ಆಂಧ್ರಪ್ರದೇಶ ವಿಧಾನಸಭೆಯ ಎನ್‌ʼಡಿಎ ನಾಯಕರಾಗಿ ಚಂದ್ರಬಾಬು ನಾಯ್ಡು ಆಯ್ಕೆ – ನಾಳೆಯೇ ಪ್ರಮಾಣವಚನ ಸ್ವೀಕಾರ

ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರು ಆಂಧ್ರಪ್ರದೇಶ ವಿಧಾನಸಭೆಯ ಎನ್‌ಡಿಎ ನಾಯಕರಾಗಿ ಮಂಗಳವಾರ ಆಯ್ಕೆಯಾಗಿದ್ದಾರೆ.

ವಿಜಯವಾಡದಲ್ಲಿ ನಡೆದ ತೆಲುಗು ದೇಶಂ ಪಕ್ಷ, ಜನಸೇನೆ ಮತ್ತು ಬಿಜೆಪಿ ಶಾಸಕರ ಸಭೆಯಲ್ಲಿ ಎಲ್ಲ ಶಾಸಕರು ನಾಯ್ಡು ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಆಂಧ್ರಪ್ರದೇಶ ಬಿಜೆಪಿ ಮುಖ್ಯಸ್ಥೆ ಡಿ ಪುರಂದೇಶ್ವರಿ ಮತ್ತು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಕೂಡ ಎನ್‌ಡಿಎ ಸಭೆಯಲ್ಲಿ ಭಾಗವಹಿಸಿ ನಾಯ್ಡು ಅವರನ್ನು ಸಿಎಂ ಅಭ್ಯರ್ಥಿಯಾಗಿ ಬೆಂಬಲಿಸಿದರು.

ಇದಕ್ಕೂ ಮುನ್ನ ಬೆಳಗ್ಗೆ ನಾಯ್ಡು ಅವರು ಟಿಡಿಪಿ ಶಾಸಕಾಂಗ ಪಕ್ಷದ ನಾಯಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಟಿಡಿಪಿ ನಾಯಕ ಕೆ ಅಚ್ಚೆನ್ ನಾಯ್ಡು ತಿಳಿಸಿದ್ದಾರೆ.

ಜನಸೇನಾ ಪಕ್ಷದ ನಾಯಕರಾಗಿ ಪವನ್ ಕಲ್ಯಾಣ್ ಆಯ್ಕೆ

ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಜನಸೇನಾ ಪಕ್ಷದ ನಾಯಕರನ್ನಾಗಿ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಅವರನ್ನು ಶಾಸಕರು ಮಂಗಳವಾರ ಆಯ್ಕೆ ಮಾಡಿದ್ದಾರೆ. ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರನ್ನು ಸದನದಲ್ಲಿ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡುವ ಎನ್‌ಡಿಎ ಶಾಸಕರ ಸಭೆಗೆ ಮುನ್ನ ಈ ಕ್ರಮ ಕೈಗೊಳ್ಳಲಾಗಿದೆ.

ಜನಸೇನಾ ಪಕ್ಷದ ನಾಯಕರಾಗಿ ಪವನ್ ಕಲ್ಯಾಣ್ ಆಯ್ಕೆ

ತೆನಾಲಿ ಶಾಸಕ ಎನ್ ಮನೋಹರ್ ಅವರು ಪವನ್ ಕಲ್ಯಾಣ್ ಅವರ ಹೆಸರನ್ನು ವಿಧಾನಸಭೆಯ ಪಕ್ಷದ ನಾಯಕರನ್ನಾಗಿ ಪ್ರಸ್ತಾಪಿಸಿದರು. ಇದನ್ನು ಇತರ ಸದಸ್ಯರು ಸರ್ವಾನುಮತದಿಂದ ಬೆಂಬಲಿಸಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ.

175 ಸದಸ್ಯ ಬಲದ ಸದನದಲ್ಲಿ ಜನಸೇನಾ 21 ಶಾಸಕರನ್ನು ಹೊಂದಿದೆ. ಆಂಧ್ರಪ್ರದೇಶದಲ್ಲಿ 164 ವಿಧಾನಸಭೆ ಕ್ಷೇತ್ರಗಳಲ್ಲಿ ಎನ್‌ಡಿಎ (ಟಿಡಿಪಿ-135, ಜನಸೇನಾ-21 ಮತ್ತು ಬಿಜೆಪಿ-8) ಬಹುಮತದೊಂದಿಗೆ ಭರ್ಜರಿ ಜಯ ಸಾಧಿಸಿದೆ.

You might also like
Leave A Reply

Your email address will not be published.