ಶಕ್ತಿಮೀರಿ ಪ್ರಯತ್ನಿಸಿದ ಸದಾನಂದ ಗೌಡರಿಗೆ ಟಿಕೆಟ್ ಮಿಸ್ – ಕೊನೆಯದಾಗಿ ಹೇಳಿದ್ದಿಷ್ಟು

ಈ ಬಾರಿಯ ಲೋಕಸಭಾ ಚುನಾವಣಾ ಕಣ ದಿನದಿಂದ ದಿನಕ್ಕೆ ಒಂದೊಂದು ರೂಪ ಪಡೆಯುತ್ತಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ತಮ್ಮ ಅಭ್ಯರ್ಥಿಗಳ ಆಯ್ಕೆಯಲ್ಲಿ ತಲೆಕೆಡಿಸಿಕೊಂಡಿರುವಂತೆಯೇ, ಉಭಯ ಪಕ್ಷಗಳಲ್ಲೂ ಟಿಕೆಟ್ ಸಿಗುತ್ತದೆ ಎಂದು ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದ ಹಲವರಿಗೆ ಈ ಬಾರಿ ಆಯಾ ಪಕ್ಷದ ಹೈಕಮಾಂಡ್’ಗಳು ನಿರಾಸೆ ಮೂಡಿಸುವ ಹಾಗೆ ಕಾಣುತ್ತಿದೆ. ಹಾಗೆಯೇ, ಟಿಕೆಟ್ ಸಿಗದೇ ನಿರಾಸೆಗೊಂಡವರ ಅಥವಾ ರಾಜಕೀಯದ ವಿಶ್ರಾಂತ ನಾಯಕರ ಪಟ್ಟಿಗೆ ಸೇರಲಿದ್ದಾರೆ ಬಿಜೆಪಿಯ ನಗುಮೊಗದ ಸರದಾರ, ಸಂಸದ, ಮಾಜಿ ಮುಖ್ಯಮಂತ್ರಿ ಶ್ರೀ ಡಿ.ವಿ.ಸದಾನಂದ ಗೌಡರು.

ದಕ್ಷಿಣ ಕನ್ನಡದ ಸುಳ್ಯ ಮೂಲದವರಾದ ಡಿ.ವಿ.ಸದಾನಂದಗೌಡರು ಶಾಸಕರಾಗಿಯೂ, ಸಚಿವರಾಗಿಯೂ, ಮುಖ್ಯಮಂತ್ರಿಯಾಗಿಯೂ ಹಾಗೂ ಸಂಸದನಾಗಿಯೂ ಗುರುತಿಸಿಕೊಂಡವರು. ಮುಖ್ಯಮಂತ್ರಿಯಾಗಿದ್ದಾಗ ಕೇವಲ ನಗುಮುಖದಿಂದಲೇ ಇರುತ್ತಾರೆಯೇ ಹೊರತು ಕೆಲಸ ಮಾಡುವುದಿಲ್ಲ ಎಂದು ಟೀಕೆಗೆ ಒಳಗಾಗುತ್ತಿದ್ದ ಸದಾನಂದಗೌಡರು, ಬೆಂಗಳೂರು ಉತ್ತರ ಕ್ಷೇತ್ರದಿಂದ ಮೋದಿ ಸರ್ಕಾರದ ಸಂಪುಟದಲ್ಲಿ ಸಂಸದನಾಗಿ ಎರಡು ಬಾರಿ ಗೆಲುವನ್ನು ಸಾಧಿಸಿದವರು.

ಸಂಸದನಾಗಿಯೂ ಯಾವುದೇ ಮಹತ್ವದ ಕೆಲಸಗಳನ್ನು ಮಾಡದ ಸದಾನಂದಗೌಡರಿಗೆ ಈ ಬಾರಿಯ ಟಿಕೆಟ್ ಖಂಡಿತಾ ಕೈತಪ್ಪಲಿದೆ ಎಂದು ಸ್ವಪಕ್ಷದಲ್ಲೇ ಮಾತುಗಳು ಕೇಳಿಬರುತ್ತಿದವು. ಎರಡು ಬಾರಿಯೂ ಕೂಡ ಪ್ರಧಾನಿ ಮೋದಿಯವರ ಹೆಸರನ್ನೇ ಬಳಸಿಕೊಂಡು ಗೆದ್ದರು ಎನ್ನುವ ಮಾತುಗಳನ್ನು ಎದುರಿಸುತ್ತಿರುವ ಗೌಡರಿಗೆ, ಈ ಬಾರಿಯ ಟಿಕೆಟ್ ಕೈ ತಪ್ಪಿದೆ.

ಇನ್ನೇನು ಟಿಕೆಟ್ ಫೈನಲ್ ಮಾಡುವ ಹಂತಕ್ಕೆ ತಲುಪಿರುವ ಬಿಜೆಪಿ ಹೈಕಮಾಂಡ್, ಈ ಬಾರಿ ಬಹಳಷ್ಟು ಆಲೋಚಿಸಿ ನಿರ್ಧಾರಗಳನ್ನು ಕೈಗೊಳ್ಳುತ್ತಿರುವಂತೆ ಕಾಣುತ್ತಿದೆ. ಅದಲ್ಲದೇ, ರಾಜ್ಯ ರಾಜಕೀಯದಲ್ಲಿರುವ ಬಣಗಳ ಅಭಿಪ್ರಾಯ ಆಧರಿಸಿ, ಸತತ ಗೆದ್ದು ಬೀಗಿರುವ ಅಥವಾ ಅತ್ಯುತ್ತಮವಾಗಿ ಕೆಲಸ ಮಾಡಿರುವ ಸಂಸದರಿಗೇ ಟಿಕೆಟ್ ಕೊಡದಿರುವ ನಿರ್ಧಾರವನ್ನು ಕೈಗೊಳ್ಳುತ್ತಿದ್ದು, ಈ ಟಿಕೆಟ್ ವಂಚಿತರ ಪಟ್ಟಿಯಲ್ಲಿ ಡಿ.ವಿ.ಸದಾನಂದಗೌಡರೂ ಸ್ಥಾನ ಪಡೆದಿದ್ದಾರೆ.

ನವೆಂಬರ್ 2023 ರಲ್ಲೇ ನಾನು 2024 ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಅಥವಾ ರಾಜಕೀಯ ನಿವೃತ್ತಿ ಕೈಗೊಳ್ಳಲಿದ್ದೇನೆ ಎನ್ನುವ ನಿರ್ಧಾರವನ್ನು ಪ್ರಕಟಿಸಿದ್ದ ಸದಾನಂದಗೌಡರು, ಸಂಸದನಾಗಿದ್ದರೂ ಕೂಡ ಸಕ್ರಿಯ ರಾಜಕಾರಣದಿಂದ ದೂರವೇ ಉಳಿದಂತಿತ್ತು. ಅದಕ್ಕೆ ಪೂರಕವೆಂಬಂತೆ ಈ ಬಾರಿಯ ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಸಿಗುವುದಿಲ್ಲ ಎನ್ನುವುದು ಸರಿಸುಮಾರು ಖಚಿತವಾಗುತ್ತಲೇ, ಟ್ವಿಟರ್ ಮೂಲಕ ಪಕ್ಷಕ್ಕೆ ಹಾಗೂ ಜನತೆಗೆ ಧನ್ಯವಾದ ಹೇಳಿರುವ ಸದಾನಂದಗೌಡರು, ಕಳೆದ ಹತ್ತು ವರ್ಷಗಳ ಕಾಲ ಲೋಕಸಭಾ ಸಂಸದನಾಗಿ ಕೆಲಸ ಮಾಡುವುದಕ್ಕೆ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದ ಹೇಳಿದ್ದಾರೆ. ಸೇವೆಯನ್ನು ನೀಡುವಲ್ಲಿ ಶಕ್ತಿಮೀರಿ ಪ್ರಯತ್ನಿಸಿದ್ದೇನೆ ಎಂದು ಹೇಳುವ ಮೂಲಕ ತನ್ನ ಅವಧಿಯಲ್ಲಿ ಸಮರ್ಥವಾಗಿ ಕೆಲಸ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ, ಇವರ ಈ ಟ್ವೀಟ್ ಗೆ ಕೆಲ ಜನತೆ ಹಾಸ್ಯಾಸ್ಪದವಾಗಿ ಕಮೆಂಟ್ ಮಾಡಿದರೆ, ಕೆಲವರು ಅಭಿನಂದನೆ ಸಲ್ಲಿಸಿದ್ದಾರೆ.

ಸೆಪ್ಟೆಂಬರ್ 2021 ರಲ್ಲಿ ಅಪರಿಚಿತ ಮಹಿಳೆಯೊಬ್ಬರೊಂದಿಗೆ ವೀಡಿಯೋ ಕಾಲ್’ನಲ್ಲಿ ಅಸಭ್ಯವಾಗಿ, ಅಶ್ಲೀಲವಾಗಿ ಮಾತನಾಡಿದ ಆರೋಪವನ್ನು ಎದುರಿಸುತ್ತಿರುವ ಸದಾನಂದಗೌಡರ ವರ್ಚಸ್ಸು, ಆ ಘಟನೆಯ ನಂತರ ಬಹಳಷ್ಟು ಕಳೆಗುಂದಿತ್ತು. ಈ ಆರೋಪವನ್ನು ಸದಾನಂದಗೌಡರು ತಳ್ಳಿಹಾಕಿದ್ದು, ನನ್ನ ಹೆಸರು ಕೆಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ಅದೇನೇ ಇರಲಿ, ದಕ್ಷಿಣ ಕನ್ನಡ ಕ್ಷೇತ್ರದಿಂದ ಆರಂಭಗೊಂಡು, ಬೆಂಗಳೂರು ಉತ್ತರ ಕ್ಷೇತ್ರದವರೆಗೆ 1983 ರಿಂದ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡೇ ಭಾರತೀಯ ಜನತಾ ಪಕ್ಷದಲ್ಲಿ ದುಡಿದ ಸದಾನಂದಗೌಡರಿಗೆ, ಇತ್ತೀಚಿನ ದಿನಗಳಲ್ಲಿ ಜನಬೆಂಬಲ ಹಾಗೂ ವರ್ಚಸ್ಸು ಕುಂದಿರುವುದನ್ನು ಮನಗಂಡು ಹೈಕಮಾಂಡ್ ಟಿಕೆಟ್ ಘೋಷಿಸದೇ ಉಳಿಯಿತೋ ಅಥವಾ ಸ್ವಯಂ ಸದಾನಂದಗೌಡರ ರಾಜಕೀಯ ನಿವೃತ್ತಿ ನಿರ್ಧಾರವನ್ನು ಪುರಸ್ಕರಿಸಿತೋ ಎನ್ನುವುದು ಜನತೆಯಲ್ಲಿ ಮೂಡಿದ ಪ್ರಶ್ನೆಯಾಗಿದೆ.

ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಹಾಗೂ ಸಚಿವೆ ಶೋಭಾ ಕರಂದ್ಲಾಜೆಯವರು ಸ್ಪರ್ಧಿಸುವುದು ಬಹುತೇಕ ಖಚಿತವಾಗಿದ್ದು, ಈ ನಿರ್ಧಾರದ ಕುರಿತು ಪರ-ವಿರೋಧ ಚರ್ಚೆಗಳು ಈಗಾಗಲೇ ಕಾವೇರಿವೆ. ಇನ್ನುಳಿದಂತೆ, ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಟಫ್ ಫೈಟ್ ಕೊಡಬೇಕು ಎನ್ನುವ ಕಾರಣಕ್ಕೆ ಉಭಯ ಪಕ್ಷಗಳೂ ತಮ್ಮ ಹುರಿಯಾಳುಗಳನ್ನು ಸಿದ್ಧಗೊಳಿಸುತ್ತಿದ್ದು, ಈ ಬಾರಿಯ ಚುನಾವಣೆಯ ಕಾವು ರಂಗೇರುವುದಂತೂ ಖಂಡಿತ.

You might also like
Leave A Reply

Your email address will not be published.