ದಿ ಕೇರಳ ಸ್ಟೋರಿ ಚಿತ್ರ ಪ್ರದರ್ಶಿಸಿದ ಕೇರಳದ ಚರ್ಚುಗಳು!

ಕೇರಳ ಸೈರೋ ಮಲಬಾರ್ ಕ್ಯಾಥೋಲಿಕ್ ಚರ್ಚ್ ಅಡಿಯಲ್ಲಿ ಇಡುಕ್ಕಿ ಡಯಾಸಿಸ್ ತನ್ನ ಯುವ ವಿದ್ಯಾರ್ಥಿಗಳಿಗಾಗಿ ದಿ‌ ಕೇರಳ ಸ್ಟೋರಿ ಚಿತ್ರ ಪ್ರದರ್ಶಿಸಿದ ಒಂದು ದಿನದ ನಂತರ ಅದೇ ಚರ್ಚಿನ ಥಾಮರೆಸ್ಸರಿ ಡಯಾಸಿಸ್ ಕೂಡಾ ಈ ಚಲನಚಿತ್ರ ಪ್ರದರ್ಶನ ಮಾಡಲು ನಿರ್ಧರಿಸಿದೆ. ಹದಿಹರೆಯದವರಿಗೆ ಪ್ರೇಮ ಸಂಬಂಧಗಳ ಕುರಿತು ಎಚ್ಚರಿಕೆ ನೀಡುವ ಸಲುವಾಗಿ ಈ ಚಲನಚಿತ್ರ ಪ್ರದರ್ಶನ ಏರ್ಪಡಿಸಿದ್ದಾಗಿ ನಿರ್ಧಾರ ಪ್ರಕಟಣೆ ಮಾಡಿದೆ.

ಕೇರಳ ರಾಜ್ಯದಲ್ಲಿ ಭಯೋತ್ಪಾದಕ ಸಂಘಟನೆಗಳಿಗೆ ನೇಮಕಾತಿಯ ಬಗ್ಗೆ ಅಲ್ಲಿನ ಮುಖ್ಯಮಂತ್ರಿ ಕೂಡಾ ಮಾತನಾಡಿದ್ದರಿಂದ ತಮಗೆ ಸ್ಪೂರ್ತಿ ಸಿಕ್ಕಿ ಉತ್ತರ ಕೇರಳದ ಥೆಮರೆಸ್ಸರಿ ಡಯಾಸಿಸ್ ಅವರು ಕೇರಳದ ಎಲ್ಲಾ ಕ್ಯಾಥೋಲಿಕ್ ಮೂವ್ಮೆಂಟ್ (KCYM) ಘಟಕಗಳಲ್ಲಿ ಚಲನಚಿತ್ರ ಪ್ರದರ್ಶನ ಮಾಡುವುದಾಗಿ ಹೇಳಿದ್ದಾರೆ. ರಾಜ್ಯದಲ್ಲಿ ನಿಷೇಧವಿಲ್ಲದ ಚಿತ್ರ ಪ್ರದರ್ಶನ ಮಾಡುವದರಲ್ಲಿ ತಪ್ಪೇನಿದೆ ಎಂದು ಡಯಾಸಿಸ್ ಪ್ರಶ್ನೆ ಮಾಡಿದರೆ, ಕೆಲವು ರಾಜಕೀಯ ಪಕ್ಷಗಳು ಕೇವಲ ಒಂದು ಸಿನೆಮಾಗೆ ಯಾಕೆ ಹೆದರುತ್ತಿವೆ ಎಂದು KCYM ಪ್ರಶ್ನೆ ಮಾಡಿದೆ.

ಪ್ರತಿವರ್ಷ ರಜೆಯ ಸಮಯದಲ್ಲಿ ಮಕ್ಕಳಿಗೆ ವಿವಿಧ ತೆರನಾದ ತರಬೇತಿಗಳನ್ನು ಚರ್ಚಿನಲ್ಲಿ ಹಮ್ಮಿಕೊಳ್ಳಲಾಗುತ್ತದೆ ಹಾಗೂ ತರಬೇತಿಯ ಭಾಗವಾಗಿ‌ ನಿರ್ಧಿಷ್ಟ ವಿಷಯವನ್ನು ಆಯ್ದುಕೊಂಡು ಅದರ ಕುರಿತು ಪುಸ್ತಕಗಳನ್ನು ಮಕ್ಕಳಿಗೆ ಹಂಚಲಾಗುತ್ತದೆ ಅದರ ಭಾಗವಾಗಿ ಇಡುಕ್ಕಿ ಧರ್ಮ ಪ್ರಾಂತ್ಯವು 10 ರಿಂದ‌12ನೇ ತರಗತಿಯ ಮಕ್ಕಳಿಗೆ ಏಪ್ರಿಲ್ ಏಳರಂದು ಕೇರಳ ಸ್ಟೋರಿ ಚಲನಚಿತ್ರವನ್ನು ಪ್ರದರ್ಶನ ಮಾಡಿತ್ತು. ಪ್ರೇಮ ವಿವಾಹದ ಹಿಂದಿರುವ ಅಪಾಯಕಾರಿ ಅಂಶವನ್ನು ಮಕ್ಕಳಿಗೆ ತಿಳಿಸುವ ಉದ್ದೇಶದಿಂದ ಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು ಎಂದು ಫಾದರ್ ಜಿನ್ಸ್ ಕರಕ್ಕಾಟ್ ಹೇಳಿದ್ದಾರೆ.

ಏಪ್ರಿಲ್ 5 ನೇ ತಾರೀಖಿನಂದು ದೂರದರ್ಶನ ಚಾನೆಲ್ ನಲ್ಲಿ ಕೇರಳ ಸ್ಟೋರಿ ಚಲನಚಿತ್ರ ಪ್ರದರ್ಶನವಾಗಲಿದೆ ಎಂದು ಘೋಷಿಸಿದ ಬೆನ್ನಲ್ಲೇ ಕೇರಳ ಮುಖ್ಯಮಂತ್ರಿ ಈ ನಿರ್ಧಾರವನ್ನು‌ ಖಂಡಿಸಿದ್ದರು. ಲೋಕ‌ಸಭಾ ಚುನಾವಣೆಗೂ ಮುನ್ನವೇ ಇದೆಲ್ಲಾ ಮಾಡುತ್ತಿರುವುದು ಮತ ಧ್ರುವೀಕರಣದ ಭಾಗವಾಗಿದೆ. ದೂರದರ್ಶನದಲ್ಲಿ ಚಲನಚಿತ್ರ ಪ್ರದರ್ಶನವಾಗದಂತೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಕೇರಳ ಕಾಂಗ್ರೆಸ್‌ನ ನಾಯಕ ವಿ.ಡಿ. ಸತೀಶನ್ ಅವರು ಒತ್ತಾಯಿಸಿದ್ದರು.

ಕೇರಳ ಸ್ಟೋರಿ ಚಿತ್ರದಲ್ಲಿ ಬಲವಂತದಿಂದ ಅಥವಾ ಲವ್ ಜಿಹಾದ್ ಆಮಿಷಕ್ಕೆ ಒಳಗಾಗಿ ಮತಾಂತರಗೊಂಡು ನಂತರ ಐಸಿಸ್ ಉಗ್ರ ಸಂಘಟನೆಯ ತೆಕ್ಕೆಗೆ ಯುವತಿಯರು ಹೇಗೆ ಬೀಳುತ್ತಾರೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಚಿತ್ರ ಬಿಡುಗಡೆಗೊಂಡ ಆರಂಭದಲ್ಲಿ ಪಶ್ಚಿಮ ಬಂಗಾಳದಲ್ಲಿ ನಿ಼ಷೇಧ ಹೇರಲಾಗಿತ್ತು. ನಂತರ ನ್ಯಾಯಾಲಯದ ಆದೇಶದ ಮೇರೆಗೆ ನಿಷೇಧವನ್ನು ತೆಗೆದುಹಾಕಲಾಯಿತು. ‌ಈಗ Zee5 ಒಟಿಟಿ ವೇದಿಕೆಯಲ್ಲಿ ಚಿತ್ರ ಲಭ್ಯವಿದ್ದು ಎಲ್ಲರೂ ವೀಕ್ಷಿಸಬಹುದಾಗಿದೆ.

You might also like
Leave A Reply

Your email address will not be published.