ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು – ಮೋದಿ ಸರ್ಕಾರಕ್ಕೆ ಸುಪ್ರೀ ಕೋರ್ಟ್ ನೀಡಿದ ಸೂಚನೆ ಏನು?

ಕೇಂದ್ರದ ಬಿಜೆಪಿ ಸರ್ಕಾರ 2019ರ ಆಗಸ್ಟ್ 05ರಂದು ಸಂವಿಧಾನದ 370ನೇ ವಿಧಿಯಡಿ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ನೀಡಿದ್ದ ವಿಶೇಷ ಪ್ರಾತಿನಿಧ್ಯವನ್ನು ರದ್ದು ಮಾಡಿತ್ತು. ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದವರಿಗೆ ಮುಖಭಂಗವಾಗಿದ್ದು, ಸರ್ಕಾರ ನಿರ್ಧಾರವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ.

370 ಕಲಂ ರದ್ದತಿಯನ್ನು ಪ್ರಶ್ನಿಸಿ ಒಟ್ಟು 23 ಅರ್ಜಿಗಳು ಸುಪ್ರೀಂಕೋರ್ಟ್ʼನಲ್ಲಿ ಸಲ್ಲಿಕೆಯಾಗಿದ್ದವು. ಎಲ್ಲಾ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ʼನ ಪಂಚ ಪೀಠ ಇಂದು ಅಧಿಕೃತ ಆದೇಶ ಹೊರಡಿಸಿದೆ. ಪಂಚ ಪೀಠದ ನೇತೃತ್ವ ವಹಿಸಿದ್ದ ಸುಪ್ರೀಂಕೋರ್ಟ್ʼನ ಮುಖ್ಯನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರು, ಸರ್ಕಾರದ ನಿರ್ಧಾರ ಸರಿಯಾದುದು. ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಪ್ರಾತಿನಿಧ್ಯ ತಾತ್ಕಾಲಿಕ ಮಾತ್ರವಾಗಿದ್ದು ಹಾಗೂ ಸರ್ಕಾರ ಮಾಡುವ ಎಲ್ಲಾ ನಿರ್ಧಾರಗಳಲ್ಲೂ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಲಾಗಲ್ಲ ಎಂದು ತೀರ್ಪು ನೀಡಿದ್ದಾರೆ. ಅಲ್ಲದೇ, ಶೀಘ್ರವೇ ಜಮ್ಮು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ನೀಡಬೇಕು ಎಂದು ಸೂಚಿಸಿದೆ.

2024ರ ಸೆಪ್ಟೆಂಬರ್ ತಿಂಗಳ ಒಳಗೆ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆ ನಡೆಸುವಂತೆ ಕೇಂದ್ರ ಸರ್ಕಾರ ಹಾಗೂ ಕೇಂದ್ರ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.

ಪಂಚಪೀಠವು ಒಮ್ಮತದ ತೀರ್ಪು ನೀಡಿದೆ. ಈ ಮೂಲಕ ಜಮ್ಮು ಮತ್ತು ಕಾಶ್ಮೀರದ ವಿಶೇಷ ಪ್ರಾತಿನಿಧ್ಯ ರದ್ದಾಗಿದ್ದು, ಸುಪ್ರೀಂಕೋರ್ಟ್ʼನ ಅನುಮತಿಯು ದೊರೆತಂತಾಗಿದೆ.

You might also like
Leave A Reply

Your email address will not be published.