ದಾಖಲೆಯ ಆರು ಮಕ್ಕಳಿಗೆ ತಾಯಾದ ಗಾಮಿನಿ – ಯಾರೀ ಮಹಾತಾಯಿ?

ಒಂದು ಮಗುವನ್ನು ಹೆರುವುದಕ್ಕೇ ತಾಯಿಗಾಗುವ ವೇದನೆ ವರ್ಣಿಸಲು ಅಸಾಧ್ಯ. ಆದರೂ ಕೂಡ ತಾಯಿ ತನ್ನ ಮಗುವಿನ ಮುಖವನ್ನು ನೋಡಿ ಆ ನೋವನ್ನೆಲ್ಲಾ ಮರೆಯುತ್ತಾಳೆ. ಆದರೆ, ಒಂದೇ ಬಾರಿಗೆ 6 ಮಕ್ಕಳನ್ನು ಹೆತ್ತರೆ ಹೇಗೆ? ಹೆತ್ತಿದ್ದಷ್ಟೇ ಅಲ್ಲ. ಆಕೆಯ ಈ ಹೆರಿಗೆ, ಇಡೀ ದೇಶಕ್ಕೆ ದೇಶವೇ ಖುಷಿಪಡುವಂತಾಗಿದೆ. ಅಷ್ಟಕ್ಕೂ ಯಾರೀಕೆ ಆರು ಮಕ್ಕಳನ್ನು ಹೆತ್ತ ತಾಯಿ? ಇಲ್ಲಿದೆ ನೋಡಿ ವಿವರ.

ಈ ಆರು ಮಕ್ಕಳನ್ನು ಹೆತ್ತವಳು ಬೇರೆ ಯಾರೂ ಅಲ್ಲ. ಆಫ್ರಿಕಾದಿಂದ ಭಾರತಕ್ಕೆ ತರಲಾದ ಚಿರತೆ ಗಾಮಿನಿ. ಬರೋಬ್ಬರಿ ಆರು ಮರಿಗಳಿಗೆ ತಾಯಿಯಾದ ಈ ಗಾಮಿನಿ, ತನ್ನ ಮೊದಲ ಹೆರಿಗೆಯಲ್ಲೇ ದಾಖಲೆಯನ್ನು ನಿರ್ಮಿಸಿದ್ದಾಳೆ.

ಕುನೋ ನ್ಯಾಷನಲ್ ಪಾರ್ಕ್ ನಲ್ಲಿ ಸಾಕಲಾಗುತ್ತಿರುವ ಈ ಗಾಮಿನಿ, ದಕ್ಷಿಣಾ ಆಫ್ರಿಕಾದಿಂದ ತರಲಾಗಿದ್ದು, ದ.ಆಫ್ರಿಕಾದಿಂದ ತರಲಾದ ಚಿರತೆಗಳಲ್ಲೇ ಮೊದಲ ಬಾರಿಗೆ ಮರಿ ಹಾಕಿದ ಚಿರತೆ ಎನ್ನುವ ಕೀರ್ತಿಗೆ ಪಾತ್ರಳಾಗಿದ್ದಾಳೆ. ಕುನೋ ನ್ಯಾಷನಲ್ ಪಾರ್ಕ್ ನಲ್ಲಿ ಆರು ಮರಿಗಳನ್ನು ಈಕೆ ಹೆತ್ತಿರುವುದು ದಾಖಲೆಯಾಗಿದೆ. ಯಾಕೆಂದರೆ, ಚಿರತೆಗಳ ಸರಿಸುಮಾರು ಹೆರಿಗೆಯ ಪ್ರಮಾಣವೇ ನಾಲ್ಕರಿಂದ ಐದು ಮರಿಗಳಷ್ಟೇ ಇರುತ್ತವೆ. ಆದರೆ, ಗಾಮಿನಿ ಆ ಸರಾಸರಿಯನ್ನೇ ಮೀರಿದ್ದು, ಆರು ಮರಿಗಳನ್ನು ಹೆತ್ತು, ಭಾರತದಲ್ಲೇ ಹುಟ್ಟಿದ ಕುನೋ ಚಿರತೆಗಳ ಸಂಖ್ಯೆಯನ್ನು 14 ಕ್ಕೇರಿಸಿದ್ದಾಳೆ.

ದೇಶದಲ್ಲಿ 70 ವರ್ಷಗಳ ಹಿಂದೆಯೇ ನಿರ್ನಾಮಗೊಂಡಿರುವ ಪ್ರಾಣಿ ತಳಿ ಎಂದು ಘೋಷಿಸಲಾದ ಭಾರತೀಯ ಚೀತಾ ಚಿರತೆಗಳ ಪಟ್ಟಿಗೆ, ಈ ಹಿಂದೆ ನರೇಂದ್ರ ಮೋದಿ ಸರ್ಕಾರ ನಮೀಬಿಯಾದಿಂದ ಚಿರತೆಗಳನ್ನು ತಂದು, ಅವುಗಳ ಸಂತತಿಯನ್ನು ಮರುಸೃಷ್ಟಿಸುವ ಪ್ರಯತ್ನ ನಡೆಸಿತ್ತು. ಅದಕ್ಕೆ ಪೂರಕವಾಗಿ, ನಮೀಬಿಯಾದಿಂದ ತರಲಾದ ಚಿರತೆಗಳಾದ ಜ್ವಾಲಾ ಹಾಗೂ ಆಶಾ ಕ್ರಮವಾಗಿ ನಾಲ್ಕು ಮತ್ತು ಮೂರು ಮರಿಗಳಿಗೆ ಜನ್ಮ ನೀಡಿದ್ದರು. ಆದರೆ, 2023 ರಿಂದ ಈವರೆಗೆ ಕುನೋ ನ್ಯಾಷನಲ್ ಪಾರ್ಕೊಂದರಲ್ಲೇ, 7 ವಯಸ್ಕ ಚಿರತೆಗಳು ಹಾಗೂ 3 ಮರಿ ಚಿರತೆಗಳು ಮರಣ ಹೊಂದಿದ್ದು, ಭಾರತೀಯ ತಳಿಯ ಚಿರತೆಗಳನ್ನು ಉಳಿಸುವುದೇ ಸರ್ಕಾರಕ್ಕೆ ಸವಾಲಾಗಿದೆ.

ಈ ನಡುವೆ, ಗಾಮಿನಿಯು 6 ಮರಿಗಳನ್ನು ಹೆತ್ತಿರುವ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಸಂತಸ ಹಂಚಿಕೊಂಡ ಕೇಂದ್ರ ಸಚಿವರಾದ ಭೂಪೇಂದ್ರ ಯಾದವ್, “ಗಾಮಿನಿಯ ಪರಂಪರೆ ಇನ್ನೂ ಮುಂದಕ್ಕೆ ಸಾಗಲಿದೆ. ಈ ಸಂತೋಷಕ್ಕೆ ಪಾರವೇ ಇಲ್ಲ. ಈ ಬಾರಿ ಐದು ಮರಿಗಳಲ್ಲ. ಬದಲಾಗಿ, ದಾಖಲೆಯ 6 ಮರಿಗಳನ್ನು ಚೊಚ್ಚಲ ಹೆರಿಗೆಯಲ್ಲೇ ಗಾಮಿನಿ ಹೆತ್ತಿದ್ದಾಳೆ” ಎಂದು ಅವುಗಳ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.

ಏನೇ ಇರಲಿ, 70 ವರ್ಷಗಳ ಹಿಂದೆಯೇ ಅಳಿದುಹೋಗಿವೆ ಎನ್ನಲಾದ ಭಾರತೀಯ ಚಿರತೆಗಳ ಸಂತತಿಯನ್ನು ಮರುಸೃಷ್ಟಿಸುವಲ್ಲಿ ಹಾಗೂ ಉಳಿಸುವಲ್ಲಿ, ಪ್ರಧಾನಿ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ ಪ್ರಯತ್ನವನ್ನು ಪಕ್ಷಾತೀತವಾಗಿ ಮೆಚ್ಚಲೇಬೇಕಿದೆ.

You might also like
Leave A Reply

Your email address will not be published.