ಬೆಳಗಾವಿ ಅಧಿವೇಶನದಲ್ಲಿ ಕರಾವಳಿಯ ಬಿಜೆಪಿ ಶಾಸಕರದ್ದೇ ಹವಾ – ಕಾಂಗ್ರೆಸ್ ಸರ್ಕಾರಕ್ಕೆ ತೀವ್ರ ಟೀಕೆ.

ಡಿಸೆಂಬರ್ 04 ರಿಂದ 15ರ ವರೆಗೆ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನವನ್ನು ತಮ್ಮ ನಾಯಕತ್ವ, ಮಾತಿನ ಶೈಲಿ, ಆಡಳಿತ ಪಕ್ಷಕ್ಕೆ ಚುರುಕು ಮುಟ್ಟಿಸುವ ಪ್ರಶ್ನೆಗಳ ಮೂಲಕ ಬೆಚ್ಚಗಿರಿಸಿದ್ದು ಕರಾವಳಿಯ ಶಾಸಕರುಗಳು.

ಸದನ ಆರಂಭವಾದ ದಿನದಂದಲೇ ಕರಾವಳಿ ಭಾಗದ ಪ್ರಮುಖ ಬಿಜೆಪಿ ಶಾಸಕರುಗಳಾದ ಸುನೀಲ್ ಕುಮಾರ್, ಡಾ.ಭರತ್ ಶೆಟ್ಟಿ, ಹರೀಶ್ ಪೂಂಜಾ, ವೇದವ್ಯಾಸ ಕಾಮತ್ ಹಾಗೂ ಗುರುರಾಜ ಗಂಟಿಹೊಳೆಯವರು ಆಡಳಿತ ಪಕ್ಷವನ್ನು ಪಾಟಿಸವಾಲಿಗೆ ಒಳಪಡಿಸಿ, ಇಕ್ಕಟ್ಟಿಗೆ ಸಿಕ್ಕಿಸುವ ಮೂಲಕ ವಿರೋಧ ಪಕ್ಷವಾದ ಬಿಜೆಪಿಗೆ ಅಧಿವೇಶನದಾದ್ಯಂತ ನವಚೈತನ್ಯ, ನವ ಶಕ್ತಿಯನ್ನು ತಂದಿದ್ದರು.

ಅಧಿವೇಶನದ ಕೆಲ ದಿನಗಳ ಮುಂಚೆಯಷ್ಟೇ ಬಿಜೆಪಿ ಹೈಕಮಾಂಡ್ ರಾಜ್ಯ ಬಿಜೆಪಿಯ ಅಧ್ಯಕ್ಷರನ್ನಾಗಿ ಪ್ರಥಮ ಬಾರಿಯ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪನವರ ಸುಪುತ್ರ ವಿಜಯೇಂದ್ರ ಯಡಿಯೂರಪ್ಪನವರನ್ನು ನೇಮಕ ಮಾಡಿತ್ತು. ವಿರೋಧ ಪಕ್ಷದ ನಾಯಕರನ್ನಾಗಿ ಮಾಜಿ ಸಚಿವ ಹಾಗೂ ಪದ್ಮನಾಭನಗರದ ಶಾಸಕರಾದ ಆರ್. ಅಶೋಕ್ ಅವರನ್ನು ಆಯ್ಕೆ ಮಾಡಿತ್ತು. ಹಿಂದುತ್ವದ ಫ್ಯಾಕ್ಟರಿ, ಬಿಜೆಪಿಯ ಭದ್ರಸ್ಥಳವಾದ ಕರಾವಳಿಗೆ ಈ ಬಾರಿಯಾದರೂ ಪಕ್ಷದಲ್ಲಿ ಉನ್ನತ ಸ್ಥಾನವನ್ನು ನೀಡಲಾಗುತ್ತದೆ ಎಂದು ಭಾವಿಸಲಾಗಿತ್ತು. ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ವಿ.ಸುನೀಲ್ ಕುಮಾರ್ ಅವರ ಹೆಸರು ಕೇಳಿಬಂದಿತ್ತು. ಆದರೆ, ಕೊನೆ ಕ್ಷಣದ ಬದಲಾವಣೆಯಲ್ಲಿ ಅವರ ಹೆಸರನ್ನು ಹೈಕಮಾಂಡ್ ಕೈಬಿಟ್ಟಿತು.

ಅಧಿವೇಶನದಲ್ಲಿ ತಮ್ಮ ನಾಯಕತ್ವ, ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಮರ್ಥ್ಯದ ಮಾತಿನ ಮೂಲಕ ವಿ.ಸುನೀಲ್ ಕುಮಾರ್ ತಾವು ಸಮರ್ಥ ನಾಯಕ ಎಂಬುದನ್ನು ಸಾಬೀತುಪಡಿದಿದ್ದಾರೆ.

ಕಳೆದ 11 ದಿನಗಳ ಅಧಿವೇಶನದಲ್ಲಿ ಬಿಜೆಪಿ ಆಡಳಿತ ಪಕ್ಷದ ಎದುರು ಮೃದು ಸ್ವಭಾವದಲ್ಲಿಯೇ ನಡೆದುಕೊಂಡ ಬಗ್ಗೆ ಪಕ್ಷದ ಕಾರ್ಯಕರ್ತರಲ್ಲಿ ಅಸಮಾಧಾನವಿದೆ. ಆರ್.ಅಶೋಕ್ ತಮ್ಮ ಸಾಮರ್ಥ್ಯ ಸಾಬೀತುಪಡಿಸುವಲ್ಲಿ ಎಡವಿದ್ದಾರೆಯೋ ಅಥವಾ ಅವರಲ್ಲಿ ಅಂತಹ ಗಟ್ಟಿತನವಿಲ್ಲವೋ ಎನ್ನುವ ಬಗ್ಗೆಯೂ ಪಕ್ಷದ ಕಾರ್ಯಕರ್ತರಲ್ಲಿ ಚರ್ಚೆ ಆರಂಭವಾಗಿದೆ.

ಈ ನಡುವೆ ಅಧಿವೇಶನದಲ್ಲಿ ಕರಾವಳಿ ಭಾಗದ ಶಾಸಕರ ಭಾಗವಹಿಸುವಿಕೆ, ಆಡಳಿತ ಪಕ್ಷದ ಮೇಲೆ ಅವರು ಮುಗಿಬಿದ್ದ ರೀತಿಗೆ ಇಡೀ ರಾಜ್ಯದಲ್ಲಿಯೇ ಮೆಚ್ಚುಗೆ ವ್ಯಕ್ತವಾಗಿದೆ. ಬಿಜೆಪಿಯ ಇತರೆ ಶಾಸಕರುಗಳು ಹಾಗೂ ವಿರೋಧ ಪಕ್ಷದ ನಾಯಕರ ವರ್ತನೆಗಳಿಗ ಬಗ್ಗೆ ಗಮನ ಹರಿಸದೇ, ಕರಾವಳಿಯ ಶಾಸಕರುಗಳೆಲ್ಲ ಒಟ್ಟಾಗಿ ನಡೆಸಿದ ಹೋರಾಟಕ್ಕೆ ಸ್ವತಃ ಆಡಳಿತ ಪಕ್ಷದ ನಾಯಕರುಗಳೇ ಕಕ್ಕಾಬಿಕ್ಕಿಯಾಗಿದ್ದರು.

ಬೆಳಗಾವಿಯಲ್ಲಿ ಕಾಂಗ್ರೆಸ್ʼನ ವಿಧಾನಪರಿಷತ್ ಸದಸ್ಯ ಹಾಗೂ ಸಚಿವೆಯಾದ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಚನ್ನರಾಜ್ ಹಟ್ಟಿಹೊಳೆಯವರ ಗನ್ ಮ್ಯಾನ್ʼಗಳು ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ಮಾಡಿ, ಚಾಕುವಿನಿಂದ ಇರಿದಿದ್ದರು. ಈ ಘಟನೆ ಬಗ್ಗೆ ಶಾಸಕ ವಿ.ಸುನೀಲ್ ಕುಮಾರ್ ಗಟ್ಟಿಧ್ವನಿಯಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ, ಸರ್ಕಾರ ದಾಖಲಿಸಿದ ಪ್ರಥಮ ವರ್ತಮಾನ ವರದಿ (ಎಫ್ʼಐಆರ್) ಪ್ರತಿಯಲ್ಲಿ ಕೊಲೆ ಪ್ರಕರಣ ದಾಖಲಿಸದ್ದರ ಬಗ್ಗೆ ಕೆಂಡಕಾರಿದ್ದರು.

ಅಲ್ಲದೇ, ಸಿಎಂ ಸಿದ್ದರಾಮಯ್ಯನವರು ಹುಬ್ಬಳ್ಳಿಯಲ್ಲಿ ನಡೆದ ಮೌಲ್ವಿಗಳ ಸಮಾವೇಶದಲ್ಲಿ ಭಾಗಿಯಾಗಿ ಮುಸ್ಲಿಮರ ಅಭಿವೃದ್ಧಿಗಾಗಿ 10 ಸಾವಿರ ಕೋಟಿ ರೂ. ನೀಡುವ ಭರವಸೆ ನೀಡಿದ್ದರು. ಈ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿದ್ದ ವಿ.ಸುನೀಲ್ ಕುಮಾರ್, ಅಧಿವೇಶನ ನಡೆದ ಸಂದರ್ಭದಲ್ಲಿ ಮುಖ್ಯಮಂತ್ರಿಗಳಾಗಲಿ ಅಥವಾ ಸಚಿವರುಗಳಾಗಲಿ ಅಧಿವೇಶನದ ಹೊರಗಡೆ ಯಾವುದೇ ಅನುದಾನ ಘೋಷಣೆ ಮಾಡುವ ಸಂಪ್ರದಾಯವಿಲ್ಲ. ಆದರೆ, ಸಿದ್ದರಾಮಯ್ಯನವರು ಕಳೆದ 75 ವರ್ಷಗಳ ಸಂಪ್ರದಾಯ ಮುರಿದು ಸದನದ ಪಾವಿತ್ರ್ಯತೆಗೆ, ಸದನದ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎನ್ನುವ ಮೂಲಕ ಗಂಭೀರವಾದ ಪ್ರಶ್ನೆ ಎತ್ತಿದ್ದರು. ಗಂಭೀರತೆಯ ಬಗ್ಗೆ ಬಿಜೆಪಿ ನಾಯಕರಿಗೆ ಅರಿವಾಗಿದ್ದೇ ಸುನೀಲ್ ಕುಮಾರ್ ಪ್ರಶ್ನೆ ಮಾಡಿದ ಮೇಲೆ. ಈ ಪ್ರಶ್ನೆಗೆ, ಉತ್ತರ ನೀಡಲು ಸಚಿವರುಗಳು ಕಕ್ಕಾಬಿಕ್ಕಿಯಾದದ್ದನ್ನು ಇಡೀ ರಾಜ್ಯವೇ ನೋಡಿದೆ.

ಬೆಳಗಾವಿಯಲ್ಲಿ ಮಹಿಳೆಯ ವಿವಸ್ತ್ರಗೊಳಿಸಿ ಹಲ್ಲೆ ನಡೆದಿದ್ದ ಪ್ರಕರಣಕ್ಕೂ ಸಂಬಂಧಿಸಿದಂತೆ ಸದನದಲ್ಲಿ ವಿಷಯ ಪ್ರಸ್ತಾಪಿಸಿ, ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ. ಈ ಘಟನೆಗೆ ಕಾರಣರಾದವರ ಮೇಲೆ ಉತ್ತರ ಪ್ರದೇಶದ ಮಾದರಿಯಲ್ಲಿ ಬುಲ್ಡೋಜರ್ ರೀತಿಯ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದು, ಎಲ್ಲರ ಗಮನ ಸೆಳೆಯಿತು.

ಅನಧಿಕೃತ ಲೋಡ್ ಶೆಡ್ಡಿಂಗ್ ಬಗ್ಗೆ ಸದನದಲ್ಲಿ ವಿಷಯ ಪ್ರಸ್ತಾಪಿಸಿ ಸರ್ಕಾರಕ್ಕೆ ಚಾಟಿ ಬೀಸಿದ್ದ ಡಾ.ಭರತ್ ಶೆಟ್ಟಿಯವರ ಪರಿಗೆ ಸಚಿವ ಕೆ.ಜೆ ಜಾರ್ಜ್ ಬೆಸ್ತು ಬಿದ್ದು, ಕರಾವಳಿ ಶಾಸಕರ ಮೇಲೆ ಆಕ್ರೋಶದ ನುಡಿಗಳನ್ನಾಡಿದ್ದರು.

ವಿ.ಸುನೀಲ್ ಕುಮಾರ್, ಡಾ.ಭರತ್ ಶೆಟ್ಟಿ ಮಾತ್ರವಲ್ಲದೇ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ವೇದವ್ಯಾಸ ಕಾಮತ್ ಹಾಗೂ ಬೈಂದೂರು ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೊಳೆಯವರು ಸಮಯ ದೊರೆತಾಗಲೆಲ್ಲ ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು.

ಈ ಎಲ್ಲಾ ಶಾಸಕರುಗಳು ನಡೆದ 11 ದಿನಗಳ ಕಾಲ ಅಧಿವೇಶನದಲ್ಲಿ ಸಮಯಕ್ಕೆ ಸರಿಯಾಗಿ ಹಾಜರಿದ್ದು, ಸದನದ ಕಾರ್ಯ ಕಲಾಪಗಳಲ್ಲಿ ಭಾಗಿಯಾಗಿದ್ದಾರೆ. ಈ ಅಧಿವೇಶನದ ಮೂಲಕ ಕರಾವಳಿ ಭಾಗದ ಬಿಜೆಪಿ ಶಾಸಕರ ಮೇಲೆ ಕರಾವಳಿಯ ಕಾರ್ಯಕರ್ತರಲ್ಲದೇ, ಇತರೆ ಭಾಗದ ಕಾರ್ಯಕರ್ತರಿಗೂ ವಿಶೇಷ ಅಭಿಮಾನ ಸೃಷ್ಠಿಯಾಗಿದೆ. ಕರಾವಳಿಯ ಯುವ ಶಾಸಕರೆಲ್ಲರೂ ಗಟ್ಟಿಧ್ವನಿಯಾಗಿ ಪಕ್ಷವನ್ನು ಪ್ರತಿನಿಧಿಸಿದ್ದಾರೆ. ಪ್ರಥಮ ಬಾರಿಗೆ ಶಾಸಕರೆಲ್ಲರೂ ಒಟ್ಟಾಗಿ ನಿಂತ ಸದನದಲ್ಲಿ ಹೋರಾಡಿದ ಬಗೆಗೆ ರಾಜ್ಯದಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.

You might also like
Leave A Reply

Your email address will not be published.