ಸಂಸತ್ ದಾಳಿ – ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯಿತಾ ಕಾಂಗ್ರೆಸ್?

ದೇಶದ ಪ್ರಜಾಪ್ರಭುತ್ವದ ಶಕ್ತಿಕೇಂದ್ರವಾದ ಭಾರತದ ಸಂಸತ್ತಿನಲ್ಲಿ ಬುಧವಾರ ನಡೆದ ಭದ್ರತಾ ವೈಫಲ್ಯ ಅತ್ಯಂತ ಗಂಭೀರವಾದುದು. 2001ರ ಡಿಸೆಂಬರ್ 13 ರಂದು ನಡೆದ ಸಂಸತ್ ದಾಳಿಯ ಸ್ಮರಣೆಯಂದೇ ಇಬ್ಬರು ಯುವಕರು ಸಂಸತ್ʼಗೆ ದಾಳಿ ಮಾಡಿ ಕೆಮಿಕಲ್ ಸ್ಪ್ರೇ ಮಾಡಿದ್ದು ಆತಂಕಕಾರಿ ಘಟನೆಯಾಗಿದೆ. ಇದನ್ನು ಯಾರೂ ಸುಲಭವಾಗಿ ತೆಗೆದುಕೊಳ್ಳುವಂತಿಲ್ಲ.

ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ನಾಯಕರು ಈ ಘಟನೆಯನ್ನು ರಾಜಕೀಯಗೊಳಿಸಿ, ಅದನ್ನು ತಮ್ಮ ಪಕ್ಷದ ಲಾಭಕ್ಕೆ ಬಳಸಿಕೊಳ್ಳುವ ಮೂಲಕ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯುವ ತಂತ್ರಗಾರಿಕೆ ರೂಪಿಸಿದ್ದಾರೆಯೇ ಎನ್ನುವ ಪ್ರಶ್ನೆ ಮೂಡುತ್ತಿದೆ. ಕರ್ನಾಟಕದ ಮೈಸೂರಿನ ಯುವ ಸಂಸದ ಪ್ರತಾಪ್ ಸಿಂಹರ ಹೆಸರಿನಲ್ಲಿ ಪ್ರೇಕ್ಷಕರ ಪಾಸ್ ಪಡೆದ ಮೈಸೂರಿನ ಮನೋರಂಜನ್ ಹಾಗೂ ಸಾಗರ್ ಶರ್ಮಾ ಎನ್ನುವ ಇಬ್ಬರು ಯುವಕರು ಸಂಸತ್ ಒಳಗೆ ನುಗ್ಗಿ, ಕೆಮಿಕಲ್ ಸ್ಪ್ರೇ ನಡೆಸಿದ್ದರು. ಆ ಕ್ಷಣದಲ್ಲಿಯೇ ಇಬ್ಬರನ್ನೂ ಬಂಧಿಸಲಾಗಿದೆ. ಸಂಸತ್ತಿನ ಹೊರಗಡೆ ಕೆಮಿಕಲ್ ಸ್ಪ್ರೇ ಮಾಡಿ ಪ್ರತಿಭಟಿಸಿದ ಅಮೋಲ್ ಶಿಂದೆ ಹಾಗೂ ನೀಲಮ್ ಕೌರ್ ಎನ್ನುವ ಮಹಿಳೆಯನ್ನೂ ಬಂಧಿಸಲಾಗಿದೆ.

ಈ ಘಟನೆ ನಡೆದ ಬೆನ್ನಲ್ಲೇ ಎಚ್ಚೆತ್ತ ಗೃಹ ಇಲಾಖೆ ವಿಚಾರಣೆ ಆರಂಭಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು ಈ ಬಗ್ಗೆ ಸಭೆ ನಡೆಸಿ ಮಾಹಿತಿ ಪಡೆದಿದ್ದಾರೆ. ಹಾಗೆಯೇ, ಕರ್ತವ್ಯ ಲೋಪ ಎಸಗಿದ 8 ಜನ ಭದ್ರತಾ ಪೊಲೀಸರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ.

ಕಾಂಗ್ರೆಸ್ ತಂತ್ರಗಾರಿಕೆ ಏನು?

ಆಗಂತುಕರು ಸಂಸದ ಪ್ರತಾಪ್ ಸಿಂಹ ಅವರಿಂದ ಪ್ರೇಕ್ಷಕರ ಗ್ಯಾಲರಿಯ ಚೀಟಿ ಪಡೆದಿದ್ದಾರೆ ಎಂದು ತಿಳಿದ ತಕ್ಷಣವೇ ಅಲರ್ಟ್ ಆದ ಕಾಂಗ್ರೆಸ್ ಮುಖಂಡರುಗಳು ಸಿಕ್ಕಿದ್ದೇ ಸಮಯವೆಂದು ಪ್ರತಾಪ್ ಸಿಂಹರ ಮೇಲೆ ಮುಗಿಬಿದ್ದಿದ್ದಾರೆ. ಕರ್ನಾಟಕ ರಾಜ್ಯ ವಿಧಾನಸಭೆಯಲ್ಲಿಯೂ ಈ ಬಗ್ಗೆ ಚರ್ಚೆಯಾಗಿದೆ. ಅಲ್ಲದೇ, ಲೋಕಸಭೆಯ ಅಧಿವೇಶನದಲ್ಲಿ ವಿಪಕ್ಷಗಳು ಭದ್ರತಾ ಲೋಪದ ಬಗ್ಗೆ ಪ್ರತಿಭಟನೆ ನಡೆಸಿ, ಸಂಸದ ಪ್ರತಾಪ್ ಸಿಂಹರನ್ನು ಅಮಾನತು ಮಾಡಬೇಕೆಂದು ಪ್ರತಿಭಟನೆ ನಡೆಸಿವೆ.

ಪ್ರೇಕ್ಷಕರ ಗ್ಯಾಲರಿಯ ಚೀಟಿ
ಪ್ರೇಕ್ಷಕರ ಗ್ಯಾಲರಿಯ ಚೀಟಿ

 

ಈ ಘಟನೆಯನ್ನು ಅಸ್ತವನ್ನಾಗಿಸಿರುವ ಕಾಂಗ್ರೆಸ್ಸಿಗರು, ರಾಷ್ಟ್ರಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಹಾಗೂ ತಮ್ಮ ಪಕ್ಷಕ್ಕೆ ಮುಜುಗರವಾಗಿರುವ ಕಾಂಗ್ರೆಸ್ʼನ ರಾಜ್ಯಸಭಾ ಸದಸ್ಯ ಧೀರಜ್ ಸಾಹು ಅವರ ಮನೆ ಮೇಲಿನ ಐಟಿ ದಾಳಿಯನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದಾರೆ ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.

ಕಾಂಗ್ರೆಸ್ ರಾಜ್ಯಸಭಾ ಸದಸ್ಯರಾಗಿರುವ ಧೀರಜ್ ಸಾಹು ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿ ಬರೋಬ್ಬರಿ 351 ಕೋಟಿ ರೂ. ಹಣವನ್ನು ಹಾಗೂ 3 ಕೆ.ಜಿ ಚಿನ್ನವನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. 100 ಜನ ಐಟಿ ಹಾಗೂ ಬ್ಯಾಂಕ್ ಅಧಿಕಾರಿಗಳು ನಿರಂತರವಾಗಿ 5 ದಿನಗಳ ಕಾಲ ಈ ಹಣದ ಎಣಿಕೆ ಮಾಡಿದ್ದು, ಇದಕ್ಕಾಗಿ 40 ಹಣ ಎಣಿಸುವ ಯಂತ್ರಗಳ ಬಳಕೆ ಮಾಡಿದ್ದಾರೆ. ಇವರ ಹೊರತಾಗಿ ಭದ್ರತಾ ಸಿಬ್ಬಂದಿ, ಸೇವಾಸಿಬ್ಬಂದಿ ಸೇರಿ 200 ಜನ ಸಿಬ್ಬಂದಿಗಳನ್ನು ಆದಾಯ ತೆರಿಗೆ ಇಲಾಖೆ ಬಳಸಿಕೊಂಡಿದೆ. ದೇಶದ ಇತಿಹಾಸದಲ್ಲಿಯೇ ಇದೊಂದು ಐತಿಹಾಸಿಕ ದಾಳಿಯಾಗಿದ್ದು, ಈ ಪ್ರಮಾಣದ ಹಣ ದೊರೆತಿರುವುದು ಇದೇ ಮೊದಲು. ಈ ಘಟನೆ ದೇಶಾದ್ಯಂತದ ಜನರಿಗೆ ತಿಳಿದಿದ್ದು, ಕಾಂಗ್ರೆಸ್ ಮೇಲೆ ವಾಕರಿಕೆ ಬರುವಂತಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಇದು ದೊಡ್ಡ ಮಟ್ಟದ ಪೆಟ್ಟು ನೀಡಿದೆ.

2024ರ ಲೋಕಸಭೆಗೆ ಬಿಜೆಪಿಯ NDA ಮೈತ್ರಿಕೂಟಕ್ಕೆ ವಿರೋಧವಾಗಿ I.N.D.I ಮೈತ್ರಿಕೂಟ ಕಟ್ಟಿಕೊಂಡು ಹುಮ್ಮಸ್ಸಿನಲ್ಲಿದ್ದ ಕಾಂಗ್ರೆಸ್ʼಗೆ ಈ ಘಟನೆ ಮುಜುಗರವನ್ನುಂಟು ಮಾಡಿದೆ. ಈ ಘಟನೆಯನ್ನು ಮರೆಮಾಚಲು ಹಾಗೂ ಮೈಸೂರಿನಲ್ಲಿ ಬಿಜೆಪಿಯ ಹೆಬ್ಬಂಡೆಯಾಗಿರುವ ಸಂಸದ ಪ್ರತಾಪ್ ಸಿಂಹರನ್ನು ಮುಂದಿನ ಲೋಕಸಭಾ ಸ್ಥಾನದಿಂದ ಸ್ಪರ್ಧಿಸದಂತೆ ತಡೆಯುವ ಮೂಲಕ ಭವಿಷ್ಯತ್ತಿನಲ್ಲಿ ಕಾಂಗ್ರೆಸ್ʼಗೆ ಅವರಿಂದಾಗುವ ನಷ್ಟದಿಂದ ಪಾರಾಗಲು ಕಾಂಗ್ರೆಸ್ ಈ ತಂತ್ರಗಾರಿಕೆ ರೂಪಿಸಿದೆ ಕಾಣುತ್ತಿದೆ. ಆ ದೃಷ್ಠಿಯಿಂದಲೇ ಸಂಸತ್ʼನಲ್ಲಾದ ಕರ್ತವ್ಯ ಲೋಪ ಪ್ರಕರಣವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ.

ಮೈಸೂರಿನ ತಮ್ಮ ಪರಿಚಯದವರ ಪುತ್ರ ಎನ್ನುವ ಕಾರಣದಿಂದ ಮನೋರಂಜನ್ ಅವರಿಗೆ ಪ್ರತಾಪ್ ಸಿಂಹರವರು ಸಂಸತ್ ಪ್ರೇಕ್ಷಕರ ಗ್ಯಾಲರಿಗೆ ಅನುಮತಿ ಪತ್ರ ನೀಡಿದ್ದರು. ಆದರೆ, ಮನೋರಜಂನ್ ಅದನ್ನು ಉಪಯೋಗಿಸಿದ್ದೇ ಬೇರೆಯದೇ ಕಾರಣಕ್ಕೆ. ಸಾಮಾನ್ಯವಾಗಿ ಎಲ್ಲಾ ಸಂಸದರೂ ಈ ರೀತಿ ಪತ್ರಗಳನ್ನು ನೀಡುತ್ತಾರೆ. ಕಾಂಗ್ರೆಸ್ʼಗೂ ಇದರ ಅರಿವಿದ್ದರೂ, ಸುಖಾಸುಮ್ಮನೆ ಸಂಸದ ಪ್ರತಾಪ್ ಸಂಹರ ಮೇಲೆ ಆರೋಪಿಸುವ ಕೆಲಸ ಮಾಡುತ್ತಿರುವಂತೆ ಕಂಡುಬರುತ್ತಿದೆ.

ಸಂಸತ್ʼನಲ್ಲಿ ನಡೆದ ಭದ್ರತಾ ಲೋಪ ಗಂಭೀರವಾದದ್ದೇ, ಈ ಬಗ್ಗೆ ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ಆದರೆ, ರಾಜ್ಯದ ಭವಿಷ್ಯವಾಗಿರುವ, ಸಂಸದರಾಗಿ ಅತ್ಯುತ್ತಮ ಕೆಲಸ ಮಾಡುತ್ತಿರುವ ಪ್ರತಾಪ್ ಸಿಂಹರನ್ನು ಅನಾವಶ್ಯಕವಾಗಿ ಈ ಪ್ರಕರಣದಲ್ಲಿ ಎಳೆದು ತರುವುದು ತಪ್ಪು. ಕಾಂಗ್ರೆಸ್ ತಮ್ಮ ಗಮನವನ್ನು ತಮ್ಮದೇ ಸಂಸದ ಧೀರಜ್ ಸಾಹು ಅವರ ಮೇಲಿಟ್ಟು, ಅವರನ್ನು ಪಕ್ಷದಿಂದ ಅಮಾನತು ಮಾಡುವ ಕೆಲಸ ಮಾಡಲಿ ಎಂಬುದು ಜನರ ಆಗ್ರಹ.

You might also like
Leave A Reply

Your email address will not be published.