ದಕ್ಷಿಣ ಅಯೋಧ್ಯೆ – ಅಯೋಧ್ಯೆ ರೀತಿಯಲ್ಲೇ ಲವಕುಶರು ಜನಿಸಿದ ಸ್ಥಳವನ್ನು ಅಭಿವೃದ್ಧಿ ಮಾಡಲು ಆಗ್ರಹ

ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಕೆಲವೇ ದಿನಗಳು ಉಳಿದಿದೆ. ರಾಮ-ಲಕ್ಷ್ಮಣರು ಜನಿಸಿದ ಸ್ಥಳ ಉತ್ತರ ಭಾರತದ ಅಯೋಧ್ಯೆಯಾದರೆ, ಲವ ಕುಶರು ಜನಿಸಿದ್ದು ದಕ್ಷಿಣ ಭಾರತದ ಕರ್ನಾಟಕದ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕು ಆವನಿ ಗ್ರಾಮ. ಇದೀಗ ಉತ್ತರದಲ್ಲಿರುವ ಅಯೋಧ್ಯೆಗೆ ಎಷ್ಟು ಮಹತ್ವ ನೀಡಲಾಗುತ್ತಿದೆಯೋ ಹಾಗೆಯೇ ದಕ್ಷಿಣದ ಆವಂತಿಕ ಕ್ಷೇತ್ರವನ್ನು ಅಭಿವೃದ್ಧಿ ಮಾಡಬೇಕು ಎಂಬ ಚರ್ಚೆಗಳು ಎಲ್ಲೆಡೆ ಕೇಳಿಬರುತ್ತಿದೆ!

ಲಂಕೆಯಲ್ಲಿ ರಾವಣನ ಸಂಹಾರ ನಂತರ ಶ್ರೀರಾಮ ತನ್ನ ಪತ್ನಿ ಸೀತಾ ದೇವಿಯನ್ನು ಕಾಡಿಗೆ ಕಳಿಸಿದ ವಿಚಾರ ನಮ್ಮೆಲ್ಲರಿಗೂ ತಿಳಿದಿದೆ. ಅಣ್ಣನ ಆದೇಶದಂತೆ ಲಕ್ಷ್ಮಣ ತಾಯಿ ಸ್ವರೂಪಳು, ಅತ್ತಿಗೆ ಹಾಗೂ ತುಂಬು ಗರ್ಭಿಣಿಯಾದ ಸೀತಾಮಾತೆಯನ್ನು ಒಲ್ಲದ ಮನಸ್ಸಿಂದ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಆವಣಿ ಬೆಟ್ಟದ ಹಿಂಭಾಗದ ಕಾಡಿಗೆ ಬಿಟ್ಟು ಬಂದಿದ್ದ ಎಂಬ ನಂಬಿಕೆಯಿದೆ. ಅಲ್ಲದೇ ಇದೇ ಬೆಟ್ಟದ ಮೇಲಿರುವ ವಾಲ್ಮೀಕಿ ಗುರುಗಳ ಆಶ್ರಮದಲ್ಲೆ ಸೀತಾಮಾತೆ ಆಶ್ರಯವನ್ನು ಪಡೆದಿದ್ದಳು. ಈ ಕಾರಣದಿಂದಲೇ ಈ ಬೆಟ್ಟವನ್ನು ಸೀತಮ್ಮ ಬೆಟ್ಟ ಎಂದು ಕರೆಯಲಾಗುತ್ತದೆ.

ಆವನಿ ಎಂದರೆ ಏನು?

ತ್ರೇತಾಯುಗ ಕಾಲದ ಆವಂತಿಕಾ ಕ್ಷೇತ್ರವೇ ಇಂದಿನ ಆವನಿ ಗ್ರಾಮ. ಆವನಿ ಎಂದರೆ ಪುಣ್ಯ ಭೂಮಿ, ಸೀತೆಯ ಮತ್ತೊಂದು ಹೆಸರು ಆವನಿ. ಅಂದರೆ ಭೂಮಿಯ ಒಡಲಿಂದ ಜನಿಸಿದವಳು ಎಂದರ್ಥ.

ಬೆಟ್ಟದ ಪ್ರವೇಶದಲ್ಲೇ ವಾಲ್ಮೀಕಿ ಆಶ್ರಮ:

ಆವನಿ ಗ್ರಾಮಕ್ಕೆ ಹೊಂದಿಕೊಂಡಿರುವ ಈ ಬೆಟ್ಟದಲ್ಲಿ ಸೀತಾಮಾತೆ ವನವಾಸಕ್ಕೆ ಬಂದಾಗ ವಾಲ್ಮೀಕಿ ಈ ಬೆಟ್ಟದಲ್ಲಿ ವಾಸವಿದ್ದರು. ಆವನಿ ಗ್ರಾಮಕ್ಕೆ ಬಂದ ಕೂಡಲೇ ನಿಮಗೆ ಬೆಟ್ಟದ ಆರಂಭದಲ್ಲೇ ವಾಲ್ಮೀಕಿ ವಾಸವಾಗಿದ್ದ ಆಶ್ರಮವನ್ನು ಕಾಣಬಹುದಾಗಿದೆ. ಬೃಹತ್ತಾದ ಬೆಟ್ಟದ ಮೇಲೆ ವಾಲ್ಮೀಕಿ ಆಶ್ರಮದ ಕುರುಹುಗಳು ಕೂಡ ನಿಮಗೆ ಕಾಣಸಿಗುತ್ತವೆ. ವಾಲ್ಮೀಕಿ ಆಶ್ರಮದೊಂದಿಗೆ ಲವ ಕುಶರು ಜನಿಸಿದ ಸ್ಥಳ ಹಾಗೂ ಸೀತಾ ಮಾತೆ ವಾಸವಿದ್ದ ಸಣ್ಣದೊಂದು ಮನೆಯನ್ನು ನಾವು ನೋಡಬಹುದು.

Valmiki Ashram

ಧನುಷ್ಕೋಟೆ:

ಸೀತಾಮಾತೆಯನ್ನು ಲಕ್ಷ್ಮಣ ದಂಡಕಾರಣ್ಯದಲ್ಲಿ ಕರೆದುಕೊಂಡು ವನವಾಸಕ್ಕೆ ಬಿಡಲು ಬಂದಾಗ ಸೀತಾಮಾತೆ ಪ್ರಜ್ಞೆ ತಪ್ಪಿ ಬೀಳುತ್ತಾಳೆ. ಆಗ ಲಕ್ಷ್ಮಣ ತನ್ನ ಧನಸ್ಸನ್ನು ಹೂಡಿ ಗಂಗೆಯನ್ನು ತರುತ್ತಾನೆ. ಈ ಸ್ಥಳದಲ್ಲಿ ಅಂದು ಉತ್ಪತ್ತಿಯಾದ ಗಂಗೆಯನ್ನು ಇಂದಿಗೂ ಧನುಷ್ಕೋಟೆಯಲ್ಲಿ ಪಾತಾಳಗಂಗೆಯಾಗಿ ನಾವು ನೋಡಬಹುದಾಗಿದೆ. ಅದು ವರ್ಷದ 365 ದಿನಗಳ ಕಾಲವೂ ಬತ್ತದೆ, ನೀರು ಇರುತ್ತದೆ.

Dhanushkote

ಹೊರಳುಗುಂಡು:

ಇದೇ ಬೆಟ್ಟದ ಮೇಲೆ ಸೀತಾ ಮಾತೆಗೆ ಹೆರಿಗೆ ನೋವು ಬಂದಾಗ ನೋವಿನಿಂದ ಹೊರಳಿದ ಬಂಡೆಯನ್ನು ಹೊರಳುಗುಂಡು ಎಂದು ಕರೆಯಲಾಗುತ್ತದೆ. ಇಂದಿಗೂ ಈ ಸ್ಥಳದಲ್ಲಿ ಮಕ್ಕಳಾಗದವರು, ವಾಮಾಚಾರಕ್ಕೆ ಒಳಗಾದವರು ಈ ಬಂಡೆಯ ಕೆಳಗೆ ಹೊರಳಿದರೆ ಒಳಿತಾಗುತ್ತದೆ ಅನ್ನೋ ನಂಬಿಕೆ ಇದೆ.

Sita mata

ಮಹರ್ಷಿ ವಾಲ್ಮೀಕಿ:

ವಾಲ್ಮೀಕಿ ಕೇವಲ ಕವಿಯಾಗದೆ ರಾಮನ ಮಕ್ಕಳಿಗೆ ಇದೇ ಬೆಟ್ಟದಲ್ಲಿ ಆಯುಧ, ಜ್ಞಾನ ಕಲಿಸಿದ ಮಹಾಗುರು. ಸೀತೆಯನ್ನು ಸಾಂತ್ವನ ಮಾಡಿ ತಾವಿರುವ ಆಶ್ರಮದಲ್ಲಿ ತನ್ನ ಸ್ವಂತ ಮಗಳಂತೆ ಬೆಳೆಸಿದ ತಂದೆ ಸಮಾನರು. ಇನ್ನೂ ಇದೇ ಆಶ್ರಮದಲ್ಲಿ ಲವಕುಶ ಇಬ್ಬರೂ ಆಟವಾಡಿ ಬೆಳೆದ ಸ್ಥಳವಾಗಿದೆ.

Maharshi Valmiki

ತಂದೆ-ಮಕ್ಕಳ ನಡುವೆ ನಡೆದ ಕಾಳಗ:

ಆವಂತಿಕಾ ಕ್ಷೇತ್ರದಲ್ಲಿ ರಾಮ ಲಕ್ಷ್ಮಣ ಮತ್ತು ಲವಕುಶರ ನಡುವೆ ಒಂದು ದೊಡ್ಡ ಕಾಳಗ ಕೂಡಾ ನಡೆದಿದೆ. ಶ್ರೀರಾಮಚಂದ್ರ ಅಶ್ವಮೇಧ ಯಾಗ ಮಾಡಿದ ಸಂದರ್ಭದಲ್ಲಿ ಲವಕುಶರು ಅಶ್ವದ ಕುದುರೆಯನ್ನು ಕಟ್ಟಿಹಾಕುತ್ತಾರೆ. ತಂದೆ ಮಕ್ಕಳ ನಡುವೆ ಯುದ್ದ ನಡೆದ ಸ್ಥಳ ಕೂಡಾ ಇದೇ ಎಂದು ಹೇಳಲಾಗುತ್ತದೆ.

Sri Ramachandra Ashwamedha Yaga

ಸೀತಾಪಾರ್ವತಿ ದೇವಸ್ಥಾನ:

ಇನ್ನು ಬೆಟ್ಟದ ಮೇಲೆ ಸೀತಾ ಮಾತೆ ಪೂಜೆ ಮಾಡುತ್ತಿದ್ದ ಪಾರ್ವತಿ ದೇವಸ್ಥಾನವಿದ್ದು ಈ ದೇವಾಲಯವನ್ನು ಸೀತಾಪಾರ್ವತಿ ದೇವಸ್ಥಾನ ಎಂದು ಕರೆಯಲಾಗುತ್ತದೆ. ಈ ಸ್ಥಳದಲ್ಲಿ ಶ್ರೀರಾಮಚಂದ್ರ ಬಂದು ತನ್ನ ಪತ್ನಿಯನ್ನು ಕರೆದಾಗ ಸೀತಾಮಾತೆ ನಿರಾಕರಿಸಿ, ಲವಕುಶರನ್ನು ಶ್ರೀರಾಮಚಂದ್ರನಿಗೆ ಒಪ್ಪಿಸಿ ಭೂಮಿಯ ಒಳಗೆ ಅಂತರ್ಮುಖಿಯಾದ ಸ್ಥಳವೆಂದು ಹೇಳಲಾಗುತ್ತದೆ.

Sitaparvati Temple

ಶಿವಲಿಂಗಗಳ ಪ್ರತಿಷ್ಠಾಪನೆ:

ಶ್ರೀರಾಮಚಂದ್ರನ ಅಶ್ವಮೇಧದ ಕುದುರೆಯನ್ನು ಕಟ್ಟಿಹಾಕಿದ್ದ ಲವಕುಶರ ನಡುವೆ ನಡೆದ ಯುದ್ಧದ ನಂತರ ರಾಮ, ಲಕ್ಷ್ಮಣ, ಭರತ, ಶತ್ರುಜ್ಞ ಹಾಗೂ ಸುಗ್ರೀವರು ಶಿವಲಿಂಗಗಳನ್ನು ಪ್ರತಿಷ್ಠಾಪನೆ ಮಾಡಿದ್ರು ಅನ್ನೋ ಪ್ರತೀತಿ ಇದೆ. ಇದಕ್ಕೆ ಸಾಕ್ಷಿಯಾಗಿ ಇಂದಿಗೂ ಅವರು ಪ್ರತಿಷ್ಠಾಪನೆ ಮಾಡಿರುವ ರಾಮಲಿಂಗೇಶ್ವರ, ಭರತ ಲಿಂಗೇಶ್ವರ, ಲಕ್ಷ್ಮಣ ಲಿಂಗೇಶ್ವರ, ಶತ್ರುಜ್ಞ ಲಿಂಗೇಶ್ವರ ಲಿಂಗಗಳು ನಮಗೆ ಕಾಣಸಿಗುತ್ತದೆ.

ಮರ್ಯಾದಾಪುರುಷ ಶ್ರೀರಾಮಚಂದ್ರನ ಕುಟುಂಬ ಕೋಲಾರ ಜಿಲ್ಲೆಯ ಮಣ್ಣಿನಲ್ಲಿ ಪಾದಸ್ಪರ್ಶವಾಗಿದೆ ಅನ್ನೋದು ಕೋಲಾರ ಜಿಲ್ಲೆ ಅಲ್ಲದೇ ನಾಡಿನ ಜನತೆಗೂ ಪುಣ್ಯದ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ಉತ್ತರ ಭಾರತದ ಅಯೋಧ್ಯೆ ರೀತಿಯಲ್ಲಿ ಕೇಂದ್ರ ಸರ್ಕಾರ ಈ ಕ್ಷೇತ್ರವನ್ನು ಅಭಿವೃದ್ದಿ ಮಾಡಬೇಕು ಅನ್ನೋ ಕೂಗು ನಾಡಿನ ಜನರಲ್ಲಿ ಕೇಳಿಬರುತ್ತಿದೆ.

You might also like
Leave A Reply

Your email address will not be published.