ಅಂಬಾರಿ ವೀರನಿಗೆ ಯುವರಾಜನ ನಮನ – ಕಣ್ಣೀರಿಟ್ಟ ಒಡೆಯರ್

ಮೈಸೂರು ದಸರಾದಲ್ಲಿ 8 ಬಾರಿ ಅಂಬಾರಿ ಹೊತ್ತು ಸಾಗಿದ್ದ ಅರ್ಜುನನ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ, ಮೈಸೂರು ರಾಜವಂಶಸ್ಥರಾದ ಶ್ರೀ ಯದುವೀರ್ ಒಡೆಯರ್ ಗೌರವ ನಮನ ಸಲ್ಲಿಸಿದ್ದಾರೆ.

ಹಾಸನದ ಸಕಲೇಶಪುರದಲ್ಲಿ ಸೋಮವಾರದಂದು ನಡೆದ ಒಂಟಿ ಸಲಗ ಸೆರೆ ಹಿಡಿಯುವ ಕಾರ್ಯಾಚರಣೆಯ ವೇಳೆ ಅರ್ಜುನ ಆನೆಯು ದುರ್ಮರಣಕ್ಕೀಡಾಗಿತ್ತು. ಬುಧವಾರ ಸಾಯಂಕಾಲ ಆನೆಯ ಕಳೇಬರವನ್ನು ಹಾಸನದಲ್ಲಿಯೇ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಮಾಡಲಾಗಿತ್ತು.

ಇಂದು ಅರ್ಜುನ ಆನೆಯ ಸಮಾಧಿ ಸ್ಥಳಕ್ಕೆ ಭೇಟಿ ನೀಡಿರುವ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು, ಮೈಸೂರು ದಸರಾದಲ್ಲಿ 8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಆನೆಯು ದೈವಾಧೀನವಾಗಿದ್ದು, ಅತೀವ ದುಃಖವನ್ನುಂಟುಮಾಡಿದೆ. ಪೂರ್ವನಿಯೋಜಿತ ಕಾರ್ಯಕ್ರಮಗಳ ಕಾರಣದಿಂದ ಅರ್ಜುನನ ಅಂತ್ಯ ಸಂಸ್ಕಾರಕ್ಕೆ ಬರಲಾಗಿರಲಿಲ್ಲ. ಇಂದು ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಅರ್ಜುನನ ಸದ್ಗತಿಗೆ ಪ್ರಾರ್ಥಿಸಿದೆನು ಎಂದು ಹೇಳಿದ್ದಾರೆ.

ಯದುವೀರ್ ಒಡೆಯರ್ ದಂಪತಿ ಸಮೇತರಾಗಿ ಅರ್ಜುನನ ಸಮಾಧಿ ಸ್ಥಳಕ್ಕೆ ಭೇಟಿ ನೀಡಿರುವುದು.

 

ಮೈಸೂರು ದಸರಾದಲ್ಲಿ ಅರ್ಜುನ 7,500 ಕೆಜಿಯ ಅಂಬಾರಿಯನ್ನು ಸತತ 8 ವರ್ಷಗಳಿಂದ ಹೊತ್ತು ಗಜ ಗಾಂಭೀರ್ಯದಿಂದ ಸಾಗಿದ್ದು ಇನ್ನುವ ಇತಿಹಾಸ. ಕಳೆದ 4 ವರ್ಷಗಳ ಹಿಂದೆ ಅರ್ಜುನನಿಗೆ 60 ವರ್ಷ ತುಂಬಿದ್ದರಿಂದ ಅಂಬಾರಿ ಹೊರುವುದರಿಂದ ಅರ್ಜುನನಿಗೆ ನಿವೃತ್ತಿ ನೀಡಲಾಗಿತ್ತು. ಅರ್ಜುನನು ಕಳೆದ 4 ವರ್ಷಗಳಿಂದ ನಿಶಾನೆ ಆನೆಯಾಗಿ ದಸರಾ ಕಾರ್ಯದಲ್ಲಿ ಪಾಲ್ಗೊಂಡಿದ್ದ.

5,800 ಕೆಜಿ ತೂಕವಿದ್ದ ಅರ್ಜುನನು ಒಂಟಿ ಸಲಗ ಸೆರೆ ಹಿಡಿಯುವ ವೇಳೆ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ್ದಾನೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಸಾಂಸ್ಕೃತಿಕ ರಾಯಭಾರಿಯಾಗಿದ್ದ ಅರ್ಜುನನ ಸ್ಮಾರಕವನ್ನು ಮೈಸೂರಿನ ಹೆಚ್.ಡಿ ಕೋಟಿ ಹಾಗೂ ಹಾಸನದ ಸಕಲೇಶಪುರದಲ್ಲಿ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದ್ದಾರೆ.

You might also like
Leave A Reply

Your email address will not be published.