ಜೀವಕ್ಕೆ ಕುತ್ತು ತಂದ ಮರಳ ಸುರಂಗ

ಈ ಬೀಚು, ಮರಳು. ಆ ಮರಳಲ್ಲಿ ಮನೆ ಕಟ್ಟುವುದು, ಗುಡ್ಡ ಮಾಡುವುದು, ಉಪ್ಪು ನೀರಲ್ಲಿ ಆಡುವುದು, ಅಲೆಗಳೊಂದಿಗೆ ಜೂಟು ಮೂಟು ಆಡುವುದು ಹೀಗೆ ಅದೆಷ್ಟು ನೆನಪುಗಳಲ್ವಾ! ಹಾಗೆ ಈ ಸ್ಟೋರಿ ಯಾವುದೋ ನೆನಪಿನ ಕಥೆ ಅಲ್ಲ. ನೋವಿನ ವರದಿ. ಏನದು ಅಂತೀರ? ಈ ಸ್ಟೋರಿ ಓದಿ.

ಬೀಚ್‌ಗಳಿಗೆ ಭೇಟಿ ನೀಡಿದಾಗ ಮಕ್ಕಳು ಮರಳಲ್ಲಿ ಆಡೋದು ಸಾಮಾನ್ಯ. ತಮಗೆ ಬೇಕಾದಂತೆ ಸಂಭ್ರಮಿಸುತ್ತಾರೆ. ಆದರೆ ಇಲ್ಲೊಂದು ಕಡೆ ಹೀಗೆ ಮರಳಿನಲ್ಲಿ ಆಟವಾಡುತ್ತಿದ್ದ 7 ವರ್ಷದ ಹುಡುಗಿಯೊಬ್ಬಳು ಮರಳು ಕುಸಿದು ಸಾವನ್ನಪ್ಪಿದ್ದಾಳೆ. ಮರಳಿನಲ್ಲಿ ಇನ್ನೊಂದು ಮಗುವಿನ ಜೊತೆ ಸೇರಿ ಬಾಲಕಿ ದೊಡ್ಡದಾದ ಸುರಂಗ ಕೊರೆದಿದ್ದಾಳೆ. ಇದೇ ವೇಳೆ ಮರಳು ಕುಸಿದು ಬಾಲಕಿ ಮರಳಿನಡಿ ಸಿಲುಕಿ ಅಲ್ಲೇ ಸಾವನ್ನಪ್ಪಿದ್ದ ಘಟನೆ ನಡೆದಿದೆ.

ಅಮೆರಿಕಾದ ಫೋರ್ಟ್ ಲಾಡರ್‌ಡೇಲ್‌ನ ಲಾಡರ್‌ಡೇಲ್-ಬೈ-ದಿ-ಸೀ ಬೀಚ್‌ನಲ್ಲಿ ಈ ಘಟನೆ ನಡೆದಿದ್ದು, 7 ವರ್ಷದ ಬಾಲಕಿ ಆಟವಾಡುತ್ತಾ ಆಡುತ್ತಾ 5 ರಿಂದ 6 ಅಡಿ ಆಳದ ಗುಂಡಿಯನ್ನು ತೋಡಿದಾಗ ಈ ದುರಂತ ಸಂಭವಿಸಿದೆ. ಮೇಲಿನಿಂದ ಮರಳು ಬಿದ್ದು ಹುಡುಗಿ ಸಂಪೂರ್ಣ ಸಮಾಧಿಯಾಗಿದ್ದರೆ, ಜೊತೆಗಿದ್ದ ಬಾಲಕನ ಕತ್ತಿನವರೆಗೂ ಮರಳು ತುಂಬಿತ್ತು.

ಇದೊಂದು ಊಹಿಸಲಾಗದ ಘಟನೆ ಎಂದು ಪೊಂಪನೊ ಬೀಚ್‌ನ ರಕ್ಷಣಾ ವಕ್ತಾರೆ ಸಂಡ್ರಾ ಕಿಂಗ್ ಹೇಳಿದ್ದಾರೆ. ಮಗು ಬಿದ್ದ ಸುದ್ದಿ ತಿಳಿದ ಅಗ್ನಿ ಶಾಮಕ ಸಿಬ್ಬಂದಿ ಮರಳನ್ನು ಮೇಲೆತ್ತಿ ಮಗುವಿನ ರಕ್ಷಣೆಗೆ ಪ್ರಯತ್ನಿಸಿದರಾದರೂ ಅಷ್ಟರಲ್ಲಾಗಲೇ ಬಾಲಕಿ ಉಸಿರು ಚೆಲ್ಲಿದ್ದಳು. ರಕ್ಷಿಸಿದ ಕೂಡಲೇ ಆಕೆಯನ್ನು ಬ್ರೊವಾರ್ಡ್ ಹೆಲ್ತ್ ಮೆಡಿಕಲ್ ಸೆಂಟರ್‌ಗೆ ಕರೆದೊಯ್ದು ಆಕೆಯನ್ನು ಮೇಲೆಳಿಸಲು ಸರ್ವ ಪ್ರಯತ್ನ ಮಾಡಿದರಾದರೂ ಮಗು ಬದುಕುಳಿಯಲಿಲ್ಲ, ಆಸ್ಪತ್ರೆಗೆ ಆಗಮಿಸುವ ವೇಳೆಯೇ ಆಕೆ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಘೋಷಿಸಿದ್ದರು.

ಈಕೆಯೊಂದಿಗೆ ಅರ್ಧ ಸಮಾಧಿಯಾದ ಬಾಲಕನ ಆರೋಗ್ಯ ಸ್ಥಿರವಾಗಿದೆ. ಸಂತ್ರಸ್ತ ಮಕ್ಕಳ ಗುರುತನ್ನು ಗೌಪ್ಯವಾಗಿಡಲಾಗಿದೆ. ಮಕ್ಕಳ ಮೇಲೆ ಮರಳು ಹೇಗೆ ಕುಸಿದು ಬಿತ್ತು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಲಾಡರ್ಡೇಲ್ ಬೈ ದಿ ಸೀ ಒಂದು ಜನಪ್ರಿಯ ಪ್ರವಾಸಿ ಸ್ಥಳವಾಗಿದ್ದು, ಇಲ್ಲಿನ ಬೀಚ್ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ.

Sand tunnel brought to life

You might also like
Leave A Reply

Your email address will not be published.