ಕಮಲ್ ಮೌಲಾ ಮಸೀದಿಯೋ? ಭೋಜ್ ಶಾಲಾ ದೇವಾಲಯವೋ? – ಪುರಾತತ್ವ ಇಲಾಖೆ ಸಮೀಕ್ಷೆಗೆ ಮಧ್ಯಪ್ರದೇಶ ಹೈಕೋರ್ಟ್ ಅಸ್ತು

ಈಗಾಗಲೇ ಕಾಶಿಯ ಗ್ಯಾನವಾಪಿ ಮಸೀದಿಯು ಹಿಂದೂ ದೇವಾಲಯವನ್ನು ಕೆಡವಿ ಕಟ್ಟಲಾಗಿದೆ ಹಾಗೂ ಹಿಂದೂಗಳಿಗೆ ಪೂಜೆ ಸಲ್ಲಿಸುವ ಅವಕಾಶ ನೀಡಿರುವಂತೆ ಹಾಗೂ ಮಥುರಾದಲ್ಲಿಯೂ ಸಮೀಕ್ಷೆ ನಡೆಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿರುವ ಬೆನ್ನಲ್ಲೇ, ಮಧ್ಯಪ್ರದೇಶದಲ್ಲೂ ದೇವಾಲಯವನ್ನು ಕೆಡವಿ ಮಸೀದಿ ನಿರ್ಮಿಸುವುದರ ಬಗ್ಗೆ ಸಮೀಕ್ಷೆ ನಡೆಸುವಂತೆ ಮಧ್ಯಪ್ರದೇಶ ಹೈಕೋರ್ಟ್ ಪುರಾತತ್ವ ಇಲಾಖೆಗೆ ಆದೇಶಿಸಿದೆ. ಹಾಗಿದ್ದರೆ ಆ ಮಸೀದಿ ಅಥವಾ ದೇವಾಲಯ ಯಾವುದು? ಅದರ ಹಿನ್ನೆಲೆ ಏನು? ತಿಳಿಯೋಣ ಬನ್ನಿ.

ಈಗಾಗಲೇ ಗ್ಯಾನವಾಪಿ ಕೇಸ್ ನಲ್ಲಿ ಸಮಸ್ತ ಹಿಂದೂಗಳಿಗೆ ಜಯ ದೊರಕಿದೆ ಹಾಗೂ ಶಿವಲಿಂಗಕ್ಕೆ ಪೂಜೆ ಸಲ್ಲಿಸಲಾಗುತ್ತಿದೆ. ಅಂತೆಯೇ ಮಥುರಾದಲ್ಲಿ ಶ್ರೀ ಕೃಷ್ಣಜನ್ಮಭೂಮಿಯ ಜಾಗದಲ್ಲಿ ಷಾಹಿ ಈದ್ಗಾ ಮಸೀದಿಯನ್ನು ಕಟ್ಟಲಾಗಿದೆ ಎಂದು ನೀಡಲಾದ ದೂರಿನನ್ವಯ ಅಲಹಾಬಾದ್ ಹೈಕೋರ್ಟ್ ಮುಂದಿನ ಕ್ರಮಕ್ಕಾಗಿ ಸೂಚನೆ ನೀಡಿದ್ದರೂ, ತೀರ್ಪಿಗೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ತಡೆ ನೀಡಿದೆ. ಆದರೆ, ಇದೀಗ ಮಧ್ಯಪ್ರದೇಶದ ಮಸೀದಿಯೊಂದನ್ನು 13 ಮತ್ತು 14 ನೇ ಶತಮಾನದಲ್ಲಿ ಅಲ್ಲಾವುದ್ದೀನ್ ಖಿಲ್ಜಿಯ ಆಡಳಿತದ ಸಮಯದಲ್ಲಿ, ದೇವಾಲಯವನ್ನು ಕೆಡವಿ ನಿರ್ಮಿಸಲಾಗಿದೆ ಎಂದು ಸಲ್ಲಿಸಲಾದ ದೂರಿನನ್ವಯ, ಸತ್ಯಾಂಶ ಪತ್ತೆಗೆ ಪುರಾತತ್ವ ಇಲಾಖೆಗೆ ಮಧ್ಯಪ್ರದೇಶ ಹೈಕೋರ್ಟ್ ಉಚ್ಛಪೀಠ ಆದೇಶಿಸಿದೆ.

ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿರುವ ಕಮಲ್ ಮೌಲಾ ಮಸೀದಿ ಸಂಕೀರ್ಣವನ್ನು, ಅಲ್ಲಾವುದ್ದೀನ್ ಖಿಲ್ಜಿಯ ಕಾಲದಲ್ಲಿ ವಾಗ್ದೇವಿ (ಸರಸ್ವತಿ) ಮಂದಿರವನ್ನು ಕೆಡವಿ ಕಟ್ಟಲಾಗಿತ್ತು ಎಂದು ಹಿಂದು ಫ್ರಂಟ್ ಫಾರ್ ಜಸ್ಟಿಸ್ ಎನ್ನುವ ಸಂಘಟನೆಯೊಂದು ಪೆಟಿಶನ್ ಸಲ್ಲಿಸಿರುವುದನ್ನು ಆಧರಿಸಿ, ಮಧ್ಯಪ್ರದೇಶ ಹೈಕೋರ್ಟ್ ಪೀಠ ಈ ಆದೇಶ ನೀಡಿದೆ.

ಭೋಜಶಾಲಾ ಮಂದಿರ ಎಂದು ಕರೆಯಿಸಿಕೊಳ್ಳುವ ಈ ಸ್ಥಳ, 2003 ರ ವ್ಯವಸ್ಥೆಗಳ ಪ್ರಕಾರ ಮಂಗಳವಾರ ಹಿಂದೂಗಳಿಂದ ಪೂಜೆ ಹಾಗೂ ಶುಕ್ರವಾರ ಮುಸ್ಲಿಮರಿಂದ ನಮಾಜ್ ನಡೆಸಲಾಗುತ್ತಿತ್ತು. ಆದರೆ, ಪೆಟಿಶನ್ ಸಲ್ಲಿಸಿರುವ ಹಿಂದು ಫ್ರಂಟ್ ಫಾರ್ ಜಸ್ಟಿಸ್ ಪ್ರಕಾರ, ಈ ಭೋಜಶಾಲಾ ಮಂದಿರವಿರುವ ಸ್ಥಳದಲ್ಲಿ ಪುರಾತನ ವಾಸ್ತುಕಲೆ ಹಾಗೂ ಕಲಾಕೃತಿಗಳನ್ನು ವಿರೂಪಗೊಳಿಸಲಾಗಿದೆ ಎನ್ನಲಾಗಿದೆ.

Kamal Maula Masjid? Bhoj School Temple? - Madhya Pradesh High Court for Archeology Department survey

ಈ ಕುರಿತು ಪುರಾತತ್ವ ಇಲಾಖೆಗೆ ಸರ್ವೇ ನಡೆಸುವಂತೆ ನಿರ್ದೇಶನ ನೀಡಿರುವ ನ್ಯಾ. ಸುಶ್ರುತ್ ಅರವಿಂದ್ ಧರ್ಮಾಧಿಕಾರಿ ಹಾಗೂ ನ್ಯಾ. ದೇವನಾರಾಯಣ್ ಮಿಶ್ರಾ ಅವರ ಪೀಠವು, “ಈ ಸ್ಥಳದ ಗುಣಲಕ್ಷಣಗಳನ್ನು ಮರುಪರಿಶೀಲನೆಗೊಳಿಸಬೇಕಾಗಿದ್ದು ಅವಶ್ಯವಾಗಿದೆ. ನಾಗರಿಕರಲ್ಲಿ ಹಲವಾರು ಸಂದೇಹಗಳನ್ನು ಸೃಷ್ಟಿಸಿರುವ ಈ ಸ್ಥಳದ ಊಹಾಪೋಹಗಳಿಗೆ ತೆರೆ ಎಳೆಯಬೇಕಿದೆ” ಎಂದು ಹೇಳಿದೆ.

ಕಾರ್ಬನ್ ಡೇಟಿಂಗ್ ಮೂಲಕ ಸ್ಥಳದ ಪ್ರತಿಯೊಂದು ಸೂಕ್ಷ್ಮ ಭಾಗಗಳನ್ನೂ ಅತ್ಯಂತ ಆಧುನಿಕ ವಿಧಾನಗಳ ಮೂಲಕವೇ ಪರಿಶೀಲಿಸುವಂತೆ ಕೋರ್ಟ್ ಸೂಚಿಸಿದ್ದು, ಲಾಕ್ ಆಗಿರುವ ಕೋಣೆಗಳು, ಸಂಕೀರ್ಣದ ವಿಭಾಗಗಳನ್ನು ತೆರೆದು ಅತ್ಯಂತ ಸೂಕ್ಷ್ಮವಾಗಿ ಹಾಗೂ ಕೂಲಂಕಷವಾಗಿ ಸ್ಥಳದ ಪ್ರಾಚೀನತೆಯ ಪ್ರಮಾಣವನ್ನು ಪರಿಶೀಲಿಸುವಂತೆ ಕಟ್ಟುನಿಟ್ಟಾಗಿ ಪುರಾತತ್ವ ಇಲಾಖೆಗೆ ಸೂಚಿಸಲಾಗಿದೆ.

ಕೋರ್ಟ್ ನ ಈ ನಿರ್ಧಾರದ ಕುರಿತು ಅಸಾಮಾಧಾನ ವ್ಯಕ್ತಪಡಿಸಿರುವ ಧಾರ್ ಜಿಲ್ಲೆಯ ಷಹಾರ್ ಖಾಜಿ ಆದ (ಸ್ಥಳೀಯ ಮುಸ್ಲಿಂ ಮುಖಂಡರು) ವಖಾರ್ ಸಾದಿಕ್, ಈ ತೀರ್ಪನ್ನು ಪ್ರಶ್ನಿಸಿ ಮಸೀದಿಯ ಆಡಳಿತ ಮಂಡಳಿಯು ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿಯನ್ನು ಸಲ್ಲಿಸಲಿದೆ ಎಂದಿದ್ದಾರೆ.

ಕೋರ್ಟ್ ನ ಈ ನಿರ್ಧಾರದ ಕುರಿತು ಮಧ್ಯಪ್ರದೇಶದ ಸರ್ಕಾರವೂ ಕೂಡ ಸಹಮತ ವ್ಯಕ್ತಪಡಿಸಿದ್ದು, ಹಲವು ಕಾಲಗಳಿಂದ ಬಗೆಹರಿಯದ ಇಂತಹ ಗೊಂದಲಗಳನ್ನು ಪರಿಹರಿಸುವಲ್ಲಿ ಸರ್ಕಾರ ಸಹಕರಿಸಲಿದೆ ಎಂದಿದೆ.

ಅದೇನೇ ಇರಲಿ, ಮೊಘಲ್ ಹಾಗೂ ಪರಕೀಯ ಆಕ್ರಮಣಕಾರರ ದಾಳಿಗಳಿಂದ ಹಾಗೂ ಧರ್ಮಾಂಧತೆಯಿಂದ ಮಬ್ಬುಗಟ್ಟಿದ ಭಾರತದ ಗತವೈಭವ ಮತ್ತೆ ಮರಳಿ ಬರಲಿ, ಹಿಂದೂಸ್ತಾನದಲ್ಲಿ ವಾಸ್ತುಶಿಲ್ಪ ಹಾಗೂ ಧಾರ್ಮಿಕ ಆಚಾರ-ಸಂಸ್ಕೃತಿಗಳು ಕಾನೂನಾತ್ಮಕವಾಗಿಯೂ, ರಾಷ್ಟ್ರದ ಅಸ್ಮಿತೆಯ ಪ್ರತೀಕವಾಗಿಯೂ ಮತ್ತೆ ಉದಯಿಸಿ ಬರಲಿ ಎನ್ನುವುದೇ ಸಮಸ್ತ ಹಿಂದೂ ಪ್ರಜೆಗಳ ಆಶಯವಾಗಿದೆ.

You might also like
Leave A Reply

Your email address will not be published.