ಈ ಸಲ ಕಪ್‌ ನಮ್ದು – ನಾರಿಮಣಿಯರ ವಿಜಯಯಾತ್ರೆಯ ದಾಖಲೆಗಳಿವು

ಹದಿನಾರು ವರ್ಷಗಳ ಸುದೀರ್ಘ ಕಾಲದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟ್ರೋಫಿ ಗೆಲ್ಲುವುದನ್ನು ನೋಡಲು ಬಯಸಿದ್ದ ಆರ್.ಸಿ.ಬಿ ಅಭಿಮಾನಿಗಳ ಆಸೆಯನ್ನು ಕೊನೆಗೂ ನಮ್ಮ ನಾರಿಮಣಿಗಳ ತಂಡ ಈಡೇರಿಸಿದೆ.

ಹೌದು! ಪುರುಷರ ಐಪಿಎಲ್ ನಲ್ಲಿ ಆರ್.ಸಿ.ಬಿ ತಂಡ 3 ಬಾರಿ ಫೈನಲ್ ಪ್ರವೇಶಿಸಿದರು ಪ್ರಶಸ್ತಿಯನ್ನು ಗೆಲ್ಲುವಲ್ಲಿ ವಿಫಲವಾಗಿತ್ತು. ನಿನ್ನೆ (ಭಾನುವಾರ) ನಡೆದ ಮಹಿಳಾ ಪ್ರೀಮಿಯರ್ ಲೀಗ್ ನ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 8 ವಿಕೆಟ್ ಗಳ ಗೆಲುವು ಸಾಧಿಸಿದ ಆರ್.ಸಿ.ಬಿ ಆಟಗಾರ್ತಿಯರು ಟ್ರೋಫಿಯನ್ನು ಮುಡಿಗೇರಿಸಿಕೊಂಡು ಈ ಬಾರಿ ಕಪ್ ನಮ್ದೆ ಎಂದು ಧೂಳ್ ಎಬ್ಬಿಸುವ ಮೂಲಕ ಕರುನಾಡ ಜನತೆಗೆ ಹುಚ್ಚೆಬ್ಬಿಸಿದ್ದಾರೆ. ಇದೀಗ ಎಲ್ಲೆಲ್ಲೂ ಆರ್.ಸಿ.ಬಿ ಯದ್ದೇ ಹವಾ!

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 8 ವಿಕೆಟ್ ಗಳ ಗೆಲುವು ಸಾಧಿಸಿದ ಆರ್.ಸಿ.ಬಿ:

ಎರಡನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ನ ಗುಂಪು ಸುತ್ತಿನ ಅಂಕಪಟ್ಟಿಯಲ್ಲಿ ಮೂರನೇ ತಂಡವಾಗಿ ಪ್ಲೇ ಆಫ್ ಪ್ರವೇಶಿಸಿದ ಸ್ಮೃತಿ ಮಂದಾನ ಪಡೆ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 5 ರನ್ ಗಳ ಗೆಲುವು ಸಾಧಿಸಿ ಫೈನಲ್ ಗೆ ಲಗ್ಗೆ ಇಟ್ಟಿತ್ತು. ಟ್ರೋಫಿ ಸುತ್ತಿನಲ್ಲೂ ಸಂಘಟಿತ ಪ್ರದರ್ಶನ ತೋರಿದ ಆರ್ಸಿಬಿ ಆಟಗಾರ್ತಿಯರು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 8 ವಿಕೆಟ್ ಗಳ ಗೆಲುವು ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದರು.

ಮಾರ್ಚ್ 17( ಭಾನುವಾರ) ರಂದು ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಡಿಸಿ ಶೆಫಾಲಿ ವರ್ಮಾ (44 ರನ್) ಅವರ ಸ್ಫೋಟಕ ಆಟದಿಂದ ಪವರ್ ಪ್ಲೇನಲ್ಲೇ 61 ರನ್ ಗಳಿಸಿ ಬೃಹತ್ ಮೊತ್ತ ಗಳಿಸುವ ಸೂಚನೆ ನೀಡಿದರು. ಆದರೆ ಆರ್.ಸಿ.ಬಿಯ ಸ್ಪಿನ್ನರ್ ಗಳಾದ ಶ್ರೇಯಾಂಕಾ ಪಾಟೀಲ್ (4 ವಿಕೆಟ್), ಸೋಫಿ ಮೊಲಿನಕ್ಸ್ (3 ವಿಕೆಟ್) ಹಾಗೂ ಶೋಭನಾ ಆಶಾ (2 ವಿಕೆಟ್) ಅವರ ದಾಳಿ ಎದುರು ಮಂಕಾಗಿ 113 ರನ್ ಗಳಿಗೆ ಆಲ್ ಔಟ್ ಆಯಿತು.

ಸೋಫಿ ಡಿವೈನ್ (32 ರನ್), ಸ್ಮೃತಿ ಮಂದಾನ (31 ರನ್) ಹಾಗೂ ಎಲಿಸ್ ಪೆರಿ (35* ರನ್) ಅವರ ಆಟದ ನೆರವಿನಿಂದ ಆರ್.ಸಿ.ಬಿ 19.3 ಓವರ್ ಗಳಲ್ಲೇ 115 ರನ್ ಗಳಿಸಿ 8 ವಿಕೆಟ್ ಗಳ ಗೆಲುವು ಸಾಧಿಸಿ ಟ್ರೋಫಿ ಗೆದ್ದು ಸಂಭ್ರಮಿಸಿತು.

ಈ ಬಾರಿಯ ಪಂದ್ಯದಲ್ಲಿ ಮೂಡಿಬಂದ 3 ಪ್ರಮುಖ ದಾಖಲೆಗಳು ಯಾವುವು?

01. ಡಬ್ಲ್ಯುಪಿಎಲ್ ನಲ್ಲಿ ಆತಿ ಹೆಚ್ಚು ರನ್ ಗಳಿಸಿದ ಭಾರತದ ಆಟಗಾರ್ತಿ

ಆರ್‌ಸಿಬಿ ವಿರುದ್ಧದ ಫೈನಲ್ ಪಂದ್ಯದಲ್ಲಿ 3 ಭರ್ಜರಿ ಸಿಕ್ಸರ್ ಹಾಗೂ 2 ಮನಮೋಹಕ ಬೌಂಡರಿ ಸಹಿತ 44 ರನ್ ಸಿಡಿಸಿದ ಶಫಾಲಿ ವರ್ಮಾ, ಮಹಿಳಾ ಪ್ರೀಮಿಯರ್ ಲೀಗ್ ನಲ್ಲಿ ಒಟ್ಟಾರೆ 18 ಇನಿಂಗ್ಸ್ ನಲ್ಲಿ 168.47 ಸ್ಟ್ರೆಕ್ ರೇಟ್ ನಲ್ಲಿ 561 ರನ್ ಸಿಡಿಸಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರ್ತಿ ಎಂಬ ದಾಖಲೆ ನಿರ್ಮಿಸಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ 16 ಪಂದ್ಯಗಳಿಂದ 549 ರನ್ ಬಾರಿಸಿ ಎರಡನೇ ಸ್ಥಾನದಲ್ಲಿದ್ದಾರೆ.

02. ಐಪಿಎಲ್/ ಡಬ್ಲ್ಯುಪಿಎಲ್ ನಲ್ಲಿ ಪರ್ಪಲ್ ಕ್ಯಾಪ್ ಗೆದ್ದ ಅತ್ಯಂತ ಕಿರಿಯ ಆಟಗಾರ್ತಿ

ಫೈನಲ್ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ ಕನ್ನಡತಿ ಶ್ರೇಯಾಂಕಾ ಪಾಟೀಲ್ ಲೀಗ್ ಹಂತದಲ್ಲಿ ಗಾಯಗೊಂಡು ಎರಡು ಪಂದ್ಯಗಳಿಂದ ತಂಡದಿಂದ ಹೊರಗುಳಿದಿದ್ದರು. ಆದರೆ ಟೂರ್ನಿಯಲ್ಲಿ 13 ವಿಕೆಟ್ ಪಡೆದು ತನ್ನದೇ ತಂಡದ ಸೋಫಿ ಮೊಲಿನುಕ್ಸ್ (12 ವಿಕೆಟ್) ಹಾಗೂ ಆಶಾ ಶೋಭನಾ (12 ವಿಕೆಟ್) ರನ್ನು ಹಿಂದಿಕ್ಕಿ ಡಬ್ಲ್ಯುಪಿಎಲ್ ಹಾಗೂ ಐಪಿಎಲ್ ಇತಿಹಾಸದಲ್ಲಿ ಪರ್ಪಲ್ ಕ್ಯಾಪ್ ಗೆದ್ದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ದಾಖಲೆ ನಿರ್ಮಿಸಿದ್ದಾರೆ. 21 ವರ್ಷ‌ 231 ದಿನಗಳ ವಯಸ್ಸಿನ ಶ್ರೇಯಾಂಕಾ ಪಾಟೀಲ್ ಪರ್ಪಲ್ ಕ್ಯಾಪ್ ಜಯಿಸಿದ್ದಾರೆ. 2009ರಲ್ಲಿ 23 ವರ್ಷ 170 ದಿನದಲ್ಲಿ ಪರ್ಪಲ್ ಕ್ಯಾಪ್ ಗೆದ್ದಿದ್ದ ಆರ್ ಪಿ ಸಿಂಗ್ ಡೆಕ್ಕನ್ ಚಾರ್ಜರ್ಸ್ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

03. ಒಂದೇ ಸೀಸನ್ ನಲ್ಲಿ ಪರ್ಪಲ್, ಆರೆಂಜ್ ಕ್ಯಾಪ್ ಗೆದ್ದ ಮೊದಲ ತಂಡ

ಐಪಿಎಲ್ ಮತ್ತು ಡಬ್ಲ್ಯುಪಿಎಲ್ ಇತಿಹಾಸದಲ್ಲಿ ಒಂದೇ ತಂಡದ ಆಟಗಾರ್ತಿಯರು ಆರೆಂಜ್ ಹಾಗೂ ಪರ್ಪಲ್ ಕ್ಯಾಪ್ ಗೆದ್ದಿರುವುದು ಮೊದಲ ನಿದರ್ಶನವಾಗಿದೆ. ಚಾಂಪಿಯನ್ ಪಟ್ಟ ಅಲಂಕರಿಸಿದ ಆರ್ ಸಿಬಿಯ ಸ್ಟಾರ್ ಆಲ್ ರೌಂಡರ್ ಎಲೀಸ್ ಪೆರಿ 347 ರನ್ ಗಳಿಸಿ ಆರೆಂಜ್ ಕ್ಯಾಪ್ ಅನ್ನು ಮುಡಿಗೇರಿಸಿಕೊಂಡರೆ, 13 ವಿಕೆಟ್ ಪಡೆದ ಶ್ರೇಯಾಂಕಾ ಪಾಟೀಲ್ ಪರ್ಪಲ್ ಕ್ಯಾಪ್ ಜಯಿಸಿದ್ದಾರೆ. ಅಲ್ಲದೆ ಫೇರ್ ಪ್ಲೇ ಅವಾರ್ಡ್, ಎಮರ್ಜಿಂಗ್ ಪ್ರಶಸ್ತಿಯನ್ನು ಕೂಡ ಆರ್ ಸಿಬಿ ಆಟಗಾರ್ತಿಯರೇ ಜಯಿಸಿ ದಾಖಲೆ ನಿರ್ಮಿಸಿದ್ದಾರೆ.

ಆರ್ಸಿಬಿ ಅಭಿಮಾನಿಗಳ ಕನಸು ನನಸಾಯ್ತು:

ಪುರುಷರ ಐಪಿಎಲ್‌ʼನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 3 ಬಾರಿ ಫೈನಲ್ ಪ್ರವೇಶಿಸಿದರೂ ಪ್ರಶಸ್ತಿಯನ್ನು ಗೆಲ್ಲುವಲ್ಲಿ ವಿಫಲವಾಗಿತ್ತು. 2009ರಲ್ಲಿ ಡೆಕ್ಕನ್ ಚಾರ್ಜಸ್ ವಿರುದ್ಧ ಕೇವಲ 144 ರನ್ಗಳ ಗುರಿ ಬೆನ್ನಟ್ಟಲಾಗದೇ ಸೋಲು ಕಂಡರೆ, 2011ರಲ್ಲಿ ಸಿಎಸ್ಕೆ ವಿರುದ್ಧ ಸೋಲು ಕಂಡಿತ್ತು. ಆ ಪಂದ್ಯದಲ್ಲಿ ಸಿಎಸ್’ಕೆ ನೀಡಿದ್ದ 206 ರನ್ʼಗಳ ಬೃಹತ್ ಮೊತ್ತವನ್ನು ಬೆನ್ನಟ್ಟಲಾಗಿರಲಿಲ್ಲ. ಇನ್ನೂ 2016ರಲಲ್ಲಿ ಲೀಗ್ನಲ್ಲಿ ಅಮೋಘ ಪ್ರದರ್ಶನ ತೋರಿದರೂ ಸಹಾ ಫೈನಲ್ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಚೇಸಿಂಗ್ ಮಾಡಲಾಗದೇ ಸೋಲು ಕಂಡಿತ್ತು. ಆ ಪಂದ್ಯದಲ್ಲಿ 209 ರನ್ಗಳ ಬೃಹತ್ ಮೊತ್ತ ದಾಟಲಾಗದೇ ಸೋಲು ಕಂಡಿತ್ತು. ಆದರೆ ಇದೀಗ ಮಹಿಳಾ ಮಣಿಗಳ ಆಟದ ಗೆಲುವಿನಿಂದ ಆರ್.ಸಿ.ಬಿ ಅಭಿಮಾನಿಗಳಿಗೆ ಭರ್ಜರಿ ಗೆಲುವು ಸಿಕ್ಕಂತಾಗಿದೆ.

You might also like
Leave A Reply

Your email address will not be published.