ಮತ್ತೆ ಹುಟ್ಟಿ ಬನ್ನಿ ಹಾರ್ದಿಕ್ ಪಾಂಡ್ಯಾ – ಏನಿದು ಟ್ವಿಟ್ಟರ್ ಟ್ರೆಂಡಿಂಗ್

ಇನ್ನೇನು ಮೂರೇ ದಿನಗಳಲ್ಲಿ ಐಪಿಎಲ್ ಆರಂಭವಾಗಲಿದೆ. ಈ ಬಾರಿಯ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಲಿದ್ದು, ಮೊದಲ ಪಂದ್ಯ ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ಮಾರ್ಚ್.22 ರಂದು ನಡೆಯಲಿದೆ. ಈ ನಡುವೆ ಈಗಾಗಲೇ, ಕ್ಯಾಪ್ಟನ್ಸಿ ವಿಚಾರದಲ್ಲಿ ಹಲವಾರು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿರುವ ಮುಂಬೈ ಇಂಡಿಯನ್ಸ್ ತಂಡದ ನೂತನ ನಾಯಕರಾಗಿರುವ ಹಾರ್ದಿಕ್ ಪಾಂಡ್ಯ ಅವರಿಗೆ ‘ಮತ್ತೆ ಹುಟ್ಟಿ ಬನ್ನಿ ಹಾರ್ದಿಕ್ ಪಾಂಡ್ಯ’ ಎನ್ನುವ ಟ್ವಿಟರ್ ಟ್ರೆಂಡಿಂಗ್ ಮೂಲಕ‌ ರೋಹಿತ್ ಅಭಿಮಾನಿಗಳು ಮುಖಭಂಗ ನೀಡುತ್ತಿದ್ದಾರೆ. ಅಷ್ಟಕ್ಕೂ ಹಾರ್ದಿಕ್ ಪಾಂಡ್ಯ ವಿರುದ್ದದ ಕೋಪಕ್ಕೆ ಕಾರಣ ಏನು? ಇಲ್ಲಿದೆ ವಿವರ.

ಈಗಾಗಲೇ ಹದಿನಾರು ಸೀಸನ್’ಗಳನ್ನು ಯಶಸ್ವಿಯಾಗಿ ಪೂರೈಸಿರುವ ಐಪಿಎಲ್, ಈ ಬಾರಿ ಟಾಟಾ ಐಪಿಲ್ – 2024 ಹಣೆಪಟ್ಟಿಯೊಂದಿಗೆ, ಹೊಸ ಬಿಡ್ಡಿಂಗ್ ಮೂಲಕ ಹೊಸತೆನಿಸುವ ತಂಡಗಳೊಂದಿಗೆ ನಡೆಯಲಿದೆ. ಆದರೆ, ವಿವಿಧ ತಂಡಗಳ ಕ್ಯಾಪ್ಟನ್ಸಿ ವಿಚಾರದಲ್ಲಿ ಬಹಳ ಚರ್ಚೆಗಳಾಗಿದ್ದು, ಈ ನಡುವೆ ಬಹಳಷ್ಟು ವಿವಾದಕ್ಕೀಡಾಗಿದ್ದು, ಮುಂಬೈ ಮತ್ತು ಗುಜರಾತ್ ತಂಡಗಳ ನಡುವೆ ಕ್ಯಾಪ್ಟನ್ಸಿ ಟ್ರೇಡ್.

ಮುಂಬೈ ತಂಡ ಈಗಾಗಲೇ ರೋಹಿತ್ ಶರ್ಮಾ ಅವರ ನಾಯಕತ್ವದಲ್ಲೇ ಬರೋಬ್ಬರಿ ಐದು ಬಾರಿ ಐಪಿಎಲ್ ಕಪ್ ಎತ್ತಿಹಿಡಿದಿದೆ. 2013, 2015, 2017, 2019 ಹಾಗೂ 2020 ರಲ್ಲಿ ಯಶಸ್ವಿಯಾಗಿ ಕಪ್ ಗೆದ್ದ ಮುಂಬೈ ತಂಡವನ್ನು ಸಮರ್ಥವಾಗಿ ಮುನ್ನಡೆಸಿದ ರೋಹಿತ್ ಶರ್ಮಾ, ಭಾರತ ತಂಡದ ನಾಯಕರಾಗಿಯೂ ಹೆಸರಾದವರು. ಕಳೆದ ಬಾರಿಯ 2023 ರ ಕ್ರಿಕೆಟ್ ವಿಶ್ವಕಪ್ ನಲ್ಲಿ ಫೈನಲ್ ತನಕ ಭಾರತ ತಂಡವನ್ನು ಕೊಂಡೊಯ್ದ ನಾಯಕರಾದ ರೋಹಿತ್ ಶರ್ಮಾ ಅವರಿಗೆ ಮುಂಬೈ ತಂಡ, ಯಾವುದೇ ಪೂರ್ವಾಪರಗಳಿಲ್ಲದೇ, ನಾಯಕತ್ವದಿಂದ ಹಠಾತ್ ಕೊಕ್ ನೀಡಿ, ಗುಜರಾತ್ ತಂಡವನ್ನು ಚಾಂಪಿಯನ್ ಆಗಿ ಗೆಲ್ಲಿಸಿದ್ದ ಹಾಗೂ ಹಳೆಯ ಮುಂಬೈ ತಂಡದ ಆಟಗಾರನಾಗಿದ್ದ ಹಾರ್ದಿಕ್ ಪಾಂಡ್ಯ ಅವರನ್ನು ಬಹುಕೋಟಿ ಟ್ರೇಡ್ ಮೂಲಕ ಗುಜರಾತ್ ತಂಡದಿಂದಲೇ ನೇರವಾಗಿ ಖರೀದಿಸಿ, ಅವರಿಗೆ ನೇರವಾಗಿ ನಾಯಕತ್ವ ನೀಡಿದೆ.

ನೀತಾ ಅಂಬಾನಿ ಒಡೆತನದ ಮುಂಬೈ ತಂಡದ ಈ ನಿರ್ಧಾರ, ಕೇವಲ ರೋಹಿತ್ ಅಭಿಮಾನಿಗಳಷ್ಟೇ ಅಲ್ಲದೇ, ಎಲ್ಲಾ ಐಪಿಎಲ್ ಅಭಿಮಾನಿಗಳಿಗಲ್ಲಿ ಬಹಳಷ್ಟು ಬೇಸರ ಮೂಡಿಸಿದ್ದು, ಐದು ಬಾರಿ ಕಪ್ ಗೆಲ್ಲಿಸಿಕೊಟ್ಟ ನಾಯಕನನ್ನು ನಡೆಸಿಕೊಳ್ಳಲು ಬಾರದ ತಂಡ ಹಾಗೂ ದುಡ್ಡಿಂದಲೇ ಎಲ್ಲವನ್ನೂ ಸಾಧಿಸುವ ತಂಡ ಎಂದು ಮುಂಬೈ ತಂಡವನ್ನು ಹೀಗಳೆದರೆ, ದುಡ್ಡಿಗಾಗಿ ತನಗೆ ಅನ್ನ ನೀಡಿದ ತಂಡವನ್ನು ತೊರೆದ ದುಡ್ಡುಬಾಕ ಎಂದು ಹಾರ್ದಿಕ್ ಪಾಂಡ್ಯರನ್ನು ಹಿಗ್ಗಾಮುಗ್ಗಾ ಬೈಯುತ್ತಿದ್ದಾರೆ ಅಭಿಮಾನಿಗಳು.

ಮುಂಬೈ ತಂಡ ಈ ನಿರ್ಧಾರ ಕೈಗೊಂಡಾಗಿನಿಂದ ಪ್ರತಿದಿನವೂ ಟೀಕೆಗಳನ್ನೇ ಎದುರಿಸುತ್ತಿದ್ದು, ರೋಹಿತ್ ಅಭಿಮಾನಿಗಳಂತೂ ಟ್ವಿಟ್ಟರ್’ನಲ್ಲಿ ಹಾರ್ದಿಕ್ ಪಾಂಡ್ಯ ವಿರುದ್ಧ ಬೈಗುಳದ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ.

ಇದೀಗ, ಈ ಟೀಕೆ ವಿಪರೀತಕ್ಕೇರಿದ್ದು, ಎಕ್ಸ್‌ ಖಾತೆಯಲ್ಲಿ #RIPHARDIKPANDYA ಅನ್ನುವ ಹ್ಯಾಶ್ ಟ್ಯಾಗ್ ಬಳಸಿ, ಹಾರ್ದಿಕ್‌ ಪಾಂಡ್ಯ ವಿರುದ್ಧ ಟೀಕಾಪ್ರಹಾರ ನಡೆಸಲಾಗುತ್ತಿದೆ. ಹಾರ್ದಿಕ್ ಪಾಂಡ್ಯಾ ವಿವಾದಕ್ಕೀಡಾಗಿರುವುದು ಇದೇ ಮೊದಲೇನಲ್ಲ. ಈ ಮೊದಲು ಕೆ.ಎಲ್.ರಾಹುಲ್‌ ಜೊತೆಗೆ ಕಾಫೀ ವಿಥ್ ಕರಣ್ ಶೋನಲ್ಲಿ ಕಾಂಡೋಮ್ ಬಗ್ಗೆ ಹಾಗೂ ಹೆಣ್ಣುಮಕ್ಕಳ ಬಗ್ಗೆ ಮಾತಾಡಿದ್ದು ಬಹಳಷ್ಟು ಜನರ ಕೆಂಗಣ್ಣಿಗೆ ಗುರಿಯಾಗಿತ್ತು. ಅಷ್ಟೇ ಅಲ್ಲದೇ, ತನ್ನ ಕ್ಯಾಪ್ಟನ್ಸಿಯಲ್ಲಿ, ಆಟಗಾರರ ಮೇಲೆ ನಿಂದನೆ ಹಾಗೂ ಅಗೌರವದಿಂದ ನಡೆಸಿಕೊಂಡ ರೀತಿಗೆ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರು.

ಇನ್ನು ಮುಂಬೈ ತಂಡದ ಸ್ಫೋಟಕ ಬ್ಯಾಟ್ಸ್‌ಮನ್‌, ಟಿಟ್ವೆಂಟಿ ಕ್ರಿಕೆಟ್‌ನ ನಂ.1 ದಾಂಡಿಗ, ಸೂರ್ಯಕುಮಾರ್ ಯಾದವ್ ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ‘ಒಡೆದ ಹೃದಯ (Broken Heart)’ ಸಿಂಬಲ್‌ ನ್ನು ಹಂಚಿಕೊಂಡಿದ್ದು, ಇದು ಮುಂಬೈ ತಂಡದ ನಾಯಕತ್ವದ ವಿಚಾರವಾಗಿ ಇರಬಹುದೇ ಎನ್ನುವ ಊಹೆ ಹಲವರಲ್ಲಿ ಮೂಡಿದೆ. ಈ ಹಿಂದೆ ರೋಹಿತ್ ಶರ್ಮಾರನ್ನು ಕ್ಯಾಪ್ಟನ್ಸಿಯಿಂದ ಕೆಳಗಿಳಿಸಿದ್ದಾಗ, ಮುಂಬೈ ತಂಡದ ವೇಗಿ ಜಸ್ಪ್ರೀತ್ ಬೂಮ್ರ ಹಾಗೂ ಸೂರ್ಯಕುಮಾರ್ ಯಾದವ್ ತಮ್ಮ ಇನ್ಸ್ಟ್ರಾಗ್ರಾಮ್’ನಲ್ಲಿ ನೋವನ್ನು ಇಮೋಜಿ (Emoji) ಗಳ ಮೂಲಕ ಹಂಚಿಕೊಂಡಿದ್ದನ್ನು ಇಲ್ಲಿ‌ ಸ್ಮರಿಸಬಹುದು.

ಏನೇ ಇರಲಿ, ಕ್ರಿಕೆಟ್ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾದ ಹಾರ್ದಿಕ್ ಪಾಂಡ್ಯ, ಈ ಬಾರಿ ಮುಂಬೈ ಸಾರಥ್ಯ ವಹಿಸಿದ್ದು, ತಂಡ ಯಾವ ರೀತಿ ಪರ್ಫಾರ್ಮ್ ಮಾಡಲಿದೆ ಎನ್ನುವುದನ್ನು ಕಾದು ನೋಡಬೇಕಿದೆ. ಜೊತೆಗೆ, ಹಾರ್ದಿಕ್ ಪಾಂಡ್ಯರಿಂದ ತೆರವಾದ ಗುಜರಾತ್ ಜೈಂಟ್ಸ್ ನಾಯಕತ್ವದ ಸ್ಥಾನಕ್ಕೆ ಶುಭ್ಮನ್ ಗಿಲ್ ಅವರನ್ನು ನಾಯಕರಾಗಿ ನೇಮಿಸಿದ್ದು, ಕನಿಷ್ಠ ದೇಶೀಯ ಟೂರ್ನಿಗಳಲ್ಲೂ ನಾಯಕತ್ವದ ಜವಾಬ್ದಾರಿ ನಿರ್ವಹಿಸಿದ ಅನುಭವ ಇಲ್ಲದ, ಪ್ರಥಮ ಬಾರಿಗೆ ದೊಡ್ಡ ಹಂತದಲ್ಲಿಯೇ ನಾಯಕತ್ವ ವಹಿಸಿಕೊಂಡಿರುವ ಗಿಲ್ ಹೇಗೆ ನಾಯಕತ್ವ ನಿರ್ವಹಿಸಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.

You might also like
Leave A Reply

Your email address will not be published.