ನೀರಿಲ್ಲದ ಕಾರಣಕ್ಕಾಗಿ ಶಾಲಾ ಮಕ್ಕಳಿಗೆ ಆನ್ ಲೈನ್ ಕ್ಲಾಸ್ – ಹೀಗಾದರೆ ಬೆಂಗಳೂರಿನ ಮುಂದಿನ ಗತಿಯೇನು?

ನೀರು ನೀರು ನೀರು. ಒಂದು ಕಡೆ ರಣಬಿಸಿಲು, ಇನ್ನೊಂದೆಡೆ ನೀರಿಗಾಗಿ ಹಾಹಾಕಾರ. ಇದು ಬೇರೆಲ್ಲೋ ಮರುಭೂಮಿ ಸಮೀಪದ ರಾಜ್ಯದಲ್ಲಲ್ಲ. ಇದು ಕರ್ನಾಟಕದ ರಾಜಧಾನಿ ಬೆಂಗಳೂರು ನಗರದಲ್ಲೇ ಎಂದರೆ ನೀವು ನಂಬುತ್ತೀರಾ?

ಹೌದು. ರಾಜಧಾನಿಯಲ್ಲಿ ನೀರಿಲ್ಲದೇ ಹಾಹಾಕಾರ ಎದ್ದಿದೆ. ಈಗಾಗಲೇ ಬೆಂಗಳೂರಿನ ಎಲ್ಲಾ ಪ್ರೈವೇಟ್ ಬೋರ್ ವೆಲ್ ಗಳು ಬತ್ತುತ್ತಿರುವ ಕಾರಣದಿಂದಾಗಿ ನೀರೇ ಇಲ್ಲದೇ ಪರದಾಡುವ ಪರಿಸ್ಥಿತಿ ಬಂದೊದಗಿದೆ.

ಬೆಂಗಳೂರಿನಲ್ಲಿ ಈಗಾಗಲೇ ಹಲವು ಶಾಲಾ ಕಾಲೇಜುಗಳು ನೀರು ಪೂರೈಕೆಯ ಸಮಸ್ಯೆಯನ್ನು ತಾಳಲಾರದೇ, ತಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ತಮ್ಮ ಮನೆಯಿಂದಲೇ ಆನ್ ಲೈನ್ ಕ್ಲಾಸ್ ಗಳಿಗೆ ಹಾಜರಾಗುವಂತೆ ಸೂಚಿಸಿವೆ. ವಿಜಯನಗರದ ಕೋಚಿಂಗ್ ಸೆಂಟರ್ ಒಂದು, ವಿದ್ಯಾರ್ಥಿಗಳಿಗೆ ಒಂದು ವಾರದ ಕಾಲ ಆನ್ ಲೈನ್ ಮೂಲಕವೇ ತರಗತಿಗಳಿಗೆ ಹಾಜರಾಗುವಂತೆ ಸೂಚಿಸಿದೆ. ಹಾಗೆಯೇ ಬನ್ನೇರುಘಟ್ಟದ ಶಾಲೆಯೊಂದು ಕೂಡ ವಿದ್ಯಾರ್ಥಿಗಳಿಗೆ ಆನ್ ಲೈನ್ ತರಗತಿಯ ಮಾರ್ಗವನ್ನೇ ಹಿಡಿದಿದೆ.

ಈ ನೀರಿನ ಕೊರತೆಗೆ ಕಾರಣ, ಕಳೆದ ವರ್ಷ ಅಂದರೆ 2023 ರಲ್ಲಿ ಮಳೆಯ ಕೊರತೆ ಹಾಗೂ ಎಲ್ ನಿನೋ ಚಂಡಮಾರುತದ ವ್ಯತಿರಿಕ್ತ ಪರಿಣಾಮ ಎಂದು ಭೂವಿಜ್ಞಾನ ಸಂಸ್ಥೆಯು ಈಗಾಗಲೇ ಹೇಳಿಕೊಂಡಿದೆ. ಅದಲ್ಲದೇ, ಬತ್ತುತ್ತಿರುವ ಬೋರ್ ವೆಲ್ ಗಳು, ನಾಶವಾಗುತ್ತಿರುವ ಬೃಹತ್ ಕೆರೆಗಳು, ಕಾವೇರಿ ನೀರಿನ ಕೊರತೆ ಈ ಎಲ್ಲಾ ಕಾರಣಗಳಿಂದಾಗಿ ಅತ್ಯಂತ ಜನನಿಬಿಡ ನಗರವಾದ ಬೆಂಗಳೂರು ಬಹಳಷ್ಟು ತೊಂದರೆಯನ್ನು ಅನುಭವಿಸುತ್ತಿದೆ.

Online classes for school children due to lack of water - What is the next status of Bangalore?

ಈಗಾಗಲೇ ರಾಜಧಾನಿಯಲ್ಲಿ ಬಿಸಿಲಿನ ಝಳ ದಾಖಲೆಯ ಮಟ್ಟಕ್ಕೆ ತಲುಪಿದ್ದು, ಈ ನಡುವೆ ನೀರಿನ ಕೊರತೆಯಾದರೆ ಜನಜೀವನಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಈ ನಿಟ್ಟಿನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ತ್ವರಿತ ಕ್ರಮಗಳನ್ನು ಕೈಗೊಳ್ಳಲು ಮುಂದುವರೆದಿದ್ದು, ಖಾಸಗಿ ಒಡೆತನದ ಟ್ಯಾಂಕರ್ ಗಳು ಹಾಗೂ ಖಾಸಗಿ ಬೋರ್ ವೆಲ್ ಗಳ ಮೂಲಕ ನೀರು ಪೂರೈಸುವತ್ತ ಗಮನ ಹರಿಸಿದೆ. ಅದಲ್ಲದೇ, ಹಾಲಿನ ಟ್ಯಾಂಕರ್ ಗಳ ಮೂಲಕವೂ ಕೂಡ ನೀರು ಪೂರೈಸಲು ಯತ್ನಿಸುತ್ತಿದೆ.

ಇದಲ್ಲದೇ ವಿಪರ್ಯಾಸ ಎಂಬಂತೆ ಸಾಮಾನ್ಯ ದಿನಗಳಲ್ಲಿ ಪ್ರತಿ ಟ್ಯಾಂಕರ್ ಗೆ ರೂ.800 ರಿಂದ ರೂ.800 ರಷ್ಟಿರುತ್ತಿದ್ದ ನೀರಿನ ದರವನ್ನು, ಖಾಸಗಿ ಒಡೆತನದ ಟ್ಯಾಂಕರ್ ಗಳು ಸರಿಸುಮಾರು ಮೂರ್ನಾಲ್ಕು ಪಟ್ಟು, ಅಂದರೆ ರೂ.1500 ರಿಂದ ರೂ.1800 ರವರೆಗೆ ಹೆಚ್ಚಿಸಿದ್ದು, ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದೆ. ನೀರಿಗಾಗಿ ಹಾಹಾಕಾರ ಇರುವ ಈ ಸಮಯದಲ್ಲಿ ವಿಪರೀತ ದರ ಏರಿಕೆಯ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದ್ದು, ಪ್ರತಿ ಟ್ಯಾಂಕರ್ ನೀರಿಗೆ ನಿಗದಿತ ದರವನ್ನು ನಿಗದಿಪಡಿಸುವತ್ತ ಹೆಜ್ಜೆಯಿಟ್ಟಿದೆ.

ಇದಲ್ಲದೇ, ಪ್ರತಿ ತಾಲ್ಲೂಕು ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆಗಳಿಗೆ ಸ್ಪಂದಿಸಲು ತಾಲೂಕು ಮಟ್ಟದ 24×7 ಜಲ ಸಹಾಯವಾಣಿಯನ್ನು ತೆರೆಯಲು ಸರ್ಕಾರ ಮುಂದಾಗಿದೆ.

ಏನೇ ಇರಲಿ, ಮುಂಬರುವ ದಿನಗಳಲ್ಲಿ ಈ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಹಂತಕ್ಕೆ ತಲುಪಲಿದ್ದು, ಪ್ರತಿಯೊಬ್ಬರೂ ನೀರನ್ನು ಮಿತವಾಗಿ ಬಳಸಿ, ಜವಾಬ್ದಾರಿಯನ್ನು ಮರೆಯದಿರುವಂತೆ ನೋಡಿಕೊಳ್ಳಬೇಕಾದದ್ದು ಅತ್ಯವಶ್ಯವಾಗಿದೆ. ಇಲ್ಲವಾದಲ್ಲಿ, ಇನ್ನೇನು ಕೆಲವೇ ವರ್ಷಗಳಲ್ಲಿ ಜೀವಜಲ ಎನಿಸಿದ ನೀರು ಗಗನಕುಸುಮವಾಗುವುದಂತೂ ಖಂಡಿತ.

 

You might also like
Leave A Reply

Your email address will not be published.