ವಿಕಸಿತ್ ಭಾರತ್ ಸಂಪರ್ಕ್ ವಾಟ್ಸಾಪ್ ಸಂದೇಶ ನಿಲ್ಲಿಸಲು ಸರ್ಕಾರಕ್ಕೆ ಚುನಾವಣಾ ಆಯೋಗ ಸೂಚನೆ – ನಿಮಗೂ ಈ ಸಂದೇಶ ತಲುಪಿದೆಯಾ?

ಕೆಲವು ದಿನಗಳಿಂದ ನಿಮಗೂ ವಾಟ್ಸಾಪ್ ಮೂಲಕ ಒಂದು ಗ್ರೀನ್ ಟಿಕ್ ಇರುವಂತಹ ‘ವಿಕಸಿತ್ ಭಾರತ್ ಸಂಪರ್ಕ್’ ಎನ್ನುವ ಹೆಸರಿನ ಬ್ರಾಡ್‌ಕಾಸ್ಟ್ ಸಂದೇಶ ಬಂದಿರಬಹುದು. ಕೇಂದ್ರ ಬಿಜೆಪಿ ಸರ್ಕಾರ ಈ ಬಾರಿಯ ಲೋಕಸಭಾ ಚುನಾವಣೆಗೆ ವಿಶಿಷ್ಟ ರೀತಿಯ ಪ್ರಚಾರಕ್ಕಾಗಿ ಆರಂಭಿಸಿದ ಈ ವಾಟ್ಸಾಪ್ ಬ್ರಾಡ್‌ಕಾಸ್ಟಿಂಗ್ ಅನ್ನು ತಡೆಹಿಡಿಯುವಂತೆ ಕೇಂದ್ರ ಚುನಾವಣಾ ಆಯೋಗವು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯಕ್ಕೆ ನಿರ್ದೇಶಿಸಿದೆ.

ಇನ್ನೇನು ತಿಂಗಳಲ್ಲೇ ಆರಂಭವಾಗಲಿರುವ ಲೋಕಸಭಾ ಚುನಾವಣೆಗೆ, ಈಗಾಗಲೇ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು, ಈ ನಡುವೆ ವಾಟ್ಸಾಪ್ ಮೂಲಕ ದೇಶದ ಜನತೆಗೆ ಬಿಜೆಪಿ ವತಿಯಿಂದ ನೀತಿ ಸಂಹಿತೆ ಉಲ್ಲಂಘಿಸಿ ವಾಟ್ಸಾಪ್ ಸಂದೇಶ ಕಳುಹಿಸಲಾಗುತ್ತಿದೆ ಎಂದು ವಿವಿಧ ಕಡೆಗಳಿಂದ ದೂರುಗಳಿ ಬಂದ ಹಿನ್ನೆಲೆಯಲ್ಲಿ, ಚುನಾವಣಾ ಆಯೋಗ ಈ ನಿರ್ಧಾರ ಕೈಗೊಂಡಿದೆ ಹಾಗೂ ಈ ಕುರಿತು ಸಮಗ್ರವಾಗಿ ಅಂಗೀಕೃತ ವರದಿಯನ್ನು ಸಲ್ಲಿಸುವಂತೆ ಆದೇಶಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಐಟಿ ಸಚಿವಾಲಯವು, ಈ ಬ್ರಾಡ್‌ಕಾಸ್ಟಿಂಗ್ ಸಂದೇಶಗಳು ಮಾದರಿ ನೀತಿ ಸಂಹಿತೆ ಬರುವ ಮುಂಚೆಯೇ ಜನರಿಗೆ ತಲುಪಿಯಾಗಿತ್ತು.‌ ಆದರೆ, ಕೆಲವೊಂದು ತಾಂತ್ರಿಕ ಕಾರಣಗಳಿಂದ ಕೆಲವರ ವಾಟ್ಸಾಪ್ ಸಂಖ್ಯೆಗಳಿಗೆ ಬಹಳ ತಡವಾಗಿ ಅಂದರೆ ಮಾದರಿ ನೀತಿ ಸಂಹಿತೆ ಜಾರಿಯಾದ ನಂತರವೂ ತಲುಪಿರಬಹುದು ಎಂದು ಹೇಳಿದೆ.

ಜನತೆಗೆ ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ ಪತ್ರವನ್ನು ಹೊಂದಿರುವ ಪಿಡಿಎಫ್ ಫೈಲ್ ಮೂಲಕ, ಕೇಂದ್ರ ಸರ್ಕಾರದ ಯೋಜನೆಗಳಾದ ಪ್ರಧಾನಮಂತ್ರಿ ಮಾತೃವಂದನಾ, ಆಯುಷ್ಮಾನ್ ಭಾರತ್, ಆವಾಸ್ ಯೋಜನಾ ಮುಂತಾದವುಗಳ ಕುರಿತು ರಾಜಕೀಯವಾಗಿ ಜನತೆಯ ಮನಸೆಳೆಯುವ ಪ್ರಯತ್ನ ನಡೆಸಲಾಗಿದ್ದು, ಇದೊಂದು ಸಂಪೂರ್ಣ ‘ರಾಜಕೀಯ ನಡೆ’ ಎಂದು ಕಾಂಗ್ರೆಸ್ ಟೀಕಿಸಿದೆ.

ಪ್ರಧಾನಿಯವರ ಪತ್ರವಿರುವ ಈ ಸಂದೇಶವು ಕೇವಲ ಭಾರತದಲ್ಲಿರುವವರಿಗಷ್ಟೇ ಅಲ್ಲದೇ, ಪಾಕಿಸ್ತಾನ, ಯುಎಇ, ಬ್ರಿಟನ್ ಮುಂತಾದ ದೇಶಗಳಲ್ಲಿರುವವರಿಗೂ ತಲುಪಿದೆ.

ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಸಮಯದಲ್ಲಿ, ಸರ್ಕಾರಕ್ಕೆ ಸಂಬಂಧಿಸಿದ ಯಾವುದೇ ಮಾಧ್ಯಮಗಳ ಮೂಲಕ ಪ್ರಚೋದನಾತ್ಮಕ ಅಥವಾ ಯೋಜನೆಗಳ ಪ್ರಚಾರದ ವಿಚಾರಗಳನ್ನು ಹಂಚಿಕೊಳ್ಳಬಾರದು ಎನ್ನುವ ಮಾರ್ಗಸೂಚಿಯಿರುತ್ತದೆ. ಆದರೆ, ರಾಜಕೀಯವಾಗಿ ಪ್ರಚಾರ ನಡೆಸಲು ಸರ್ಕಾರಿ ಮಾಧ್ಯಮಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ಅವಕಾಶಗಳಿದ್ದು, ಬಿಜೆಪಿಯ ಈ ವಾಟ್ಸಾಪ್ ಬ್ರಾಡ್‌ಕಾಸ್ಟಿಂಗ್, ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆಯೇ ಅಥವಾ ಇಲ್ಲವೇ ಎನ್ನುವುದನ್ನು ಇನ್ನಷ್ಟೇ ತಿಳಿದುಕೊಳ್ಳಬೇಕಿದೆ. ಆದರೆ, ಚುನಾವಣಾ ಆಯೋಗವು ಅತ್ಯಂತ ಜಾಗರೂಕತೆಯಿಂದ ನೀತಿ ಸಂಹಿತೆಯ ಉಲ್ಲಂಘನೆಗಳಾಗದಂತೆ ನೋಡಿಕೊಳ್ಳುತ್ತಿದ್ದು, ಈ ವಿಚಾರದ ಕುರಿತು ಮುಂದಿನ ನಡೆಗಳೇನು ಎನ್ನುವುದು ಇನ್ನಷ್ಟೇ ತಿಳಿದುಬರಬೇಕಿದೆ.

You might also like
Leave A Reply

Your email address will not be published.