ರಾಮ ಮಂದಿರ – ಕೊರೆಯುವ ಚಳಿಯನ್ನೂ ಲೆಕ್ಕಿಸದೆ ದರ್ಶನಕ್ಕಾಗಿ ಕಾದಿರುವ ಭಕ್ತರು

ಪ್ರಧಾನಿ ನರೇಂದ್ರ ಮೋದಿಯವರ ಸಾರಥ್ಯದಲ್ಲಿ ಶಾಸ್ತ್ರೋಕ್ತವಾಗಿ ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯಾಗಿದ್ದು, 500 ವರ್ಷಗಳ ಬಳಿಕ ಭಗವಾನ್ ರಾಮ ತನ್ನ ವಾಸಸ್ಥಾನಕ್ಕೆ ಮರಳಿ ಬಂದಿದ್ದಾರೆ. ಇಂದಿನಿಂದ ಸಾವರ್ಜನಿಕರ ದರ್ಶನಕ್ಕೆ ಅನುಮತಿ ನೀಡಲಾಗಿದ್ದು, ಚಳಿಯನ್ನೂ ಲೆಕ್ಕಿಸದೇ ರಾಮನ ದರ್ಶನಕ್ಕೆ ಸಾಲುಗಟ್ಟಿ ನಿಂತಿರುವ ದೃಶ್ಯ ಎಲ್ಲೆಡೆ ವೈರಲ್ ಆಗುತ್ತಿದೆ.

Ayodhya rama mandir

ಹೌದು! ಮಂದಸ್ಮಿತನಾಗಿ ತನ್ನ ಸ್ಥಾನ ಅಲಂಕರಿಸಿರುವ ಪ್ರಭು ಶ್ರೀ ರಾಮರ ದರ್ಶನ ಪಡೆಯಲು ಸೋಮವಾರ ರಾತ್ರಿಯಿಂದಲೇ ಅಯೋಧ್ಯಾಧಾಮದಲ್ಲಿ ಭಕ್ತರು ಸಾಲುಗಟ್ಟಿ ನಿಂತಿದ್ದಾರೆ. ಅಲ್ಲದೇ ತೀವ್ರ ಚಳಿಯನ್ನೂ ಲೆಕ್ಕಿಸದೇ ದೇವಸ್ಥಾನದ ಹೊರಗಡೆಯೂ ಸಾವಿರಾರು ಜನ ಜಮಾಯಿಸತೊಡಗಿದ್ದಾರೆ.

ಅಯೋಧ್ಯಾಧಾಮದಲ್ಲಿ ಮೊಳಗಿದ ಜೈ ಶ್ರೀರಾಮ್ ಘೋಷಣೆ:

ಬೆಳಗ್ಗಿನ ಜಾವ 2 ಗಂಟೆಯಿಂದಲೇ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಲಾರಂಭಿಸಿದರು. ನೆರೆದಿದ್ದ ಜನರು ದ್ವಾರದ ಮುಂದೆ ʼಜೈ ಶ್ರೀ ರಾಮ್ʼ ಎಂದು ಘೋಷಣೆ ಕೂಗುತ್ತಾ ದೇಗುಲದೊಳಗೆ ಪ್ರವೇಶಿಸುತ್ತಿದ್ದಾರೆ. ಅಯೋಧ್ಯೆಯ ಸ್ಥಳೀಯ ನಿವಾಸಿಗಳು ಕೂಡ ಬಾಲರಾಮನ ದರ್ಶನ ಮತ್ತು ಪೂಜೆಗಾಗಿ ಆಗಮಿಸುತ್ತಿದ್ದಾರೆ. ರಾಮಪಥದಲ್ಲಿ ಕಾಲಿಡಲೂ ಜಾಗವಿಲ್ಲದಷ್ಟು ಭಕ್ತರು ನೆರೆದಿದ್ದಾರೆ. ಕ್ಷಣಕ್ಷಣಕ್ಕೂ ಭಕ್ತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಪೊಲೀಸ್ ವ್ಯವಸ್ಥೆ ಕೂಡ ಮಾಡಲಾಗಿದೆ.

ಹೋಟೆಲ್ ಬುಕ್ಕಿಂಗ್ ದರ ದಿನದಿಂದ ದಿನಕ್ಕೆ ಹೆಚ್ಚಳ:

ರಾಮಮಂದಿರ ಉದ್ಘಾಟನೆಗೆ ಸುಮಾರು 2 ವಾರ ಇರುವಾಗಲೇ ಅಯೋಧ್ಯೆಯಲ್ಲಿ ಹೋಟೆಲ್ ಬುಕಿಂಗ್ ಶೇ.80ರಷ್ಟು ಹೆಚ್ಚಾಗಿತ್ತು. ಹೋಟೆಲ್ನಲ್ಲಿ ಒಂದು ದಿನದ ಕೋಣೆಯ ಬೆಲೆ ಸಾರ್ವಕಾಲಿಕ ಗರಿಷ್ಠ ದರವನ್ನು ತಲುಪಿತ್ತು. ಆದರೆ ಇದೀಗ ಐದು ಪಟ್ಟು ಹೆಚ್ಚಾಗಿದೆ. ಕೆಲ ಐಷಾರಾಮಿ ಕೊಠಡಿಗಳ ಬಾಡಿಗೆ 1 ಲಕ್ಷ ರೂ.ಗೆ ಏರಿದೆ. ವಿಶೇಷವೆಂದರೆ ಇಷ್ಟು ದರ ಏರಿಕೆಯ ನಡುವೆಯೂ ಹೋಟೆಲ್ ಬುಕ್ಕಿಂಗ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಅಚ್ಚರಿಯನ್ನುಂಟು ಮಾಡಿದೆ.

You might also like
Leave A Reply

Your email address will not be published.