ಪಾಕಿಸ್ತಾನ ಜಿಂದಾಬಾದ್ ಎಂದರೆ ರಾಜ್ಯಸಭಾ ಸೀಟು, ಭಾರತ್ ಮಾತಾ ಕೀ ಜೈ ಎಂದರೆ ಕಲ್ಲೇಟು – ಆರ್.ಅಶೋಕ್ ಕಿಡಿ

ಪಾಕಿಸ್ತಾನ ಜಿಂದಾಬಾದ್ ಎಂದರೆ ರಾಜ್ಯಸಭಾ ಸೀಟು, ಭಾರತ್ ಮಾತಾ ಕೀ ಜೈ ಎಂದರೆ ಕಲ್ಲೇಟು. ಕರ್ನಾಟಕದಲ್ಲಿ ಭಾರತ್ ಮಾತಾ ಕೀ ಜೈ ಎಂದು ಕೂಗುವುದು ಸುರಕ್ಷಿತವಲ್ಲ. ತುಘಲಕ್ ಯುಗ ಮತ್ತೆ ಬಂದಂತೆ ಭಾಸವಾಗುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಿಡಿಕಾರಿದೆ.

ಮೋದಿ ಅವರು 3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭದಲ್ಲಿ, ‘ಭಾರತ್ ಮಾತಾ ಕೀ ಜೈ’ ಎಂದು ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರನ್ನು ಗುಂಪೊಂಡು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ ಮಾಡಿ, ಚೂರಿಯಿಂದ ಇರಿದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೋಳಿಯಾರ್‌ನಲ್ಲಿ ನಡೆದಿತ್ತು.

ಈ ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ, ರಾಜ್ಯದಲ್ಲಿ ತುಘಲಕ್ ಆಡಳಿತ ಮರಳಿದೆ ಎಂದು ಟೀಕಿಸಿದೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಇನ್ನು ಕರ್ನಾಟಕದಲ್ಲಿ ಭಾರತ್ ಮಾತಾ ಕೀ ಜೈ ಎಂದು ಕೂಗುವುದು ಸುರಕ್ಷಿತವಲ್ಲ. ತುಘಲಕ್ ಯುಗ ಮತ್ತೆ ಬಂದಂತೆ ಭಾಸವಾಗುತ್ತಿದೆ. ಸಿದ್ದರಾಮಯ್ಯ ನೇತೃತ್ವದ ಆಡಳಿತದಲ್ಲಿ ಭಾರತದ ವಿರುದ್ಧ ಬೆಳೆಯುತ್ತಿರುವ ದ್ವೇಷವು ಆತಂಕಕಾರಿಯಾಗಿದೆ. ಮಂಗಳೂರಿನಲ್ಲಿ ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗುತ್ತಾ ಪ್ರಧಾನಿ ಮೋದಿಯವರ ಚುನಾವಣಾ ಗೆಲುವಿನ ಸಂಭ್ರಮದಲ್ಲಿದ್ದ ಬಿಜೆಪಿ ಕಾರ್ಯಕರ್ತರಾದ ಹರೀಶ್ ಅಂಚನ್ ಮತ್ತು ನಂದಕುಮಾರ್ ಅವರ ಮೇಲೆ ಅಬೂಬಕ್ಕರ್, ಬಶೀರ್, ಸಿದ್ದಿಕ್, ಮೋನು ಮತ್ತು ಇತರ 20 ಮಂದಿ ಬರ್ಬರವಾಗಿ ಇರಿದಿದ್ದಾರೆ.

ಈ ಹೇಯ ಕೃತ್ಯವು ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿ ಕರ್ನಾಟಕದಲ್ಲಿ ಹದಗೆಟ್ಟ ಕಾನೂನು-ಸುವ್ಯವಸ್ಥೆಯನ್ನು ಎತ್ತಿ ತೋರಿಸುತ್ತದೆ. ಹಿಂಸಾತ್ಮಕ ಘಟನೆಗಳು ಮತ್ತು ಅನಿಯಂತ್ರಿತ ಆಕ್ರಮಣಶೀಲತೆಯ ಹೆಚ್ಚಳವು ಭಯ ಮತ್ತು ಅಸ್ಥಿರತೆಯ ವಾತಾವರಣವನ್ನು ಸೃಷ್ಟಿಸುತ್ತಿದೆ. ಇದು ನಾಗರಿಕರನ್ನು ರಕ್ಷಿಸಲು ಮತ್ತು ಶಾಂತಿಯನ್ನು ಕಾಪಾಡಿಕೊಳ್ಳಲು ಬಲವಾದ ಆಡಳಿತ ಮತ್ತು ಭದ್ರತಾ ಕ್ರಮಗಳ ತುರ್ತು ಅಗತ್ಯವನ್ನು ಒತ್ತಿಹೇಳುತ್ತದೆ ಎಂದು ಹೇಳಿದೆ.

ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಕೂಡ ಘಟನೆಯನ್ನು ಖಂಡಿಸಿದ್ದು, ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕಾಂಗ್ರೆಸ್ ಸರ್ಕಾರವು ಮೂಲಭೂತವಾದಿಗಳನ್ನು ಓಲೈಸುತ್ತಿರುವ ಕಾರಣ ಮತ್ತು ಅವರು ಕಾನೂನಿಗೆ ಹೆದರುವುದಿಲ್ಲ ಎಂಬ ಕಾರಣದಿಂದಾಗಿ ಇಂಥ ಘಟನೆಗಳು ನಡೆಯುತ್ತಿವೆ ಎಂದು ಟೀಕಿಸಿದ್ದಾರೆ.

ತಪ್ಪಿತಸ್ಥರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟದ ಮೂಲಕ ಉತ್ತರ ನೀಡಬೇಕಾಗುತ್ತದೆ ಎಂದೂ ಎಚ್ಚರಿಕೆ ನೀಡಿದ್ದಾರೆ.

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಪೋಸ್ಟ್ ಮಾಡಿ, ಇದೇನು ಕಾಶ್ಮೀರವೋ ಅಥವಾ ಪಿಒಕೆ ಆಗಿದೆಯೋ ಗೊತ್ತಾಗುತ್ತಿಲ್ಲ.ಕಾಂಗ್ರೆಸ್ ಸರ್ಕಾರದ ತಾಲಿಬಾನ್ ಆಡಳಿತದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದರೆ ರಾಜ್ಯಸಭಾ ಸೀಟು, ಭಾರತ್ ಮಾತಾ ಕೀ ಜೈ ಎಂದರೆ ಕಲ್ಲೇಟು. ರಾಮನ ಹೆಸರು ಹೇಳುವುದೂ ತಪ್ಪು, ಭಾರತ್ ಮಾತಾ ಕೀ ಜೈ ಎಂದರೂ ತಪ್ಪು. ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದವರ ಮೇಲೆ ಕಠಿಣ ಕ್ರಮ ಕೈಗೊಂಡು ಜೈಲಿಗಟ್ಟಿದ್ದರೆ ಇವತ್ತು ಭಾರತ್ ಮಾತಾ ಕಿ ಜೈ ಎನ್ನುವವರ ಮೇಲೆ ಕಲ್ಲು ತೂರುವ ಧೈರ್ಯ ಮಾಡುತ್ತಿರಲಿಲ್ಲ. ಸಿಎಂ ಸಿದ್ದರಾಮಯ್ಯ ಅವರೇ, ತಮ್ಮ ಸರ್ಕಾರ ಬಂದಾಗಿನಿಂದ ಮತಾಂಧರಿಗೆ, ತೀವ್ರವಾದಿ ಸಂಘಟನೆಗಳಿಗೆ ಕೊಂಬು ಬಂತಾಗಿದ್ದು, ದೇಶವಿದ್ರೋಹಿ ಘಟನೆಗಳು ಪದೇ ಪದೇ ನಡೆಯುತ್ತಲೇ ಇವೆ. ನಿಮ್ಮ ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಮುಸ್ಲಿಂ ಮತಾಂಧ ಮುಳ್ಳುಗಳೇ ಹೆಚ್ಚಾಗಿದ್ದು, ಹಿಂದೂಗಳಿಗೆ, ದೇಶಪ್ರೇಮಿಗಳಿಗೆ ನೆಮ್ಮದಿ ಇಲ್ಲದಂತಾಗಿದೆ ಎಂದು ತಿಳಿಸಿದ್ದಾರೆ.

You might also like
Leave A Reply

Your email address will not be published.