ಕೋವಿಡ್ ಉಪತಳಿ JN.1 ಗೆ ಇಂದು 3 ಬಲಿ; ರಾಜ್ಯದಲ್ಲಿ 92 ಜನರಲ್ಲಿ ಕೊರೋನ ವೈರಸ್ ಪತ್ತೆ!

ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಮೂವರು ಸಾವನ್ನಪ್ಪಿದ್ದು, 60 ವರ್ಷ ಮೇಲ್ಪಟ್ಟ ಎಲ್ಲಾ ವೃದ್ಧರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆಗೆ ಯಾವುದೇ ಕೋವಿಡ್ ನಿರ್ಬಂಧವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋವಿಡ್ ಮಾರ್ಗಸೂಚಿಯನ್ನು ತಿಳಿಸಿದ್ದಾರೆ.

ಎಲ್ಲ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೋವಿಡ್ ಉಪತಳಿ JN.1 (ಒಮಿಕ್ರಾನ್ ಉಪತಳಿ) ರಾಜ್ಯದಲ್ಲಿ 92 ಜನರಲ್ಲಿ ಪತ್ತೆಯಾಗಿದ್ದು, ಬೆಂಗಳೂರಲ್ಲಿ 80 ಜನರಲ್ಲಿದೆ. ಅದರ ಪೈಕಿ 20 ಮಂದಿ ಮಾತ್ರ ಆಸ್ಪತ್ರೆಯಲ್ಲಿದ್ದಾರೆ. ಇನ್ನುಳಿದವರು ತಮ್ಮ ಮನೆಯಲ್ಲೇ ಇದ್ದಾರೆ. ಆ 20 ಜನರಲ್ಲಿ 7 ಮಂದಿ ICU ನಲ್ಲಿದ್ದು, ಇವರಿಗೆ ಇನ್ನಿತರೆ ಆರೋಗ್ಯ ಸಮಸ್ಯೆಗಳು ಇದೆ ಎಂದು ತಿಳಿಸಿದರು.

ಇನ್ನು ಮುಂದೆ ಪ್ರತಿದಿನ 5000 ಟೆಸ್ಟ್ ಗಳು ನಡೆಸಬೇಕು. ಬೆಂಗಳೂರಲ್ಲಿ ಸಾವಿರ ಪರೀಕ್ಷೆಯನ್ನು ಈಗಾಗಲೇ ಮಾಡಲಾಗುತ್ತಿದೆ. ಇನ್ನು ಸೋಂಕು ನಿಯಂತ್ರಣಕ್ಕೆ ಕ್ಯಾಬಿನೆಟ್ ಉಪಸಮಿತಿ ರಚಿಸಲಾಗುವುದು. ಇವರು ಸಲಹಾ ಸಮಿತಿ ಜತೆ ಸಂಪರ್ಕದಲ್ಲಿದ್ದು ನಿರಂತರ ನಿಗಾ ಇಡಬೇಕು. ತಾಂತ್ರಿಕ ಸಲಹಾ ಸಮಿತಿ ಸಲಹೆಗಳನ್ನು ಪೂರ್ತಿಯಾಗಿ ಜಾರಿ ಮಾಡಬೇಕು ಎಂದು ತಿಳಿಸಿದರು.

ಕೇರಳ ಮತ್ತು ಕರ್ನಾಟಕ ಗಡಿ ಜಿಲ್ಲೆಗಳಲ್ಲಿ ಹೆಚ್ಚೆಚ್ಚು ಪರೀಕ್ಷೆ ಆಗಬೇಕು. ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಸೇರಿ ಇನ್ನಿತರೆ ಯಾವುದಕ್ಕೂ ಕೊರತೆ ಆಗಬಾರದು. ಸಾಮಾನ್ಯ ಜನರಿಗೆ ಮಾಸ್ಕ್ ಕಡ್ಡಾಯವಿಲ್ಲ. ಆದರೆ ಜನ ಸಂದಣಿಯಲ್ಲಿ ಮಾಸ್ಕ್ ಕಡ್ಡಾಯವಾಗಿ ಹಾಕಿಕೊಳ್ಳಬೇಕು ಎಂದು ರಾಜ್ಯದ ಜನತೆಗೆ ಮನವಿ ಮಾಡಿದರು.

ಕೋವಿಡ್ ಡೆಡಿಕೇಟೆಡ್ ಆಸ್ಪತ್ರೆಗಳಲ್ಲಿ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಬೇಕು. ಎಲ್ಲಾ ಜಿಲ್ಲೆಗಳಲ್ಲೂ ಆಕ್ಸಿಜನ್, ಬೆಡ್, ವೆಂಟಿಲೇಟರ್ ಸೇರಿ ಕೋವಿಡ್ ಸಂಬಂಧಿತ ವ್ಯವಸ್ಥೆ ಮಾಡಿಕೊಳ್ಳಬೇಕು. ಲಸಿಕೆಗಳನ್ನು ಸಿದ್ದವಿಟ್ಟುಕೊಳ್ಳಲು ಸೂಚಿಸಲಾಗಿದೆ ಎಂದರು.

ರಾಜ್ಯದಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಸಾಕಷ್ಟು ಹಣ ಇದೆ. ಕೋವಿಡ್ ನಿರ್ವಹಣೆಗೆ ಹಣಕಾಸಿನ ಕೊರತೆ ಇಲ್ಲ. ಪರಿಸ್ಥಿತಿ ನೋಡಿಕೊಂಡು ಡೆಡಿಕೇಡೆಡ್ ಆಸ್ಪತ್ರೆಗಳನ್ನು ನಿಗದಿ ಮಾಡುತ್ತೇವೆ. ಈಗಲೇ ಎಲ್ಲರೂ ಮಾಸ್ಕ್ ಧರಿಸುವ ಅಗತ್ಯವಿಲ್ಲ ಎನ್ನುವ ಸಲಹೆ ತಾಂತ್ರಿಕ ಸಲಹಾ ಸಮಿತಿ ಮತ್ತು ತಜ್ಞರಿಂದ ಬಂದಿದೆ ಎಂದು ಮಾಹಿತಿ ನೀಡಿದರು.

You might also like
Leave A Reply

Your email address will not be published.