ರಾಜ್ಯದಲ್ಲಿ ರಜೆ ಕೊಡಲ್ಲ – ಸಿದ್ದರಾಮಯ್ಯ ಸ್ಪಷ್ಟ ತೀರ್ಮಾನ

ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಉದ್ಘಾಟನಾ ಸಮಾರಂಭದ ಹಿನ್ನೆಲೆ ರಾಜ್ಯದಲ್ಲಿ ಸೋಮವಾರ ಸರ್ಕಾರಿ ರಜೆ ಘೋಷಿಸಬೇಕೆಂಬ ಪ್ರತಿಪಕ್ಷ ನಾಯಕರ ಆಗ್ರಹವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರಸ್ಕರಿಸಿ, ರಾಜ್ಯದಲ್ಲಿ ರಜೆ ಘೋಷಿಸಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

siddaramaiah

ರಾಮ ಮಂದಿರ ಉದ್ಘಾಟನೆ ಹಿನ್ನೆಲೆ ರಾಜ್ಯದಲ್ಲಿ ಸರ್ಕಾರಿ ರಜೆ ಘೋಷಿಸುವುದಿಲ್ಲ. ಆದರೆ ಮುಜರಾಯಿ ಇಲಾಖೆ ವ್ಯಾಪ್ತಿಯ ದೇಗುಲಗಳಲ್ಲಿ ವಿಶೇಷ ಪೂಜೆ ನಡೆಯಲಿದೆ. ಪಾನಕ-ಫಲಾಹಾರ ವ್ಯವಸ್ಥೆಯ ಬಗ್ಗೆ ಮಾಹಿತಿ ಇಲ್ಲ ಎಂದು ತಿಳಿಸಿದರು.

ಬೆಂಗಳೂರಿನ ಮಹದೇವಪುರದಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರವೊಂದರ ಉದ್ಘಾಟನೆಗೆ ತಮಗೆ ಆಹ್ವಾನ ಬಂದಿದ್ದು, ಸೋಮವಾರ ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದಾಗಿ ಇದೇ ವೇಳೆ ಮುಖ್ಯಮಂತ್ರಿ ಮಾಹಿತಿ ನೀಡಿದರು.

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಹಣಕಾಸು ಹಂಚಿಕೆಯಲ್ಲಿ ಆಗುತ್ತಿರುವ ತಾರತಮ್ಯ, ನಷ್ಟದ ಕುರಿತು 16ನೇ ಹಣಕಾಸು ಆಯೋಗದ ಎದುರು ಪ್ರಶ್ನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಎಂ.ಎಸ್.ರಾಮಯ್ಯ ಆನ್ವಯಿಕ ವಿಜ್ಞಾನ ವಿಶ್ವವಿದ್ಯಾಲಯದ ಕಾನೂನು ಶಾಲೆಯಿಂದ ಶನಿವಾರ ನಗರದಲ್ಲಿ ಆಯೋಜಿಸಲಾಗಿದ್ದ ‘ವಿತ್ತೀಯ ಒಕ್ಕೂಟ: 16ನೇ ಹಣಕಾಸು ಆಯೋಗದ ಮುಂದಿರುವ ಸವಾಲುಗಳು’ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

15ನೇ ಹಣಕಾಸು ಆಯೋಗದ ಶಿಫಾರಸ್ಸುಗಳಿಂದಾಗಿ ಕರ್ನಾಟಕ ಭಾರಿ ನಷ್ಟವನ್ನು ಅನುಭವಿಸುತ್ತಿದೆ. ಕರ್ನಾಟಕಕ್ಕೆ 5 ವರ್ಷಗಳ ಅವಧಿಯಲ್ಲಿ 62,000 ಕೋಟಿ ನಷ್ಟ ಆಗಲಿದೆ. ರಾಜ್ಯವು ದೇಶಕ್ಕೆ ಸಂಗ್ರಹಿಸಿ ಕೊಡುವ ಪ್ರತಿ 100 ರುಪಾಯಿಗೆ 12.50 ರು. ಮಾತ್ರ ರಾಜ್ಯಕ್ಕೆ ಮರಳಿ ಬರುತ್ತಿದೆ. ಕರ್ನಾಟಕದಿಂದ ವಾರ್ಷಿಕ ₹4 ಲಕ್ಷ ಕೋಟಿ ಆದಾಯ ಗಳಿಕೆಯಾದರೆ ಇದಕ್ಕೆ ಪ್ರತಿಯಾಗಿ ಕೇಂದ್ರದಿಂದ ನಮಗೆ ಬರುವುದು ಸುಮಾರು ₹50000 ಕೋಟಿ. ಈ ವಿಚಾರವನ್ನು 16ನೇ ಹಣಕಾಸು ಆಯೋಗದ ಎದುರು ಪ್ರಶ್ನಿಸಬೇಕಿದೆ.

14ನೇ ಹಣಕಾಸು ಆಯೋಗ ಮತ್ತು 15ನೇ ಹಣಕಾಸು ಆಯೋಗದ ನಡುವೆ ಕರ್ನಾಟಕದ ಪಾಲಿನ ತೆರಿಗೆ ಹಂಚಿಕೆಯು ಶೇ.4.713ರಿಂದ ಶೇ.3.647 ಕ್ಕೆ ಇಳಿದಿದೆ. ದೇಶದ ರಾಜ್ಯಗಳ ಪೈಕಿ ಕರ್ನಾಟಕಕ್ಕೆ ಗರಿಷ್ಠ ಪ್ರಮಾಣದ ಕಡಿತ (ಶೇ.1.066) ಮಾಡಲಾಗಿದೆ. ಈ ಕಾರಣದಿಂದ ರಾಜ್ಯಕ್ಕೆ ನಷ್ಟವಾಗುತ್ತಿದೆ ಎಂದು ತಿಳಿಸಿದರು.

You might also like
Leave A Reply

Your email address will not be published.