ಹೋಳಿ ಹಬ್ಬಕ್ಕೆ ನೀರು ಬಳಕೆ – ಜಲಮಂಡಳಿ ಹೇಳಿದ್ದೇನು?

ಈ ಬಾರಿಯ ಬಿರುಬೇಸಿಗೆ, ಬೆಂಗಳೂರು ನಿವಾಸಿಗಳೆಲ್ಲರಿಗೆ ಒಂದಿಲ್ಲೊಂದು ಸಮಸ್ಯೆಗಳನ್ನು ತಂದಿಟ್ಟಿದೆ. ಈ ಮೊದಲೇ ಕುಡಿಯುವುದಕ್ಕೆ ಶುದ್ಧವಾದ ನೀರು ಸಿಗುತ್ತಿಲ್ಲ ಎಂದು ಚಿಂತಿಸುತ್ತಿರುವುದರ ನಡುವೆಯೇ, ಬತ್ತುತ್ತಿರುವ ಬೋರ್ವೆಲ್, ಕಾವೇರಿ ನೀರಿನ ಕೊರತೆಯಿಂದ ಇಡೀ ಬೆಂಗಳೂರು ನೀರಿಗಾಗಿ ಹಾಹಾಕಾರ ಎದುರಿಸುತ್ತಿದೆ.‌ ಗಗನಕ್ಕೇರಿರುವ ನೀರಿನ ಟ್ಯಾಂಕರ್ ಬೆಲೆಯ ಕುರಿತಾದ ದೂರು ಬಂದ ಹಿನ್ನೆಲೆಯಲ್ಲಿ‌ ನೀರಿನ ಪೂರೈಕೆಯಲ್ಲೂ ಮಧ್ಯಪ್ರವೇಶಿಸಿದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಇಲಾಖೆ, ನೀರಿನ ಟ್ಯಾಂಕರ್ ಸಪ್ಲೈ ಮಾಡೋದಕ್ಕೆ ಕೆಲವು ಮಾರ್ಗಸೂಚಿಗಳನ್ನು ವಿಧಿಸಿತ್ತು. ಬೇಕಾಬಿಟ್ಟಿ ನೀರು ಪೋಲು‌ ಮಾಡುತ್ತಿದ್ದವರಿಗೆ ಪರಿಸ್ಥಿತಿ ಕಗ್ಗಂಟಾಗುತ್ತಿದ್ದಂತೆಯೇ, ಹತ್ತಿರ ಬರುತ್ತಿರುವ ಹೋಳಿ ಹಬ್ಬಕ್ಕೂ ನೀರಿನ ಕೊರತೆಯ ಬಿಸಿ ತಟ್ಟಿದೆ. ಅದೇನು ಸುದ್ದಿ? ಇಲ್ಲಿದೆ ನೋಡಿ.

ಈಗಾಗಲೇ ನೀರಿನ ಕೊರತೆ ಎದುರಿಸುತ್ತಿರುವ ಬೆಂಗಳೂರಿನ ಕುರಿತು ಸರ್ಕಾರ ಹಾಗೂ ಮುಖ್ಯಮಂತ್ರಿಗಳು ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದ್ದು, ಪ್ರತಿನಿತ್ಯ ಬೇಡಿಕೆಯಿರುವ 2,600 ಮಿಲಿಯನ್ ಲೀಟರ್’ಗಳಷ್ಟು ಬೇಡಿಕೆಗೆ ಸರಿಸುಮಾರು 500 ಮಿಲಿಯನ್ ಲೀಟರ್ ನೀರು ಕೊರತೆಯನ್ನು ಸೂಕ್ತ ಕ್ರಮಗಳ ಮೂಲಕ‌ ಸರಿದೂಗಿಸುವಂತೆ ಸೂಚಿಸಿದ್ದರು.

ಈ ನಡುವೆ, ಇನ್ನೇನು ಮೂರ್ನಾಲ್ಕು ದಿನಗಳಲ್ಲಿ ಆಚರಣೆಗೊಳ್ಳಲಿರುವ ಹೋಳಿ ಹಬ್ಬಕ್ಕೂ ನೀರಿನ ಕೊರತೆಯ ಬಿಸಿ ತಟ್ಟಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಹೋಳಿ ಹಬ್ಬದ ಆಚರಣೆಗೆ ಹೊಸ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿದ್ದು, “ಪ್ರಸ್ತುತ ದಿನಗಳಲ್ಲಿ ನೀರಿನ ಅಭಾವ ಇರುವುದರಿಂದ, ಸಾರ್ವಜನಿಕವಾಗಿ ಹೋಳಿ ಹಬ್ಬದ ನೀರೆರಚಾಟ ಹಾಗೂ ಪಾರ್ಟಿಗಳನ್ನು ಆಚರಿಸುವುದು ಸೂಕ್ತವಲ್ಲ. ಆದರೆ, ಹೋಳಿ ಹಬ್ಬವು ಹಿಂದೂ ಧರ್ಮದ ಒಂದು ಮಹತ್ವದ ಆಚರಣೆಯಾಗಿರುವುದರಿಂದ ತಮ್ಮ ತಮ್ಮ ಮನೆಗಳಲ್ಲಿ ಆಚರಿಸಲು ಯಾವುದೇ ಅಭ್ಯಂತರವಿಲ್ಲ” ಎಂದಿದೆ.

Water consumption for Holi festival - What did Jalmandali say?

ಆದರೆ, ಈ ಮಾರ್ಗಸೂಚಿಯನ್ನೂ ಮೀರಿ, ಬೆಂಗಳೂರಿನ ಹಲವಾರು ಹೋಟೆಲ್‌ಗಳು ಈಗಾಗಲೇ ಹೋಳಿ ಪಾರ್ಟಿ ಟಿಕೆಟ್’ಗಳನ್ನು ಮಾರಾಟ ಮಾಡುತ್ತಿವೆ. ಬುಕ್ ಮೈ ಶೋ ಅಪ್ಲಿಕೇಶನ್ ನಲ್ಲಿ ರಂಗ್ ದೇ ಬೆಂಗಳೂರು ಹಾಗೂ ಜೆ ಕೆ ಗ್ರ್ಯಾಂಡ್ ಅರೇನಾ ಸೇರಿದಂತೆ ಹಲವಾರು ಹೋಟೆಲ್‌ಗಳು ಹಾಗೂ ಆಯೋಜಕರು ₹199 ಕ್ಕೆ ಹೋಳಿ ರೈನ್ ಪಾರ್ಟಿ ಎನ್ನುವ ಹೆಸರಿನೊಂದಿಗೆ ಟಿಕೆಟ್ ಮಾರಾಟ ಮಾಡುತ್ತಿವೆ. ಆದರೆ, ಲುಲು ಮಾಲ್ ಈ ಬಾರಿ ಡ್ರೈ ಹೋಳಿ ಆಚರಿಸುತ್ತೇವೆ ಎಂದು ಕರೆಕೊಟ್ಟಿರುವುದಾಗಿ ಹೇಳಿಕೊಂಡಿದೆ.

ಇನ್ನು, ಒಂದೊಮ್ಮೆ ಪೂಲ್ ಪಾರ್ಟಿಗಳನ್ನು ಆಯೋಜಿಸಿದರೂ ಕೂಡ, ಅದಕ್ಕೆ ಯಾವುದೇ ಕಾರಣಕ್ಕೂ ಕಾವೇರಿ ನೀರು ಅಥವಾ ಬೋರ್ ವೆಲ್ ನೀರು ಬಳಸುವಂತಿಲ್ಲ. ಬದಲಾಗಿ, ಸಂಸ್ಕರಿಸಿದ ನೀರನ್ನು ಬಳಸಬಹುದು ಎಂದು ನೀರು ಸರಬರಾಜು ಮಂಡಳಿ ಹೇಳಿದೆ.

ಈಗಾಗಲೇ ಬೆಂಗಳೂರಿನಾದ್ಯಂತ ನೀರು ಉಳಿಸಿ ಹಾಗೂ ಏರೇಟರ್ ಅಳವಡಿಸಿ ಎನ್ನುವ ಅಭಿಯಾನ ಶುರುವಾಗಿದ್ದು, ಕಾಲ ಮೀರಿದ ಮೇಲೆ ಚಿಂತಿಸಿದಂತೆ, ನೀರು ಬಳಕೆಯ ಬಗ್ಗೆ ಜನತೆ ಹಾಗೂ ಸರ್ಕಾರ ಎಚ್ಚೆತ್ತುಕೊಂಡಂತಿದೆ.

ಏನೇ ಇರಲಿ, ಜೀವಜಲ ಎಂದು ಕರೆಯಲಾಗುವ ನೀರನ್ನು ಮಿತವಾಗಿ ಬಳಸಿ, ಸಂರಕ್ಷಿಸುವುದು ಎಲ್ಲರ ಹೊಣೆಯಾಗಿದೆ.

You might also like
Leave A Reply

Your email address will not be published.