ಸೋಮಾಲಿಯದ 35 ಜನ ಕಡಲ್ಗಳ್ಳರ ಬಂಧಿಸಿದ ಭಾರತೀಯ ನೌಕಾಪಡೆ

ಕೆಲ ದಿನಗಳ ಹಿಂದೆ ಭಾರತೀಯ ನೌಕಾಪಡೆಗೆ ಶರಣಾದ ಸೋಮಾಲಿಯಾದ 35 ಜನ‌ ಕಡಲ್ಗಳ್ಳರನ್ನು ಹೆಚ್ಚಿನ ವಿಚಾರಣೆಗಾಗಿ ಈಗ ಭಾರತಕ್ಕೆ ಕರೆತರಲಾಗುತ್ತಿದೆ. ಈ‌ 35 ಜನ ಕಡಲ್ಗಳ್ಳರು ಬೃಹತ್ತಾದ ಹಡಗು MV ರುಯೆನ್ ಅನ್ನು ಸುತ್ತಮುತ್ತಲಿನ ಪ್ರದೇಶಗಳ ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆಸಲು ಮದರ್‌ಶಿಪ್ ಆಗಿ ಬಳಸುವ ಉದ್ದೇಶದಿಂದ ಆಕ್ರಮಣ ನಡೆಸಿದ್ದರು ಎನ್ನಲಾಗಿದೆ.

ಈ ಕಡಲ್ಗಳ್ಳರ ವಿರುದ್ಧ ಅಂತರಾಷ್ಟ್ರೀಯ ಕಾನೂನು ಮತ್ತು ನಿಯಮಗಳ ಪ್ರಕಾರ ಕಾನೂನು ಕ್ರಮ ಜರುಗಿಸಲಾಗುವುದು.‌ ಸಾಮಾನ್ಯವಾಗಿ ಭಾರತೀಯ ನೌಕಾಪಡೆಯು ಕಡಲ್ಗಳ್ಳರನ್ನು ಬಂಧಿಸುವಾಗ ಅಥವಾ ನಿಶ್ಯಸ್ತ್ರಗೊಳಿಸುವಾಗ ಇತರ ಹಡಗುಗಳಿಗೆ ಇನ್ನು ಮುಂದೆ ತೊಂದರೆಯುಂಟು ಮಾಡುವುದಿಲ್ಲ ಎಂದು ಖಚಿತ ಪಡಿಸಿಕೊಂಡ ನಂತರ ಬಿಡುಗಡೆಗೊಳಿಸುವ ಅಭ್ಯಾಸ ಮಾಡಿಕೊಂಡಿದೆ. ‌ಇನ್ನು ಈ ಕಡಲ್ಗಳ್ಳರು INS ಕೊಲ್ಕತ್ತಾ ಹಡಗಿನಿಂದ ಉಡಾಯಿಸಲ್ಪಟ್ಟ ಡ್ರೋನ್ ಅನ್ನು ಹೊಡೆದುರುಳಿಸುವ ಸಾಹಸಕ್ಕೆ ಕೈ ಹಾಕಿದ್ದರು. ಅಷ್ಟೇ ಅಲ್ಲದೇ, ಹಡಗಿನ ಸ್ಟೀರಿಂಗ್ ಮತ್ತು ದಿಕ್ಸೂಚಿ ಸಿಸ್ಟಮ್‌ಅನ್ನು ನಿಷ್ಕ್ರಿಯಗೊಳಿಸಿದ್ದರು ಹಾಗೂ INS ಕೊಲ್ಕತ್ತಾ ಯುದ್ದ ನೌಕೆಯ ಮೇಲೆ ಗುಂಡು ಹಾರಿಸಿದ್ದರು ಭಾರತೀಯ ನೌಕಾಪಡೆಯ ವಿರುದ್ಧ ಆಕ್ರಮಣಕಾರಿ ಕೃತ್ಯದಲ್ಲಿ ತೊಡಗಿದ್ದರ ಪರಿಣಾಮವಾಗಿ ಅವರನ್ನು ಭಾರತಕ್ಕೆ ಕರೆತರಲಾಗುತ್ತಿದೆ ಎನ್ನಲಾಗಿದೆ‌.

Indian Navy arrests 35 pirates from Somalia

ಇನ್ನು ಡಿಸೆಂಬರ್ 14 ರಂದು ಸೋಮಾಲಿಯಾದಿಂದ ಕನಿಷ್ಠ 260 ನಾಟಿಕಲ್ ಮೈಲುಗಳಷ್ಟು ಪೂರ್ವಕ್ಕೆ MV ರುಯೆನ್ ಅನ್ನು ಕಡಲ್ಗಳ್ಳರು ಅಪಹರಿಸಿದ್ದರು.‌ ಭಾರತೀಯ ನೌಕಾಪಡೆಯ ಗಸ್ತು ನೌಕೆ INS ಸುಭದ್ರಾ, INS ಕೊಲ್ಕತ್ತಾ ಸೇರಿದಂತೆ ಇತರ ಕ್ಷಿಪಣಿಗಳ ಸಹಾಯದ ಮೂಲಕ ಸತತ 40 ಗಂಟೆಗಳ ಸುದೀರ್ಘ ಕಾರ್ಯಾಚರಣೆಯ ನಂತರ ಭಾರತೀಯ ನೌಕಾಪಡೆಯು ದರೋಡೆಕೋರರನ್ನು ಶರಣಾಗುವಂತೆ ಒತ್ತಾಯಿಸಿತ್ತು ಹಾಗೂ ಯಾವುದೇ ಹಾನಿಯಿಲ್ಲದೆ ಬಲ್ಗೇರಿಯಾ, ಅಂಗೋಲಾ ಮತ್ತು ಮಯನ್ಮಾರ್‌ನ 17 ಜನ ಸಿಬ್ಬಂದಿಗಳನ್ನು ಬಿಡುಗಡೆಗೊಳಿಸಿತ್ತು.

You might also like
Leave A Reply

Your email address will not be published.