ಅಗ್ನಿ – 5 ಯಶಸ್ಸಿನ ಹಿಂದಿದೆ ಸ್ತ್ರೀ ಶಕ್ತಿ – ಯಾರೀಕೆ ಕ್ಷಿಪಣಿ ರಾಣಿ?

ಭಾರತದ ಅಗ್ನಿ-5 ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿರುವ ಬೆನ್ನಲ್ಲೇ, ಜಗತ್ತಿನ ಐದು ದಿಗ್ಗಜ ರಾಷ್ಟ್ರಗಳ ನಡುವೆ ವಿಧ್ವಂಸಕ ಸಿಡಿತಲೆಗಳುಳ್ಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. 5,000 ಕ್ಕೂ ಅಧಿಕ ದೂರದ ವೈರಿನೆಲೆಯನ್ನು ಬಹುಮಾದರಿಯ ಕ್ಷಿಪಣಿಗಳ ಮೂಲಕ ಹೊಡದುರುಳಿಸಬಲ್ಲ ಅಗ್ನಿ-5 ದಿವ್ಯಾಸ್ತ್ರದ ತಯಾರಿಕೆಯ ಹಿಂದಿನ ಶಕ್ತಿ ಓರ್ವ ಸ್ತ್ರೀ ಎಂದರೆ ನಂಬುತ್ತೀರಾ? ಹೌದು. ಯಾರು ಆ ಮಿಸೈಲ್ ರಾಣಿ? ಇಲ್ಲಿದೆ ನೋಡಿ ವಿವರ.

ಡಿ.ಆರ್.ಡಿ.ಓ‌ ನಿರ್ಮಿತ ಅಗ್ನಿ-5 ಮಿಸೈಲ್ ಅನ್ನು ಪ್ರಧಾನಿ ಮೋದಿಯವರು ಘೋಷಿಸಿರುವಂತೆ, ಸರಿಸುಮಾರು ಚೀನಾದ ಬೀಜಿಂಗ್ ನಗರವನ್ನು ಒಂದೇ ನೆಗೆತದಿಂದ ಛಿದ್ರಗೊಳಿಸಬಲ್ಲ ವಿಧ್ವಂಸಕ ಶಕ್ತಿ ಜಗಜ್ಜಾಹೀರಾಗಿದೆ.‌ ಆದರೆ, ಈ ಮಿಸೈಲ್ ನಿರ್ಮಾಣದ ಹಿಂದೆ ಓರ್ವ ಮಹಿಳಾ ವಿಜ್ಞಾನಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಅವರೇ ಡಿ.ಆರ್.ಡಿ.ಓ ಅಗ್ನಿ-5 ಪ್ರೋಗ್ರಾಂ ಡೈರೆಕ್ಟರ್ ಆಗಿರುವ 57 ವರ್ಷದ ಮಿಸೈಲ್ ಎಕ್ಸ್‌ಪರ್ಟ್ ಆರ್. ಶೀಲಾ ರಾಣಿ.

ಹೈದರಾಬಾದ್‌ನಲ್ಲಿರುವ ಡಿ.ಆರ್.ಡಿ.ಓ ಅಂಗಸಂಸ್ಥೆ ಅಡ್ವಾನ್ಸ್ಡ್ ಸಿಸ್ಟಮ್ಸ್ ಲ್ಯಾಬೋರೇಟರಿ (ASL) ಇದರ ಪ್ರೋಗ್ರಾಂ ಡೈರೆಕ್ಟರ್ ಆಗಿರುವಂತಹ ಶೀಲಾ ರಾಣಿ, ಹಲವಾರು ಅಗ್ನಿ ಸಿಡಿತಲೆಗಳನ್ನು ನಿರ್ಮಿಸಿರುವಂತಹ ಡಿ.ಆರ್.ಡಿ.ಓ ದ ಅಸೋಸಿಯೇಟ್ ಡೈರೆಕ್ಟರ್ ಕೂಡ ಆಗಿದ್ದಾರೆ.

Agni - 5 Behind Success Female Power - Who is Missile Queen?

ಈ ಹಿಂದೆ 1999 ರಲ್ಲಿ ಡಿ.ಆರ್.ಡಿ.ಓ ಗೆ ನೇಮಕಗೊಳ್ಳುವ ಮುನ್ನ, ಸತತ ಎಂಟು ವರ್ಷಗಳ ಕಾಲ ಇಸ್ರೋದ ವಿಕ್ರಮ್ ಸಾರಾಭಾಯಿ ಸ್ಪೇಸ್ ಸೆಂಟರ್ ನಲ್ಲಿ ಉದ್ಯೋಗಿಯಾಗಿದ್ದು, 1998 ರ ಫ್ರೋಕ್ರಾನ್ – II ಅಣ್ವಸ್ತ್ರ ಪರೀಕ್ಷೆಯ ನಂತರ ಡಿ.ಆರ್.ಡಿ.ಓ ಗೆ ಸೇರ್ಪಡೆಗೊಂಡಿದ್ದರು. ಅಷ್ಟೇ ಅಲ್ಲದೇ, ಡಿ.ಆರ್.ಡಿ.ಓ ಅಭಿವೃದ್ಧಿಪಡಿಸಿದ ಬಹುತೇಕ ಅಗ್ನಿ ಮಿಸೈಲ್ ಪ್ರಾಜೆಕ್ಟ್’ಗಳಲ್ಲಿ ಪ್ರಮುಖ ವ್ಯಕ್ತಿಯಾಗಿದ್ದವರು ಈ ಶೀಲಾ ರಾಣಿ.

“ದೇಶದ ಗಡಿಗಳನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ಅಗ್ನಿ ಮಿಸೈಲ್ ಪ್ರೋಗ್ರಾಂಗಳ ಭಾಗವಾಗಿರುವುದಕ್ಕೆ ನನಗೆ ಹೆಮ್ಮೆ ಅನಿಸುತ್ತಿದೆ” ಎಂದು ಸಂತಸ ವ್ಯಕ್ತಪಡಿಸಿರುವ ಶೀಲಾ ರಾಣಿ ಅವರು, ಕೇವಲ 10 ನೇ ವಯಸ್ಸಿನಲ್ಲೇ ತನ್ನ ತಂದೆಯನ್ನು ಕಳೆದುಕೊಂಡ ನಂತರ ತನ್ನನ್ನು ಈ ಮಟ್ಟಕ್ಕೆ ಬೆಳೆಸಿ ಬೆನ್ನೆಲುಬಾಗಿ ನಿಂತ ತನ್ನ ತಾಯಿಗೆ ಧನ್ಯವಾದ ಅರ್ಪಿಸುತ್ತಾರೆ. ಅಷ್ಟೇ ಅಲ್ಲದೆ, ಈ ಎಲ್ಲಾ ಸಧನೆಗಳಿಗೆ, ಭಾರತದ‌ ಮಿಸೈಲ್ ಮ್ಯಾನ್, ಮಹಾನ್ ವಿಜ್ಞಾನಿ, ಮಾಜಿ ರಾಷ್ಟ್ರಪತಿಗಳಾದ ಭಾರತರತ್ನ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರೇ ಪ್ರೇರಣೆ‌ ಎನ್ನುತ್ತಾರೆ ಶೀಲಾ‌ ರಾಣಿ.

ಅಗ್ನಿ‌ ಮಿಸೈಲ್ ಗಳ ಸಮಗ್ರ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸವ ಶೀಲಾ ರಾಣಿ ಅವರ ಪ್ರಮುಖ ಕರ್ತವ್ಯ, ಉಡಾವಣೆಗೆ ಮುನ್ನ ಮಿಸೈಲ್’ಗಳ ಸ್ಥಿತಿಗತಿಯನ್ನು ಕೂಲಂಕಷವಾಗಿ ಪರಿಶೀಲಿಸುವುದಾಗಿದೆ. ಈ ಕುರಿತು ಇಂಟರ್ವ್ಯೂನಲ್ಲಿ ಮಾತನಾಡಿರುವ ಶೀಲಾ ರಾಣಿ ಅವರು, ಅಗ್ನಿ ಕ್ಷಿಪಣಿಯ ಉಡಾವಣೆಯ ಸಮಯದಲ್ಲಿ ನನ್ನ ಹೊಟ್ಟೆಯಲ್ಲಿ ಚಿಟ್ಟೆ ಬಿಟ್ಟ ಅನುಭವ ಆಗುತ್ತಿತ್ತು ಎಂದು ಹೇಳಿಕೊಂಡಿದ್ದಾರೆ.

ಏನೇ ಇರಲಿ. ಜಗತ್ತೇ ಮೂಗಿನ‌ ಮೇಲೆ ಬೆರಳಿರಿಸುವಂತೆ, ಅಗ್ನಿ-5 ಎಂ.ಐ.ಆರ್.ವಿ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾವಣಾ ಪರೀಕ್ಷೆ ನಡೆಸಿದ ಭಾರತದ ಸಾಧನೆಯ ಹಿಂದೆ, ಮಹಿಳಾ ಸಾಧಕಿಯೊಬ್ಬರ ಮಹತ್ವದ ಕೊಡುಗೆ ಇರುವುದಂತೂ ದೇಶಕ್ಕೆ ಹೆಮ್ಮೆಯ ವಿಚಾರ. ಈ ಸಾಧನೆಯು, ದೇಶದಲ್ಲಿ ಮಹಿಳೆಯರು ಇನ್ನಷ್ಟು ಆಸಕ್ತಿಯಿಂದ ಆವಿಷ್ಕಾರ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವಂತಾಗಲಿ ಎನ್ನುವುದೇ ಆಶಯ.

You might also like
Leave A Reply

Your email address will not be published.