ಟೀಕಾಕಾರರ ಬಾಯಿ‌ ಮುಚ್ಚಿಸಿದ ಮೋದಿಜೀ – ನಿರುದ್ಯೋಗದ ಬಗ್ಗೆ ಮೋದಿಜೀ ಹೀಗಂದಿದ್ಯಾಕೆ?

ಲೋಕಸಭಾ ಚುನಾವಣೆ ಇನ್ನೇನು ಮುಗಿಯುವ ಹಂತದಲ್ಲಿದೆ.‌ ನಿನ್ನೆ ಐದನೇ ಹಂತದ ಮತದಾನ‌ ನಡೆಯುತ್ತಿದ್ದು, ಉತ್ತರ ಭಾರತದ ಬಹುತೇಕ ಕ್ಷೇತ್ರಗಳಲ್ಲಿ‌ ಹಲವು ದಿಗ್ಗಜ ರಾಜಕೀಯ ಧುರೀಣರ ಭವಿಷ್ಯ ನಿರ್ಧಾರವಾಗಲಿದೆ. ಈ ನಡುವೆ, ಎನ್.ಡಿ.ಟಿ.ವಿ ನಡೆಸಿದ ಸಂದರ್ಶನವೊಂದರಲ್ಲಿ ಮೋದಿಜೀ ವಿರೋಧ ಪಕ್ಷಗಳ ಟೀಕೆಗೆ ಖಡಕ್ ಉತ್ತರವೊಂದನ್ನು ನೀಡಿದ್ದಾರೆ. ಅದೇನು? ಇಲ್ಲಿದೆ ವರದಿ.

ಎನ್.ಡಿ‌.ಟಿ.ವಿ ಮುಖ್ಯ ಸಂಪಾದಕ ಸಂಜಯ್ ಪುಗಾಲಿಯಾ ಅವರು ಪ್ರಧಾನಿ ಮೋದಿಯವರೊಂದಿಗೆ ನಡೆಸಿದ ವಿಶೇಷ ಸಂದರ್ಶನದಲ್ಲಿ, ದೇಶದ ಹಲವು ವಿಚಾರಗಳನ್ನು ನೇರಾನೇರವಾಗಿ ಮೋದಿಜೀಯವರ ಮುಂದಿಟ್ಟಿದ್ದಾರೆ. ವಿದೇಶಾಂಗ ನೀತಿ, ದೇಶದ ಅಭಿವೃದ್ಧಿಯೆಡೆಗಿನ ದೂರದೃಷ್ಟಿ ಹಾಗೂ ಮೂಲಸೌಕರ್ಯ ಮತ್ತು ಚುನಾವಣೆಯತ್ತ ಬಿಜೆಪಿಯ ಯೋಚನೆಗಳನ್ನು ಪ್ರಶ್ನಿಸಿದ್ದಕ್ಕೆ, ಪ್ರಧಾನಿ‌ ಮೋದಿಯವರು ಖಡಕ್ ಉತ್ತರವನ್ನೇ ನೀಡಿದ್ದಾರೆ.

ಆದರೆ, ಪ್ರತಿಪಕ್ಷಗಳು ನಿರುದ್ಯೋಗ ಸಮಸ್ಯೆಯ ಕುರಿತು ಟೀಕಿಸುತ್ತಿವೆ ಎನ್ನುವ ಸಂಪಾದಕರ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ ಮೋದಿಜೀ, ನಿರುದ್ಯೋಗ ಸಮಸ್ಯೆಯ ನಿರ್ಮೂಲನೆ ಮತ್ತು ಉದ್ಯೋಗ ಸೃಷ್ಟಿಯ ಕುರಿತು ಬಿಜೆಪಿ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಪ್ರತಿಪಕ್ಷಗಳ ಆರೋಪವನ್ನು ಅಲ್ಲಗಳೆದಿದ್ದಾರೆ ಹಾಗೂ ಸೂಕ್ತ ಅಂಕಿ-ಅಂಶಗಳನ್ನೂ ವಿವರಿಸಿದ್ದಾರೆ.

“ದೇಶದಲ್ಲಿ ಇಷ್ಟೊಂದು ಮೂಲಸೌಕರ್ಯ ಹಾಗೂ ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ಮಾನವ ಸಂಪನ್ಮೂಲವಿಲ್ಲದೇ ಇದ್ಯಾವುದೂ ಸಾಧ್ಯವಾಗಿಲ್ಲ. ರಸ್ತೆ ನಿರ್ಮಾಣ ಹಾಗೂ ರೈಲು ವಿದ್ಯುದೀಕರಣಕ್ಕೆ ಅಷ್ಟೊಂದು ಮೊತ್ತದ ಅನುದಾನ ವ್ಯಯವಾಗಿದೆ ಎಂದರೆ, ಅದು ಉದ್ಯೋಗಿಗಳಿಲ್ಲದೇ ಸಾಧ್ಯವಾಗಿದ್ದಲ್ಲ. ಅಂದರೆ, ಇದರಿಂದಲೇ ಬಹಳಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ. ನಿರುದ್ಯೋಗ ಸಮಸ್ಯೆ ಹೆಚ್ಚಿದೆ ಎನ್ನುವ ವಿಪಕ್ಷಗಳ ಆರೋಪದಲ್ಲಿ ಯಾವುದೇ ಅರ್ಥವಿಲ್ಲ” ಎಂದು ಮೋದಿಜೀ ಉತ್ತರಿಸಿದ್ದಾರೆ.

ಯುವಜನತೆಯಲ್ಲಿ ಕಂಡುಬಂದ ಬದಲಾವಣೆಗಳು ಕೆಲವು ಪಕ್ಷಗಳ‌ ಕಣ್ಣಿಗೆ‌ ಕಾಣು‍ವುದಿಲ್ಲ. 2014 ರ ಮುನ್ನ ಅಲ್ಲಲ್ಲಿ ಇದ್ದ ಸ್ಟಾರ್ಟಪ್’ಗಳ ಸಂಖ್ಯೆ ಇದೀಗ 1.24 ಲಕ್ಷವನ್ನೂ ಮೀರಿದೆ. ಇವೆಲ್ಲವುದರಲ್ಲೂ ಉದ್ಯೋಗಿಗಳಿದ್ದಾರೆ. ಇದಲ್ಲದೇ ನೂರಕ್ಕೂ ಹೆಚ್ಚು ಯುನಿಕಾರ್ನ್ ಕಂಪನಿಗಳಿದ್ದು, ಎಂಟು ಲಕ್ಷ ಕೋಟಿಗೂ ಅಧಿಕ ವ್ಯವಹಾರ ನಡೆಸುತ್ತಿವೆ. ಈ ಎಲ್ಲಾ ಉದ್ಯೋಗಿಗಳು 20-25 ವರ್ಷ ವಯಸ್ಸಿನವರಾಗಿದ್ದು, ನಮ್ಮ‌ ನಿಮ್ಮ ಮಕ್ಕಳೇ ಆಗಿದ್ದಾರೆ ಎಂದರು.

ಇದಲ್ಲದೇ ಗೇಮಿಂಗ್, ಏವಿಯೇಶನ್‌ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಅಪಾರ ಉದ್ಯೋಗಾವಕಾಶಗಳು ಸೃಷ್ಟಿಯಾಗಿದ್ದು, ನಿರುದ್ಯೋಗ ಸಮಸ್ಯೆ ಬಹುತೇಕ ಅರ್ಧಕ್ಕರ್ಧದಷ್ಟು ಇಳಿಕೆ ಕಂಡಿದೆ. ಈ ನಡುವೆ ಪ್ರತಿಪಕ್ಷಗಳ ಸುಳ್ಳು ಆರೋಪಕ್ಕೆ ಉತ್ತರಿಸುವಲ್ಲಿ ಯಾವುದೇ ಹಿಂಜರಿಕೆ ಇಟ್ಟುಕೊಳ್ಳದ ಪ್ರಧಾನಿ‌ ಮೋದಿ, ಕಳೆದ ಹತ್ತು ವರ್ಷಗಳಲ್ಲಿ ದೇಶ ಸಾಧಿಸಿದ ಪ್ರಗತಿಯ ಕುರಿತು ಅಂಕಿ-ಅಂಶಗಳೊಂದಿಗೆ ಉತ್ತರಿಸಿ, ವಿಪಕ್ಷಗಳ ಬಾಯಿ ಮುಚ್ಚಿಸಿದ್ದಾರೆ ಎನ್ನಬಹುದು.

You might also like
Leave A Reply

Your email address will not be published.