ವಮಿಕಾಳ ಪುಟ್ಟ ತಮ್ಮ ‘ಅಕಾಯ್’ ನನ್ನು ಬರಮಾಡಿಕೊಂಡ ಕೊಹ್ಲಿ ದಂಪತಿ

2021ರ ಜನವರಿ 11 ರಂದು ಮೊದಲ‌ನೆಯ ಹೆಣ್ಣು ಮಗು ವಮಿಕಾ‌ ಕೊಹ್ಲಿಯ ಆಗಮನದಿಂದ ಸಂಭ್ರಮಿಸಿದ್ದ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ದಂಪತಿ ಇದೀಗ ಗಂಡು ಮಗುವಿಗೆ ಜನ್ಮ ನೀಡಿರುವುದಾಗಿ ಇಬ್ಬರೂ ಜಂಟಿಯಾಗಿ ಇನ್ಸ್ಟಾಗ್ರಾಮ್ ‌ನಲ್ಲಿ ಘೋಷಿಸುವ ಮೂಲಕ ಸಂತೋಷದ ಸುದ್ಧಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.‌

ಇನ್ನು ತಮ್ಮ‌ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ”ನಮ್ಮ ಹೃದಯಗಳು ಪ್ರೀತಿ ಮತ್ತು ಸಂತೋಷದಿಂದ ತುಂಬಿವೆ, ಫೆಬ್ರವರಿ 15 ರಂದು ನಾವು ನಮ್ಮ ಗಂಡು‌ ಮಗು ‘ಅಕಾಯ್’ ಮತ್ತು ವಮಿಕಾಳ ಚಿಕ್ಕ ತಮ್ಮನನ್ನು ಈ ಜಗತ್ತಿಗೆ ಸ್ವಾಗತಿಸಿದ್ದೇವೆ ಎಂದು ತಿಳಿಸಲು ಸಂತೋಷವಾಗುತ್ತದೆ.

ಜೀವನದ ಈ ಅತ್ಯುನ್ನತ ಕ್ಷಣದಲ್ಲಿ ನಾವು ನಿಮ್ಮೆಲ್ಲರ ಆಶೀರ್ವಾದ ಮತ್ತು ಹಾರೈಕೆಗಳನ್ನು ಬಯಸುತ್ತೇವೆ. ಹಾಗೂ ಈ ಸಮಯದಲ್ಲಿ ನಮ್ಮ ಗೌಪ್ಯತೆಯನ್ನು ಗೌರವಿಸುವಂತೆ ನಿಮ್ಮನ್ನು ವಿನಂತಿಸಿಕೊಳ್ಳುತ್ತೇವೆ‌. ಪ್ರೀತಿಯಿಂದ ವಿರಾಟ್ ಮತ್ತು ಅನುಷ್ಕಾ.” ಎಂದು ಹಂಚಿಕೊಂಡಿದ್ದಾರೆ.

 

View this post on Instagram

 

A post shared by Virat Kohli (@virat.kohli)

ಇನ್ನು ಸತತವಾಗಿ ಕೊಹ್ಲಿ ಪ್ರತಿನಿಧಿಸುತ್ತಿರುವ ಐಪಿಎಲ್ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ತಂಡ ಕೂಡಾ ಪುಟ್ಟ ರಾಜಕುಮಾರ ಅಕಾಯ್‌ನನ್ನು ಸ್ವಾಗತಿಸಿದ್ದು ‘ ಆರ್ ಸಿ ಬಿ ತಂಡದ ಪುಟ್ಟ ಸದಸ್ಯನಿಗೆ ಅತ್ಯಂತ ದೊಡ್ಡ ಸ್ವಾಗತ ಕೋರುತ್ತಿದ್ದೇವೆ’ ಎಂತಹಾ ಸಂಭ್ರಮದ ಸುದ್ದಿ ಇದು, ಭಾರತವಿಂದು ನೆಮ್ಮದಿಯಿಂದ ನಿದ್ರಿಸುತ್ತದೆ ಎಂದು ಎಕ್ಸ್ ಹಾಗೂ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದೆ.

ಮೊದಲ ಮಗು ವಮಿಕಾಳ ಭಾವಚಿತ್ರವನ್ನು ‌ಮಾಧ್ಯಮಗಳೊಂದಿಗೆ ಇನ್ನೂ ಹಂಚಿಕೊಳ್ಳದ ದಂಪತಿಗಳು, ಅನುಷ್ಕಾ ಶರ್ಮ ತಾಯಿಯಾಗುತ್ತಿರುವ ಸುದ್ದಿಯನ್ನು ಕೂಡಾ ಮಾಧ್ಯಮಗಳಿಗೆ ಬಿಟ್ಟು ಕೊಡದೆ ಗೌಪ್ಯತೆಯನ್ನು ಕಾಪಾಡಿದ್ದರು. ಹಾಗಿದ್ದರೂ ತೀರಾ ಇತ್ತೀಚೆಗೆ ಎ ಬಿ ಡಿವಿಲಿಯರ್ಸ್ ಸಂದರ್ಶನವೊಂದರಲ್ಲಿ ಕೊಹ್ಲಿ ಹಾಗೂ ಅನುಷ್ಕಾ ದಂಪತಿ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಹೇಳಿ ನಂತರ ತಾನು ಹೀಗೆ ಹೇಳಬಾರದಿತ್ತು ಎಂದು ಕ್ಷಮೆ ಕೂಡ ಯಾಚಿಸಿದ್ದರು. ಆಗಿನಿಂದಲೇ ಅಭಿಮಾನಿಗಳು ಒಳಗೊಳಗೆ ಈ ಸಂತೋಷದ ಸುದ್ದಿಗೆ ಕಾಯುತ್ತಿದ್ದರು.‌ ಅನುಷ್ಕಾ ಹಾಗೂ ಕೊಹ್ಲಿ ದಂಪತಿ ಮೊದಲ ಹೆಣ್ಣು ಮಗುವಿಗೆ ವಮಿಕಾ ಎಂದು ಹೆಸರಿಸಿದ್ದು ಆ ಹೆಸರಿನ ಅರ್ಥ ದೇವಿ ದುರ್ಗೆ ಎಂದಾಗಿದೆ, ಗಂಡು ಮಗುವಿಗೆ ಅಕಾಯ್ ಎಂದು ಹೆಸರಿಟ್ಟಿದ್ದು ಅಕಾಯ್ / ಅಕಾಯ ಎಂದರೆ ಕಾಯ ಇಲ್ಲದವ, ನಿರಾಕಾಯ ಅಂದರೆ ಶಿವ ಅಥವಾ ಸುಪ್ರಿಂ ಪವರ್ ಎಂದಾಗಿದೆ.

ಇನ್ನು ಗಂಡು ಮಗುವಿನ ಆಗಮನದ ಸುದ್ದಿಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ರಾಜಸ್ಥಾನ ರಾಯಲ್ಸ್ ಐಪಿಎಲ್ ತಂಡ ಸೇರಿದಂತೆ ವಿಶ್ವದಾದ್ಯಂತ ಇರುವ ಕೊಹ್ಲಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಪುಟ್ಟ ಅಕಾಯ್ ಕೂಡಾ ತಂದೆ-ತಾಯಿಯ ಹಾಗೆ ಅವನಿಷ್ಟದ ರಂಗದಲ್ಲಿ ಬೆಳೆದು ಉನ್ನತವಾದ ಭವಿಷ್ಯ ಕಟ್ಟಿಕೊಳ್ಳಲಿ ಎಂಬುದು ನಮ್ಮ ಹಾರೈಕೆ.

You might also like
Leave A Reply

Your email address will not be published.