ಜ್ಞಾನಭಾರತಿ ಕ್ಯಾಂಪಸ್‌ʼನಲ್ಲಿ ಬೆಂಕಿ ಅನಾಹುತ ತಪ್ಪಿಸಲು ಬೆಂ.ವಿ.ವಿ ಮುನ್ನೆಚ್ಚರಿಕೆ

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿರುವ 300 ಎಕರೆ ಪ್ರದೇಶದಲ್ಲಿನ ಅರಣ್ಯ ಸಂಪತ್ತು ಸಂರಕ್ಷಣೆಗೆ ಮುಂದಾಗಿರುವ ವಿವಿಯು, ಬೆಂಕಿ-ಅನಾಹುತ ತಪ್ಪಿಸುವುದಕ್ಕಾಗಿ ಪ್ರತಿನಿತ್ಯ ಮೂರು ಪಾಳಿಯಲ್ಲಿ ಗಸ್ತು ಆರಂಭಿಸಿದೆ.

ಬೆಂಗಳೂರು ವಿವಿಯಲ್ಲಿ ಜೈವಿಕ ಉದ್ಯಾನ ಸೇರಿದಂತೆ ಆರಣ್ಯ ಪ್ರದೇಶಕ್ಕೆ ತೆರಳುವುದಕ್ಕೆ ಗಿಡ-ಗಂಟಿಗಳು ಅಡ್ಡಿಯಿದ್ದು, ಇದನ್ನು ಸ್ವಚ್ಛ ಮಾಡಿ ಅಗ್ನಿ ಅವಘಡವಾದ ತಕ್ಷಣ ತಲುಪಲು ಸಹಕಾರಿಯಾಗುವಂತೆ ಮಾಡಲು ಫೈರ್‌ ಟ್ರ್ಯಾಕ್‌ಗಳ ನಿರ್ಮಾಣಕ್ಕೆ ವಿವಿ ಮುಂದಾಗಿದೆ. ಸುಲಭವಾಗಿ ವಾಹನ ಅಥವಾ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣಕ್ಕೆ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸುವ ಕೆಲಸ ಮಾಡಲು ಈ ಫೈರ್‌ ಟ್ರ್ಯಾಕ್‌ನಿಂದ ಅನುಕೂಲವಾಗಲಿದೆ.

ಕಾಡ್ಗಿಚ್ಚಿನಿಂದ ಅರಣ್ಯ ಸಂರಕ್ಷಸಿಲು ವಿವಿಗೆ ಎದುರಾದ ಸವಾಲು

1,200 ಎಕರೆ ಪ್ರದೇಶದಲ್ಲಿರುವ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಜೈವಿಕ ಉದ್ಯಾನ ಸೇರಿದಂತೆ 300 ಎಕರೆ ಪ್ರದೇಶದಲ್ಲಿ ಅರಣ್ಯ ಸಂಪತ್ತಿದೆ. ಇತ್ತೀಚಿನ ದಿನಗಳಲ್ಲಿ ಬೇಸಿಗೆ ಹೆಚ್ಚಾಗುತ್ತಿದ್ದು, ಕಾಡ್ಗಿಚ್ಚಿನಿಂದ ಅರಣ್ಯ ಕಾಪಾಡಿಕೊಳ್ಳುವುದು ವಿವಿಗೆ ಸವಾಲಾಗಿದೆ.

ಅಗ್ನಿಶಾಮಕ ಇಲಾಖೆಯೊಂದಿಗೆ ಒಪ್ಪಂದ:

ಬೆಂಗಳೂರು ವಿವಿ, ಅಗ್ನಿಶಾಮಕ ಇಲಾಖೆಯ ಜತೆಗೂಡಿ ಮುನ್ನೆಚ್ಚರಿಕೆ ಕ್ರಮ ವಹಿಸುತ್ತಿದೆ. ಅಲ್ಲದೆ, ವಿವಿಯಲ್ಲಿ 90 ಹೋಮ್‌ ಗಾರ್ಡ್‌ಗಳಿದ್ದು, ಸದ್ಯ ಇವರಿಗೆ ಪ್ರತಿನಿತ್ಯ ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ ಸೇರಿ ಮೂರು ಪಾಳಿಯಲ್ಲಿ ವಿವಿಯ ಆವರಣದಲ್ಲಿ ಗಸ್ತು ಆರಂಭಿಸಲು ವಿವಿ ಸೂಚಿಸಿದೆ.

ಇನ್ನು, ಹೋಮ್‌ ಗಾರ್ಡ್‌ಗಳು ಪ್ರತಿ ನಿತ್ಯ ಜ್ಞಾನಭಾರತಿ ಆವರಣದಲ್ಲಿ ಗಿಡ-ಮರಗಳಿರುವ ಸ್ಥಳಗಳಿಗೆ ಭೇಟಿ ನೀಡಿ ಮುಖ್ಯಸ್ಥರಿಗೆ ಸುರಕ್ಷತೆಯ ಖಚಿತ ಮಾಹಿತಿ ತಿಳಿಸಬೇಕಿದೆ. ಒಂದು ವೇಳೆ ಅನಾಹುತ ಸಂಭವಿಸಿದರೂ ತಕ್ಷಣವೇ ನಿಯಂತ್ರಣಕ್ಕೆ ತರಲು ಅಗ್ನಿಶಾಮಕ ದಳ ಸಿದ್ಧತೆ ನಡೆಸಿದೆ.

B.V.V. takes precautions to avoid fire disaster in Jnanabharati campus

ಎಸ್‌ಟಿಪಿ ನೀರು:

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಹತ್ತಕ್ಕೂ ಹೆಚ್ಚು ಕೃಷಿ ಹೊಂಡಗಳಿದ್ದು, ಬೇಸಿಗೆ ಬಿಸಿಗೆ ನೀರಿಲ್ಲದಂತಾಗಿದೆ. ಇದರಿಂದ ಇಲ್ಲಿನ ಜೀವರಾಶಿ ಮತ್ತು ಗಿಡ-ಮರಗಳಿಗೂ ನೀರಿನ ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಕೃಷಿ ಹೊಂಡಗಳಿಗೆ ಸಂಸ್ಕರಿಸಿದ ನೀರನ್ನು ತುಂಬಿಸುವಂತೆ ಬೆಂಗಳೂರು ವಿವಿಯು ಜಲಮಂಡಳಿಯನ್ನು ಕೋರಿದೆ. ಇದರಿಂದ ಕನಿಷ್ಠ ಗಿಡ-ಮರಗಳಿಗೆ ನೀರು ಹಾಯಿಸಬಹುದು ಎಂಬುದು ವಿವಿಯ ಆಲೋಚನೆಯಾಗಿದೆ.

ಪ್ರಮುಖ ಕಾರ್ಯಗಳು

– ಪ್ರತಿ ನಿತ್ಯ 3 ಬಾರಿ ಗಸ್ತು ತಿರುಗುವುದು
– ವಾಟರ್‌ ಪಾಯಿಂಟ್‌ ಹೆಚ್ಚಿಸುವುದು
– ನೀರಿನ ಹೊಂಡಗಳ ಸಮರ್ಪಕ ನಿರ್ವಹಣೆ
– ಅಗ್ನಿ ಶಾಮಕ ದಳ ಸ್ಥಳಕ್ಕೆ ತಲುಪುವಂತೆ ಫೈರ್‌ ಟ್ರ್ಯಾಕ್‌

ವಿಪರೀತ ಬಿಸಿಲಿನ ಹಿನ್ನೆಲೆಯಲ್ಲಿ ಅಗ್ನಿ ಅವಘಡ ಸಂಭವಿಸುತ್ತಿದೆ. ವಿವಿ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಯಾವುದೇ ಅಹಿತಕರ ಘಟನೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಕಿಡಿಗೇಡಿಗಳಿಂದ ಅಗ್ನಿ ಅನಾಹುತ ಆಗುವ ಪ್ರಕರಣಗಳನ್ನು ತಡೆಯಲು ಗಸ್ತು ಕಾರ್ಯ ಹೆಚ್ಚಿಸಲಾಗಿದೆ.

You might also like
Leave A Reply

Your email address will not be published.