ನರ್ಸ್ ಪ್ರಾಣಕ್ಕೆ ಕುತ್ತು ತಂದ ಜಿಪ್ ಲೈನಿಂಗ್ ಸಾಹಸ – ನಡೆದಿದ್ದೇನು?

ಬೇಸಿಗೆ ರಜೆಯಲ್ಲಿ ಮಕ್ಕಳೊಂದಿಗೆ ಹಾಗೂ ಕುಟುಂಬದವರೊಂದಿಗೆ ಪಿಕ್ನಿಕ್ ಅಥವಾ ಟ್ರಿಪ್ ಹೋಗುವವರ ಸಂಖ್ಯೆ ಬಹಳ. ಹಲವರು ವಾಟರ್ ಪಾರ್ಕ್, ಬೀಚ್, ಜಲಪಾತ, ದೇವಾಲಯ ಹೀಗೆ ಕೆಲವು ಪ್ರಸಿದ್ಧ ಸ್ಥಳಗಳಿಗೆ ಭೇಟಿ ನೀಡಿದರೆ, ಇನ್ನು ಕೆಲವರು ಸಾಹಸಮಯ ಸ್ಥಳಗಳಿಗೆ ಭೇಟಿ ನೀಡಿ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಾರೆ. ಅಂತಹುದೇ ಒಂದು ದುರ್ಘಟನೆ ಬೆಂಗಳೂರು ಸಮೀಪದ ರಾಮನಗರ ಜಿಲ್ಲೆಯ ಹಾರೋಹಳ್ಳಿಯಲ್ಲಿ ಸಂಭವಿಸಿದೆ. ಅದೇನು ಘಟನೆ? ಇಲ್ಲಿದೆ ವರದಿ.

ರಾಮನಗರ ಬಳಿಯ ರೆಸಾರ್ಟ್ ಒಂದರಲ್ಲಿ ತಂಗಲು ಬಂದಿದ್ದ ಮೂವತ್ತೈದು ವರ್ಷದ ಮಹಿಳೆಯೊಬ್ಬರು, ಸಾಹಸಮಯ ಜಿಪ್-ಲೈನಿಂಗ್ ನಲ್ಲಿ ತೇಲುವಾಗ ಆಕಸ್ಮಿಕವಾಗಿ ಕೇಬಲ್ ತುಂಡಾಗಿ ಪ್ರಪಾತಕ್ಕೆ ಉರುಳಿಬಿದ್ದು ಅಸುನೀಗಿದ್ದಾರೆ. ರಂಜಿತಾ ಎನ್ ಎನ್ನುವ ಹೆಸರಿನ ಮಹಿಳೆ, ತನ್ನ ಸಹೋದ್ಯೋಗಿಗಳೊಂದಿಗೆ ರಜೆ ಅನುಭವಿಸಲು ಬಂದಿದ್ದರು. ರೆಸಾರ್ಟ್ ನಲ್ಲಿ ತಂಗಿದ್ದ ಇವರು, ಜಿಪ್-ಲೈನಿಂಗ್ ನಲ್ಲಿ ಆಟವಾಡುವಾಗ ಕೇಬಲ್ ತುಂಡಾಗಿದ್ದು, ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ಮೂಲಗಳ ಪ್ರಕಾರ, ಆ ರೆಸಾರ್ಟ್ ನಲ್ಲಿ ಜಿಪ್ ಲೈನಿಂಗ್ ವ್ಯವಸ್ಥೆಯು ಅಷ್ಟೊಂದು ಸುರಕ್ಷಿತವಾಗಿಲ್ಲದ್ದು, ಪ್ರಥಮ ಚಿಕಿತ್ಸೆಯ ವ್ಯವಸ್ಥೆ ಕೂಡ ಇಲ್ಲವಾಗಿತ್ತು ಎನ್ನಲಾಗಿದೆ.

ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲೇ ಅಸುನೀಗಿದ ರಂಜಿತಾ, ತನ್ನ ಪತಿ ಮತ್ತು ಈರ್ವರು ಮಕ್ಕಳನ್ನು ಅಗಲಿದ್ದಾರೆ. ದಯಾನಂದ ಸಾಗರ್ ಆಸ್ಪತ್ರೆಗೆ ಅತ್ಯಂತ ಕ್ಷಿಪ್ರಗತಿಯಲ್ಲಿ ಸಾಗಿಸಲಾಯಿತಾದರೂ, ಅಷ್ಟೊತ್ತಿಗಾಗಲೇ ಮಹಿಳೆ ಪ್ರಾಣಬಿಟ್ಟಿದ್ದರು. ಹೆಲ್ಮೆಟ್ ಮುಂತಾದ ಅತ್ಯಾವಶ್ಯಕ ಮೂಲಸೌಕರ್ಯಗಳಿಲ್ಲದೇ ಈ ಸಾಹಸಮಯ ವ್ಯವಸ್ಥೆಗೆ ಪ್ರವಾಸಿಗರನ್ನು ಬಳಸುತ್ತಿದ್ದ ಕಾರಣಕ್ಕೆ ರೆಸಾರ್ಟ್ ನ ಮಾಲೀಕ ಹಾಗೂ ಸಿಬ್ಬಂದಿಗಳ ಮೇಲೆ ಸೆಕ್ಷನ್ 304 ಮತ್ತು 337 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇಂತಹ ದುರ್ಘಟನೆಗಳು ಈ ಬೇಸಿಗೆ ರಜೆಯ ಸಮಯದಲ್ಲಿ ಅತಿ ಹೆಚ್ಚಾಗಿ ಸಂಭವಿಸುತ್ತಿದ್ದು, ಪ್ರವಾಸಿಗರು, ಕುಟುಂಬದವರು ಅಥವಾ ನಾಗರಿಕರು ಬಹಳಷ್ಟು ಎಚ್ಚರಿಕೆಯಿಂದಿರಬೇಕಿದೆ. ಇಲ್ಲವಾದಲ್ಲಿ ಪ್ರಾಣಕ್ಕೆ ಕುತ್ತು ಬರುವುದಂತೂ ಖಂಡಿತ.

You might also like
Leave A Reply

Your email address will not be published.