ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚ ಹೊಂದಾಣಿಕೆ (FPPCA) ಎಂದರೇನು?

ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಗೃಹ ಜ್ಯೋತಿ ಯೋಜನೆ ಅನುಷ್ಠಾನಗೊಂಡ ನಂತರ ಗ್ರಾಹಕರ ಚಿತ್ತ ಇದೀಗ ವಿದ್ಯುತ್‌ ಬಿಲ್‌ ನ ಮೇಲೆ ನೆಟ್ಟಿದೆ. ವಿದ್ಯುತ್‌ ಬಿಲ್‌ ನಲ್ಲಿರುವ ಪ್ರತಿಯೊಂದು ಕಾಲಂಗಳನ್ನು ಈಗ ಕೂಲಂಕುಷವಾಗಿ ಪರಿಶೀಲಿಸುತ್ತಿದ್ದಾರೆ. ವಿದ್ಯುತ್‌ ಬಿಲ್‌ ನಲ್ಲಿ ನಮೂದಿಸಿರುವ FPPCA ಶುಲ್ಕದ ಕುರಿತು ಗ್ರಾಹಕರಲ್ಲಿರುವ ಗೊಂದಲಗಳನ್ನು ಪರಿಹರಿಸುವ ನಿಟ್ಟಿನಲ್ಲಿ FPPCA ಎಂದರೇನು? ಈ ಶುಲ್ಕವನ್ನು ಏಕೆ ಗ್ರಾಹಕರಿಗೆ ವಿಧಿಸಲಾಗುತ್ತದೆ ಎಂಬ ವಿವರಣೆ ಈ ಲೇಖನದಲ್ಲಿದೆ.

ಕರ್ನಾಟಕ ವಿದ್ಯುಚ್ಚಕ್ತಿ ನಿಯಂತ್ರಣ ಆಯೋಗ (KERC) ಜಾರಿಗೊಳಿಸುವ ವಿದ್ಯುತ್ ದರ ಪರಿಷ್ಕರಣೆಗೂ ಮತ್ತು ಎಸ್ಕಾಂಗಳು ವಿದ್ಯುತ್ ಉತ್ಪಾದಕರಿಂದ ಖರೀದಿಸುವ ವಿದ್ಯುತ್ ಮೇಲಿನ ಇಂಧನ ವೆಚ್ಚದಲ್ಲಿನ ಬೆಲೆಯಲ್ಲಿ ವ್ಯತ್ಯಾಸ ಉಂಟಾಗುವುದರಿಂದ ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚ ಹೊಂದಾಣಿಕೆ ಶುಲ್ಕ (FPPCA) ವನ್ನು ವಿಧಿಸಲು KERC ಎಲ್ಲಾ ಎಸ್ಕಾಂ ಗಳಿಗೆ ಅನುಮತಿ ನೀಡಿರುತ್ತದೆ.
2013 ರಿಂದ ಇಂಧನ ಹೊಂದಾಣಿಕೆ ಶುಲ್ಕ (FAC) ವ್ಯವಸ್ಥೆ ಜಾರಿಯಲ್ಲಿತ್ತು. ಅಂದಿನಿಂದ ಪ್ರತಿ ಮೂರು ತಿಂಗಳಿಗೊಮ್ಮೆ ಮಾತ್ರ FAC ಪರಿಷ್ಕರಣೆಯಾಗುತ್ತಿತ್ತು. ಆದರೆ, ಮಾನ್ಯ ಕರ್ನಾಟಕ ವಿದ್ಯುಚ್ಚಕ್ತಿ ನಿಯಂತ್ರಣ ಆಯೋಗವು (KERC) ಅಕ್ಟೋಬರ್ 21, 2022 ರಲ್ಲಿ ತನ್ನ ನಿಯಮಗಳನ್ವಯ ಇಂಧನ ಹೊಂದಾಣಿಕೆ ಶುಲ್ಕ (FAC) ಅನ್ನು FPPCA (ಇಂಧನ ಮತ್ತು ವಿದ್ಯುತ್‌ ಖರೀದಿ ವೆಚ್ಚ ಹೊಂದಾಣಿಕೆ ಶುಲ್ಕಗಳು) ಎಂದು ಬದಲಿಸಿ ಅಧಿಸೂಚನೆ ಹೊರಡಿಸಿದೆ.

KERC
ನಂತರದಲ್ಲಿ ಡಿಸೆಂಬರ್ 29, 2022 ರಂದು ಕೇಂದ್ರ ವಿದ್ಯುತ್ ಸಚಿವಾಲಯ ಪರಿಚಯಿಸಿದ ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚದ ಹೊಂದಾಣಿಕೆಯನ್ನು KERC ಫೆಬ್ರವರಿ 23, 2023 ರಂದು ಅಧಿಸೂಚನೆ ಹೊರಡಿಸಿ ಎಲ್ಲಾ ಎಸ್ಕಾಂಗಳು ಪ್ರತಿ ತಿಂಗಳು ಗ್ರಾಹಕರಿಂದ ಇಂಧನ ಮತ್ತು ವಿದ್ಯುತ್‌ ಖರೀದಿ ವೆಚ್ಚ ಹೊಂದಾಣಿಕೆ ಶುಲ್ಕವನ್ನು (FPPCA) ವಸೂಲಿ ಮಾಡಬೇಕು ಎನ್ನುವ ಸ್ಪಷ್ಟ ನಿರ್ದೇಶನ ನೀಡಿತು. ಇಂಧನದ ಜತೆಗೆ ವಿದ್ಯುತ್ ಪ್ರಸರಣ ಸೇರಿದಂತೆ ವಿವಿಧ ವೆಚ್ಚವನ್ನು ಸಹ ಭರಿಸಬೇಕು ಎನ್ನುವ ಸೂಚನೆ ನೀಡಲಾಗಿತ್ತು. ಹೀಗಾಗಿಯೇ, ಹೆಚ್ಚುವರಿ ಹೊರೆಯನ್ನು ಗ್ರಾಹಕರಿಂದ FPPCA ಸಂಗ್ರಹಿಸುವ ಅಥವಾ ಕಡಿತಗೊಳಿಸುವ ಪ್ರಕ್ರಿಯೆಯನ್ನು ಎಸ್ಕಾಂಗಳು ಆರಂಭಿಸಿವೆ.

ಈ ನಿಯಮಕ್ಕೆ ಬದ್ಧವಾಗಿಯೇ ರಾಜ್ಯದಲ್ಲಿನ ಎಸ್ಕಾಂಗಳು ಕರ್ನಾಟಕ ವಿದ್ಯುಚ್ಚಕ್ತಿ ನಿಯಂತ್ರಣ ಆಯೋಗ (KERC) ನಿರ್ದೇಶನದಂತೆ ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚ ಹೊಂದಾಣಿಕೆ (FPPCA) ಶುಲ್ಕವನ್ನಾಗಿ ಪಡೆಯುತ್ತವೆ.

ಕೇಂದ್ರ ವಿದ್ಯುತ್ ಸಚಿವಾಲಯ ಮತ್ತು ಕರ್ನಾಟಕ ವಿದ್ಯುಚ್ಚಕ್ತಿ ನಿಯಂತ್ರಣ ಆಯೋಗ (KERC) ಕಾಲಕಾಲಕ್ಕೆ ಕೈಗೊಂಡ ಆದೇಶ ಮತ್ತು ನಿಯಮಾನುಸಾರ ವಾಸ್ತವ ಸಂಗತಿಯ ಮೇಲೆ ಬೆಳಕು ಚೆಲ್ಲುತ್ತವೆ. ಉದಾಹರಣೆಗೆ, ದೇಶಿಯವಾಗಿ ಖರೀದಿಸುವ ಕಲ್ಲಿದ್ದಲು ಪ್ರತಿ ಮೆಟ್ರಿಕ್ ಟನ್’ಗೆ ಅಂದಾಜು ರೂ.5 ಸಾವಿರಕ್ಕೆ ಲಭ್ಯವಿದ್ದರೆ, ಆಮದು ಮಾಡಿಕೊಳ್ಳುವ ಕಲ್ಲಿದ್ದಲು ಅದೇ ಹೊತ್ತಿಗೆ ರೂ.15 ಸಾವಿರದಷ್ಟಿರುತ್ತದೆ. ಹಲವು ಬಾರಿ ಈ ದರ ಏರುಪೇರಾಗುತ್ತದೆ.

ಕೇಂದ್ರದ ಸೂಚನೆ ಮೇರೆಗೆ ಮಾರ್ಚ್ ತಿಂಗಳಿಂದ ಪರಿಷ್ಕರಿಸಿದ FPPCA ಶುಲ್ಕವನ್ನು ಪ್ರತಿ ತಿಂಗಳು ಗ್ರಾಹಕರಿಂದ ಎಲ್ಲಾ ಎಸ್ಕಾಂಗಳು ಸಂಗ್ರಹಿಸುತ್ತಿವೆ. ಇಂಧನ ವೆಚ್ಚದಲ್ಲಿ ವ್ಯತ್ಯಾಸವಾದಂತೆ FPPCA ನಲ್ಲೂ ಏರಿಳಿಕೆಯಾಗುತ್ತದೆ. ವಿದ್ಯುತ್ ದರದಲ್ಲಿ ಕೆಲವು ಬಾರಿ ವ್ಯತ್ಯಾಸ ಕಂಡುಬಂದರೆ, ಕೆಲವು ಬಾರಿ ಮರುಪಾವತಿಯಾಗುತ್ತದೆ.

2023 ರ ಮಾರ್ಚ್ ನಲ್ಲಿ ಒಂದು ಯೂನಿಟ್’ಗೆ 59 ಪೈಸೆ, ಏಪ್ರಿಲ್ ನಲ್ಲಿ 90 ಪೈಸೆ, ಮೇ ತಿಂಗಳಲ್ಲಿ 1.60 ಪೈಸೆ, ಜೂನ್ ತಿಂಗಳಲ್ಲಿ 27 ಪೈಸೆ, ಜುಲೈ ತಿಂಗಳಲ್ಲಿ -6 ಪೈಸೆ, ಆಗಸ್ಟ್ 9 ಪೈಸೆ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ 28 ಪೈಸೆ ಅನ್ನು ಗ್ರಾಹಕರ ಬಿಲ್ ಗೆ ಸೇರಿಸಲೇಬೇಕಾಗಿತ್ತು.
ಇನ್ನೂ ಗೃಹಬಳಕೆ ಜಕಾತಿಯಡಿ (Domestic tariff) ಈ ಮೊದಲು ನಾಲ್ಕು ಸ್ಲ್ಯಾಬ್ ಗಳಿದ್ದವು. ಅದನ್ನು KERC ಎರಡು ಸ್ಲ್ಯಾಬ್ ಗೆ ಬದಲಿಸಿತು. ಇದರನ್ವಯ ವಿದ್ಯುತ್ ಶುಲ್ಕ ದರ ಪಟ್ಟಿಯನ್ನು ಈ ಕೆಳಗೆ ನಮೂದಿಸಲಾಗಿದೆ –

FPPCA

ಪ್ರತಿ ನವೆಂಬರ್ ನಲ್ಲಿ ವಿದ್ಯುತ್ ದರ ಪರಿಷ್ಕರಣೆಗೆ ಸಂಬಂಧಿಸಿದಂತೆ ಎಲ್ಲ ಎಸ್ಕಾಂಗಳು ಪ್ರಸ್ತಾವನೆಗಳನ್ನು ಸಲ್ಲಿಸುತ್ತವೆ. ನಂತರ ಗ್ರಾಹಕರು, ಉದ್ಯಮಿಗಳು ಸೇರಿದಂತೆ ಎಲ್ಲಾ ಗೃಹ ಬಳಕೆದಾರರು ವಿವಿಧ ವಲಯದ ಎಲ್ಲಾ ಗ್ರಾಹಕರ ಅಭಿಪ್ರಾಯಗಳನ್ನು KERC ಪಡೆಯುತ್ತದೆ. ತದನಂತರ, ಅದು ನೀಡುವ ಆದೇಶವನ್ನು ಎಲ್ಲಾ ಎಸ್ಕಾಂಗಳು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ.

ಸೆಕ್ಷನ್ 111ರ ಅಡಿಯಲ್ಲಿ ವಿದ್ಯುತ್ ದರ ಪರಿಷ್ಕರಣೆಯನ್ನು ಪ್ರಶ್ನಿಸಿ ನ್ಯಾಯಮಂಡಳಿಯಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಯಾವುದೇ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ನಲ್ಲೂ ಅರ್ಜಿ ಹಾಕಲು ಅವಕಾಶ ಇರುವುದಿಲ್ಲ.

You might also like
Leave A Reply

Your email address will not be published.