ಬಿಸಿಲಿನಲ್ಲೂ ಜೋರಾದ ಚುನಾವಣಾ ಕಾವು : ಹಾರ, ತುರಾಯಿ, ಹಣ್ಣಿಗೆ ಭಾರೀ ಡಿಮ್ಯಾಂಡ್‌

ರಾಜ್ಯದಲ್ಲಿ ಬಿಸಿಲಿನ ಕಾವು ಹೆಚ್ಚಾದಂತೆ ಚುನಾವಣಾ ಬಿಸಿ ಹೆಚ್ಚುತ್ತಿದ್ದು, ಅಭ್ಯರ್ಥಿಗಳು ವಿಭಿನ್ನವಾಗಿ ಪ್ರಚಾರ ನಡೆಸುತ್ತಿದ್ದಾರೆ. ಅಲ್ಲದೇ ಎಲ್ಲಾ ಪಕ್ಷಗಳ ನಾಯಕರಿಗೆ ಸ್ವಾಗತಿಸಲು ಹೂಗುಚ್ಛ, ಹೂವು, ಹಣ್ಣು ನೀಡುವುದು ಸರ್ವೇ ಸಾಮಾನ್ಯ. ಈ ನಿಟ್ಟಿನಲ್ಲಿ ಹೂಗುಚ್ಛ, ತರಹೇವಾರಿ ಹೂವು, ಹಣ್ಣಿನ ಹಾರಗಳಿಗೆ ಡಿಮ್ಯಾಂಡ್ ಕೂಡ ಹೆಚ್ಚಾಗಿದೆ.

ಈ ಮೊದಲು ಜಿಲ್ಲೆಗೆ ರಾಜ್ಯಮಟ್ಟದ ಅಥವಾ ರಾಷ್ಟ್ರಮಟ್ಟದ ನಾಯಕರು ಬಂದರೆ ಹೂಗುಚ್ಛ ನೀಡಿ ಸ್ವಾಗತಿಸಲಾಗುತ್ತಿತ್ತು. ಆದರೀಗ ಟ್ರೆಂಡ್‌ ಬದಲಾಗಿದ್ದು, ಪ್ರಚಾರ ರ್ಯಾಲಿಗೆ ಬರುವ ತಮ್ಮ ನೆಚ್ಚಿನ ನಾಯಕರಿಗೆ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರು ದೊಡ್ಡ ಹಾರ ತಯಾರಿಸಿ ಜೆಸಿಬಿ ಅಥವಾ ಕ್ರೇನ್‌ ಮೂಲಕ ಹಾರ ಹಾಕಿ ಅವರನ್ನು ಸ್ವಾಗತಿಸುತ್ತಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಗರದ ರಸ್ತೆ ಬದಿಯಲ್ಲಿ ಹೂಗುಚ್ಛ ಹಾಗೂ ಹಾರಗಳಿಗೆ ಭಾರಿ ಬೇಡಿಕೆ ಬಂದಿದೆ. ಎಲ್ಲೆಡೆ ಚುನಾವಣಾ ಪ್ರಚಾರ ಇರುವುದರಿಂದ ಮುಖಂಡರು ಹಾಗೂ ಕಾರ್ಯಕರ್ತರು ಹೂವು, ಸೇಬಿನ ಹಾರದ ಮೊರೆ ಹೋಗಿದ್ದಾರೆ. ಇದರಿಂದ ವ್ಯಾಪಾರಿಗಳು ಬೆಳಗ್ಗೆಯಿಂದ ಸಂಜೆವರೆಗೂ ತರಹೇವಾರಿ ಹೂಗಳ ಬೊಕ್ಕೆ ಹಾಗೂ ಹಣ್ಣಿನ ಹಾರವನ್ನು ಸಿದ್ಧಪಡಿಸುವುದರಲ್ಲಿ ನಿರತರಾಗಿದ್ದಾರೆ.

Election Incubation: Huge demand for garland, fruit

ಹೂವಿನ ಹಾರಕ್ಕೆ ಹೆಚ್ಚಿದ ಡಿಮ್ಯಾಂಡ್:

# ಹಿಂದೆ 60, 70 ರೂ.ಗೆ ಸಿಗುತ್ತಿದ್ದ ಹೂವಿನ ಹಾರ ಈಗ 150 ರಿಂದ 200 ರ ಗಡಿದಾಟಿದೆ.

# ಚೆಂಡುಮಲ್ಲಿಗೆ, ಸುಗಂಧರಾಜ ಹಾಗೂ ಗುಲಾಬಿ ಹೂವಿನ ಹಾರಗಳಿಗೆ ಡಿಮ್ಯಾಂಡ್‌ ಸೃಷ್ಟಿಯಾಗಿದೆ.

# ಒಂದು ಜತೆ ಗುಲಾಬಿ ಹೂವಿನ ಹಾರ 300ರಿಂದ 500ರೂ. ವರೆಗೂ ಮಾರಾಟವಾಗುತ್ತಿದೆ.

# ಒಂದು ಜತೆ ಸುಗಂಧರಾಜ ಹೂವಿನ ಹಾರ 300 ರಿಂದ 450 ರೂ., ವರೆಗೂ ಮಾರಾಟವಾಗುತ್ತಿವೆ. ಇನ್ನು ದೊಡ್ಡ ಹಾರಗಳಿಗೆ ಸಾವಿರಾರು ರೂ.ಗಳನ್ನು ನೀಡಬೇಕಿದೆ.

ಹೂವಿನ ಹಾಗೂ ಹಣ್ಣಿನ ಹಾರಕ್ಕೆ ನಾನಾ ರಾಜಕೀಯ ಪಕ್ಷಗಳಿಂದ ಆರ್ಡರ್‌ ಬರುತ್ತಿದೆ. ಸೇಬು, ದಾಳಿಂಬೆ, ಮೂಸಂಬಿ ಸೇರಿ ವಿವಿಧ ಹಣ್ಣು ಹಾಗೂ ಹಾರಕ್ಕೆ ಬೇಡಿಕೆ ಇದೆ. ಯಾವುದೇ ಹಾರ ಬೇಕಿದ್ದರೂ ಒಂದು ದಿನ ಮುಂಚೆಯೇ ಆರ್ಡರ್‌ ಕೊಡಬೇಕು.

ಹೂವಿನೊಂದಿಗೆ ಮಜ್ಜಿಗೆ, ನೀರಿಗೂ ಹೆಚ್ಚಾದ ಬೇಡಿಕೆ

ಬಿಸಿಲಿನ ತಾಪಮಾನಕ್ಕೆ ಈಗಾಗಲೇ ಸಾಮಾನ್ಯರು ಬಳಲಿ ಬೆಂಡಾಗಿದ್ದಾರೆ. ಅದರಲ್ಲೂ ಅಭ್ಯರ್ಥಿಗಳು ಬಿಸಿಲಿನಲ್ಲೇ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಹೀಗಾಗಿ ಮಜ್ಜಿಗೆ, ನೀರಿನ ಬಾಟಲ್‌ಗೆ ಇದೀಗ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ.

ರಾಜಕೀಯ ಪಕ್ಷಗಳು ಬಿಸಿಲಿನಲ್ಲಿ ಬೆಂಡಾದ ಮುಖಂಡರು ಹಾಗೂ ಕಾರ್ಯಕರ್ತರಿಗೆ ನೀಡಲೆಂದೇ ನೀರಿನ ಬಾಟಲ್‌ ಹಾಗೂ ಮಜ್ಜಿಗೆ ಪ್ಯಾಕೇಟ್‌ ಖರೀದಿಸುತ್ತಿದ್ದಾರೆ.

You might also like
Leave A Reply

Your email address will not be published.