ತಂಬಾಕು ತಯಾರಿಕರ ರಿಟರ್ನ್‌ ಫೈಲಿಂಗ್‌ ನೋಂದಣಿ – ಗಡುವು ವಿಸ್ತರಣೆ

ಪಾನ್‌ ಮಸಾಲಾ, ಗುಟ್ಕಾ, ತಂಬಾಕು ಉತ್ಪನ್ನಗಳ ತಯಾರಕರಿಗೆ ಜಿಎಸ್‌ಟಿ ಮತ್ತು ಮಾಸಿಕ ರಿಟರ್ನ್‌ ಫೈಲಿಂಗ್‌ ನೋಂದಣಿಗೆ ವಿಶೇಷ ಅಭಿಯಾನದ ಗಡುವನ್ನು ಕೇಂದ್ರ ಸರಕಾರ ಮೇ.15 ರವರೆಗೆ ವಿಸ್ತರಿಸಿದೆ.

ಸಿಬಿಐಸಿ ಗುರಿ ಏನು?

ಕಳೆದ ಜನವರಿಯಲ್ಲಿ ವಿಶೇಷ ಅಭಿಯಾನ ಘೋಷಿಸಿದ್ದ ಕೇಂದ್ರ ಪರೋಕ್ಷ ತೆರಿಗೆ ಮತ್ತು ಸುಂಕ ಮಂಡಳಿ (ಸಿಬಿಐಸಿ) ಏಪ್ರಿಲ್‌ 1ರ ಗಡುವು ನಿಗದಿಪಡಿಸಿತ್ತು. ಪಾನ್‌ ಮಸಾಲಾ, ಗುಟ್ಕಾ, ತಂಬಾಕು ಉತ್ಪನ್ನಗಳ ತಯಾರಕರನ್ನು ಜಿಎಸ್‌ಟಿ ನೋಂದಣಿ, ದಾಖಲೆ ನಿರ್ವಹಣೆ ಮತ್ತು ಮಾಸಿಕ ಫೈಲಿಂಗ್‌ ವ್ಯವಸ್ಥೆಯೊಳಗೆ ತರಬೇಕು ಎನ್ನುವುದು ಸಿಬಿಐಸಿ ಗುರಿಯಾಗಿದೆ.

ಕಳೆದ ವರ್ಷ ಫೆಬ್ರವರಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಅಧ್ಯಕ್ಷತೆಯಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿ ಸಭೆ ನಡೆದಿತ್ತು. ಆಗ ಗುಟ್ಕಾ ವ್ಯವಹಾರಗಳಲ್ಲಿ ತೆರಿಗೆ ವಂಚನೆಯನ್ನು ತಡೆಗಟ್ಟುವ ಕುರಿತು ರಾಜ್ಯ ಹಣಕಾಸು ಸಚಿವರ ಸಮಿತಿ ನೀಡಿದ್ದ ವರದಿಯನ್ನು ಅಂಗೀಕರಿಸಲಾಗಿತ್ತು. ಅದರ ಅನ್ವಯ ವಿಶೇಷ ಅಭಿಯಾನ ಘೋಷಿಸಲಾಗಿದೆ.

ಹೊಸ ವ್ಯವಸ್ಥೆ ಅನುಸಾರ ಪಾನ್‌ ಮಸಾಲಾ, ಗುಟ್ಕಾ ಮತ್ತು ತಂಬಾಕು ಉತ್ಪನ್ನಗಳ ತಯಾರಕರು ಪ್ಯಾಕಿಂಗ್‌ ಯಂತ್ರೋಪಕರಣಗಳ ಕುರಿತು ಜಿಎಸ್‌ಟಿ ಪ್ರಾಧಿಕಾರಗಳಲ್ಲಿ ನೋಂದಾಯಿಸುವುದು ಕಡ್ಡಾಯವಾಗಿದೆ. ಪಾನ್‌ – ಮಸಾಲಾ, ತಂಬಾಕು (ಸುಣ್ಣದ ಟ್ಯೂಬ್‌ ರಹಿತ), ಹುಕ್ಕಾ, ಜಗಿಯುವ ತಂಬಾಕು (ಸುಣ್ಣದ ಟ್ಯೂಬ್‌ ಇಲ್ಲದೆ), ಫಿಲ್ಟರ್‌ ಖೈನಿ, ಜರ್ದಾ, ನಶ್ಯ ಮತ್ತು ಬ್ರಾಂಡೆಡ್‌ ಅಥವಾ ಬ್ರಾಂಡ್‌ ರಹಿತ ಗುಟ್ಕಾ ತಯಾರಕರಿಗೆ ಈ ನಿಯಮಗಳು ಅನ್ವಯವಾಗುತ್ತವೆ.

You might also like
Leave A Reply

Your email address will not be published.