ಬಿಜೆಪಿಯ ಹಿರಿಯ ನಾಯಕ ಸುಶೀಲ್‌ ಮೋದಿ ನಿಧನ : ಸಂತಾಪ ಸಲ್ಲಿಸಿದ ನರೇಂದ್ರ ಮೋದಿ

ಬಿಜೆಪಿಯ ಹಿರಿಯ ನಾಯಕ ಮತ್ತು ರಾಜ್ಯಸಭಾ ಸಂಸದ ಸುಶೀಲ್ ಮೋದಿ ಅವರು ತಮ್ಮ‌ 72 ನೇ ವಯಸ್ಸಿನಲ್ಲಿ, ನಿನ್ನೆ ಸಂಜೆ ನಿಧನರಾಗಿದ್ದಾರೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಕಳೆದ ತಿಂಗಳು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIMS)ಯ ತೀವ್ರ ನಿಗಾ ಘಟಕಕ್ಕೆ ದಾಖಲಾಗಿದ್ದರು.

ಸುಶೀಲ್ ಕುಮಾರ್ ಮೋದಿ ಅವರು ಈ ವರ್ಷ ಏಪ್ರಿಲ್‌ನಲ್ಲಿ ತಾವು ಕ್ಯಾನ್ಸರ್‌ನಿಂದ ಬಳಲುತ್ತಿದ್ದುದಾಗಿ ಮತ್ತು ತಮ್ಮ ಆರೋಗ್ಯದ ಸಮಸ್ಯೆಯಿಂದಾಗಿ 2024 ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಬಹಿರಂಗಪಡಿಸಿದ್ದರು. ಇನ್ನು ಬಿಜೆಪಿಯ ಈ ಹಿರಿಯ ನಾಯಕನ ನಿಧನಕ್ಕೆ ಹಲವಾರು ನಾಯಕರು ಸಂತಾಪ ಸೂಚಿಸಿದ್ದಾರೆ.

ಜನವರಿ 1952 ರಲ್ಲಿ ಜನಿಸಿದ ಸುಶೀಲ್ ಮೋದಿ ಅವರು ತಮ್ಮ ಆರಂಭಿಕ ವರ್ಷಗಳಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ನೊಂದಿಗೆ ಸಂಬಂಧ ಹೊಂದಿದ್ದಾರೆ. ಅವರ ರಾಜಕೀಯ ಪ್ರಯಾಣವು ಅವರ ಕಾಲೇಜು ವರ್ಷಗಳಲ್ಲಿ (1973 ರಲ್ಲಿ) ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುವ ಮುಖಾಂತರ ಪ್ರಾರಂಭವಾಯಿತು. ಅವರ ರಾಜಕೀಯ ಜೀವನದ ಆರಂಭಿಕ ಹಂತದಲ್ಲಿ, ಅವರು 1974 ರಲ್ಲಿ ಬಿಹಾರದಲ್ಲಿ ವಿದ್ಯಾರ್ಥಿ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು ಮತ್ತು ತುರ್ತು ಪರಿಸ್ಥಿತಿಯ ಸಮಯದಲ್ಲಿ ಐದು ಬಾರಿ ಬಂಧನವನ್ನು ಎದುರಿಸಬೇಕಾಯಿತು. 1962 ರ ಭಾರತ-ಚೀನಾ ಯುದ್ಧದ ಸಮಯದಲ್ಲೂ ಶಾಲಾ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವಲ್ಲಿ ಅವರು ಮಹತ್ವದ ಪಾತ್ರವನ್ನು ವಹಿಸಿದ್ದರು.

1990 ರಲ್ಲಿ ಅವರು ಪಾಟ್ನಾ ಸೆಂಟ್ರಲ್ ಅಸೆಂಬ್ಲಿ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಾಗ ಭಾರತದ ರಾಜಕೀಯದಲ್ಲಿ ಅವರ ಸಕ್ರಿಯ ಪಾಲ್ಗೊಳ್ಳುವಿಕೆ ವೇಗವನ್ನು ಪಡೆಯಲಾರಂಭಿಸಿತು. ನಂತರ ಅವರು 1996 ರಿಂದ 2004 ರವರೆಗೆ ರಾಜ್ಯ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಅಲಂಕರಿಸಿದರು.

ಭಾಗಲ್ಪುರ ಲೋಕಸಭಾ ಕ್ಷೇತ್ರದಿಂದ 2004 ರಲ್ಲಿ ಸ್ಪರ್ಧಿಸಿದರು. 2005 ರಲ್ಲಿ, ಬಿಹಾರದಲ್ಲಿ ಬಿಜೆಪಿ ಅಧಿಕಾರವನ್ನು ವಹಿಸಿಕೊಂಡಾಗ, ಅವರನ್ನು ಬಿಹಾರ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರನ್ನಾಗಿ ನೇಮಿಸಲಾಯಿತು.

ಇನ್ನು ಸುಶೀಲ್‌ಮೋದಿಯವರು ಅವರು ನಿತೀಶ್ ಕುಮಾರ್ ಸಂಪುಟದಲ್ಲಿ 2005 ರಿಂದ 2013 ಮತ್ತು 2017 ರಿಂದ 2020 ರವರೆಗೆ ಬಿಹಾರದ ಉಪ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.

You might also like
Leave A Reply

Your email address will not be published.