ಮುಸ್ಲಿಮರಿಗೆ 10 ಸಾವಿರ ಕೋಟಿ – ಸಿದ್ದರಾಮಯ್ಯ ಮಾತಿಗೆ ಬೆಳಗಾವಿ ಅಧಿವೇಶನದಲ್ಲಿ ಸುನಿಲ್ ಕುಮಾರ್ ತೀಕ್ಷ್ಣ ತಿರುಗೇಟು.

ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನ ಆಡಳಿತ ಪಕ್ಷ, ವಿಪಕ್ಷಗಳ ಮಾತಿನ ಸಮರದಿಂದ ಕಾವೇರಿದೆ. ಅಧಿವೇಶನ ನಡೆದ ಸಂದರ್ಭದಲ್ಲಿಯೇ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹುಬ್ಬಳಿಯ ಮುಸ್ಲಿಂ ಧರ್ಮಗುರುಗಳ ಸಮಾವೇಶದಲ್ಲಿ ಭಾಗವಹಿಸಿ ಮುಸ್ಲಿಮರ ಅಭಿವೃದ್ಧಿಗೆ ರೂ. 10,000 ಕೋಟಿ ನೀಡುತ್ತೇನೆ ಎಂಬ ಮಾತು ಘರ್ಷಣೆಗೆ ಕಾರಣವಾಗಿದೆ.

ಬುಧವಾರ ನಡೆದ ಅಧಿವೇಶನದ ವೇಳೆ ಕಾರ್ಕಳದ ಶಾಸಕ ವಿ.ಸುನೀಲ್ ಕುಮಾರ್ ಅವರು ಎತ್ತಿದ ಪ್ರಶ್ನೆ ಚರ್ಚೆಗೆ ಗ್ರಾಸವಾಗಿದೆ. ಸಭಾಸದಸ್ಯರಾದ ವಿ.ಸುನೀಲ್ ಕುಮಾರ್ ವಿಧಾನಸಭೆಯಲ್ಲಿ ಮಾತನಾಡುತ್ತಾ, ಅಧಿವೇಶನ ನಡೆದಿರುವಂತ ಸಂದರ್ಭದಲ್ಲಿ ಸಚಿವ ಸಂಪುಟದ ಸದಸ್ಯರು ಹಾಗೂ ಮುಖ್ಯಮಂತ್ರಿಗಳು ಹೊಸ ಯೋಜನೆಗಳನ್ನು, ಹೊಸ ಅನುದಾನವನ್ನು ಹೊರಗಿನ ಸಭೆಗಳಲ್ಲಿ ಘೋಷಣೆ ಮಾಡುವಂತಿಲ್ಲ ಎನ್ನುವುದು ಇಲ್ಲಿಯವರೆಗೆ ನಡೆದುಕೊಂಡು ಬಂದ ಸಂಪ್ರದಾಯ ಹಾಗೂ ಇದು ಸದನದ ಪಾವಿತ್ರ್ಯತೆ ವಿಷಯ. ಆದರೆ, ಸಿದ್ದರಾಮಯ್ಯನವರು ಮುಸ್ಲಿಂ ಸಮಾವೇಶದಲ್ಲಿ ಅವರಿಗೆ ಅನುದಾನ ನೀಡುವ ಘೋಷಣೆ ಮಾಡುವ ಮೂಲಕ ಸದನದ ನಿಯಮಾವಳಿಯನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದರು.

ವಿ.ಸುನೀಲ್ ಕುಮಾರ್ ಅವರ ಮಾತಿಗೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆದಿಯಾಗಿ ಬಿಜೆಪಿಯ ಶಾಸಕರು ದನಿಗೂಡಿಸಿ ಆಡಳಿತ ಪಕ್ಷದ ವಿರುದ್ಧ ತಿರುಗಿಬಿದ್ದರು.

ಘಟನೆ ಏನು?

ಸಿಎಂ ಸಿದ್ದರಾಮಯ್ಯ ಬೆಳಗಾವಿ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಹುಬ್ಬಳ್ಳಿ ಸಮಾವೇಶದಲ್ಲಿ ಭಾಗಿಯಾಗಿದ್ದರು. ಈ ಸಭೆಯಲ್ಲಿ ಮಾತನಾಡಿದ್ದ ಅವರು, ಮುಸ್ಲಿಮರಿಗೆ ದೇಶದ ಸಂಪತ್ತಿನಲ್ಲಿ ಹಕ್ಕಿದೆ. ಅವರಿಗೂ ಸಂಪತ್ತಿನ ಹಂಚಿಕೆಯಾಗಬೇಕು. ನಾನು ಆ ಕೆಲಸ ಮಾಡುತ್ತೇನೆ. ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ರೂ.10 ಸಾವಿರ ಕೋಟಿ ಮೀಸಲಿಡುತ್ತೇನೆ ಎಂದು ಹೇಳಿದ್ದರು.

ವಿರೋಧ ಪಕ್ಷಗಳಿಂದ ಆಕ್ರೋಶ :

ಸಿದ್ದರಾಮಯ್ಯನವರು ಈ ಹೇಳಿಕೆ ನೀಡಿದ ಬೆನ್ನಲ್ಲೇ, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಸಿದ್ದರಾಮಯ್ಯನವರ ಮೇಲೆ ಮುಗಿಬಿದ್ದಿದ್ದವು. ಕಾಂಗ್ರೆಸ್ ತುಷ್ಠೀಕರಣದ ಆಡಳಿತ ಮಾಡುತ್ತಿದೆ. ಕೇವಲ ಮುಸ್ಲಿಮರಿಗೆ 10 ಸಾವಿರ ಕೋಟಿ ಕೊಡುವುದಾದರೆ, ಬೇರೆ ಸಮುದಾಯಕ್ಕೆ ಎಷ್ಟು ಅನುದಾನ ಮೀಸಲಿಡುತ್ತೀರಿ. ಯಾವ ಇಲಾಖೆಯಿಂದ ಮುಸ್ಲಿಂ ಸಮುದಾಯಕ್ಕೆ ಅಷ್ಟೊಂದು ದೊಡ್ಡ ಮೊತ್ತದ ಹಣ ನೀಡುತ್ತೀರಿ ಎಂದು ಪ್ರಶ್ನಿಸಿದ್ದವು.

ವಿ.ಸುನೀಲ್ ಕುಮಾರ್ʼಗೆ ಪ್ರಶಂಸೆಯ ಸುರಿಮಳೆ :

ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಸಚಿವರು ಹಾಗೂ ಮುಖ್ಯಮಂತ್ರಿಗಳು ಸದನದ ಹೊರಗಡೆ ಯಾವುದೇ ನೂತನ ಯೋಜನೆಗಳು ಹಾಗೂ ಅನುದಾನ ಘೋಷಣೆ ಮಾಡುವಂತಿಲ್ಲ. ಇದು ಸದನದ ಸಂಪ್ರದಾಯ ಎಂಬ ವಿಷಯ ಸದನದ ಯಾವುದೇ ಸದಸ್ಯರ ಗಮನಕ್ಕೆ ಬಂದಿರಲಿಲ್ಲ. ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ʼಗೂ ಇದರ ಅರಿವಿರಲಿಲ್ಲ. ಆದರೆ, ವಿ.ಸುನೀಲ್ ಕುಮಾರ್ ಈ ಬಗ್ಗೆ ಪ್ರಶ್ನೆ ಎತ್ತಿ ಸಿದ್ದರಾಮಯ್ಯನವರು ಸದನದ ಪಾವಿತ್ರ್ಯತೆ ಹಾಳು ಮಾಡಿದ್ದಾರೆ ಎಂಬ ಮಾತು ಹೇಳಿದ ಮೇಲೆಯೇ, ಇತರೆ ಸದಸ್ಯರಿಗೆ ಸುನೀಲ್ ಕುಮಾರ್ ಅವರ ಮಾತಿನ ಗಂಭೀರತೆ ಅರ್ಥವಾಗಿತ್ತು. ಅನಂತರ ಎಲ್ಲಾ ಸದಸ್ಯರು ಆಡಳಿತ ಪಕ್ಷದ ಮೇಲೆ ಮುಗಿಬಿದ್ದರು. ಸದನದ ಪಾವಿತ್ರ್ಯತೆ ಪ್ರಶ್ನೆ ಎತ್ತಿದ ವಿ.ಸುನೀಲ್ ಕುಮಾರ್ ಅವರಿಗೆ ಬಿಜೆಪಿಯ ಶಾಸಕರು ಹಾಗೂ ಸಾರ್ವಜನಿಕ ವಲಯದಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

You might also like
Leave A Reply

Your email address will not be published.