ಬಿಗ್‌ ಬಾಸ್‌ ಖ್ಯಾತಿಯ ತುಕಾಲಿ ಸಂತು ಕಾರಿಗೆ ಆಟೋ ಡಿಕ್ಕಿ – ಚಾಲಕ ಸಾವು

‘ಬಿಗ್ ಬಾಸ್’, ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಹಾಸ್ಯ ನಟ ‘ತುಕಾಲಿ’ ಸಂತೋಷ್ ಅವರು ಈಚೆಗಷ್ಟೇ ಹೊಸ ಕಾರೊಂದನ್ನು ಖರೀದಿ ಮಾಡಿದ್ದು, ಆ ಖುಷಿ ಮಾಸುವ ಮುನ್ನವೇ ಕಾರು ಅಪಘಾತಕ್ಕೀಡಾಗಿದೆ. ಆಟೋ ಮತ್ತು ಕಾರಿನ ನಡುವೆ ಅಪಘಾತವಾಗಿದ್ದು, ಘಟನೆಯಲ್ಲಿ ಆಟೋ ಚಾಲಕ ಸಾವನ್ನಪ್ಪಿರುವ ಸುದ್ದಿ ಈಗಷ್ಟೇ ಬೆಳಕಿಗೆ ಬಂದಿದೆ.

ಏನಿದು ಘಟನೆ?

ತುಕಾಲಿ ಸಂತೋಷ್ ಮತ್ತು ಅವರ ಪತ್ನಿ ಮಾನಸಾ ಅವರು ತಮ್ಮ ಹೊಸ ಕಾರಿನಲ್ಲಿ ತುಮಕೂರಿನಿಂದ ಕುಣಿಗಲ್ ಮಾರ್ಗವಾಗಿ ಹೊಳೆನರಸೀಪುರ ಕಡೆಗೆ ಹೋಗುತ್ತಿದ್ದರು. ಕುಣಿಗಲ್ ತಾಲೂಕಿನ ಹೊನ್ನೇನಹಳ್ಳಿ ಬಳಿ ಹೋಗುತ್ತಿರುವಾಗ ಅಪಘಾತ ಸಂಭವಿಸಿತ್ತು. ತುಕಾಲಿ ಸಂತು ಅವರಿದ್ದ ಕಾರಿಗೆ ಕುಣಿಗಲ್ ನಿಂದ ಕುರುಡಿಹಳ್ಳಿ ಕಡೆಗೆ ಬರುತ್ತಿದ್ದ ಆಟೋ ಡಿಕ್ಕಿ ಹೊಡೆದಿದ್ದು, ಸಂಪೂರ್ಣ ಜಖಂಗೊಂಡಿತ್ತು.

ಈ ಅಪಘಾತದಲ್ಲಿ ಆಟೋ ಚಾಲಕ ಜಗದೀಶ್ (44) ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ, ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು (ಮಾ.14) ಬೆಳಗಿನ ಜಾವ ಆಟೋ ಚಾಲಕ ಸಾವನ್ನಪ್ಪಿದ್ದಾರೆ.

ಈ ಪ್ರಕರಣವು ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಮೃತ ದುರ್ದೈವಿ ಜಗದೀಶ್ ಅವರನ್ನು ಕುಣಿಗಲ್ ತಾಲ್ಲೂಕಿನ ಕೋಡಿಹಳ್ಳಿಪಾಳ್ಯ ನಿವಾಸಿ ಎಂದು ಗುರುತಿಸಲಾಗಿದೆ. ಹಾಗೂ ಚಾಲನೆ ವೇಳೆ ಆಟೋ ಚಾಲಕ ಜಗದೀಶ್ ಮದ್ಯ ಸೇವನೆ ಮಾಡಿದ್ದರು ಎಂಬ ಮಾಹಿತಿ ಇದೀಗ ಸಿಕ್ಕಿದೆ.

Auto collision with Bigg Boss fame Tukali Santu's car - driver killed

ಹೊಸದಾಗಿ ಕಾರು ಖರೀದಿ ಮಾಡಿದ್ದ ಸಂತು

‘ಬಿಗ್ ಬಾಸ್’ ಮನೆಯಲ್ಲಿ 112 ದಿನಗಳ ಕಾಲ ಇದ್ದ ತುಕಾಲಿ ಸಂತು 4ನೇ ರನ್ನರ್ ಅಪ್ ಆಗಿ ಶೋನಿಂದ ಹೊರಗೆ ಬಂದಿದ್ದರು. ಆನಂತರ ‘ಗಿಚ್ಚಿ ಗಿಲಿ ಗಿಲಿ’ ಶೋನಲ್ಲೂ ಕಾಣಿಸಿಕೊಂಡಿದ್ದರು. ಹೊಸದಾಗಿ ಕಿಯಾ ಕಾರು ಖರೀದಿ ಮಾಡಿ 2 ವಾರ ಕೂಡ ಆಗಿರಲಿಲ್ಲ ಆಗಲೇ ಅಪಘಾತ ಸಂಭವಿಸಿದೆ.

ಕಾರು ಖರೀದಿ ಮಾಡಿದ್ದರ ಬಗ್ಗೆ ಈ ಹಿಂದೆ ಪ್ರತಿಕ್ರಿಯೆ ನೀಡಿದ್ದ ‘ತುಕಾಲಿ’ ಸಂತು, ನಾನು ಬಡವ ಅಲ್ಲ, ಶ್ರಮಜೀವಿ. ನಾನು ಬಡವ ಅಂತ ಎಲ್ಲಿಯೂ ಹೇಳಿಲ್ಲ. ಧರ್ಮಸ್ಥಳದ ಮಂಜುನಾಥ ಸ್ವಾಮಿಗೆ ನಾನು ಕಾರು ಖರೀದಿ ಮಾಡುವ ಶಕ್ತಿ ಕೊಡು ಅಂತ ಬಹಳ ಹಿಂದೆ ಬೇಡಿಕೊಂಡಿದ್ದೆ. ನನ್ನ ಬಳಿ ಪುಟ್ಟ ಕಾರೊಂದಿತ್ತು. ಈಗ ದೊಡ್ಡ ಕಾರು ಖರೀದಿಸಿದ್ದೇನೆ. ನನಗೆ ಕಾರಿನ ಅವಶ್ಯಕತೆ ಇತ್ತು. ‘ಬಿಗ್ ಬಾಸ್’ ಶೋನಿಂದ ನನಗೆ ಸಿಕ್ಕ ಹಣದ ಜೊತೆಗೆ ನಾನು ಕೂಡ ಸ್ವಲ್ಪ ಹಣ ಸೇರಿಸಿ ಈ ಕಾರು ತೆಗೆದುಕೊಂಡೆ. ಇಎಂಐ ಕೂಡ ಕಟ್ಟಬೇಕು. ಇಎಂಐ ಇದ್ದರೆ ಸ್ವಲ್ಪ ಜವಾಬ್ದಾರಿ ಬರುತ್ತದೆ ಎಂದಿದ್ದರು.

You might also like
Leave A Reply

Your email address will not be published.