ಆರ್ಟಿಕಲ್ 370 ಮತ್ತು 35A ಕುರಿತು ನಿಮಗೆಷ್ಟು ಗೊತ್ತು? – ಇಲ್ಲಿದೆ ಓದಿ ಕಂಪ್ಲೀಟ್ ಡೀಟೇಲ್ಸ್.

ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಭಾರತದಿಂದ ವಿಶೇಷವಾಗಿಯೇ ಉಳಿದಿದ್ದ ಜಮ್ಮು ಮತ್ತು ಕಾಶ್ಮೀರವನ್ನು ಭಾರತದ ಜನರೊಂದಿಗೆ, ಭಾರತೀಯತೆಯೊಂದಿಗೆ ಬೆಸೆಯುವ ಕೆಲಸವನ್ನು 2019ರ ಆಗಸ್ಟ್ 05ರಂದು ಮಾಡಿತ್ತು. ಬಿಜೆಪಿಯು ತಮ್ಮ ಚುನಾವಣಾ ಪ್ರಣಾಳಿಕೆಯ ಭರವಸೆಯಂತೆಯೇ ಹೇಗೇ ರಾಮಮಂದಿರ ನಿರ್ಮಾಣ ಮಾಡುತ್ತಿದೆಯೋ, ಅದೇ ದಿಶೆಯಲ್ಲಿ ಭಾರತದ ಸಾರ್ವಭೌಮತೆಗೆ, ಏಕತೆಗೆ ಅಡ್ಡಿಯಾಗಬಹುದಾಗಿದ್ದ ಜಮ್ಮು ಕಾಶ್ಮೀರ ರಾಜ್ಯದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ ಭಾರತೀಯರ ಪ್ರಶಂಸೆಗೆ ಪಾತ್ರವಾಗಿತ್ತು.

ಇದೀಗ, ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರದ ನಿರ್ಧಾರವನ್ನು ಬೆಂಬಲಿಸುವ ಮೂಲಕ ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದೆ. ಅಧಿಕೃತವಾಗಿ, ಜಮ್ಮು ಮತ್ತು ಕಾಶ್ಮೀರ ಭಾರತದ ಸಂವಿಧಾನ ಅಧೀನಕ್ಕೆ ಒಳಪಟ್ಟಂತಾಗಿದೆ.

ಅಷ್ಟಕ್ಕೂ ಜಮ್ಮು ಮತ್ತು ಕಾಶ್ಮೀರಕ್ಕೆ ಭಾರತೀಯ ಸಂವಿಧಾನದ ವಿಧಿ 370 ಹಾಗೂ 35 ಎ ಅಡಿ ನೀಡಲಾಗಿದ್ದ ವಿಶೇಷ ಪ್ರಾತಿನಿಧ್ಯತೆ, ಸೌಲಭ್ಯ ಹಾಗೂ ಹಕ್ಕುಗಳೇನು ಎಂಬುದನ್ನು ವಿಶ್ಲೇಷಿಸೋಣ.

ಸಂವಿಧಾನದ ಕಲಂ 370 ಜಮ್ಮು ಮತ್ತು ಕಾಶ್ಮೀರಕ್ಕೆ ತನ್ನದೇ ಆದ ಸಂವಿಧಾನವನ್ನು ಹೊಂದಲು ಅಧಿಕಾರ ನೀಡಿತ್ತು. ಅಲ್ಲದೇ, ಜಮ್ಮು ಮತ್ತು ಕಾಶ್ಮೀರಕ್ಕೆ ಸ್ವಾಯತ್ತ ಸ್ಥಾನಮಾನ ಹಾಗೂ ಭಾರತದ ಸಂಸತ್ತಿನ ಅಧಿಕಾರಕ್ಕೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಿರ್ಬಂಧವಿತ್ತು. ಸಂವಿಧಾನದ 35 ಎ ಕಲಂ ಜಮ್ಮು ಮತ್ತು ಕಾಶ್ಮೀರದ ಜನರಿಗೆ ದೇಶದ ಇತರೆ ಜನರಿಗಿಂತ ಹೆಚ್ಚಿನ ಸೌಲಭ್ಯ ಹಾಗೂ ಹಕ್ಕುಗಳನ್ನು ನೀಡಲಾಗಿತ್ತು.

ಆರ್ಟಿಕಲ್ 370 ಏನು ಹೇಳುತ್ತದೆ?

1) ಆರ್ಟಿಕಲ್ 370ಯು ಸಂವಿಧಾನ ಜಾರಿಗೆ ಬಂದ ದಿನದಿಂದಲೇ, ಸಂವಿಧಾನದ ಒಂದು ಭಾಗವಾಗಿದ್ದು ಜಮ್ಮು ಮತ್ತು ಕಾಶ್ಮೀರವು ತನ್ನದೇ ಆದ ಸಂವಿಧಾನ ರೂಪಿಸಿಕೊಳ್ಳಲು ಅವಕಾಶ ನೀಡಿದೆ.
2) ರಕ್ಷಣೆ, ವಿದೇಶಾಂಗ, ಹಣಕಾಸು ಹಾಗೂ ಸಂವಹನ ವಿಷಯಗಳ ಹೊರತಾಗಿ ಭಾರತದ ಸಂಸತ್ತಿನಲ್ಲಿ ಪಾಸ್ ಆದ ಯಾವುದೇ ಕಾನೂನುಗಳು ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯವಾಗುವುದಿಲ್ಲ. ಇಲ್ಲಿ ಯಾವುದೇ ನೂತನ ಕಾಯ್ದೆಗಳನ್ನು ಜಾರಿ ಮಾಡಲು ರಾಜ್ಯ ಸರ್ಕಾರದ ಒಪ್ಪಿಗೆಯ ಅವಶ್ಯಕತೆಯಿದೆ.
3) ಜಮ್ಮು ಮತ್ತು ಕಾಶ್ಮೀರದ ಜನತೆಗೆ ಆ ರಾಜ್ಯದ ಹಾಗೂ ಭಾರತದ ದ್ವಿ ಪೌರತ್ವವನ್ನು ನೀಡುತ್ತದೆ.
4) ಆ ರಾಜ್ಯದ ಮುಖ್ಯಮಂತ್ರಿಯೊಂದಿಗೆ ಸಮಾಲೋಚಿಸಿದ ನಂತರವೇ ರಾಜ್ಯಪಾಲರನ್ನು ನೇಮಿಸಬೇಕು.
5) ಭಾರತೀಯ ಸಂವಿಧಾನದ 360 ನೇ ವಿಧಿಯ ಅಡಿಯಲ್ಲಿ ಆರ್ಥಿಕ ತುರ್ತು ಪರಿಸ್ಥಿತಿಯನ್ನು ಜಮ್ಮು ಮತ್ತು ಕಾಶ್ಮೀರದ ರಾಜ್ಯದ ಮೇಲೆ ಹೇರಲಾಗುವುದಿಲ್ಲ.
6) ಭಾರತೀಯ ಸಂವಿಧಾನದಲ್ಲಿ ಪ್ರತಿಪಾದಿಸಲಾದ ರಾಜ್ಯ ನೀತಿ ನಿರ್ದೇಶಕ ತತ್ವಗಳು ಮತ್ತು ಮೂಲಭೂತ ಕರ್ತವ್ಯಗಳು ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯಿಸುವುದಿಲ್ಲ.
7) ಜಮ್ಮು ಮತ್ತು ಕಾಶ್ಮೀರ ರಾಜ್ಯದ ಹೆಸರು, ಗಡಿ ಅಥವಾ ಪ್ರದೇಶವನ್ನು ರಾಜ್ಯ ಶಾಸಕಾಂಗದ ಒಪ್ಪಿಗೆಯಿಲ್ಲದೆ ಸಂಸತ್ತು ಬದಲಾಯಿಸಲು ಸಾಧ್ಯವಿಲ್ಲ.
8) ರಾಷ್ಟ್ರಪತಿ ಆಳ್ವಿಕೆಯ ಹೊರತಾಗಿ, ಗರಿಷ್ಠ ಆರು ತಿಂಗಳ ಅವಧಿಗೆ ರಾಜ್ಯಪಾಲರ ಆಳ್ವಿಕೆಯನ್ನು ಸಹ ರಾಜ್ಯದಲ್ಲಿ ವಿಧಿಸಬಹುದು.
9) ಒಂದು ವೇಳೆ ರಾಷ್ಟ್ರಪತಿಗಳು ಬಯಸಿದರೆ ಅಧಿಕೃತ ಆದೇಶವನ್ನು ಹೊರಡಿಸುವ ಮೂಲಕ ಆರ್ಟಿಕಲ್370 ಅನ್ನು ರದ್ದುಗೊಳಿಸಬಹುದು. ಆದರೆ, ಆ ಆದೇಶವನ್ನು ಹೊರಡಿಸುವ ಮೊದಲು ಜಮ್ಮು ಮತ್ತು ಕಾಶ್ಮೀರದ ಶಾಸಕಾಂಗ ಸಭೆಯ ಒಪ್ಪಿಗೆಯನ್ನು ಪಡೆಯಲೇಬೇಕು.

35 ಎ ಕಲಂ ಏನು ಹೇಳುತ್ತದೆ?
1)ಯಾವ ಕಾನೂನುಗಳು ದೇಶದ ನಾಗರಿಕರು ಪಾಲಿಸುತ್ತಿರುವರೋ ಆ ಎಲ್ಲಾ ಕಾನೂನುಗಳು ಜಮ್ಮು ಮತ್ತು ಕಾಶ್ಮೀರದ ಜನತೆಗೆ ಅನ್ವಯಿಸುವುದಿಲ್ಲ.
2) ಜಮ್ಮು ಮತ್ತು ಕಾಶ್ಮೀರದಲ್ಲಿ ನೆಲೆಸಿರುವವರಲ್ಲಿ ಯಾರನ್ನು ಖಾಯಂ ನಿವಾಸಿಗಳಾಗಿ ಮಾಡಬೇಕು ಮತ್ತು ಯಾರನ್ನು ಮಾಡಬಾರದು ಎಂಬುದು. ಜಮ್ಮು ಮತ್ತು ಕಾಶ್ಮೀರದಲ್ಲಿ ಯಾರನ್ನು ಖಾಯಂ ನಿವಾಸಿಗಳಾಗುತ್ತಾರೋ ಅವರ ಬಳಿ ವಿಶೇಷವಾದ ಅಧಿಕಾರವಿರುತ್ತದೆ. ಯಾರು ಖಾಯಂ ನಿವಾಸಿಗಳಲ್ಲವೋ ಅವರ ಬಳಿ ಯಾವುದೇ ತೆರನಾದ ವಿಶೇಷ ಅಧಿಕಾರ ಇರುವುದಿಲ್ಲ.

ಹಾಗಾದರೆ ಯಾರನ್ನು ಜಮ್ಮುಮತ್ತು ಕಾಶ್ಮೀರದ ಖಾಯಂ ನಿವಾಸಿಗಳು ಎಂದು ಪರಿಗಣಿಸಬೇಕು?

ಯಾರು, 1954 ಮೇ 14ಕ್ಕಿಂತ ಮೊದಲು ಜಮ್ಮು ಕಾಶ್ಮೀರದಲ್ಲಿ ನೆಲೆಸಿರುವರೋ,
ಯಾರು ಹತ್ತಕ್ಕಿಂತ ಹೆಚ್ಚು ವರ್ಷ ಜಮ್ಮುಕಾಶ್ಮೀರಲ್ಲಿ ವಾಸ ಮಾಡುತ್ತಿರುವರೋ ಅಥವಾ ಯಾರು ಕಾನೂನಾತ್ಮಕವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ವರ್ಗಾಯಿಸಲಾಗದ ಆಸ್ತಿಯನ್ನು ಹೊಂದಿರುತ್ತಾರೋ ಅವರು ಅಲ್ಲಿನ ಖಾಯಂ ನಿವಾಸಿಗಳಾಗಬಹುದಿತ್ತು.

3) ಜಮ್ಮು ಮತ್ತು ಕಾಶ್ಮೀರದ ಜನತೆಗೆ ಆಸ್ತಿಯ ಹಕ್ಕನ್ನು ನೀಡಲಾಗಿದೆ. ಜಮ್ಮು ಕಾಶ್ಮೀರದ ಹೊರಗಿನ ಯಾವುದೇ ರಾಜ್ಯದ ಜನತೆ ಇಲ್ಲಿ ಆಸ್ತಿ ಖರೀದಿಸುವಂತಿರಲಿಲ್ಲ. ಯಾವುದೇ ಕಾಶ್ಮೀರಿ ಮಹಿಳೆ ಕಾಶ್ಮೀರದ ಹೊರಗಿನವರನ್ನು ಮದುವೆಯಾದರೆ ಆಸ್ತಿಯ ಮೇಲಿನ ಅವರ ಹಕ್ಕನ್ನು ಕಳೆದುಕೊಳ್ಳುತ್ತಾರೆ. 2002 ರ ಸುಪ್ರೀಂ ಕೋರ್ಟಿನ ತೀರ್ಪಿನ ಪ್ರಕಾರ ಮದುವೆಯ ನಂತರವೂ ಆಕೆ ಆಸ್ತಿಯ ಮೇಲಿನ ಹಕ್ಕನ್ನು ಹೊಂದಬಹುದು. ಆದರೆ, ತನ್ನ ಮಕ್ಕಳಿಗೆ ಅದನ್ನು ಹಸ್ತಾಂತರಿಸುವಂತಿರಲಿಲ್ಲ ಎಂದು ಹೇಳಲಾಗಿತ್ತು.

4) ಜಮ್ಮು ಮತ್ತು ಕಾಶ್ಮೀರದ ಜನತೆ ಮಾತ್ರ ಅಲ್ಲಿ ಸರ್ಕಾರಿ ನೌಕರಿಯನ್ನು ಪಡೆಯಬಹುದಾಗಿತ್ತು.

ಸಂವಿಧಾನದ ಆರ್ಟಿಕಲ್ 370 ಅನ್ನು ರದ್ದು ಮಾಡುವ ವಿಧಾನವನ್ನು ಅದೇ ಆರ್ಟಿಕಲ್ʼನಲ್ಲಿ ಹೇಳಿದ್ದರೂ, ಯಾಕೆ ಮಾಡಿರಲಿಲ್ಲ ಎಂದು ಪ್ರಶ್ನೆ ಬರಬಹುದು. ಕಾರಣವಿಷ್ಟೇ, ಯಾವ ಸಂವಿಧಾನ ರಚನಾ ಸಮಿತಿಯ ಒಪ್ಪಿಗೆ ಬೇಕಿತ್ತೋ, ಆ ಸಮಿತಿಯ ಅವಧಿ 1957 ರಲ್ಲೇ ಮುಕ್ತಾಯವಾಗಿತ್ತು. ಅಂದರೆ ಅದು ವಾಸ್ತವವಾಗಿ ಅಸ್ತಿತ್ವದಲ್ಲಿ ಇರಲೇ ಇಲ್ಲ. ಅಲ್ಲದೇ, ರಾಜಕಾರಣದ ಬದ್ಧತೆಯೂ ಇಲ್ಲಿಯವರೆಗೆ ದೇಶವನ್ನಾಳಿದ ಪಕ್ಷಗಳಿಗಿರಲಿಲ್ಲ ಎಂಬುದನ್ನೂ ಪರಿಗಣಿಸಬಹುದು.

ಒಟ್ಟಿನಲ್ಲಿ 370 & 35 ಎ ಆರ್ಟಿಕಲ್’ಗಳು ಕಾಶ್ಮೀರದಲ್ಲಿ ವಿವಿಧ ಕಾನೂನುಗಳನ್ನು ಅಳವಡಿಸಿಕೊಳ್ಳುವ ಮೂಲಕ ಭಾರತದಿಂದ ವಿಭಿನ್ನ ಎಂದು ತೋರಿಸುವಲ್ಲಿ ಯಶಸ್ವಿಯಾಗಿದ್ದವು. ಆದರೆ, ಮೋದಿ ಸರ್ಕಾರ ಈ ಆರ್ಟಿಕಲ್’ಗಳನ್ನು 2019ರ ಆಗಸ್ಟ್ 05 ರಂದು ರದ್ದುಗೊಳಿಸಿ, ಐತಿಹಾಸಿಕ ತೀರ್ಮಾನ ಕೈಗೊಂಡಿತ್ತು. ಇದೀಗ, ಸುಪ್ರೀಂ ಕೋರ್ಟ್ ಸಹ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಅಸ್ತು ಎನ್ನುವ ಮೂಲಕ ಕಾಶ್ಮೀರಿ ಪ್ರತ್ಯೇಕತಾವಾದಿಗಳಿಗೆ ಬರೆ ಎಳೆದಿದೆ.

You might also like
Leave A Reply

Your email address will not be published.