ಮಹಾಭಾರತದ ಕರ್ಣ ಅದೆಷ್ಟು ಶಕ್ತಿವಂತ ಗೊತ್ತಾ? ಈ ಅಪರೂಪದ ಪುರಾಣ ಕತೆಯನ್ನೊಮ್ಮೆ ಓದಿ

ಭಾರತೀಯ ಪುರಾಣಗಳ ಇತಿಹಾಸದಲ್ಲಿ ಹಿಂದೂ ಧರ್ಮಗ್ರಂಥಗಳಾದ ಮಹಾಭಾರತ ಮತ್ತು ರಾಮಾಯಣಕ್ಕೆ ಅದರದ್ದೇ ಆದ ಮಹತ್ವವಿದೆ. ಭಗವಾನ್ ಶ್ರೀ ವಿಷ್ಣುವಿನ ಹತ್ತು ಅವತಾರಗಳಲ್ಲಿ ಶ್ರೀರಾಮ ಮತ್ತು ಶ್ರೀ ಕೃಷ್ಣನ ಅವತಾರದ ಲೀಲೆಗಳನ್ನು ಆಧರಿಸಿದ ಶ್ರೀಮದ್ ರಾಮಾಯಣ ಮತ್ತು ಶ್ರೀಮದ್ ಮಹಾಭಾರತ ಗ್ರಂಥಗಳು, ಕೇವಲ ಧರ್ಮಗ್ರಂಥಳಾಗಿಯೇ ಉಳಿದಿಲ್ಲ, ಬದಲಾಗಿ, ಆ ಗ್ರಂಥಗಳಲ್ಲಿ ವಿವಿಧ ಪಾತ್ರಗಳ ಮೂಲಕ ಒಳಿತು ಮತ್ತು ಕೆಡುಕುಗಳ ಕಲ್ಪನೆಯನ್ನು ಸವಿವರವಾಗಿ ನೀಡಲಾಗಿದ್ದು, ಈ ಗ್ರಂಥಗಳು ಅದರಲ್ಲೂ, ಮಹಾಭಾರತದಲ್ಲಿಯೇ ಬರುವ ಶ್ರೀ ಮದ್ ಭಗವದ್ಗೀತಾ ಪ್ರವಚನವಂತೂ ಅದೆಷ್ಟು ಕಾಲ ಕಳೆದರೂ ಕೂಡ ಜನತೆಗೆ ಜೀವನದ ಸೊಗಸಿನ ಬೆಳಕನ್ನೇ ಬೀರುತ್ತಿರುತ್ತದೆ. ಈ ನಡುವೆ ಹೇಳಹೊರಟಿರುವುದು ಮಹಾಭಾರತದ ಪ್ರಮುಖ ಪಾತ್ರವಾದ ಸೂರ್ಯಪುತ್ರ ಕರ್ಣನ ಶಕ್ತಿ ಸಾಮರ್ಥ್ಯದ ಬಗ್ಗೆ. ಇದೀ ಮಹಾಭಾರತದಲ್ಲಿ ಕೌರವರ ಪಾಳಯದಲ್ಲಿ ಧುರ್ಯೋಧನ ಸ್ನೇಹಿತನಾಗಿ, ಜೀವನದುದ್ದಕ್ಕೂ ಹಲವಾರು ಅವಮಾನಗಳನ್ನು ಎದುರಿಸಿದರೂ ಕೂಡ, ಸ್ನೇಹಕ್ಕೇ ಬೆಲೆಕೊಟ್ಟು, ಕೊನೆತನಕವೂ ಕೌರವನ ಸೇವೆಯಲ್ಲಿದ್ದು, ವೀರಮರಣವನ್ನಪ್ಪಿದ ಕರ್ಣನ ಶಕ್ತಿಸಾಮರ್ಥ್ಯವನ್ನು ಬಿತ್ತರಿಸುವ ಒಂದು ಅಪರೂಪದ ಕಥೆ ಹೇಳ್ತೀವಿ ನೋಡಿ.

ಮಹಾಭಾರತ ಯುದ್ಧದ ಹದಿನೇಳನೇ ದಿನ. ಅದಾಗಲೇ ಉಭಯ ಪಾಳಯದ ದಿಗ್ಗಜ ವೀರರೆಲ್ಲರೂ ವೀರಮರಣವನಪ್ಪಿಯಾಗಿದೆ. ಭೀಷ್ಮ ಶರಶಯ್ಯೆಯ ಮೇಲೆ ಇಚ್ಛಾಮರಣಿಯಾಗಿ ಮಲಗಿದ್ದರೆ, ದ್ರೋಣರು ತಮ್ಮ ಮಗ ಅಶ್ವತ್ಥಾಮ ತೀರಿದನೆಂಬ ತಪ್ಪು ಕಲ್ಪನೆಯಿಂದಲೇ ಮರಣವನ್ನಪ್ಪಿರುತ್ತಾರೆ. ಈ ನಡುವೆ ಅಭಿಮನ್ಯು ಮುಂತಾದವರ ವೀರಮರಣದ ನಂತರದ 17 ನೇ ದಿನದಲ್ಲಿ ಮಹಾಭಾರತದ ವೀರಕಲಿಗಳಾದ ಕರ್ಣ ಮತ್ತು ಅರ್ಜುನ ಮುಖಾಮುಖಿಯಾಗುತ್ತಾರೆ. ಸತ್ಯ ವಿಚಾರ ಎಂದರೆ, ಇಬ್ಬರೂ ಕುಂತಿಯ ಮಕ್ಕಳಾದರೂ ಕೂಡಾ, ಮದುವೆಯಾಗುವ ಮುನ್ನವೇ ಸೂರ್ಯಮಂತ್ರದಿಂದ ಪಡೆದ ಮಗ ಕರ್ಣ ಎನ್ನುವ ಕಾರಣಕ್ಕೆ ಆತನನ್ನು ಗಂಗೆಯಲ್ಲಿ ತೇಲಿಬಿಟ್ಟ ಕಾರಣ, ಆತ ಬೆಸ್ತನೊಬ್ಬನಿಂದ ರಕ್ಷಿಸಲ್ಪಟ್ಟು ಸೂತಪುತ್ರನೆಂಬ ಹೆಸರಿನಿಂದಲೇ ಬೆಳೆಯುತ್ತಾನೆ.
ಕೌರವರ ಪಾಳಯದಲ್ಲಿದ್ದು, ಸಹೋದರರಾದರೂ ಕೂಡ ಪಾಂಡವರ ವೈರಿಯಂತೆಯೇ ಬೆಳೆಯುವ ಕರ್ಣ ಎದುರಾದಾಗ, ಅರ್ಜುನನಿಗೋ ಕೋಪ ಉಕ್ಕಿ ಹರಿಯುತ್ತದೆ. ಕಾರಣ, ಆತನ ಮಗನಾದ ಅಭಿಮನ್ಯುವನ್ನು ಮೋಸದಿಂದ ಕೊಂದವರಲ್ಲಿ ಕರ್ಣನೂ ಒಬ್ಬ. ಆತನನ್ನು ಕೊಂದೇ ತೀರುತ್ತೇನೆ ಎಂದು ಶಪಥಗೈದ ಪಾರ್ಥನಿಗೆ ಸಾರಥಿಯಾಗಿದ್ದಿದ್ದು ಭಗವಾನ್ ಶ್ರೀ ಕೃಷ್ಣ. ಈ ಉಭಯರ ಯೋಜನೆ, ಯೋಚನೆಗಳೆರಡೂ ಕೂಡ ಕೌರವರಪಾಳಯಕ್ಕೆ ಸೋಲುಣಿಸುವುದೇ ಆಗಿತ್ತು.

ಇನ್ನು ಯುದ್ಧ ಆರಂಭವಾದ ನಂತರ, ಪಾರ್ಥನಿಗಿಂತಲೂ ಬಿಲ್ವಿದ್ಯೆಯಲ್ಲಿ ಹೆಚ್ಚು ಬಲಾಢ್ಯನಾಗಿದ್ದ ಕರ್ಣನೆದುರು, ಸಹಜವಾಗಿ ಪಾರ್ಥ ಮಂಕಾಗಲೇಬೇಕಾಯಿತು ಆದರೆ, ಶ್ರೀ ಕೃಷ್ಣನ ಸಹಾಯದಿಂದ ಪಾರ್ಥ ಕರ್ಣನ ರಥವನ್ನು ತನ್ನ ಬಾಣದ ಮೂಲಕ ಅದೆಷ್ಟೋ ಯೋಜನಗಳ ದೂರಕ್ಕೆ ಎಸೆದನು. ಆಗ ಶ್ರೀ ಕೃಷ್ಣನು ಅದೇನು ಮಾತನಾಡದೇ ನಗುಮುಖದಿಂದಲೇ ಕುಳಿತಿದ್ದನು. ಆದರೆ, ದೂರಕ್ಕೆಸೆಯಲ್ಪಟ್ಟ ತನ್ನ ರಥವನ್ನು ಮತ್ತೆ ಸರಿಪಡಿಸಿಕೊಂಡು, ಅತೀವ ಕೋಪದಿಂದ ಮೇಲೇರಿ ಬಂದ ಕರ್ಣ, ಅರ್ಜುನನ ರಥಕ್ಕೆ ತನ್ನ ಬಾಣವನ್ನು ಗುರಿಯಾಗಿಸಿಬಿಟ್ಟನು. ಆ ಬಾಣವು ಕೇವಲ ಒಂದು ಅಂಗುಲ ಅಂದರೆ ಒಂದು ಕೈಬೆರಳ ತುದಿಯಷ್ಟು ದೂರ ಅರ್ಜುನನ ರಥವನ್ನು ಹಿಂದಕ್ಕೆ ಸರಿಸಿತು. ಕೂಡಲೇ ರಥದಿಂದ ಕೆಳಕ್ಕೆ ಜಿಗಿದ ಶ್ರೀ ಕೃಷ್ಣ ಭಲೇ ಕರ್ಣ ಎಂದು ಆತನನ್ನು ಮನಸಾರೆ ಹೊಗಳಿದನು. ಕೃಷ್ಣನ ಈ ನಡೆಯಿಂದ ಭಯಂಕರ ಕೋಪಗೊಂಡ ಅರ್ಜುನ, ಕೃಷ್ನನನ್ನು ಹಾಗೂ ಕರ್ಣನನ್ನು ನಿಂದಿಸತೊಡಗಿದನು. ಆಗ ಶ್ರೀ ಕೃಷ್ಣ, ಅರ್ಜುನನಿಗೆ ಕರ್ಣನ ಸಾಮರ್ಥ್ಯದ ಕುರಿತು ಹೇಳುವ ಮಾತು ಬಹಳ ಸ್ವಾರಸ್ಯಕರವಾಗಿದೆ.

Do you know how powerful Karna of Mahabharata is? Read this rare mythological story

ಕೃಷ್ಣ ಹೇಳುತ್ತಾನೆ. ಹೇ ಅರ್ಜುನಾ, ನೀನು ಕರ್ಣನ ರಥವನ್ನು ನೂರಾರು ಯೋಜನಗಳಷ್ಟು ದೂರಕ್ಕೆ ಚಿಮ್ಮಿಸಿದೆ ನಿಜ. ನೀನೂ ಪರಾಕ್ರಮಿಯೇ ನಿಜ, ಆದರೆ, ಕರ್ಣನನ್ನು ನಾನು ಹೊಗಳುವಲ್ಲಿಯೂ ಕಾರಣವಿದೆ. ಇದೋ ನೋಡು. ಕರ್ಣನದ್ದು ಕೇವಲ ಮರದಿಂದ ಮಾಡಲ್ಪಟ್ಟ, ನಾಲ್ಕು ಸಾಮಾನ್ಯ ಕುದುರೆಗಳಿಂದ ಕಟ್ಟಲ್ಪಟ್ಟ, ಶಲ್ಯನೆಂಬ ಸಾರಥಿ ಹಾಗೂ ಸ್ಬಯಂ ಕರ್ಣನ ತೂಕವನ್ನ ಹೊಂದಿದ ರಥ. ಆತನ ಆ ರಥವನ್ನು ಯೋಜನಗಳಷ್ಟು ದೂರಕ್ಕೆ ಚಿಮ್ಮಿಸಲು ನೀನು ಬಳಸಿದ್ದು ದೇವದತ್ತವಾದಂತಹ ಬಿಲ್ಲು ಹಾಗೂ ಬಾಣ. ಅದರ ಮಹಿಮೆಯನ್ನೂ ನೋಡು.

ಇಷ್ಟೇ ಅಲ್ಲ. ನಿನ್ನದೇ ಸಾಧನೆ ಎಂದುಕೊಳ್ಳೋಣ. ಆದರೆ, ಅವನ ಸಾಧನೆಯನ್ನೊಮ್ಮೆ ನೋಡು. ನಿನ್ನ ರಥವೋ, ಅದು ಮರದ ರಥವಲ್ಲ. ಅದು ಅಗ್ನಿದತ್ತವಾದ, ನಿನ್ನ ತಂದೆ ದೇವೇಂದ್ರನಿಂದ ನಿನಗೆ ನೀಡಲ್ಪಟ್ಟ ಬಹುಲೋಹಖಚಿತವಾದ ಮಹಾರಥ. ಅದು ಬಿಡು, ನಿನ್ನರಥದ ಅಶ್ವಗಳು ನೋಡು, ಸ್ವಯಂ ರೇವಂತನಿಂದಲೇ ಬೋಧಿಸಲ್ಪಟ್ಟ, ದಿವ್ಯಾಶ್ವಗಳು. ನಿನ್ನ ಬಿಲ್ಲು ಬಾಣಗಳನ್ನು ನೋಡು, ಸ್ವಯಂ ಶಂಭುವೇ ನಿನಗೆ ನೀಡಿದ ಪಾಶುಪತಾಸ್ತ್ರ ಅದು. ಅದರ ತೂಕವೆಷ್ಟಿರಬೇಡ? ನಿನ್ನ ಬತ್ತಳಿಕೆಯ ಬಾಣಗಳು ಸಾಮಾನ್ಯವೇ? ಎಲ್ಲವೂ ದೇವದತ್ತವಾದ, ತಪಃದತ್ತವಾದವುಗಳು. ಅದಲ್ಲದೇ ನೀನು ಗಾಂಢೀವಿ. ಅವುಗಳ ಭಾರ ಅದೆಷ್ಟಿರಬೇಡ. ಅದು ಬಿಡು. ನೀನು ಹನುಮಕೇತನ. ಕರ್ಣನ ರಥದಲ್ಲೋ ಕೇವಲ ಬಾವುಟವಿರುವುದು. ನಿನ್ನ ರಥದಲ್ಲಿ ಹಾಗೋ? ಉಹುಂ. ಸ್ವಯಂ ಹನುಮನೇ ನಿನ್ನ ರಥದ ಬಾವುಟದಲ್ಲಿ ಕುಳಿರುವನು. ಯುಗಯುಗಾಂತರಿ ಹನುಮನ ಭಾರ ಅದೆಷ್ಟಿರಬೇಡ? ಅದೆಲ್ಲ ಬಿಡು. ನಿನ್ನ ರಥದಲ್ಲಿ ಸಾರಥಿಯಾಗಿರುವವನು ನಾನು. ನಾನ್ಯಾರು ಹೇಳು? ನಿನಗೇ ತೋರಿದಂತೆ ನಾನು ಭಗವಂತ. ಸಮಸ್ತ ಹದಿನಾಲ್ಕು ಲೋಕಗಳೂ ನನ್ನ ಉದರದಲ್ಲಿಯೇ ಇವೆ. ನನ್ನ ಭಾರವದೆಷ್ಟಿರಬೇಡ ಹೇಳು? ಇಷ್ಟೇ ಅಲ್ಲ. ನನ್ನ ಕೈಯಲ್ಲಿರುವುದೇನು? ಚಮ್ಮಟಿಕೆ. ಸುದರ್ಶನವಿಲ್ಲದಿರುವ ಸಮಯದಲ್ಲಿ ಚಮ್ಮಟಿಕೆಯೇ ನನ್ನ ಆಯುಧ. ಸುದರ್ಶನನಿಗೆ ಸರಿಸಮನಾದ ಆ ಚಮ್ಮಟಿಕೆಯ ತೂಕವೆಷ್ಟಿರಬೇಡ. ಅದೆಲ್ಲ ಇರಲಿ. ನನ್ನ ಶಂಖ ಪಾಂಚಜನ್ಯ, ನಿನ್ನ ಶಂಖ ದೇವದತ್ತ. ಸಾಮಾನ್ಯರಿಗೆ ಅಲುಗಾಡಿಸಲೂ ಆಗದ ನಮ್ಮ ಶಂಖಗಳ ತೂಕವೆಷ್ಟಿರಬೇಡ? ಇಷ್ಟೆಲ್ಲಾ ಮಹಿಮೆ, ಇಷ್ಟೆಲ್ಲಾ ಜಗತ್ತಿನ ಭಾರಗಳನ್ನೇ ಹೊತ್ತ ನಿನ್ನ ಈ ದಿವ್ಯರಥವನ್ನು ಅಲುಗಾಡಿಸಲೂ ಕೂಡ ಯಾರಿಂದಲೂ ಸಾಧ್ಯವಿಲ್ಲ. ಅಂತಹದರಲ್ಲಿ, ಒಂದು ಅಂಗುಲದಷ್ಟು ಇಂತಹ ದಿವ್ಯರಥವನ್ನು ಹಿಂದಕ್ಕೆ ಸರಿಸಿದ ಕರ್ಣನ ಈ ಸಾಮರ್ಥ್ಯವನ್ನು ನೋಡಿ ನಾನು ಹೇಗೆ ಮೆಚ್ಚದೇ ಉಳಿಯಲಿ ಎಂದಾಗ, ಅರ್ಜುನನ ಅಹಂಕಾರವೆಲ್ಲವೂ ಇಳಿದು ಕೃಷ್ಣನೆದುರು ತಲೆತಗ್ಗಿಸಿದನು.

ಕುಗ್ಗಿದ ಆತನನ್ನು ಮತ್ತೆ ಚೇತರಿಸಿ, ಹುರಿದುಂಬಿಸಿ, ಯುದ್ಧಕ್ಕೆ ಮತ್ತೆ ಸನ್ನದ್ಧನನ್ನಾಗಿಸಿದ ಕೃಷ್ಣ, ಸುಲಭವಾಗಿ ಕರ್ಣನನ್ನು ಕೊಲ್ಲುವುದು ಕಷ್ಟ ಎನ್ನುವುದನ್ನು ಅರಿತು, ಬ್ರಾಹ್ಮಣ ವೇಷವನ್ನು ಧರಿಸಿ, ಆತನ ಕರ್ಣಕವಚಗಳನ್ನು ದಾನವಾಗಿ ಪಡೆದು, ಆತನಿಗೆ ದಾನ ಶೂರ ಕರ್ಣ ಎನ್ನುವ ಬಿರುದನ್ನು ನೀಡಿ, ಮರಳಿ ರಥದಲ್ಲಿ ಕುಳಿತು ಸಮಯ ಸಾಧಿಸಿ, ಕರ್ಣನ ರಥದ ಗಾಲಿ ಹುದುಗಿದ್ದಾಗಲೇ ಆತನ ಮೇಲೆ ಅರ್ಜುನನಿಂದ ಬಾಣದ ಮಳೆಗರೆಸಿ, ಕೊಲ್ಲಿಸುತ್ತಾನೆ.

ಯಾವ ವೀರರಿಂದಲೂ ಸೋಲಿಸಲಾಗದ ಕರ್ಣ, ತನ್ನ ಅತ್ಯಂತ ಕೊನೆಯ ಸಂದರ್ಭದಲ್ಲಿಯೂ ದಾನಶೂರ ಕರ್ಣನಾಗಿ ಭಗವಾನ್ ಶ್ರೀ ಕೃಷ್ಣನಿಂದಲೇ ಮೆಚ್ಚುಗೆ ಪಡೆದು, ವೀರಮರಣವನ್ನಪ್ಪುವ ಈ ಕಥಾನಕ, ವಿರೋಧಿ ಪಾಳಯದಲ್ಲಿದ್ದರೂ ಕರ್ಣನಲ್ಲಿದ್ದ ಅತ್ಯುತ್ತಮ ಗುಣಗಳನ್ನು ಹಾಗೂ ಅನೂಹ್ಯ ಶಕ್ತಿ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ.

ಇಂತಹ ಅದ್ಭುತ ಹಿಂದೂ ಪುರಾಣ ಕಥೆಗಳು, ನಮ್ಮ ಜೀವನಕ್ಕೂ ಸ್ಫೂರ್ತಿಯಾಗಬಲ್ಲದು. ಇನ್ನೂ ಅನೇಕ ಅಪರೂಪದ ಪುರಾಣ ಕಥೆಗಳನ್ನು ಮುಂದಿನ ದಿನಗಳಲ್ಲಿ ನಿಮಗಾಗಿ ನೀಡುತ್ತೇವೆ. ಓದಿ, ಪ್ರೋತ್ಸಾಹಿಸಿ.

You might also like
Leave A Reply

Your email address will not be published.