಾ ಸ್ಥಳಕ್ಕೆ 50 ಕ್ಕೂ ಹೆಚ್ಚು ಆಂಬುಲೆನ್ಸ್’ಗಳನ್ನು ಕಳುಹಿಸಲಾಗಿದೆ ಎಂದು ಮಾಸ್ಕೋ ಪ್ರದೇಶದ ಆರೋಗ್ಯ ಸಚಿವಾಲಯವು ತಿಳಿಸಿದೆ.

ಇನ್ನು, ಇದೊಂದು ಅತ್ಯಂತ ಭೀಕರ ಘಟನೆಯಾಗಿದ್ದು ಇದನ್ನು ಖಂಡಿಸುವಂತೆ ರಷ್ಯಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಜಗತ್ತಿಗೆ ಕರೆ ನೀಡಿದೆ‌.

You might also like
Leave A Reply

Your email address will not be published.